ಹಿಂದಿಯ ಹಿಡಿದು ನುಸುಳುವ  ಭಾಷಾ ಫ್ಯಾಸಿಸಮ್ –

ವಿಶೇಷ ಲೇಖನ

ನಾಗರಾಜ್ ಹರಪನಹಳ್ಳಿ

ಹಿಂದಿಯ ಹಿಡಿದು ನುಸುಳುವ  ಭಾಷಾ ಫ್ಯಾಸಿಸಮ್

ಹಿಂದಿಯ ಹಿಡಿದು ನುಸುಳುವ  ಭಾಷಾ ಫ್ಯಾಸಿಸಮ್

ನಾಗರಾಜ್ ಹರಪನಹಳ್ಳಿ

ಮುಖ್ಯಾಂಶಗಳು

೧) ನಾನಾ ವೇಷದಲ್ಲಿ ಕುಣಿಯುವ ಅಧಿಕಾರಶಾಹಿ

೨) ಭಾಷೆ, ಶಿಕ್ಷಣ , ಮಾಧ್ಯಮ, ಪಠ್ಯ ಪುಸ್ತಕ  ಇವೆಲ್ಲಾ ಬಗೆ ಬಗೆಯ ದಾಳಗಳು

ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿ ಈಚೆಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ೧೧ ನೇ ವರದಿ ನೀಡಿದೆ. ವರದಿಯಲ್ಲಿ ಹಿಂದಿಯನ್ನು ಉತ್ತರ ಭಾರತದ ಎ ವರ್ಗದ ರಾಜ್ಯಗಳಲ್ಲಿ ಕಲಿಕಾ‌ ಮಾಧ್ಯಮ ಮಾಡಲು ಶಿಫಾರಸ್ಸು ಮಾಡಿದೆ. ಇಂಗ್ಲಿಷ್ ಭಾಷೆಯನ್ನು ಐಶ್ಚಿಕಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.  ದಕ್ಷಿಣ ಭಾರತದ ರಾಜ್ಯಗಳಲ್ಲಿ ನಿಧಾನಗತಿಯಲ್ಲಿ ಹಿಂದಿಯನ್ನು ಪರೋಕ್ಷವಾಗಿ ಹೇರಲು ಪ್ರಯತ್ನಿಸಿದೆ.  ಹಿಂದಿಯ ಸ್ಥಾನದಲ್ಲಿ  ಪ್ರಾದೇಶಿಕ ಭಾಷೆಗಳನ್ನು ಆಯಾ ರಾಜ್ಯಗಳು ಬಳಸಬಹುದು ಎಂದು ತಲೆ ಸವರುವ ಮೂಲಕ ಹಿಂದಿ ಎಂಬ ಬೆದರು ಬೊಂಬೆ ಅಥವಾ ಬೆಚ್ಚನ್ನು ದಕ್ಷಿಣ ಭಾರತದ ಮನಸುಗಳ ಪಕ್ಕದಲ್ಲಿ  ಇಡಲಾಗಿದೆ. ನಿಜ ಹೇಳಬೇಕೆಂದರೆ  ಈಗ ಕೇಂದ್ರದಲ್ಲಿ  ಅಧಿಕಾರದಲ್ಲಿರುವವರಿಗೆ  ಅಧಿಕಾರ ಹೇಗೆ ಬಳಸಬೇಕು, ಯಾರ ಪರ ಬಳಸಬೇಕು; ಅದನ್ನು ಹೇಗೆ ಜನರ ಹಿತಕ್ಕೆ ಉಪಯೋಗಿಸಬೇಕೆಂದು ಅಧಿಕಾರ ಹಿಡಿದು  ಎಂಟು  ವರ್ಷಗಳಾದರೂ ಕಲಿತಿಲ್ಲ. ಅದಕ್ಕೆ ಸದಾ ತನ್ನ ಅಜೆಂಡಾ ಹೇರುವುದು, ಅದನ್ನು ಅನುಷ್ಠಾನ ಮಾಡುವುದು, ಶತಾಯಗತಾಯ ಅಧಿಕಾರದ ಸಾಮ್ರಾಜ್ಯದ ವಿಸ್ತರಣೆಗೆ ಹವಣಿಸುವ ಕಾರ್ಯದಲ್ಲಿ ಸದಾ ನಿರತವಾಗಿದೆ. ಅದರ ಅಧಿಕಾರ ದಾಹ ಮುಗಿಯುವಂತಹದಲ್ಲ. ರಾಜ್ಯಗಳಲ್ಲಿ,  ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಬಲ ಹೆಚ್ಚಿಸಿಕೊಳ್ಳಲು ಅಧಿಕಾರ ಲಾಲಸೆಯ  ಶಾಸಕರನ್ನು ಗುರುತಿಸಿ ಕಬಳಿಸುವುದು, ವಿರೋಧಿ ಸರ್ಕಾರಗಳನ್ನು ಪತನಗೊಳಿಸುವುದು , ಐಟಿ ದಾಳಿಗಳನ್ನು ಗುರಿಯಿಟ್ಟು   ಮಾಡಿಸುವುದು ಅದರ ರಾಜಕೀಯ ದಾಳವಾದರೆ, ಬೆಲೆ ಏರಿಸಿ ಮಧ್ಯಮ ವರ್ಗ ಮತ್ತು ದುಡಿವ ವರ್ಗವನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದು ಮತ್ತೊಂದು ದಾಳ.

