ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ರೇಖಾ ಗಜಾನನ
ತುದಿ ಮಡಿಚಿದ ಪುಟಗಳು
ಈಗೀಗ ಬದುಕಿನ
ರ್‍ಯಾಕ್ ತುಂಬ
ತುದಿ ಮಡಿಚಿದ ಪುಟದ
ಪುಸ್ತಕಗಳೇ
ಹೆಚ್ಚು
ದೂಳು ಮುತ್ತದಂತೆ
ಆಗಾಗ ಮೈ ಸವರಲೂ
ಆಗದಂತ ಸ್ಥಿತಿ
ಸುಲಭದಲಿ ಸಿಕ್ಕದು
ಸಾಣೆಗೆ ಮತಿ
ಶುರುವಿನಲ್ಲಿ
ಪುಟ ತಿರುವುವಾಗ
ಬೆಚ್ಚನೆಯ ಬಿಸುಪು
ಹೊಸಲೋಕಕ್ಕೆ
ಇಟ್ಟ ಮೊದಲ ಹೆಜ್ಜೆಯ ಒನಪು
ನಾವಿದ್ದೇವೆಂದು ಎಚ್ಚರಿಸುವ
ಕೆಲಸಗಳ ಸದ್ದು
ಕಿವಿ ತಲುಪದಷ್ಟು ಮಗ್ನ
ಬೇರೇನೂ ಕಾಣದಷ್ಟು
ತಲ್ಲೀನ
ಓದುತ್ತ ಓದುತ್ತ
ಕಣ್ಣು ಮಂಜೋ
ಅಕ್ಷರಗಳು ಮಬ್ಬೊ
ಹೊತ್ತ ಬಣ್ಣ ಸದರವೊ
ಕೊನೆಯ ಪುಟ ಮೊದಲೇ
ಅರಿವಾದ ನಿರುತ್ಸಾಹವೋ
ಇಂದಿಗಿಷ್ಟು ಸಾಕೆಂದು ಬದಿಗಿಟ್ಟು
ನಾಳೆ
ಕೈ ಓಡುವುದು ಇನ್ನೊಂದರೆಡೆಗೆ
ಇದೂ ಹೊಂದಿಕೆಯಾಗದು
ವಿಷಯ ಸಹಸಂಬಂಧಿಯಲ್ಲ
ಯಾರದೋ ಕಥೆ ಏಕೆ ಓದಲಿ
ಸುತ್ತಿಕೊಂಡ ಪರಿಧಿ ಏಕೆ ಮೀರಲಿ
ನನ್ನ ನಾಯಕತ್ವದ
ಹೊತ್ತಿಗೆ ಹುಡುಕುತ್ತಾ
ಎಲ್ಲೆಡೆ ನನ್ನನ್ನೇ ಹಂಬಲಿಸಿ ಹೋಲಿಸಿ
ಪುಟದ ಸಾರ ಗ್ರಹಿಸಲಾಗದೇ
ಸರತಿ ಸಾಲು ಬೆಳೆಸುತ್ತ ಸಾಗುತ್ತಿದೆ
ತುದಿ ಮಡಿಚಿಟ್ಟ ಪುಸ್ತಕ
ನಾ ಮಾತ್ರ ಖಾಲಿಯಾಗಿ
ಮುಗಿಲ ಕಡೆಗೆ ನೋಡುತ್ತೇನೆ….
ರೇಖಾ ಗಜಾನನ
ಚೆಂದ ಕವಿತೆ