ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಗಾರುಡಿಗ
ಆದಪ್ಪ ಹೆಂಬಾ ಮಸ್ಕಿ
ನಾನು ಯುವಕ ಪ್ರಖರ ವಾಗ್ಮಿ
ಓದಿಕೊಂಡೂ ಇರುವೆ
ಶಾಸ್ತ್ರ ಆಗಮಗಳೂ ಗೊತ್ತೆನಗೆ
ಕಲ್ಲು ದೇವರ ಪೂಜಿಸಿ
ನಿಮ್ಮನ್ನು ಮೌನವಾಗಿಸಬಲ್ಲೆ
ಪಾಣಿವಾಟದ ಘಮಿಸುವ ನೀರನ್ನು ಪ್ರೋಕ್ಷಿಸಿ ಅವನ್ನೇ
ನಿಮಗೆ ಕುಡಿಸಲೂ ಬಲ್ಲೆ
ಇರಲಿ ಬಿಡಿ ನನಗೊಂದು ಪೀಠ
ಯಾಕೆಂದರೆ
ಕೆಲಸವಿಲ್ಲದ ನಾನು ಖಾಲಿ ಇದ್ದೇನೆ! ||
ನಿಮ್ಮಗಳ ಆಸೆಯಂತೆ
ನಾನೀಗ ಪೀಠದಾರಿ
ನೀವೀಗ ಹಿರಿ-ಕಿರಿ ಯರೆನ್ನದೇ
ಗಂಡು-ಹೆಣ್ಣೆಂದು ಬೇಧಿಸದೇ
ನನ್ನ ಪಾದಕ್ಕೆ ನಮಿಸಬೇಕಿದೆ
ಶೆಟ್ಟರಂಗಡಿಯಿಂದ ಒಂದು ರೂಪಾಯಿಯನ್ನೂ ಕೊಡದೇ ನಾ ತಂದ
ಕಲ್ಲುಸಕ್ಕರೆಯನ್ನೇ ಪ್ರಸಾದವೆನ್ನತ್ತ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ತಿನ್ನಬೇಕಿದೆ
ಯಾಕೆಂದರೆ
ನಾನೀಗ ಕಾವಿ ಧರಿಸಿದ್ದೇನೆ! ||
ನಾಡದೊರೆಗಳು ಅವರನ್ನೇ
ಟೀಕಿಸುವ ನಾಳಿನ ದೊರೆಗಳು
ನನ್ನ ಪಾದಕೆರಗುವುದು ಕಾಣುತಿಲ್ಲವೆ ನಿಮಗೆ ?
ಆಶ್ರಮದಲ್ಲಿರುವ ಅನಾಥಮಕ್ಕಳು
ಹಾಲು ಕೊಡುವುದ ಮರೆತ ಹಸುಗಳು ಕಾಣುತ್ತಿಲ್ಲವೆ ? ಮೂಲವನು
ಕೆದಕುವಿರೇಕೆ ?
ಎಷ್ಟು ಲಾಭ ಎಂದೆಣಿಸಬೇಡಿ.
ಕಷ್ಟ ಎಷ್ಟು ಲೆಕ್ಕಿಸಿ.
ಕಾವಿಯ ಹಿಂದೆ ನನಗೂ ಸಂಸಾರ ಇದೆ ಸ್ವಾಮೀ
ಕೊಡಿ ಕಾಣಿಕೆ ಕಪ್ಪ ಕಾಣಿಕೆ
ಕೊಡುತ್ತೀರಿ ಬಿಡಿ ನೀವು
ನೋಡಿ ಸುಮ್ಮನಿರುವವರಲ್ಲ
ಯಾಕೆಂದರೆ
ಬದುಕಿನ ತತ್ವಗಳನು ಮಾತಲ್ಲೇ ಮಾರುವ ವಾಚಾಳಿ ನಾನು
ಪದ ಗಾರುಡಿಗ ಅಂದುಕೊಳ್ಳುವವರು ನೀವು! ||
ಆದಪ್ಪ ಹೆಂಬಾ ಮಸ್ಕಿ
ಸರ ಚೆನ್ನಾಗಿದೆ. ಮುರಘಾ ಗುರಿಗಳ ಕುರಿತಾಗಿದೆ.
ಸರ ಚೆನ್ನಾಗಿದೆ. ಮುರಘಾ ಗುರುಗಳ ಕುರಿತಾಗಿದೆ.
ವಾತ್ಸವ
ತಂಬ ಚನ್ನಾಗಿದೆ. ಕಟು ವಾಸ್ತವ