ಪಠ್ಯ ಪುಸ್ತಕ ಪರಿಷ್ಕರಣೆಯ ಮೂಲಕ ಸುಳ್ಳು ಇತಿಹಾಸ ಯಾವ ಎಗ್ಗು ಇಲ್ಲದೆ  ತುಂಬಿದ್ದಾಯ್ತು . ಈಗ ಶಿಕ್ಷಣ   ಮಾಧ್ಯಮದ ವಿಷಯವನ್ನು ಹಿಂದಿ ಹೇರಿಕೆಯ ಮೂಲಕ ಜನರ ಭಾವನಾತ್ಮಕ ವಿಷಯವಾದ  ಭಾಷೆಗೆ ಕೈ ಹಚ್ಚಲು ಹೊರಟಿದೆ. ಭಾರತ ವೈವಿಧ್ಯಮಯ ದೇಶ. ಸಾವಿರಕ್ಕೂ ಹೆಚ್ಚು ಬುಡಕಟ್ಟುಗಳು, ಆ ಬುಡಕಟ್ಟುಗಳಿಗೆ ಅವುಗಳದ್ದೇ ಭಾಷೆ, ಸಂಸ್ಕೃತಿ, ಜನಪದಗಳಿವೆ. ಇಂತಹ ಬಹುಭಾಷಾ, ಬಹು ವೈವಿಧ್ಯತೆಯ ದೇಶದಲ್ಲಿ ಒಂದು ಭಾಷೆಯ ಪ್ರಾಭಲ್ಯ ಹೇರಲು ಯತ್ನಿಸುವುದು ದಮನಕಾರಿ ನಡೆ ಅಲ್ಲವೇ?

 ಧರ್ಮ ರಕ್ಷಣೆ,  ಮತಾಂತರ ತಡೆ , ‌ಗೋವು ಪವಿತ್ರ  ಎಂಬ ವಿಷಯ ಮುನ್ನೆಲೆಗೆ ತಂದು ಅಲ್ಪಸಂಖ್ಯಾತರನ್ನು ಹಣಿಯುತ್ತಾ ಬರಲಾಗಿದೆ. ಈ ಎಂಟು ವರ್ಷಗಳಲ್ಲಿ ಅಲ್ಪ ಸಂಖ್ಯಾತರು ಭಯದಲ್ಲೇ ಬದುಕಿದ್ದಾರೆ ಎಂಬುದು ನಿಜವಲ್ಲವೇ ? . ಸದಾ ಒಂದಿಲ್ಲ ಒಂದು ಸಾಮಾಜಿಕ ಅಶಾಂತಿ, ಹಿಂಸೆಯ ನಾನಾ ರೂಪಗಳನ್ನು ಅಧಿಕಾಸ್ಥರು  ಪ್ರಯೋಗಿಸುತ್ತಲೇ ಬಂದಿದ್ದಾರೆ. ಜನರಿಗೆ  ‘ಇವರು ಏನು ಆಡಳಿತ ಮಾಡ್ತಾರಪ್ಪ’  ಎಂದು ಯೋಚುಸುವ ಮೊದಲೇ ಭಾಷೆ, ಊರುಗಳ ಹೆಸರು ಬದಲಾವಣೆ, ರೈಲುಗಳ ಹೆಸರು ಬದಲಾವಣೆಯ ಚಟ,  ಮತಾಂತರ ಕಾರಣ  ಹಲ್ಲೆ, ಹಸು ಸಾಗಾಟದ  ಗದ್ದಲ …ಹೀಗೆ ಹೀಗೆ ಒಂದಿಲ್ಲ ಒಂದು  ಅಜೆಂಡಾ  ಬಳಸುತ್ತಲೇ ಅಧಿಕಾರವನ್ನು ವಿಚಿತ್ರ ನರ್ತನದ ರೀತಿ ಬಳಸುತ್ತಾ ಬಂದಿದೆ.

