ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಸ್ವಾಸ್ಥ್ಯ ಸಮಾಜದಲ್ಲಿ ಪೊಲೀಸರು

ಪೊಲೀಸ್ ಹುತಾತ್ಮ ದಿನಾಚರಣೆ

ಎ. ಎಸ್. ಮಕಾನದಾರ

ನಮ್ಮ ಸಂವಿಧಾನದಲ್ಲಿ ಪ್ರಮುಖ ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳ ಜವಾಬ್ದಾರಿ ಗುರುತರವಾದುದು, ಈ ದೇಶದ ಜನ ಸ್ವಾಸ್ಥ್ಯರಾಗಿ ನೆಮ್ಮದಿಯ ಬದುಕು ಕಳೆಯುತ್ತಿರುವುದಕ್ಕೆ ಕೋರ್ಟ ಮತ್ತು ಪೊಲೀಸ ಇಲಾಖೆಯ ಕಾರ್ಯಾ ದಕ್ಷತೆಯಿಂದ ಮಾತ್ರ ಸಾಧ್ಯವಾಗಿದೆ.

ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ ಸಂದರ್ಭದಲ್ಲಿ ತಹಬಂದಿಗೆ ತರುವವರು ಪೊಲೀಸರು, ಪೊಲೀಸ ಇಲಾಖೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ಒಂದು ಊರಿಂದ ಇನ್ನೊಂದು ಊರಿನ ಬಸ್ ಹತ್ತಲು, ರಸ್ತೆ ದಾಟಲು, ಗಂಡ-ಹೆಂಡತಿ ನಡುವೆ ಗಂಧ ಹೊರಡದಿದ್ದರೆ, ಜಾತ್ರೆ-ಉರುಸು, ಮೆರವಣಿಗೆ, ಮಾರುಕಟ್ಟೆ, ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು, ರೋಡ ರೋಮಿಯೋಗಳನ್ನು ಹದ್ದುಬಸ್ತಿನಲ್ಲಿಡಲು, ಕುಡುಕರ ಉಪಟಳ ತಡೆಯಲು, ರಾತ್ರಿ ಮನೆ-ಆಸ್ತಿ ಕಾಪಾಡಲು, ದೇವಸ್ಥಾನ, ಗುಡಿ, ಚರ್ಚು, ಮಸೀದಿ, ಸತ್ಯಾಗ್ರಹಗಳನ್ನು ಕಾಯುವ, ಕಳ್ಳತನ ತಡೆಗಟ್ಟಲು, ರಸ್ತೆ ಅಪಘಾತ, ಬೇವರ್ಸಿ ಹೆಣ ಕಾಯಲು ಇಲ್ಲವೆ, ಅಂತ್ಯಸಂಸ್ಕಾರಕ್ಕೂ ಪೊಲೀಸರ ಸಹಾಯಹಸ್ತ ಬೇಕಾಗಿದೆ.

ಈ ನಾಡಿನ ಸ್ವಾಸ್ಥ್ಯ ಕಾಪಾಡುವ ಪೊಲೀಸರು ಕೋಮು ಗಲಭೆಗಳಲ್ಲಿ, ಗುಂಪು ಘರ್ಷಣೆಗಳಲ್ಲಿ ಗಾಯಗೊಂಡಿದ್ದಾರೆ. ಜೀವ ತೆತ್ತಿದ್ದಾರೆ ಅವರ ಅವಲಂಬಿತ ಕುಟುಂಬವನ್ನು ಅನಾಥಗೊಳಿಸಿದ್ದಾರೆ. ಕೆಲ ವಿಷಮ ಪರಿಸ್ಥಿತಿಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ್ದಾರೆ. ಹೋರಾಡುತ್ತಾರೆ. ಆದರೆ ನಮ್ಮ ಮಾನ- ಪ್ರಾಣ, ಆಸ್ತಿ ಕಾಪಾಡುವ ಪೊಲೀಸರನ್ನು ಸಿನೆಮಾ, ನಾಟಕಗಳಲ್ಲಿ ಚೋಕರ್‌ ಅಥವಾ ವಿಲನ್‌ಗಳಾಗಿ ಚಿತ್ರಿಸುತ್ತಾರೆ. ನಿಜವಾದ ಹಿರೋಗಳ ಆತ್ಮಸ್ಥೆರ್ಯ ಕುಗ್ಗಿಸಿದ್ದಾರೆ.

