ಕಥಾ ಸಂಗಾತಿ
ಸಹೃದಯಿ ಸ್ನೇಹಿತರು
ಬಿ.ಟಿ.ನಾಯಕ್
ಶ್ರೀಕರ ಮತ್ತು ಶ್ರೀನಾಥ ಬಾಲ್ಯದಿಂದಲೂ ಸ್ನೇಹಿತರು. ಅವರು ಪ್ರಭುದ್ಧಕ್ಕೆ ಬಂದರೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ದಿನಕ್ಕೆ ಒಂದು ಬಾರಿಯಾದರೂ ಪರಸ್ಪರ ಅವರವರ ಮನೆಯಲ್ಲಿ ಸಂಧಿಸುತ್ತಿದ್ದರು. ಇದಕ್ಕೆ ಪರಸ್ಪರರ ಮನೆಯಲ್ಲಿನ ಹಿರಿಯರು ಮತ್ತು ಇತರರಿಂದ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಒಮ್ಮೊಮ್ಮೆ ಅವರ ಭೋಜನ ಅಥವಾ ಬೆಳಗಿನ ತಿಂಡಿ ಯಾರ ಮನೆಯಲ್ಲಿ ಆಗುತ್ತದೆಂಬುದು ಕೂಡಾ ತಿಳಿಯುತ್ತಿರಲಿಲ್ಲ. ಅವರಿಬ್ಬರೂ ಭೋಜನದ ಸಮಯದಲ್ಲಿ ಸಂಕೋಚವಿಲ್ಲದೆಯೇ ಎಲ್ಲರ ಜೊತೆ ಗೂಡುತ್ತಿದ್ದರು.
ಶ್ರೀಕರ ಮಾರನೇ ದಿನ ಅವರ ಮನೆಗೆ ಬರುವುದಾಗಿ, ಅಲ್ಲಿಯೇ ಭೋಜನ ಮಾಡುವದಾಗಿ ಹೇಳಿದ. ಅದರ ಹಾಗೆ ಶ್ರೀನಾಥ ತನ್ನ ಅಮ್ಮನಿಗೆ ಸಿಹಿ ತಿಂಡಿಯನ್ನು ಮಾಡಲುಹೇಳಿದ. ಅವನಮ್ಮ ‘ಹಾಗೆಯೆ ಆಗಲಿ ‘ ಎಂದಳು. ಮಧ್ಯಾನ್ಹ ಒಂದು ಗಂಟೆಯ ಸುಮಾರಿಗೆ ಶ್ರೀನಾಥ ತಮ್ಮ ಮನೆಯ ಬಾಗಿಲವರೆಗೆ ಬಂದು ಹೊರಗೆ ಶ್ರೀಕರನ ಬರುವಿಕೆಯನ್ನು ಇಣುಕಿ ನೋಡುತ್ತಿದ್ದ. ಆದರೇ, ಅದೇಕೋ ಶ್ರೀಕರನ ಆಗಮನ ಆಗಲೇ ಇಲ್ಲ. ಆಗ ಶ್ರೀನಾಥನ ಅಮ್ಮ ಹೀಗೆ ಹೇಳಿದಳು;
‘ಏನೋ ಶ್ರೀಕರ ಇನ್ನೂ ಬರಲೇ ಇಲ್ಲ, ಅವರ ಮನೆಗೆ ಹೋಗಿಯಾದರೂ ಕರೆದು ಕೊಂಡು ಬಾ’ ಎಂದಳು.
‘ಸರಿ ಅಮ್ಮ ಅದೇ ಒಳ್ಳೆಯದು, ಏಕೆಂದರೆ, ಆತ ಬರದಿದ್ದುದುದರ ಆತಂಕ ತಡೆಯೋಕ್ಕಾಗುತ್ತಿಲ್ಲ. ಅವರ ಮನೆಗೆ ಹೋಗಿ ಕರೆದು ತರುತ್ತೇನೆ. ನೀನು ಭೋಜನ ಬಡಿಸುವ ಸಿದ್ಧತೆ ಮಾಡಿಕೊ ‘ ಎಂದು ಹೇಳಿ ಹೊರಟು ಹೋದ.
ಶ್ರೀಕರನ ಮನೆ ತಲುಪಿದ, ಮತ್ತು ಸರಸರನೇ ಮನೆ ಒಳಕ್ಕೆ ಹೋದ. ಅಲ್ಲಿ ನೋಡುತ್ತಾನೆ, ಶ್ರೀಕರ ಕಾಣುತ್ತಿಲ್ಲ. ಆತನ ಅಮ್ಮ ಮತ್ತು ಉಳಿದವರು ಯಾರೂ ಕಾಣಲಿಲ್ಲ. ಶ್ರೀಕರನ ತಂಗಿ ಗಾಯತ್ರಿ ಒಬ್ಬಳೇ ಇದ್ದಳು. ಅವಳನ್ನು ವಿಚಾರಿಸಿದ.
