ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಶೋಭಾ ನಾಯ್ಕ.(ಹಿರೇಕೈಕಂಡ್ರಾಜಿ.)
ಹೂ..ಬಿಡುವ ಕಾಲ.
ಅಂದು ಸುಡು ಬೇಸಿಗೆಯ
ನಡು ಮಧ್ಯಾಹ್ನ
ಝಳಕ್ಕೂ.. ಹೆದರದೆ ಅರಳಿದ
ಮಲ್ಲಿಗೆಯ ಘಮವೊಂದು ಮನ ಹೊಕ್ಕು
ಅಚ್ಚ ಬಿಳಿಪೊಂದು
ಕಣ್ಣೊಳಗೆ ಕೂತು
ಪಕ್ಕಂತ ನಗುತ್ತಿರುವ ಪಕಳೆಗಳು
ಮುಡಿಯ ಹೆರಳಿನೆಳೆ ಎಳೆಗೂ
ಮುಡಿವ ಆಸೆ ತಂದಾಗ
ನೀನೋ.. ಮಲ್ಲಿಗೆಯ ಕವಿತೆಯ ಜೊತೆ
ಗಿಡದ ಗೆಲ್ಲನ್ನೂ ಕಟ್ಟಿ
ಕಳಿಸಿ
ಎಡಗೈ ಹಿಡಿ ಮುಷ್ಟಿಯಷ್ಟೇ ಜಾಗ ಸಾಕು
ಬೆಳೆಸಿಕೋ ಅಂದಿದ್ದೆ.
ಇಂದು ಮಾಗಿಯ ಈ ಚಳಿಯ ಬೆಳಗು.
ಹೇಳುವೆ ಕೇಳು,
ನೀ ಹೇಳಿದಂತೆ
ಕಟ್ಟೆ ಕಟ್ಟಿ
ಬೇಲಿ ಹಾಕಿ
ಮರೆಯ ಮಾಡಿ
ಹಿಡಿದ ಹುಳುವಿಗೆ
ಬೂದಿ ಸೋಕಿ
ಹಿಡಿ ಮಣ್ಣು ಹುಡಿ ಗೊಬ್ಬರ ನೀಡಿ
ಬುಡದ ಕಳೆಯನೆ ಕಿತ್ತೆ.
ಊಟ ಮರೆತರೂ
ಮರೆಯದೆ ನೀರುಣಿಸಿ
ಗಿಡವಲ್ಲ ಮಗುವೆಂದು ಕಾದೆ
ನೋಡ ನೋಡುತ್ತಲೇ, ಇಳಿಯಿತು ಬೇರು
ಬೆಳೆಯಿತು ಕಾಂಡ,
ಹಬ್ಬಿತು ಬಳ್ಳಿ
ಮೂಡಿತು ಎಲೆ,
ಕವಲೊಡೆಯಿತು ಕುಡಿ,
ಕುಡಿಯೊಳಗೊಂದೊಂದೇ ಹೂಮೊಗ್ಗು!!!
ಬೆಳೆಸಿದ ಜೀವಕೋ ಹಿಗ್ಗೋ ಹಿಗ್ಗು..
ಮತ್ತೆ ಕೇಳಿಲ್ಲಿ,
ಅಲ್ಲಲ್ಲ….
ಹೇ.. ನೋಡಿಲ್ಲಿ!
ಮಲ್ಲಿಗೆಯ ಮೈಬಳ್ಳಿಯಲಿ
ಹೂವಿನದ್ದೇ ಮೇಳ
ನೀ ಕೊಟ್ಟ , ನಾ ನೆಟ್ಟ ಮಲ್ಲಿಗೆಗೀಗ
ಹೂ ಬಿಡುವ ಕಾಲ!!!
ಶೋಭಾ ನಾಯ್ಕ.(ಹಿರೇಕೈಕಂಡ್ರಾಜಿ
Lovely….
ಆಹಾ …