ಆಧುನಿಕ ಮಹಿಳೆ – ವಿಭಿನ್ನ ಸಮಸ್ಯೆಗಳ ಸುಳಿಯಲ್ಲಿ 

ಲೇಖನ

ಆಧುನಿಕ ಮಹಿಳೆ – ವಿಭಿನ್ನ ಸಮಸ್ಯೆಗಳ ಸುಳಿಯಲ್ಲಿ

ಡಾ.ದಾನಮ್ಮ ಝಳಕಿ

ಮಹಿಳೆ ಆದಿಕಾಲದಿಂದ ಆಧುನಿಕ ಕಾಲದವರೆಗೆ ವಿಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಾ, ಅವುಗಳ ಸುಳಿಯಿಂದ ಸತತವಾಗಿ ಹೊರ ಬರುವ ಪ್ರಯತ್ನದಲ್ಲಿರುವದನ್ನು ಇತಿಹಾಸದ ಪುಟದಲ್ಲಿ ನೋಡುತ್ತಲೇ ಬಂದಿದ್ದೇವೆ. ಶಿಕ್ಷಣ ಎಂಬುದು ಅವಳಿಗೆ ಆಶಾಕಿರಣವಾಗಿ, ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿರುದು ವಾಸ್ತವ ಸತ್ಯ ಎಂದುದನ್ನು ಎಲ್ಲರೂ ಒಪ್ಪಲೇಬೇಕು ನಿಜ. ಆದರೆ ಶಿಕ್ಷಣ ಪಡೆದ ಮಹಿಳೆ ವಾಸ್ತವಾಗಿ ಸಬಲಳಾಗಿರುವಳೇ?  ಎಂಬ ಹತ್ತು ಹಲವಾರು ಪ್ರಶ್ನೆಗಳು ಏಳುವುದುಂಟು. ಇಲ್ಲಿ ಸಬಲೀಕರ ಎಂದರೇನು ಎಂಬ ಪ್ರಶ್ನೆಯೊಂದಿಗೆ ಚರ್ಚೆಯನ್ನು ಮುಖಾಮುಖಿಯಾಗಿಸುತ್ತಾ ಮಹಿಳೆಯ ಇಂದಿನ ಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಕಾಣಬೇಕಾಗಿದೆ.

            ಮಹಿಳಾ ಸಬಲೀಕರಣ ಎಂದರೆ  ಮಹಿಳಾ ಸಶಕ್ತೀಕರಣ ಎಂದರ್ಥ. ಅಂದರೆ ಮಹಿಳೆ ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕ, ಸಾಂಸೃತಿಕವಾಗಿ ಹಾಗೂ ರಾಜಕೀಯವಾಗಿ ಹೀಗೆ ಇತ್ಯಾದಿ ರಂಗಗಳಲ್ಲಿ ಸಶಕ್ತೀಕರಣಗೊಳ್ಳುವುದು ಎನ್ನಬಹುದಾಗಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ, ಭಾಗವಹಿಸುವ ಸಾಮರ್ಥ್ಯ, ಸಮಾನ ಅವಕಾಶಗಳನ್ನು ಪಡೆಯುವ ಹಾಗೂ ನಿಭಾಯಿಸುವ ಸಾಮರ್ಥ್ಯ, ಸಾಮಾಜಿಕವಾಗಿ ಸಮನಳಾಗಿ ಬದುಕುವ ಸಾಮರ್ಥ್ಯ, ಆರ್ಥಿಕವಾಗಿ ಸ್ವಾವಲಂಬಿಯಾಗುವ ಸಾಮರ್ಥ್ಯ, ರಾಜಕೀಯವಾಗಿ ಚುಕ್ಕಾಣೆ ಹಿಡಿಯುವ ಸ್ವಾತಂತ್ರ್ಯ ಹೀಗೆ ಅನೇಕ ಅಂಶಗಳಲ್ಲಿ ಮಹಿಳೆ ಸಮ ಸಮಾಜಕ್ಕಾಗಿ ತನ್ನನ್ನು ತಾನು ಮಾರ್ಪಡಿಸುವುದೇ ಆಗಿದೆ.