‘ಏನು ಗಾಯಮ್ಮ ಮನೆಯಲ್ಲಿ ಶ್ರೀಕರ, ಅಮ್ಮ ಅಪ್ಪ ಇಲ್ಲ, ಎಲ್ಲಿಗಾದರೂ ಹೋದರೆ ?’
‘ಅಣ್ಣ, ಅವರು ಆಸ್ಪತ್ರೆಗೆ ಹೋಗಿದ್ದಾರೆ, ಅಣ್ಣಗೇ ಹುಷ್ಯಾರು ಇಲ್ಲ.’
‘ಯಾಕೆ ಏನಾಯಿತು ?’ ಗಾಬರಿಯಿಂದ ಕೇಳಿದ.
‘ಅವನಿಗೆ ಸಿಕ್ಕಾಪಟ್ಟೆ ಜ್ವರ ಬಂದು, ಮೈಯಲ್ಲಿ ಎಚ್ಚರ ವಿಲ್ಲದೆಯೇ ಮಲಗಿದ್ದ. ಅಪ್ಪ ಮಧ್ಯ ರಾತ್ರಿಯಲ್ಲೇ ‘ರೋಹಿಣಿ ‘ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನೂ ಹೋಗಬೇಕೆಂದಿದ್ದೆ, ಆದರೇ ನನ್ನನ್ನು ಮನೆಯಲ್ಲಿ ಇರುವಂತೆ ಹೇಳಿ ಹೋದರು.
‘ಹೌದಾ…ಇಷ್ಟೆಲ್ಲಾ ಆಗಿದೆಯಾ ? ನನಗೆ ಮುಂಜಾನೆ ಯಾದರೂ ಸುದ್ದಿ ತಿಳಿಸಬೇಕಲ್ಲ.’
‘ಅಣ್ಣಾ ಮನೆಯಲ್ಲಿ ನನ್ನ ಬಿಟ್ಟರೆ ಯಾರಿಲ್ಲ. ಹೀಗಾಗಿ ನಿನಗೆ ತಿಳಿಸಲಾಗಲಿಲ್ಲ’ ಎಂದಳು.
‘ಗಾಯತ್ರಿ ನಾನು ಆಸ್ಪತ್ರೆಗೆ ಹೋಗುತ್ತೇನೆ’ ಎಂದು ತಡ ಮಾಡದೆಯೇ ಹೊರಟ.
ಸುಮಾರು 15-20 ನಿಮಿಷದಲ್ಲಿ ಆಸ್ಪತ್ರೆ ತಲುಪಿದ. ಒಳಗೆ ಹೋದ ಅಲ್ಲಿ ಶ್ರೀಕರನ ಅಪ್ಪ ಅಮ್ಮ ಸಿಕ್ಕಾಗ ವಿಚಾರಿಸಿದ. ಶ್ರೀಕರನಿಗೆ ಬಹಳೇ ಜ್ವರ ಬಂದು ಮಿದುಳಿಗೆ ಪರಿಣಾಮವಾಗಿದೆ ಏಂದು ಅಪ್ಪ ಹೇಳಿದರು. ಆದರೇ, ಅಮ್ಮ ಕಣ್ಣೀರು ಹಾಕುತ್ತಲೇ ಇದ್ದಳು. ಇವನಿಗೂ ದುಃಖ ಒತ್ತಿ ಬಂತು. ಅಳಲು ಪ್ರಾರಂಭಿಸಿದ. ಅಪ್ಪ ಸಮಾಧಾನ ಪಡಿಸಿದ.
‘ಶ್ರೀನಾಥ ಹಾಗೆಲ್ಲ ಕಣ್ಣೀರು ಹಾಕ ಬೇಡ, ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಇನ್ನೇನು ಸಾಯಂಕಾಲದವರೆಗೆ ಜ್ವರ ತಗ್ಗಿ ತಹಬಂದಿಗೆ ಬರುತ್ತದೆಂದು ವೈದ್ಯರು ಹೇಳಿದ್ದಾರೆ’
‘ಅದ್ಹೇಗೆ, ನೀವು ನನಗೆ ತಿಳಿಸಲಿಲ್ಲ’
‘ನಾವು ಮಧ್ಯರಾತ್ರಿಯೇ ಆಸ್ಪತ್ರೆಗೆ ಬಂದೆವು, ಹಾಗಾಗಿ ಯಾರಿಗೂ ಹೇಳಲಿಕ್ಕೆ ಆಗಲಿಲ್ಲ’ ಎಂದು ಹೇಳಿದರು.
