ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ಪ್ಲೀಸ್…..1
ಇತ್ತೀಚಿನ ದಿನಗಳಲ್ಲಿ ನಿಮ್ಮ ಪ್ರತಿಯೊಬ್ಬರ ಮೊಬೈಲ್ ಫೋನಿಗೂ ಹಲವಾರು ಮೆಸೇಜ್ ಲಿಂಕ್ ಗಳು ಬರುತ್ತಿಲ್ಲವೇ? ಅವುಗಳೆಂದರೆ ನಿಮ್ಮ ಫ್ರೀ ಸಮಯದಲ್ಲಿ ನಿಮ್ಮ ದುಡಿಮೆಯನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಹಣದ ಹರಿವು ಹೆಚ್ಚಿಸಿ ಆದಾಯ ಗಳಿಸಿ, ಕೆಲಸ ಬೇಕೆ? ಈ ಲಿಂಕ್ ಒತ್ತಿರಿ. ಪ್ರತಿದಿನ ಎರಡರಿಂದ ಮೂರು ಸಾವಿರ ಗಳಿಸಿರಿ..ಇತ್ಯಾದಿ ಬರುವ ಮೆಸೇಜ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಕೆಲಸ ಸಿಗುವ ಬದಲು ಇದ್ದ ಕೆಲಸ ಹಾಗೂ ಸಂಬಳವನ್ನು ಕೂಡಾ ಕಳೆದು ಕೊಳ್ಳುವಿರಿ ಜೋಕೆ! ಇಂದು ಹಣ ಮಾಡಲೆಂದೇ ಹಲವಾರು ಜನರಿರುತ್ತಾರೆ.
ಅವರು ಯಾವ ಯಾವುದೋ ಲಿಂಕ್ ಗಳನ್ನು ಬಳಸಿ, ಅಮೆಜಾನ್, ಫ್ಲಿಪ್ ಕಾರ್ಟ್ ಮೊದಲಾದ ಕಂಪನಿಗಳ ಹೆಸರು ಹೇಳಿ, ಆ ಕಂಪನಿಗಳ ಪ್ರೋಡಕ್ಟ್ ಜೊತೆಗೆ ತಮ್ಮ ಸಂಬಂಧ ಇದೆ ಹಾಗೂ ವಾಟ್ಸ್ ಆ್ಯಪ್, ಫೇಸ್ ಬುಕ್ ಗಳ ಒಡೆತನದ ಝುಕರ್ ಬರ್ಗ್ ನ ಒಡೆತನದಲ್ಲಿಯೆ ಇರುವ ಕಂಪನಿ ಇದಾಗಿದೆ ಎಂದು ಇಂಡಿಯಾ ಟುಡೆ ಮೊದಲಾದ ಪತ್ರಿಕೆಗಳಲ್ಲಿ ವಾರ್ತೆಯನ್ನು ಅಚ್ಚೊತ್ತಿ ಆನ್ಲೈನ್ ನಲ್ಲಿ ಅದನ್ನು ಹಂಚಿದರೂ ಕೂಡಾ ನಂಬದಿರಿ.
