ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಭಾರತಿ ಕೇದಾರಿ ನಲವಡೆ
ಸ್ಥಿರತೆ
ಜೀವನದಲಿ ಬರುವ ಏರಿಳಿತಗಳ ಬಿರುಗಾಳಿಗೆ
ಕ್ಷಣಕ್ಷಣ ಸತ್ತು ಹುಟ್ಟುತಿಹ ಭಾವದ ಮಂಥನದ ಪಯಣ
ನಿಚ್ಚಳವಾಗುತಿವೆ ಹೊಳಹುಗಳು ಮರೀಚಿಕೆಯಾಗಿವೆ
ಆಂತರ್ಯದ ದ್ವೇಷದ ಅಗ್ನಿಗೆರೋಷದ ಸುಳಿಗೆ
ಸಾಗದೇ ಹೊತ್ತುರಿವ ದೀಪದಂತೆ ವರವಾಗಿ ಮಿಸುನಿಯ ಹೊಳಪಾದ ಬಾಳು//
ಮನದ ಕ್ಲೇಶಕ್ಕಿಲ್ಲ ಸೀಮೆಯ ಭದ್ರತೆ ಕಾಲನ ಲೀಲೆಗೆ ಬೇಧವಿಲ್ಲದ ಸಂತೆ
ಅಂತೆ ಕಂತೆಗಳ ಬಲೆಯೊಳಗೆ ವೃಥಾ ಬೇಡ ಚಿಂತೆ ಮನದಿ
ಉಪ್ಪು ತಿಂದವನು ನೀರು ಕುಡಿಯಬೇಕೆಂಬ ಕ್ಷಣದಿ
ಅನುಭಾವದ ಕುಲುಮೆಯಲಿ ಮನದ ಸ್ಥಿರತೆಯ ಗುಣದಿ
ತೂಗಿ ನೋಡದಿರು ಮಾನವೀಯತೆಯನು ಎಂದೂ ಹಣದಿ//
ಶಾಶ್ವತವಲ್ಲದ ಈ ಜನ್ಮದ ಕರ್ತವ್ಯದ ಪಯಣ
ಸಾಗುತಲಿ ತಾಳ್ಮೆ ಶಾಂತಿಯ ಬೆರೆವ ಸುಗುಣ
ಅಂತ್ಯವಿಲ್ಲದ ಕನಸಿನ ಆಶಾಗೋಪುರದ ಪ್ರಯಾಣ
ಸಹಕಾರ ತತ್ವದಲಿ ನನಸಾಗಲಿ ಸಮರಸದ ಸತ್ಕಾರ್ಯದ ಯಾಣ//
ಮನುಜಮತದಿ ಸರ್ವರಿಗೆ ಸಮಬಾಳ ಸಂಭ್ರಮ
ಸರ್ವರಲೂ ಸಮಾನತೆಯ ಭ್ರಾತೃತ್ವದ ಸಂಗಮ
ವಿಶ್ವ ಪಥದೆಡೆಗಿನ ಹೊಂಗಿರಣದ ಸ್ವಾಗತಕೆ ಹೃನ್ಮನದ ಸಮಾಗಮ
ಉಸಿರಿರುವವರೆಗೂ ಭಾವಬಂಧಗಳ ಬೆಸೆಯುವ ನೀತಿ ವಿಹಂಗಮ//
ಭಾರತಿ ಕೇದಾರಿ ನಲವಡೆ