ಈಗ ಹಿಂದಿ ಭಾಷೆಯನ್ನು ಐಐಟಿ ,‌ಉನ್ನತ ಶಿಕ್ಷಣ, ತಾಂತ್ರಿಕ  ಶಿಕ್ಷಣದ ಮಾಧ್ಯಮ ಮಾಡಲು ಸಂಸದೀಯ ಭಾಷಾ ಸಮಿತಿ ವರದಿ ಸಲ್ಲಿಸಿದೆ. ಹಿಂದಿ ಮಾತನಾಡುವ ‘ಎ’  ಕೆಟಗರಿ ರಾಜ್ಯಗಳಲ್ಲಿ ನೇರ ಹಿಂದಿ ಮಾಧ್ಯಮವನ್ನು ಬಳಸುವಂತೆ  ಸೂಚಿಸಿದೆ.  ಕೇಂದ್ರೀಯ ಶಾಲೆಗಳಿಗೂ ಇದೇ ಆದೇಶ ಹೊರಡಲಿದೆ. ಕೇಂದ್ರಿಯ ಶಾಲೆ ವಿದ್ಯಾರ್ಥಿಗಳು ಶಾಲಾ ಹೊರ ಆವರಣದಲ್ಲಿ ವಿದ್ಯಾರ್ಥಿಗಳು ಹಿಂದಿ ಮಾತನಾಡುವುದು ಕಡ್ಡಾಯವೂ ಹೌದು. ಹೀಗೆ ಹಿಂದಿ ಭಾಷೆಯನ್ನು ಮೆಲ್ಲಗೆ, ಸದ್ದಿಲ್ಲದೆ ಹೇರಲಾಗಿದೆ.

ಕಣ್ಣು ಜಾಮೀಯಾ  ಮಿಲಿಯಾ ಇಸ್ಲಾಮಿಯಾದ ಮೇಲೆ:

ಕೇಂದ್ರದ ಗೃಹ ಸಚಿವರ  ಕಣ್ಣು ಜಾಮೀಯಾ ಮಿಲಿಯಾ‌ ಇಸ್ಲಾಮಿಯಾ, ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯಗಳ ಮೇಲಿದೆ. ಇಲ್ಲಿ ಉರ್ದು ಮತ್ತು ಇಂಗ್ಲಿಷ್ ಮುಖ್ಯವಾಗಿ ಬಳಕೆಯಲ್ಲಿವೆ.