Republic Day: Armed forces, Delhi police personnel rehearse for parade amid  cold, foggy NCR climate - Photos News , Firstpost

ನಮ್ಮ ಸರ್ಕಾರಿ ಇಲಾಖೆಗಳಲ್ಲಿಯೇ ಅತ್ಯಂತ ಭ್ರಷ್ಟ ಇಲಾಖೆಯೆಂದೂ ಪೊಲೀಸರೆಂದರೆ ಲಂಚ ತಿನ್ನುವವರೆಂದೇ ಚಿತ್ರಿಸಿ, ಇಡೀ ಇಲಾಖೆಗೊಂದು ಕಪ್ಪು ಚುಕ್ಕಿ ನಮ್ಮ ಸಮಾಜ ನೀಡಿದೆ.

ಪೊಲೀಸರ ಖಾಕಿಯ ಹಿಂದೆ ಕರುಣೆ ಇದೆ. ಹೃದಯ ವೈಶಾಲ್ಯತೆ ಇದೆ. ಮಾನವೀಯತೆ ಇದೆಯಾದರೂ ಅಪರಾಧಿಗಳನ್ನು ರಕ್ಷಿಸಲು ಕೆಲ ಸಂದರ್ಭಗಳಲ್ಲಿ ‘ಕಾಣದ ಕೈಯ ತಾಳಕ್ಕೆ ಕುಣಿದು ಬಿಡುತ್ತಾರೆ. ಕೋಮು ಗಲಭೆ, ಗುಂಪು ಘರ್ಷಣೆ, ವೈಯಕ್ತಿಕ ಕದನಗಳಿಂದ ಸಮಾಜದ ಶಾಂತತೆಗೆ ಭಂಗ ಉಂಟಾಗುತ್ತಿದೆ. ಅಮಾಯಕ ಜನತೆ ಬೆತ್ತದ ರುಚಿ ಅನುಭವಿಸುತ್ತಾರೆ. ತನಿಖೆಯ ನೆಪದಲ್ಲಿ ಅಧಿಕಾರಿಗಳ, ರಾಜಕಾರಣಿಗಳ ಹಸ್ತಕ್ಷೇಪದಿಂದ ಅಪರಾಧಿಗಳ ಬಿಡುಗಡೆ ಅಥವಾ ನಿಪರಾಧಿ ಶಿಕ್ಷೆ ಅನುಭವಿಸುವಂತಾಗುತ್ತದೆ.

ಒಂದೆಡೆ ಜನಸಂಖ್ಯಾ ಸ್ಫೋಟ, ನಿರುದ್ಯೋಗ, ಬಡತನ, ಅಜ್ಞಾನಗಳೆಂಬ ಪೆಡಂಭೂತ ದೇಶದ ಐಕ್ಯತೆ, ಸೌಹಾರ್ದತೆ ಪ್ರಗತಿಗೆ ಅಡ್ಡಗಾಲಾಗಿವೆ. ಇನ್ನೊಂದೆಡೆ ಜಾಗತೀಕರಣ, ಖಾಸಗಿಕರಣ, ಔದ್ಯೋಗೀಕರಣಗಳ ಕರಿನೆರಳಿದೆ.