            ಈ ಹಿನ್ನೆಲೆಯಲ್ಲಿ ಆಧುನಿಕ ಮಹಿಳೆಯು ಶಿಕ್ಷಣದಲ್ಲಿ ದಾಪುಗಾಲನ್ನು ಇಡುತ್ತಾ ಎಲ್ಲ ರಂಗದಲ್ಲಿ ಪಾದಾರ್ಪಣೆ ಮಾಡಿದ್ದನ್ನು ನೋಡಿದ್ದೇವೆ. ತನ್ನ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಉದ್ಯೋಗಂ ಪುರುಷ ಲಕ್ಷಣಂ ಎಂಬ ಸಂಪ್ರದಾಯಿಕ ಚೌಕಟ್ಟನ್ನು ಬೇಧಿಸಿ ಹೊರಬರಲು ಪ್ರಯತ್ನಿಸುತ್ತಿದ್ದಾಳೆ. ಉದ್ಯೋಗದ ಎಲ್ಲ ರಂಗಗಳಲ್ಲಿ ಪಾದಾರ್ಪಣೆ ಮಾಡಿದ್ದಾಳೆ. ಆದರೆ  ಈ ಸ್ಥಿತಿಯಲ್ಲಿ ಅವಳು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.  ಆಧುನಿಕ ಕಾಲದಲ್ಲಿ ಅವಳ ಸಮಸ್ಯೆ ವಿಭಿನ್ನವಾಗಿವೆ. ದುಡಿಯುವ ಮಹಿಳೆ ತನ್ನ ಕುಟುಂಬದ ಜವಾಬ್ದಾರಿಯೊಂದಿಗೆ ಉದ್ಯೂಗವನ್ನು ನಿಭಾಯಿಸಬೇಕಾಗಿದೆ. ಹೊರಗಡೆ ಉದ್ಯೋಗ ಮುಗಿಸಿ ಮನೆಗೆ ಬಂದಾಗ ಮನೆಯ ಎಲ್ಲ ಚಟುವಟಿಕೆಗಳು ಮಹಿಳೆಯೇ ನಿಭಾಸಬೇಕು ಎಂಬ ಪುರುಷಪ್ರಧಾನ ಸಮಾಜದ ಬಯಕೆ ಅವಳಿಗೆ ವಿಶ್ರಾಂತಿ ಇಲ್ಲದ ಬದುಕನ್ನು ನೀಡಿದೆ. ಮನೆಯ ಎಲ್ಲ ನಿರ್ಣಯಗಳಿಗೂ ಅವಳು ಪುರುಷನನ್ನೇ ಅಂದರೆ ತಂದೆ ಅಥವಾ ಮಾವ ಇಲ್ಲವೇ ಗಂಡ ಅಥವಾ ಮಗನನ್ನೇ ಆಶ್ರಯಿಸಬೇಕಾಗಿದೆ. ಉದ್ಯೋಗಸ್ಥ ಮಹಿಳೆ ತಾನು ದುಡಿದ ಹಣದ ಖರ್ಚನ್ನು ಮಾಡಲು ಮನೆಯ ಪುರುಷರ ಅನುಮತಿ ಕೇಳಬೇಕಾಗಿರುವುದು ಗೋಚರಿಸುವ ಸತ್ಯ.