ಹಾಗೂ ಬನಾರಸ ಹಿಂದೂ ವಿವಿ, ದೆಹಲಿ ವಿವಿಯಲ್ಲಿ ಶೇ.29   ರಿಂದ 30 ರಷ್ಟು ಮಾತ್ರ ಹಿಂದಿ ಬಳಕೆಯಿದೆ. ಉಳಿದಂತೆ ಇಂಗ್ಲಿಷ್ ಮಾಧ್ಯಮ  ಅಲ್ಲಿ ಬಳಕೆಯಲ್ಲಿದೆ . ಇಂಗ್ಲಿಷನ್ನು ವಸಹಾತುಶಾಹಿ ಎಂದು ಕರೆಯುವ ಅಮಿತ್  ಶಾ ಅವರು ಹಿಂದಿ ಭಾಷೆಯನ್ನು ಹಿಂದುಗಳ, ಹಿಂದುತ್ವದ  ಭಾಷೆಯೆಂದು ಹೇಳಲು ಹೊರಟಂತಿದೆ. ಆದರೆ ಅವರ ಅಪ್ತೆ ನಟಿಮಣಿ  ಕಂಗನಾ ರಣಾವತ್ ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡುವ ತರಾತುರಿಯಲ್ಲಿದ್ದಾಳೆ. ತನಗೆ ಅಧಿಕಾರ ಇದ್ದಿದ್ದರೆ ಸಂಸ್ಕೃತವನ್ನು ರಾಷ್ಟ್ರ ಭಾಷೆ ಮಾಡುತ್ತಿದ್ದೆ ಎಂದು ಈಚೆಗೆ ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಅಮಿತ್ ಶಾ ಹಿಂದಿ ಮಾಧ್ಯಮ ಭಾಷೆ   ಎನ್ನುತ್ತಿದ್ದಾರೆ.

ಇದು ರಾಷ್ಟ್ರ ಭಾಷೆ ಎಂದು ಹೇಳುವುದರ ಮತ್ತೊಂದು ರೂಪ ಅಷ್ಟೇ.

ಭಾಷೆ ಅತ್ಯಂತ ಸೂಕ್ಷ್ಮ ವಿಚಾರ. ಭಾಷೆಯನ್ನು ಬಾಂಗ್ಲಾದೇಶದ  ಮೇಲೆ ಹೇರಲು ಹೋಗಿ, ಬಂಗಾಳಿ ಮಾತನಾಡುವವರು ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದು, ಪಾಕ್ ನಿಂದ  ಪ್ರತ್ಯೇಕವಾದುದು ಇತಿಹಾಸ. ಭಾಷೆಗಾಗಿ  ದೇಶದಲ್ಲಿ ಹಿಂದೆ ಹಿಂಸಾಚಾರಗಳು ನಡೆದಿವೆ. ಇಂಥ ಭಾವನಾತ್ಮಕ ವಿಷಯ ಕೆದಕುವುದೇ ದಕ್ಷಿಣ ರಾಜ್ಯಗಳಲ್ಲಿ ಕಮಲ ಅರಳಿಸುವ ಉದ್ದೇಶವಾಗಿದ್ದರೆ ಅದು  ಕಷ್ಟದ ಹಾದಿಯೇ ಸರಿ.  ಹಿಂದಿ ಕಲಿತರೆ ಮಾತ್ರ ಉದ್ಯೋಗ, ಉಳಿದ ಭಾಷೆ ಕಲಿತವರಿಗೆ ದೇಶದಲ್ಲಿ ಎರಡನೇ ಪ್ರಜೆಯ ಸ್ಥಾನ ಎಂಬುದು  ಅಮಿತ್ ಶಾ ಮನದಲ್ಲಿ, ಅವರ ಪಕ್ಷದ ಮನಸ್ಸಿನಲ್ಲಿ ಇದ್ದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ.

ಶಾ ವಿರುದ್ಧ ದಕ್ಷಿಣ ಭಾರತದಲ್ಲಿ ಧ್ವನಿ:

ಹಿಂದಿ ಯನ್ನು ಮಾಧ್ಯಮವಾಗಿ ಶಿಫಾರಸ್ಸು ಮಾಡುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಹಿಂದಿ ವಿರುದ್ಧ ದೊಡ್ಡ ಧ್ವನಿ ಎದ್ದಿದೆ. ತಮಿಳುನಾಡು ಮುಖ್ಯಮಂತ್ರಿ

