ಗಜಲ್ ಜುಗಲ್ ಬಂದಿ

ಕಾವ್ಯಸಂಗಾತಿ

ಗಜಲ್ ಜುಗಲ್ ಬಂದಿ

ಇದೊಂದು ಗಜಲ್ ಜುಗಲ್ ಬಂದಿ. ಒಂದೇ ಆಶಯದ ಎರಡು ಅಭಿವ್ಯಕ್ತಿಗಳು ಇಲ್ಲಿವೆ.

ಡಾ ಗೋವಿಂದ ಹೆಗಡೆ

ರೇಖಾ ಹೊನ್ನಗದ್ದೆ

.

ಸುರಂಗಕ್ಕೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ
ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ

ಹೆಜ್ಜೆ ಹೆಜ್ಜೆಗೆ ಮುಳ್ಳುಗಳ ಬಿತ್ತುತ್ತ ನಡೆದರೇ ಅವರು
ಇರಿವ ಮೊನೆಗಳಿಗೆ ಸೋಲಿದ್ದೇ ಇದೆ ನಂಬಿಕೆ ಇರಲಿ

ಎದೆಗಳ ನಡುವೆ ಕಂದಕವನ್ನು ತೋಡುವವರು ಎಷ್ಟು
ಸೇತುವೆ ಕಟ್ಟುವ ಕೈಗೆ ಗೆಲುವಿದ್ದೇ ಇದೆ ನಂಬಿಕೆ ಇರಲಿ

ಬಣ್ಣದ ವೇಷಗಳು ಎಷ್ಟೊಂದು ಮೆರೆಯುತ್ತಿವೆ ಇಲ್ಲಿ
ನಿಜವು ಬಯಲಾಗುವ ಕ್ಷಣವಿದ್ದೇ ಇದೆ ನಂಬಿಕೆ ಇರಲಿ

ಎದೆಯ ಹಾಡ ನುಡಿಸುವಾಗ ತಾಳ ತಪ್ಪಿತೆ ‘ಜಂಗಮ’
ಕೊನೆಗೂ ಒಲವಿಗೆ ಜಯವಿದ್ದೇ ಇದೆ ನಂಬಿಕೆ ಇರಲಿ

*******

ಡಾ ಗೋವಿಂದ ಹೆಗಡೆ

ಬದುಕು ಖಂಡಿತ ಬೆಳಗಲಿದೆ ನಂಬಿಕೆ ಇರಲಿ
ಕಂಬನಿ ಗುರುತು ಅಳಿಯಲಿದೆ ನಂಬಿಕೆ ಇರಲಿ

ಕನಸಿನ ಬಿತ್ತಗಳೇ ಎಂದೂ ಧ್ಯಾನ ನಿಲ್ಲಿಸದಿರಿ
ಮೋಡ ನಿಮಗಾಗಿ ಇಳಿಯಲಿದೆ ನಂಬಿಕೆ ಇರಲಿ

ಬಯಕೆಯ ಬೇರುಗಳೇ ಹೆದರಿ ಮುದುಡುವಿರೇಕೆ
ಆಳದಲಿ ತಂಪೆರೆಯುವ ಸೆಲೆಯಿದೆ ನಂಬಿಕೆ ಇರಲಿ

ನದಿಗಳೇ ಹತಾಶೆಯಲಿ ಸೋಲದೆ ಮುನ್ನಡೆಯುತ್ತಿರಿ
ಬಯಲು ಹಸಿರಾಗಲು ಕಾಯುತಲಿದೆ ನಂಬಿಕೆ ಇರಲಿ

ಮೂಡಿದರೂ ಚಿತ್ರವಾಗದ ಭಾವ’ರೇಖೆ’ಗಳೆ ಸೋಲದಿರಿ
ಕುಂಚ ಹಿಡಿದ ಕೈಗಳು ಕರೆದೊಯ್ಯಲಿವೆ ನಂಬಿಕೆ ಇರಲಿ

-***

ರೇಖಾ ಹೊನ್ನಗದ್ದೆ


ರೇಖಾ ಹೊನ್ನಗದ್ದೆ

ರೇಖಾ ಅವರ ಪರಿಚಯ ಇಲ್ಲಿದೆ:

ರೇಖಾ ಭಟ್ಟ ಹೊನ್ನಗದ್ದೆ
ಜನ್ಮಸ್ಥಳ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆ
ವಾಸಸ್ಥಳ: ಶಿರಸಿ
ವೃತ್ತಿ : ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ
ಪ್ರವೃತ್ತಿ : ಸಾಹಿತ್ಯದ ಓದು ಹಾಗೂ ಬರೆವಣಿಗೆ ಹಾಗೂ ಗಾಯನ
ಪ್ರಥಮ ಕೃತಿಯಾದ ‘ಮಡಿಲ ನಕ್ಷತ್ರ’ ಗಜಲ್ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಬಿಡುಗಡೆಗೊಂಡಿದೆ.
‘ನೀನಿರದ ಬದುಕು’ ಮುಂತಾದ ಭಾವಗೀತೆಯ ಧ್ವನಿ ಸಾಂದ್ರಿಕೆಗಳಲ್ಲಿ ಭಾವಗೀತೆಗಳಿವೆ. ಮನೋಲ್ಲಾಸ ಬರೆಹ,ಗಜಲ್, ಕವನ, ಮಕ್ಕಳ ಪದ್ಯ, ಲೇಖನ ಬರೆಹ ಮುಂತಾದವುಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

ಡಾ ಗೋವಿಂದ ಹೆಗಡೆ

ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾದ ಡಾ. ಗೋವಿಂದ ಹೆಗಡೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಕಾವ್ಯ ಪ್ರಕಾರದಲ್ಲಿ,ಗಜಲ್, ಫರ್ದ್, ರುಬಾಯಿ ಹೈಕು, ತನಗ,ನವ್ಯ ಕವನ, ಹನಿಗವನ, ಭಾವಗೀತೆ, ಶಿಶು ಗೀತೆಗಳನ್ನು ಬರೆದಿದ್ದಾರೆ. ಎರಡು ಕವನ ಸಂಕಲಗಳನ್ನು ಪ್ರಕಟಿಸಿದ್ದು, ಹಲವೂ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದಾರೆ.

One thought on “ಗಜಲ್ ಜುಗಲ್ ಬಂದಿ

Leave a Reply

Back To Top