ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅಕ್ಕ ನೀ ಹೇಳೇ!

ಮಹಾದೇವಿ ಕೆ.ಪಿ.

ಅಕ್ಕ ನೀನೇ ಹೇಳಬೇಕು
ಇಹಕು ಪರಕು ಏಕನಾದ
ಲೋಕಲೋಕ ಮೀರಿದಂತ
ಜಗದ ಜಟ್ಟಿ ಚೆಲುವ ಚೆನ್ನ
ನೀನೊಲಿದ ನಿನ್ನ ದೇವ
ಎಲ್ಲಿ ಸಿಕ್ಕನೆಂದು ನಿನಗೆ
ನನಗೂ ತಿಳಿಯಬೇಕು

ಹತ್ತಿ ಇಳಿದ ಬೆಟ್ಟಗುಡ್ಡ
ಸುತ್ತಿ ಸುಳಿದ ಗಾಳಿ ಬೆಳಕು
ಯಾವ ಕಟ್ಟುಪಾಡೂ ಇರದೆ
ಹಿಂದೆ ಮುಂದೆ ಆಡಿ ನಲಿದ
ಖಗದಮಿಗದ ಹಿಂಡಿನಲ್ಲಿ
ಬೆಳೆದು ನಿಂತ ಕಾಡಿನಲ್ಲಿ
ಅರಳಿ ನಗುವ ಹೂವಿನಲ್ಲಿ
ತುಳುಕಿದಂತ ಸೊಗಸಿನಲ್ಲಿ ಎಲ್ಲಿ
ಕಂಡನೇಳೇ ಅಕ್ಕ ನಿನ್ನ ದೇವನು

ಕಾಯವೆಂಬ ಕದಳಿಯೊಳಗೆ
ಮಾಯೆಯನ್ನು ಆಚೆ ದೂಡಿ
ಲಿಂಗದೊಳಗೆ ಅಂಗವೆರೆದು
ಮನದ ಮೂಲೆಮೂಲೆಯಲ್ಲೂ
ಅಂಗಲಾಚಿ ಬೇಡಿನಿಂತು ನಿನ್ನ
ಜೀವ ಮಿಡಿದ ಭಾವ ಅವನ
ತಲುಪಿತೇನೇ ನಿನ್ನ ಅರಿತನೇನೇ
ಕಳೆದ ಮೋಹ ತಿಳಿದ ತಿಳಿವು
ಅಂತರಂಗ ತಳೆದ ನಿಲುವು
ಯಾವ ನೆಲೆಗೆ ಸಿಕ್ಕನೇಳೇ ನಿನ್ನ ಚೆನ್ನನು

ಭಕ್ತಿಕಡಲ ಅಣ್ಣನೊಡನೆ
ಶೂನ್ಯವಿಡಿದ ಪ್ರಭುವಿನೊಡನೆ
ಕಲ್ಯಾಣದೆಲ್ಲಾ ಶರಣರೊಳಗೆ
ನಿನಗೆ ಸಿಕ್ಕ ಹಿರಿಮೆ ಗರಿಮೆ
ಎಲ್ಲ ತೊರೆದು ವಿರಾಗಿಯಾಗಿ
ನಡೆದ ಬಯಲದಾರಿಯಲ್ಲಿ
ಎಂಥಾ ಭಕ್ತಿ ಗಟ್ಟಿಚಿನ್ನ ಎಂದು
ಒಪ್ಪಿಕೊಂಡನೇನೆ ನಿನ್ನ ಮೆಚ್ಚಿ
ಬಿಗಿದಪ್ಪಿಕೊಂಡನೇನೆ ಅವನು
ಜೊತೆಗೇ ಕರೆದೊಯ್ದನೇನೇ
ಅಕ್ಕ ಹೇಳೆ ನನಗೂ ತಿಳಿಯಬೇಕು.


ಮಹಾಧೇವಿ ಕೆ.ಪಿ.

7 thoughts on “

  1. ಚೆನ್ನಾಗಿದೆ ಮೇಡಮ್. ವಚನಗಳ ಕುರಿತ ನಿಮ್ಮ ಅಧ್ಯಯನ ಅಗಾಧವಾದುದು.(ನಿಮ್ಮ ವಚನಗಳ ಕುರಿತ ಲೇಖನ ಓದಿದ್ದೆನು).ಹಾಗೇಯೇ ಅಕ್ಕನ ಕುರಿತ ಈ ಕವನವೂ ಚೆನ್ನಾಗಿದೆ.

  2. ಕಾಯವೆಂಬ ಕದಳಿಯಿಂದ ಮಾಯೆಯನ್ನು ಆಚೆ ದೂಡಿ ಮನದರಸನನ್ನು ಅರಸಿದ ಅಕ್ಕನ ಭಕ್ತಿಯನ್ನು ಬಿಂಬಿಸುವ ಸುಂದರ ಕವನ!

Leave a Reply

Back To Top