ಇಂದಿನ ಸಮಾಜದಲ್ಲಿ ಜಾತಿ-ಮತಗಳ ಹೆಸರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಅದನ್ನೆ ತಡೆಗಟ್ಟಲು ನಾಳಿನ ಸ್ವರೂಪವು ಸರ್ವಜನರ ಪರವಾಗಿರುವಂತೆ ನೋಡಿಕೊಳ್ಳು ವುದು ಪೊಲೀಸರ ಜೊತೆಗೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಕೂಡಾ ಆಗಿದೆ. ಕೋಮುವಾದಿ ಸಂಘಟನೆಗಳನ್ನು ಹತ್ತಿಕ್ಕುವ ಜೊತೆಗೆ ಜನಪರ ವಿಚಾರಗಳನ್ನು ಬಿಂಬಿಸಿ ಜನರ ನಿಮ್ಮ ವರ್ಗದವರ ಸಮಸ್ಯೆಗಳನ್ನು ಚರ್ಚಿಸಿ ನೊಂದ ಜನರ ಕಣ್ಣೀರು ಒರೆಸಬೇಕಿದೆ.

ಸರ್ಕಾರದ ಮೂಲಭೂತ ಸೌಲಭ್ಯಗಳು ಸಂವಿಧಾನ ದತ್ತವಾಗಿ ಸೌಲಭ್ಯ ವಂಚಿತರಿಗೆ, ದುಡಿಯುವ ವರ್ಗಕ್ಕೆ, ಶೋಷಿತ ಸಮುದಾಯಕ್ಕೆ ದೊರಕುವಂತೆ ಮಾಡುವ ಹೊಣೆಗಾರಿಕೆ ಕೂಡಾ ಎಲ್ಲರ ಮೇಲಿದೆ.

ಸರ್ವ ಜನಾಂಗದ ಶಾಂತಿಯ ತೋಟವಾಗಿ ಈ ದೇಶ ಅರಳಬೇಕಾದರೆ ತಪ್ಪಿತಸ್ತರಿಗೆ ಶಿಕ್ಷಿಸಲು ಅಪರಾಧ ಪ್ರಕರಣಗಳನ್ನು, ಗುಂಪು ಘರ್ಷಣೆ ನಿಯಂತ್ರಿಸಲು ದಕ್ಷ ಪೊಲೀಸರು ಇದ್ದಾಗ ಮಾತ್ರ ಸಾಧ್ಯ.

ಪೊಲೀಸರ ವೃತ್ತಿ ಹತ್ತು ಹಲವು ಕಡೆ ಹರಿದು ಹಂಚಿ ಹೋಗುತ್ತದೆ. ಉಪವಾಸ ಸತ್ಯಾಗ್ರಹ, ರಸ್ತೆತಡೆ, ಪ್ರತಿಭಟನೆ ರಾಜಕಾರಣಿಗಳ ಸೇವೆ, ಯಾವುದೇ ಒತ್ತಡದಿಂದ ನಿಷ್ಪಕ್ಷಪಾತದಿಂದ ತನಿಖೆ ಸಾಧ್ಯವಿಲ್ಲ ವಿಷಯದ ಕಡೆಗೆ ಸರಿಯಾಗಿ ಗಮನ ಹರಿಸದೆ ಯಾಂತ್ರಿಕವಾಗಿ ತನಿಖೆ ಕೈಗೊಂಡು ಕೈತೊಳೆದುಕೊಂಡು ಬಿಡುವಂತಾಗಿದೆ.

ವೇಳೆ, ಸಲಕರಣೆ, ವ್ಯವಧಾನ ನೀಡಿದರೆ ಯಾಂತ್ರಿಕ ಲೋಪ-ದೋಷ ಜರುಗುವುದಿಲ್ಲ. ಗುಣಮಟ್ಟದ ತನಿಖೆಗಾಗಿ ತಂಡ ರಚಿಸಬೇಕಿದೆ. ಅನನುಭವಿ ಅಸೂಕ್ತ ತರಬೇತಿ, ದೂರದೃಷ್ಟಿತ್ವ, ನಾಯಕತ್ವ ಗುಣವಿಲ್ಲದವರಿಗೆ ತಂಡದ ಮುಖ್ಯಸ್ಥನನ್ನಾಗಿ ನೇಮಕಗೊಳಿಸುವುದು ತಡೆಯಬೇಕಿದೆ.