            ಇನ್ನು ದುಡಿಯುವ ಮಹಿಳೆ ಕಛೇರಿಯಲ್ಲಿ ಸಹ ವೈವಿಧ್ಯಮಯ ಸಮಸ್ಯೆಗಳ ಸುಳಿಯಲ್ಲಿ ಇರುವದನ್ನು ಸಹ ಕಾಣಬಹುದಾಗಿದೆ. ಮಹಿಳೆ ಎಂಬ ಕಾರಣದ ನೆಪ ಒಡ್ಡಿ ಅನೇಕ ಪ್ರಮುಖ ಕಾರ್ಯಗಳನ್ನು ನೀಡದೇ ಅವಳನ್ನು ಅಸಹಾಯಕ ಪರಿಸ್ಥತಿಗೆ  ತಳ್ಳುತ್ತಾರೆ. ಅಲ್ಲದೇ ಉತ್ತಮ ಅವಕಾಶಗಳಿಂದ ಸಹ ವಂಚಿತರನ್ನಾಗಿ ಮಾಡುತ್ತಾರೆ.ಅಲ್ಲದೇ  ಅವಳನ್ನು ನೋಡುವ ದೃಷ್ಟಿಕೋನವು ಮಹಿಳೆಗೆ ಮುಜುಗರ ಉಂಟುಮಾಡುತ್ತಿರುತ್ತದೆ. ಅದನ್ನು ಹಂಚಿಕೊಳ್ಳಲು ಸದಾ ಬಯಪಡುವ ಪರಿಸ್ಥಿತಿ ಆಧುನಿಕ ಮಹಿಳೆಯರದು. ಏಕೆಂದರೆ ಇದರಿಂದ ತಾನು ಉದ್ಯೋಗದಿಂದ ವಂಚಿತಳಾಗಬಹುದೆಂಬ ಭಯ ಸದಾ ಕಾಡುತ್ತಿರುತ್ತದೆ ಅಲ್ಲದೇ ಸಮಾಜ ತನ್ನ ಬಗ್ಗೆ ಏನು ತಿಳಿಯುತ್ತದೆ ಎಂಬ ಆತಂತಕದಲ್ಲಿಯೇ ಸದಾ ಬಾಳನ್ನು ನೂಕುವ ಸ್ಥಿತಿಯನ್ನು ಕಾಣಬಹುದಾಗಿದೆ.

            ಇತ್ತೀಚಿಗೆ ವಾಟ್ಸ ಆಪ್‌, ಫೇಸ ಬುಕ್‌, ಟ್ವೀಟರ, ಕ್ಲಬ್‌ ಹೌಸ ದಂತಹ ಜಾಲತಾಣಗಳು ಮಹಿಳೆಯನ್ನು ಹಾಗೂ ಅವಳ ಸ್ವಾತಂತ್ರ್ಯವನ್ನು ಸ್ವೇಚ್ಛಾರವೆಂದು ಬಣ್ಣಿಸುತ್ತಾ ಮತ್ತಷ್ಟು ಕುಗ್ಗಿಸುವ ಕಾರ್ಯ ಮಾಡುತ್ತಲೇ ಇವೆ. ಮಹಿಳೆಯನ್ನು ಜಾಹೀರಾತಿಗಾಗಿ ಬಳಸುತ್ತಾ ಅವಳ ತೇಜೋವಧೆ ಮಾಡುವ ಕಾರ್ಯ ನಿಂತಿಲ್ಲ. ಮಹಿಳೆಯರನ್ನು ಜೋಕಗ ಗಳಲ್ಲಿ ಬಳಸುತ್ತಾ  ಅವಳನ್ನು ನಗೆಪಾಟಲಿನ ವಸ್ತುವನ್ನಾಗಿ ಬಳಸುವ ತಂತ್ರಗಳು  ಕಡಿಮೆ ಆಗುತ್ತಿಲ್ಲ. ಮಹಿಳೆ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿದರೂ ಮೌನವಾಗಿ ಇವುಗಳಿಗಾಗಿ ಉತ್ತರವನ್ನು ಹುಡುಕುವ ಕಾರ್ಯದಲ್ಲಿ ನಿತ್ಯ ನಿರಂತರಾಗಿ ತೊಡಗಿರುವನ್ನು ಕಾಣಬಹುದಾಗಿದೆ.

ಒಟ್ಟಾರೆಯಾಗಿ ಆಧುನಿಕ ಕಾಲದಲ್ಲಿ ಮಹಿಳೆ ವಿಭಿನ್ನವಾದ ಸಮಸ್ಯೆಗಳ ಸುಳಿಯಲ್ಲಿರುವದನ್ನು ವಾಸ್ತವವಾಗಿ ಒಪ್ಪಲೇಬೇಕಾಗಿರುವ ಅಂಶವಾಗಿದೆ


Leave a Reply

Back To Top