ಕೊರೋನ ವೈರಸ್ ಭೂಮಂಡಲವನ್ನು ಸುತ್ತುವರಿದ ಮೇಲೆ ಎಲ್ಲ ಜನರೂ ಕೆಲಸ ಕಳೆದುಕೊಂಡು ಹೆಚ್ಚಿನ ಪರದೇಶಿಗರು ನೆಟ್ಟಿನಲ್ಲಿ ಹಣ ಮಾಡುವ ಮೋಸದ ವಂಚನೆಯ ಜಾಲವನ್ನು ಹಬ್ಬಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ನಿಮ್ಮ ಮೊಬೈಲ್ ಗೆ ಯಾವುದೇ ಬ್ಯಾಂಕ್, ಆಫೀಸು, ಫೈನಾನ್ಸ್ ಗಳಿಂದ ಯಾವುದೇ ಮೆಸೇಜ್ ಬಂದರೂ ಡೈರೆಕ್ಟ್ ಆಗಿ ಲಿಂಕ್ ಓಪನ್ ಮಾಡಲು ಹೋಗ ಬೇಡಿ. ನಿಮ್ಮ ಮುಖಪುಟ ಅಥವಾ ಫೇಸ್ ಬುಕ್ ಅಕೌಂಟ್ ನ್ನು ನಿಮ್ಮ ಹೋಟೋ ಹಾಕಿ ನಕಲಿಯಾಗಿ ಸೃಷ್ಟಿಸಿ ನಿಮ್ಮ ಗೆಳೆಯರಿಗೆ ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಅವರನ್ನು ನಂಬರ್ ಪಡೆದು ಮಾತನಾಡಿಸಿ, ಸಂದೇಶ ಕಳುಹಿಸಿ ಅವರೊಂದಿಗೆ ಅಗತ್ಯಕ್ಕೆ ಎಂದು ಹಣ ಪಡೆದು ನಿಮ್ಮನ್ನು ಸಿಕ್ಕಿಸಿ ಹಾಕುವವರು ಬಹಳ ಜನರಿದ್ದಾರೆ. ನಿಮ್ಮ ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಕಾರಣ ಆದಷ್ಟು ಜಾಗರೂಕರಾಗಿರಿ. ಅಲ್ಲದೆ ಯಾರಿಗೂ ನಿಮ್ಮ ಪಾನ್ ನಂಬರ್, ಆಧಾರ್ ನಂಬರ್, ವೋಟರ್ ಐಡಿ ನಂಬರ್ ಗೊತ್ತಿಲ್ಲದವರಿಗೆ ಕೊಡ ಬೇಡಿ, ಆಧಾರ್ ಕಾರ್ಡ್ ಝೆರಾಕ್ಸ್ ಅಥವಾ ಪಾನ್ ಕಾರ್ಡ್ ಝೆರಾಕ್ಸ್ , ಸ್ಕ್ಯಾನ್ ಮಾಡಿ, ಫೋಟೋ ತೆಗೆದು, ಬ್ಯಾಂಕ್ ಪಾಸ್ ಬುಕ್ ಫೋಟೋ ಸಾಮಾಜಿಕ ಜಾಲ ತಾಣಗಳ ಗುಂಪಿನಲ್ಲಿ ಹಂಚಿಕೊಳ್ಳ ಬೇಡಿ.
ಸಣ್ಣ ಮಕ್ಕಳ ಕೈಗೆ ನಿಮ್ಮ ಸ್ಮಾರ್ಟ್ ಫೋನನ್ನು ನೆಟ್ ಆನ್ ಮಾಡಿ ಯೂ ಟ್ಯೂಬ್ ನೋಡಲು ಕೊಡುವಾಗ ಅವರು ಯಾವುದೇ ಮೆಸೇಜ್ ಗಳನ್ನು ನೋಡಿ ಡೈರೆಕ್ಟ್ ಆಗಿ ಲಿಂಕ್ ಓಪನ್ ಮಾಡದ ಹಾಗೆ ನೋಡಿಕೊಳ್ಳಬೇಕು. ಅಪ್ಪಿ ತಪ್ಪಿ ಅವರೇನಾದರೂ ಅದನ್ನು ಓಕೆ ಮಾಡಿದರೆ ತೊಂದರೆಗೆ ಒಳಗಾಗುವವರು ನೀವೇ. ನೀವು ಹತ್ತಿರದಲ್ಲಿ ಇದ್ದಾಗ ಮಾತ್ರ ಮಕ್ಕಳಿಗೆ ಮೊಬೈಲ್ ನಲ್ಲಿ ನೆಟ್ ಬಳಸುವ ಅವಕಾಶ ಮಾಡಿ ಕೊಡಿ. ಅದು ಕೂಡಾ ತೀರಾ ಅಗತ್ಯ ಇದ್ದರೆ ಮಾತ್ರ.