ನಿರ್ಭಿತಿಯ ತನಿಖೆಯಿಂದ ಸತ್ಯ ಹೊರ ಬೀಳಲಿದೆ. ಕೊಲೆ, ಡಕಾಯತಿ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ಬಾಹ್ಯ ಒತ್ತಡಕ್ಕೆ ಪೊಲೀಸರು ಒಳಗಾಗುತ್ತಿದ್ದಾರೆ. ತಮ್ಮನೌಕರಿ ಉಳಿಸಿಕೊಳ್ಳುವುದಕ್ಕೋಸ್ಕರ ಪೊಲೀಸರು ತಮ್ಮ ನಿಷ್ಠೆಯನ್ನು ತಾವು ಧರಿಸುವ ಖಾಕಿಗೆ, ತಾವು ತಿನ್ನುವ ಋಣಕ್ಕೆ ಬದಲಾಗಿ ತಮ್ಮನ್ನು ಕಾಲ್ಗೊಂಡಿನಂತೆ ಬಳಸುವ ಖಾದಿಗೆ ಅಡವಿಟ್ಟುಕೊಂಡಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವರಾದ ಪಿ. ಚಿದಂಬರಂ ರವರೇ ಕರ್ನಾಟಕ ರಾಜ್ಯದ ಪೊಲೀಸ ಇಲಾಖೆ ಕುರಿತು ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧೈರ್ಯ, ಸೈರ್ಯದಿಂದ ಯಾವುದೇ ಒತ್ತಡಕ್ಕೆ ಒಳಗಾಗದೇ ಪ್ರಥಮ ವರ್ತಮಾನ ವರದಿಯನ್ನು ತಯಾರಿಸಬೇಕು, ಆಪಾದಿತರನ್ನು ತಕ್ಷಣವೇ ಕೋರ್ಟಿಗೆ ಹಾಜರ ಪಡಿಸಬೇಕು. ಯಾವುದೇ ಘಟನೆ ಜರುಗಿದರೂ ಮೊದಲು ದೂರವಾಣಿ ಯಿಂದ ಮಾಹಿತಿ ಬರುತ್ತದೆ. ಅದೇ ಮೊದಲ ಮಾಹಿತಿಯಾಗಿದ್ದು, ಆ ಮಾಹಿತಿಯ ಆಧಾರದ ಮೇರೆಗೆ ಎಫ್.ಆಯ್. ಆರ್. ದಾಖಲಿಸಿಕೊಳ್ಳಬೇಕು. ಪಿರ್ಯಾದಿದಾರರು ಅನಕ್ಷರಸ್ಥರಾದರೆ ಸತ್ಯಾಸತ್ಯತೆ ಅರಿತು ಮಾಹಿತಿ ಕೇಂದ್ರೀಕರಿಸಿಕೊಳ್ಳಬೇಕಿದೆ.

ಇತ್ತೀಚಿಗೆ ರಾಜ್ಯದಲ್ಲಿ ಬೆಳೆಯುತ್ತಿರುವ ಕೋಮು ದ್ರುವೀಕರಣ. ಅದಕ್ಕೆ ದೊರಕುತ್ತಿರುವ ಸಾಮಾಜಿಕ ಮಾನ್ಯತೆ, ಪ್ರಭುತ್ವತೆ ಪೋಷಣೆ ಸೆಕ್ಯೂಲರ್ ಎನ್ನಿಸಿಕೊಂಡ ಎಡಬಿಡಂಗಿ ರಾಜಕೀಯ ಪಕ್ಷಗಳಿಂದ ಈ ನಾಡಿನ ಸೌಹಾರ್ದತೆಗೆ ಭಂಗ ಉಂಟಾಗಿದೆ.