ಹಿಂದಿ ಹೇರಿಕೆ ಮಾಡಿದರೆ ಸಂಘರ್ಷವಾದೀತು ಎಂದು ಎಚ್ಚರಿಸಿದ್ದಾರೆ. ಹಿಂದಿ ಹೇರಿದರೆ

ಪಶ್ಚಿಮ  ಬಂಗಾಳ ದಿಂದ ಸಮರವೇ ಆರಂಭವಾಗಬಹುದು.  ಕನ್ನಡ, ತೆಲುಗು,ತಮಿಳು ಭಾಷಿಕರು,‌ಮಲಾಯಾಳಂ , ಗುಜರಾತಿ, ಮರಾಠಿ,‌ಓರಿಯಾ, ಬಿಹಾರಿ ಭಾಷಿಕರು ಹಿಂದಿ ವಿರುದ್ಧ ಬಹುದೊಡ್ಡ ಆಂದೋಲನಕ್ಕೆ ಕೈ ಹಾಕುವ ಸಾಧ್ಯತೆಗಳಿವೆ. ಈ ಸೂಚನೆಗಳನ್ನು ಸೀತಾರಾಂ ಯಚೂರಿ, ಸ್ಟ್ಯಾಲಿನ್‌, ಕೇರಳದ ಕಮ್ಯುನಿಸ್ಟರು, ಕರ್ನಾಟಕದ ಕುಮಾರಸ್ವಾಮಿ ಈ ಬಗ್ಗೆ ಶಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದಿ ಹೇರಿಕೆ ಎಂಬುದು  ಒಡೆದು ಆಳುವ ನೀತಿ ಎಂದು ದಕ್ಷಿಣ ರಾಜ್ಯಗಳ  ರಾಜಕೀಯ ಮುಂದಾಳುಗಳು ಹೇಳಿದ್ದಾರೆ.   ಬಹುತ್ವದಲ್ಲಿ, ಭಾಷಾ ವೈವಿಧ್ಯತೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ. ಅದಕ್ಕೆ ಸದಾ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧ್ವಜ, ಒಂದು ಧರ್ಮದ ಚಿಂತೆ. ಆ ಮೂಲಕ ಪ್ರಾದೇಶಿಕ ಭಾಷೆಯ ಜನರನ್ನು ಏಕಾಂಗಿಯಾಗಿಸಿ,‌ ಬಡವರನ್ನಾಗಿಸಿ, ಸದಾ ದುಡಿಯುವ ವರ್ಗದವರನ್ನಾಗಿ ಇಡುವುದು ಅದರ ಅಂತರಂಗದ ಉದ್ದೇಶ ‌ .  ಶಿಕ್ಷಣ ವ್ಯವಸ್ಥೆಯಲ್ಲಿ  ಇಂಗ್ಲಿಷ್ ಕಸಿಯುವ ಮೂಲಕ‌ ಜ್ಞಾನದ ಶಾಖೆಗಳನ್ನು  ಮುಚ್ಚುವುದು ಅದರ ಗುಪ್ತ ಅಜೆಂಡಾ.

ಅದಕ್ಕಾಗಿ ಅದು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಪಠ್ಯದಲ್ಲಿ ಸುಳ್ಳು ಇತಿಹಾಸ ತುಂಬುತ್ತದೆ‌.  ಸರ್ಕಾರಿ  ಶಿಕ್ಷಣ ವ್ಯವಸ್ಥೆ ದುರ್ಬಲ ಮಾಡಿ,‌ ಖಾಸಗಿಯವರ ಕೈಗೆ ಶಿಕ್ಷಣ ಸಂಸ್ಥೆಗಳನ್ನು ನೀಡಿ, ಶಿಕ್ಷಣದ ವ್ಯಾಪಾರ ಮಾಡುತ್ತದೆ. ಪ್ರಾಥಮಿಕ ಶಿಕ್ಷಣವನ್ನು ದುರ್ಬಲ ಗೊಳಿಸುತ್ತದೆ ಎಂದು ಪ್ರಾಜ್ಞರಿಗೆ ಅನ್ನಿಸತೊಡಗಿದೆ.  ಉನ್ನತ ಶಿಕ್ಷಣ ಶ್ರೀಮಂತರಿಗೆ, ಹಣ ಇದ್ದವರಿಗೆ ಎಂಬ ಸನ್ನಿವೇಶ ,  ಪರಿಸ್ಥಿತಿ ನಿರ್ಮಾಣ ಈಗಾಗಲೇ  ಮಾಡಿಯಾಗಿದೆ.  ವಿವಿಗಳಲ್ಲಿ  ಖಾಲಿ ಹುದ್ದೆಗಳನ್ನು  ಭರ್ತಿ ಮಾಡುವ  ಗೊಜಿಗೆ ಹೋಗಲ್ಲ.

