ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…

ಕಾವ್ಯ ಸಂಗಾತಿ

ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…

ಪುಟ್ಟ ಹುಡುಗ ಕಾಯುತ್ತಾನೆ
ನೆಲಚಕ್ರ, ಸುರುಸುರು ಬತ್ತಿ,
ರಾಕೆಟ್, ಬಾಂಬ್ ಕೈಯ್ಯಲ್ಲಿ ಹಿಡಿದು
ಕತ್ತಲು ಕವಿಯುವ ಸಮಯಕ್ಕಾಗಿ
ಸಿಡಿಯುವ ಪಟಾಕಿಗಳದ್ದೇ ಕನಸು
ಅವನ ಕಣ್ಣತುಂಬಾ

ಏರಿದ ಬೆಲೆ
ಏರದ ಜೇಬಿನ ತೂಕದ್ದೇ ಚಿಂತೆ
ಈಸೀಚೇರಿನಲ್ಲಿ ಕುಳಿತ ಅಪ್ಪನಿಗೆ

ಅಮ್ಮ ಅಡುಗೆಕೋಣೆಯಲ್ಲಿರುತ್ತಾಳೆ
ಮನೆಯವರ ಬಾಯಿರುಚಿ ತೀರಿಸುವ
ಹೊಣೆಯನ್ನು ಹೆಗಲಲ್ಲಿ ಹೊತ್ತುಕೊಂಡು

ಪುರಾಣಗ್ರಂಥಗಳನ್ನು ಓದುತ್ತಾ
ಎಂಜಲು ಬೆರಳಲ್ಲಿಯೇ
ನರಕಾಸುರ- ಬಲೀಂದ್ರರನ್ನು
ಕೊಲ್ಲುತ್ತಾರೆ ಅಜ್ಜ

ಕಣ್ಣು ಹಣ್ಣಾದ ಅಜ್ಜಿಗೆ
‘ಬಾಯಾರಿದ’ ಬತ್ತಿ
ಮುಗಿಯುತ್ತಾ ಬಂದ ಜೀವತೈಲ
ನಂದುವುದಕ್ಕೆ ಸಿದ್ಧವಾದ
ಬೆಳಕೇ ಕಾಣುತ್ತದೆ


Leave a Reply

Back To Top