ಶಾಲೆಗೆ ಹೋಗುವ ಮಕ್ಕಳಿಗೆ ಪಾಠಕ್ಕಾಗಿ ನಿಮ್ಮ ಮೊಬೈಲ್ ಬಳಸುತ್ತಿದ್ದರೆ ಆ ಸಮಯದಲ್ಲಿ ಪಾಠ ಬಿಟ್ಟು ಬೇರೆ ಏನನ್ನೂ ಉಪಯೋಗಿಸದಂತೆ ತಿಳಿಸಿ ಕೊಡಿ. ನೋಟ್ಸ್ ಮೊದಲೇ ಡೌನ್ಲೋಡ್ ಮಾಡಿ ಆಫ್ ನೆಟ್ ನಲ್ಲಿ ಬಳಸುವಂತೆ ತಿಳಿಸಿ. ಪ್ಲೇ ಸ್ಟೋರ್ ಗೆ ಹೋಗಿ ಪೇರೆಂಟಲ್ ಕಂಟ್ರೋಲ್ ಆಕ್ಟಿವ್ ಮಾಡಿ ಮತ್ತೆ ಮಕ್ಕಳ ಕೈಗೆ ಮೊಬೈಲ್ ಕೊಡಿ. ತೀರಾ ಅನಿವಾರ್ಯದ ಸಮಯ ಹೊರತಾಗಿ ಮೊಬೈಲ್ ಬಳಸುವಾಗ ನೀವು ಮಕ್ಕಳೊಂದಿಗೆ ಇರಿ. ಮಕ್ಕಳಿಗೆ ಮೊಬೈಲ್ ಕೊಟ್ಟು ನೀವು ನಿಮ್ಮ ಕೆಲಸಕ್ಕೆ ಹೋದರೆ ನೋಡಬಾರದ ವಿಷಯಗಳನ್ನು ಸಣ್ಣ ವಯಸ್ಸಿನಲ್ಲೇ ನೋಡಿ ಮಕ್ಕಳು ತನ್ನ ಜೀವನವನ್ನು ಹಾಳು ಮಾಡಿಕೊಳ್ಳ ಬಹುದು. ಯೂ ಟ್ಯೂಬ್ ನಲ್ಲಿ ಕೊಲೆ, ದರೋಡೆ, ಕಳ್ಳತನ ಮಾಡುವುದನ್ನು ನೋಡಿ ಅದನ್ನೇ ಪ್ರಯೋಗ ಮಾಡಿ ನೋಡಲೂಬಹುದು. ಆತ್ಮಹತ್ಯೆಗೂ ಪ್ರಯತ್ನಿಸ ಬಹುದು.x
ವೈಜ್ಞಾನಿಕ ಉಪಕರಣಗಳ ಉಪಯೋಗ ಸರಿಯಾಗಿ ಮಾಡಿದರೆ ಅದು ಉತ್ತಮ, ಇಲ್ಲದಿದ್ದರೆ ಲಕ್ಷ ಲಕ್ಷ ಹಣ ಒಂದೇ ದಿನದಲ್ಲಿ ಕಳೆದು ಕೊಂಡು ದಿವಾಳಿ ಮಾಡಿ ಅದುವೇ ನಿಮ್ಮ ಜೀವನಕ್ಕೆ ಮುಳುವಾಗಬಹುದು! ಆದ ಕಾರಣ ಸ್ಮಾರ್ಟ್ ಫೋನ್ ಬಳಸುವಾಗ , ಮಕ್ಕಳ ಕೈಗೆ ಕೊಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ನಮ್ಮ ಕೈಯಲ್ಲಿ ಇಂದು ಇಡೀ ಪ್ರಪಂಚವೇ ಇದೆ. ಆದರೆ ಅದನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಬಳಸುವ ರೀತಿಯನ್ನು ನಾವು ಕಲಿತರೆ ಮಾತ್ರ ನಮ್ಮ ಆರೋಗ್ಯ ಹಾಗೂ ಬದುಕು ಉತ್ತಮವಾಗಿ ನಡೆಯಬಲ್ಲುದು. ಇಲ್ಲದೇ ಇದ್ದರೆ ಜೀವನ ಹಾಳಾಗಿ ಹೋಗಬಹುದಲ್ಲವೆ? ನೀವೇನಂತೀರಿ?
ಹನಿಬಿಂದು