ಜಾತಿಗ್ರಸ್ತ ಮತ್ತು ಧಾರ್ಮಿಕ ಮೂಲಭೂತವಾದಿ ಪ್ರಭುತ್ವವಿರುವ ಸಮಾಜದಲ್ಲಿ ಮತ್ತು ನಮ್ಮ ವಿವಿಧ ರೂಪದ ಸಮೂಹ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಪ್ರತ್ಯಕ್ಷ ಪರೋಕ್ಷ ರೂಪದಲ್ಲಿ ಪ್ರಭುತ್ವ ಕೋಮುವಾದದ ಬೆಳವಣಿಗೆಗೆ ಸಹಾಯಕವಾಗಿರುವಾಗ ಕೋಮುವಾದದ ವಿರುದ್ಧ ನೇರವಾದ ಪ್ರಚಾರಾಂದೋಲನ ಹಮ್ಮಿಕೊಳ್ಳಬೇಕಿದೆ.

ಕೋಮುವಾದಿಗಳು ಬಳಸಿಕೊಳ್ಳುವ ಇಕ್ಕೂ’ ಗಳಲ್ಲಿ ಪೊಲೀಸರೆ ಕೈಹಾಕಿ ಅಂತಹ ಇಶ್ಯಗಳನ್ನು ಮೊಳಕೆಯಲ್ಲಿಯೇ ಚಿವುಟಬೇಕು, ವರದಕ್ಷಿಣೆ ನಿಷೇಧ ಕಾಯ್ದೆ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ ಪರಿಶಿಷ್ಟ ಜಾತಿ/ಪಂಗಡಗಳ ಕಾಯ್ದೆಗಳ ದುರುಪಯೋಗಕ್ಕೆ ಕೆಲ ಪ್ರಕರಣಗಳಲ್ಲಿ ಪೊಲೀಸರು ಪರೋಕ್ಷವಾಗಿ ಕಾರಣ ರಾಗಿದ್ದಾರೆ. ಮಹಿಳೆಯರು, ಅಬಲೆಯರು ಠಾಣೆಗೆ ದೂರು ದಾಖಲಿಸಲು ಬಂದಾಗ ಅವರಿಗೆ ಇಂತಹ ಸಲಹೆ ನೀಡುವವರೆ ಪೊಲೀಸರೆಂಬುದು ಜನಜನಿತವಾಗಿದೆ.

ನಿರೀಕ್ಷೆ ಮಹಿಳೆಯರಿಗೆ ದಾರಿ ತಪ್ಪಿಸುವ ಸಲಹೆ ನೀಡುವ ಮೂಲಕ ಮತ್ತು ಪರೋಕ್ಷವಾಗಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ೨೦೦೬ರ ಸೆಪ್ಟೆಂಬರ್‌ನಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಿಂದ ದೇಶದ ಪೊಲೀಸ ವ್ಯವಸ್ಥೆ ಬಲಗೊಳ್ಳಬಲ್ಲದು ಎಂಬ ಹುಸಿಯಾಗಿದೆ.

ಪೊಲೀಸ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕಾರ್ಯ ಹಾಗೂ ತನಿಖಾ ಕಾರ್ಯಗಳ ವಿಭಜನೆ. ಅಂದರೆ (ಗಲಭೆಗಳ ನಿಯಂತ್ರಣ, ಮಂತ್ರಿ-ಮಹೋದಯರ, ವಿ. ಆಯ್.ಪಿ.ಗಳ ಬೇಟೆ, ಬಂದೋಬಸ್ತ್ ಜಾತ್ರೆ, ಉರುಸು, ಉತ್ಸವಗಳ ಬಂದೋಬಸ್ತ್ ಇತ್ಯಾದಿ) ಪೊಲೀಸರ ಮೇಲೆ ಸಾರ್ವಜನಿಕರು ದಾಖಲಿಸುವ ದೂರುಗಳ ವಿಚಾರಣೆಗಾಗಿ ಪೊಲೀಸ ದೂರು ಪ್ರಾಧಿಕಾರ’ ರಚನೆ.