ದಾಳ ಉರುಳಿಸುವುದೇ ಕೆಲಸ :

ಭಾಷೆ ಮತ್ತು ಮಾಧ್ಯಮಗಳ ವಿಷಯದಲ್ಲಿ ದಾಳಗಳನ್ನು ಈಗ  ಉರುಳಿಸಲಾಗಿದೆ.

ಪ್ರಾದೇಶಿಕ ಭಾಷೆಗೆ ಹಿಂದಿ ನಂತರದ ಸ್ಥಾನ ಎನ್ನುತ್ತಲೇ

ಪ್ರಾದೇಶಿಕ ಭಾಷೆಗಳನ್ನು ಬಲಿ ತೆಗೆದುಕೊಳ್ಳುವ ಹುನ್ನಾರು ಇದ್ದಂತಿದೆ.  ಇದು ಒಂದು ತರಹದ ರಾಜಕೀಯ ಆಟ. ಈಚೆಗೆ  ಪ್ರಾದೇಶಿಕ ಪಕ್ಷಗಳ ಅಪೋಶನಕ್ಕೆ  ದೆಹಲಿ ದೊರೆಗಳು ಕೈ ಹಚ್ಚಿ ಯಶಸ್ವಿಯಾದುದು ಕಣ್ಮುಂದೆಯೇ ಇದೆ.  ಇದಕ್ಕೆ ಉದಾಹರಣೆ ಶಿವಸೇನೆಯನ್ನು ಬಿಜೆಪಿ ನುಂಗಿದ್ದು. ಅಸ್ಸಾಂ, ಮೇಘಾಲಯ,‌ಸಿಕ್ಕಿಂಗಳಲ್ಲಿ  ಆಟ ಆಡಿದ್ದು, ಬಿಹಾರದಲ್ಲಿ ಆಟ ವಿಫಲವಾದದ್ದು, ಪಂಜಾಬ್ ನಲ್ಲಿ ಹತಾಶವಾದದ್ದು. ಕರ್ನಾಟಕದಲ್ಲಿ , ಗೋವಾದಲ್ಲಿ ಶಾಸಕರನ್ನು ಬಲೆಗೆ ಕೆಡವಿಕೊಂಡದ್ದು  ಎಲ್ಲರಿಗೂ ಗೊತ್ತಿದೆ

ಈಗ 

ಹಿಂದಿ  ಭಾಷೆಯನ್ನು ಹೇರಲು ಹೊರಟಿರುವುದು ಸಹ ಒಂದು ಪ್ರಯೋಗ. ಇಂಗ್ಲಿಷ್ ಭಾಷೆ ವಿದೇಶಿ ಭಾಷೆ ಎನ್ನುತ್ತಲೇ, ಅದನ್ನು ತೆರೆಯ ಮೆರಗೆ ಸರಿಸುವುದರ ಹಿಂದೆ  , ಬಿಜೆಪಿಗೆ  ವಿವಿಧ ರಾಜ್ಯಗಳಲ್ಲಿ  ಅಧಿಕಾರ ಕ್ಷೇತ್ರ ವಿಸ್ತರಣೆಯ ಭಾಗವೇ ಅಗಿದೆ  ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇಂಗ್ಲಿಷ್ ಉದ್ಯೋಗದ ಭಾಷೆ:

