ಕಾವ್ಯಸಂಗಾತಿ
ಗಜಲ್
ಅಮುಭಾವಜೀವಿ ಮುಸ್ಟೂರು


ಹಾದಿ ಬೀದಿಯಲ್ಲಿ ಸದ್ಯ ಹೆಸರು ಚಾಲ್ತಿಯಲ್ಲಿದೆ ಗೆಳೆಯ
ಯೌವ್ವನ ತುಂಬಿದ ಮೈಯಿದು ಮಾರಾಟಕ್ಕಿದೆ ಗೆಳೆಯ
ಹರೆಯದ ಹೊಸ್ತಿಲ್ಲಲ್ಲಿ ಮುತ್ತು ಕಟ್ಟಿ ಬೀದಿಗೆ ಬಿಟ್ಟರು
ಊರ ಸಿರಿವಂತರ ಕಾಮ ತೀಟೆಗೆ ಬಲಿಯಾದೆ ಗೆಳೆಯ
ದೇವರ ಹೆಸರಲ್ಲಿ ಈ ದಂಧೆಗೆ ತಳ್ಳಿ ಸುಖಿಸಿದರು
ಊರವರೆಲ್ಲ ಉಂಡು ಬಿಸಾಡಿದ ಎಲೆಯಾದೆ ಗೆಳೆಯ
ನನ್ನವ್ವನು ಹೀಗೆ ಗಂಡ ಯಾರೆಂದು ಗೊತ್ತಿಲ್ಲದೆ ಹಡೆದಳು
ಅಪ್ಪ ಇಲ್ಲದ ನಾನು ತುಪ್ಪಕೆ ಜಾರಿ ರೊಟ್ಟಿಯಾದೆ ಗೆಳೆಯ
ಕಾಮದ ಮದವೇರಿದವರಾರು ಅಂದು ಕರುಣೆ ತೋರಲಿಲ್ಲ ಅಮು
ಕಾಯದ ಮೇಲಿನ ಒಂದೊಂದು ಕಲೆ ವ್ಯಥೆಯ ಕುರುಹಾಗಿದೆ ಗೆಳೆಯ