ರಾಜ್ಯ ಪೊಲೀಸ ಮುಖ್ಯಸ್ಥರ ಮೇಲೆ ಹುದ್ದೆಯ ಆಯ್ಕೆಯಲ್ಲಿ ಹೊಸ ವಿಧಾನ ಅನುಸರಣೆ, ರಾಜ್ಯ ಸರ್ಕಾರ ಪೊಲೀಸರ ಮೇಲೆ ಅನಗತ್ಯ ಒತ್ತಡ ಅಥವಾ ಪ್ರಭಾವ ಹೇರುವುದನ್ನು ತಡೆಯುವುದು. ರಾಜ್ಯ ಸರ್ಕಾರಗಳಿಂದ ರಾಜ್ಯ ಭದ್ರತಾ ಆಯೋಗ’ ರಚಿಸಬೇಕು. ಕ್ಷೇತ್ರ ಕಾರ್ಯದಲ್ಲಿರುವ ಪೊಲೀಸ ಅಧಿಕಾರಿಗಳಿಗೆ ಆಯಾ ಸ್ಥಳದಲ್ಲಿ ಕನಿಷ್ಟ ೨ ವರ್ಷಗಳ ಅಧಿಕಾರಾವಧಿ ಖಚಿತ ಪಡಿಸಬೇಕು. ವರ್ಗಾವಣೆ ಎಪ್ರಿಲ್/ ಮೇ ತಿಂಗಳಲ್ಲಿ ಮಾಡಬೇಕು ಮುಂತಾದವುಗಳಿವೆ.

ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹಾಡುಹಗಲೆ ಬೀದಿಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಪ್ರಕರಣಗಳು ನಡೆಯುತ್ತಿವೆ. ಪ್ರಮಾಣಿಕರಿಗೆ ಅಸಹಾಯಕರಿಗೆ ನಗರ ಪ್ರದೇಶದ ಜೀವನ ಭಯ ಹುಟ್ಟಿಸುತ್ತಿದೆ. ಆದಕಾರಣ ನಗರ ಪ್ರದೇಶಗಳ ಬೆಳವಣಿಗೆಗೆ ಕಡಿವಾಣ ಹಾಕಬೇಕು.

ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ದಂಧೆ, ಲೇವಾದೇವಿ ವ್ಯವಹಾರ, ಅನೈತಿಕ ಸಂಬಂಧ, ವೀಕೆಂಡ ಪಾರ್ಟಿ, ಪಬ್ ಸಂಸ್ಕೃತಿಗಳಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಸ್ಟೇಚ್ಚಾಚಾರ ಕಡಿವಾಣದ ಜೊತೆಗೆ ಅಪರಾಧ ನಿರ್ವಹಣೆಯಲ್ಲಿ ನಿರ್ಲಕ್ಷ ತೋರದೆ ರೌಡಿಗಳಿಗೆ ಹದ್ದುಬಸ್ತಿನಲ್ಲಿಡಬೇಕು.

ಕೋಮುವಾದ ಮತ್ತು ಭಯೋತ್ಪಾದನೆ ಒಂದರ ಬಾಲವನ್ನು ಮತ್ತೊಂದು ನುಂಗುವ ಹಾವುಗಳಿದ್ದಂತೆ. ಅವು ಪರಸ್ಪರ ತಾವೇ ಆಹಾರವಾಗುತ್ತಾ ನಾಗರಿಕ ಸಮಾಜವನ್ನು ನಾಶಗೊಳಿಸುತ್ತಿವೆ. ಈ ದೆಶೆಯಲ್ಲಿ ಕೋಮುವಾದ-ಭಯೋತ್ಪಾದನೆಯ ಬೆಂಕಿ ನಂದಿಸುವ ವಸ್ತುನಿಷ್ಠವಾಗಿ ತಪ್ಪಿತಸ್ತರಿಗೆ ಶಿಕ್ಷೆ ನೀಡಿದಾಗ ಸಮಾಜ ಸ್ವಾಸ್ಥ್ಯವಾಗಿರಲು ಸಾಧ್ಯ. ಇಲ್ಲದಿದ್ದರೆ …?


ಎ. ಎಸ್. ಮಕಾನದಾರ

Leave a Reply

Back To Top