ಶಿಕ್ಷಣ ಮಾಧ್ಯಮದಲ್ಲಿ ಇಂಗ್ಲಿಷ್ ಹಿಡಿತ ಸಾಧಿಸಿರುವುದನ್ನು ನಾವು ಒಪ್ಪಲೇ ಬೇಕು. ಇಂಗ್ಲಿಷ್ ಇವತ್ತು ವಿಶ್ವದ ನಾನಾ ದೇಶಗಳು ಬಳಸುವ ಭಾಷೆ. ಭಾಷೆ ಬರುವವ ಅಡುಗೆ ಕೆಲಸದವನಾಗಿ, ಕುಶಲಕರ್ಮಿಯಾಗಿ, ಟ್ಯಾಕ್ಸಿ ಚಾಲಕನಾಗಿ , ಹೋಟೆಲ್ ಬಾಯ್ ಯಾಗಿ ವಿಶ್ವದ ನಾನಾ ದೇಶಗಳಲ್ಲಿ ಕೆಲಸ ಹುಡುಕಿಕೊಳ್ಳಬಲ್ಲ.  ಅಮಿತ್ ಶಾ ಮತ್ತು ಅವರ ಸಂಸದೀಯ ಸಮಿತಿಯ ಇಂಗ್ಲಿಷ್ ದ್ವೇಷದ ಹಿಂದೆ ಅನೇಕರನ್ನು ಅಸಹಾಯಕರನ್ನಾಗಿ ಮಾಡುವ ಹುನ್ನಾರು ಇದೆ.   ಶಾ  ಹಾಗೂ ಅವರ ಸಂಸದೀಯ ಸಮಿತಿಯ ವರದಿಯಲ್ಲಿ ಕಾಣುವ ಅಂಶಗಳು ಒಂದೆಡೆ ಇದ್ದರೆ, ಕಾಣದ ಅಂಶಗಳು ಬಹಳಷ್ಟು ಇವೆ.

 ಜನಾಂಗೀಯ ಮತ್ತು ರಾಜ್ಯಗಳ ನಡುಗೆ ಹೊಡೆದಾಟ ಹಚ್ಚುವ ಕೆಲಸವೂ ಹಿಂದಿ ಹೇರಿಕೆಯಿಂದಾಗಬಹುದು ಎಂದು  ಬಿಜೆಪಿಯೇತರ ರಾಜಕೀಯ ಮುಂದಾಳುಗಳು ಎಚ್ಚರಿಸಿದ್ದಾರೆ.

ಹೀಗಿದ್ದೂ ಇಂತಹ ಉದ್ಧಟತನಕ್ಕೆ ಶಾ ಮಿತ್ರ ಮಂಡಳಿ ಯಾಕೆ ಕೈ ಹಚ್ಚಿದೆ?

ಯಾಕೆಂದರೆ ಅದಕ್ಕೆ ಚುನಾವಣಾ ವರ್ಷದಲ್ಲಿ , ಅಂದರೆ 2024ಕ್ಕೆ ವಿವಾದಗಳು ಬೇಕು. ಆಡಳಿತ ಪಕ್ಷದ ವೈಫಲ್ಯ ಗಳಿಂದ ಜನರ ಮನಸನ್ನು ಬೇರೆಡೆಗೆ ತಿರುಗಿಸಬೇಕಿದೆ. ಭಾರತ ಜೋಡೋ ಯಾತ್ರೆಗೆ ಪರ್ಯಾಯ ಏನು ಎಂಬುದು ಬಿಜೆಪಿ ಬತ್ತಳಿಕೆಯಲ್ಲಿ ಬಾಣಗಳೇ ಇಲ್ಲವಾಗಿದೆ. ಅದರ ಕಾಂಗ್ರೆಸ್ ದ್ವೇಷ, ಧರ್ಮದ ಮುಖವಾಡ ಸವಕಲಾಗಿವೆ. ಈಗ ಭಾಷೆಯನ್ನು ವಿವಾದವಾಗಿಸಿ ಮುನ್ನೆಲೆಗೆ ಹಿಂದಿ ಹಿಂದು ಹಿಂದುತ್ವ ತರಲು ಹವಣಿಸುತ್ತಿದೆ. ಆದರೆ ಬಹು ಸಂಸ್ಕೃತಿ, ಬಹುತ್ವ ಸಮುದಾಯಗಳ , ಬಹುಭಾಷೆಗಳ ಈ ದೇಶದಲ್ಲಿ ಒಂದು ಭಾಷೆಯ ಹೇರಿಕೆ ಅಸಾಧ್ಯ. ಒಂದು ಧರ್ಮದ ಹೇರಿಕೆ ಯಂತೂ ಹಾಸ್ಯಸ್ಪದವಾಗಲಿದೆ.


Leave a Reply

Back To Top