‘ಈಗ ಹೇಗಿದೆ ಅವನಿಗೆ ?’ ಎಂದು ಶ್ರೀನಾಥ ಕೇಳಿದ.
‘ಆತನಿಗೆ ಎಚ್ಚರವಿಲ್ಲ ‘ ಎಂದರು.
‘ಅದ್ಹೇಗೆ ಒಮ್ಮಿದೊಮ್ಮೆಲೇ ಜ್ವರ ಬಂತು ?’
‘ಆತನಿಗೆ ರಾತ್ರಿ ಐದಾರು ಬಾರಿ ವಾಂತಿಯಾಯಿತು. ಬಹುಷಃ ನಿಶ್ಯಕ್ತಿ ಆಗಿ ಪ್ರಜ್ಞೆ ತಪ್ಪಿರಬಹುದು. ಆದರೇ, ವೈದ್ಯರು ಆ ಬಗ್ಗೆ ವಿವರ ಕೊಟ್ಟಿಲ್ಲ ‘ ಎಂದರು.
‘ಸರಿ, ನೀವು ಮನೆಗೆ ಹೋಗಿ ನಾನು ಇಲ್ಲೇ ಇರುತ್ತೇನೆ.’ ಎಂದ ಶ್ರೀನಾಥ.
‘ನಿಂದು ಊಟ ಆಗಿದೆಯಾ ?’
‘ ಶ್ರೀಕರ ನಮ್ಮನೆಗೆ ಊಟಕ್ಕೆ ಬರುತ್ತೇನೆಂದು ಹೇಳಿದ್ದ. ಅವನ ದಾರಿ ಕಾಯುತ್ತಾ ಇದ್ದೆ. ಸುದ್ದಿ ತಿಳಿದು ಇಲ್ಲಿಗೆ ಬಂದೆ’ ಏಂದ.
‘ಹಾಗಾದ್ರೆ, ನೀನು ಮನೆಗೆ ಹೋಗಿ ಊಟ ಮಾಡಿ ಬಾ, ಅಲ್ಲಿಯವರೆಗೆ ನಾನು ಇರ್ತೇನೆ, ನೀನು ಬಂದ ಮೇಲೆ ನಾನು ಹೋಗುತ್ತೇನೆ’ ಎಂದರು ಶ್ರೀಕರನ ಅಪ್ಪ.
‘ಇಲ್ಲ..ಇಲ್ಲ… ನನಗೆ ಊಟ ಸೇರುವುದಿಲ್ಲ. ನೀವು ಹೋಗಿ ಬನ್ನಿ.’ ಎಂದ ಶ್ರೀನಾಥ.
‘ಹಾಗಾದರೇ, ಕೈ ಚೀಲದಲ್ಲಿ ಹೋಟೆಲನಿಂದ ತರಿಸಿದ ಇಡ್ಲಿಗಳಿವೆ. ಅವನ್ನು ತಿಂದು ಬಿಡು, ಸ್ವಲ್ಪ ಹೊಟ್ಟೆ ತಣ್ಣಗಾಗುತ್ತೆ’ ಎಂದರು.
‘ಸರಿ’ ಎಂದು ಇಡ್ಲಿ ಸೇವಿಸಿದ. ಅವರಿಬ್ಬರನ್ನು ಕಳಿಸಿ ಕೊಟ್ಟ. ಅವರು ಮನೆಗೆ ಹೋದರು. ಅಮ್ಮ ಮನೆಯಲ್ಲಿ ಅಡಿಗೆ ಮಾಡಿ, ಊಟ ಕಟ್ಕಿ ಕೊಂಡು ಆಸ್ಪತ್ರೆಗೆ ಬಂದು ಬಿಟ್ಟರು. ಶ್ರೀನಾಥನನ್ನು ಒತ್ತಾಯ ಮಾಡಿ ಅವರ ಮನೆಗೆ ಹೋಗಲು ಹೇಳಿ; ‘ಬೇಕಿದ್ದರೆ ಸಾಯಂಕಾಲ ಬಂದು ಹೋಗು’ ಎಂದರು. ಆಗ ವಿಧಿ ಇಲ್ಲದೇ ಸಣ್ಣ ಮುಖ ಮಾಡಿಕೊಂಡು ಶ್ರೀನಾಥ ಮನೆಗೆ ತೆರಳಿದ.
ಸಾಯಂಕಾಲ ಆತ ತನ್ನ ಅಮ್ಮನಿಗೆ ಹೇಳಿ ಮತ್ತೇ ಆಸ್ಪತ್ರೆಗೆ ಬಂದ. ಅಮ್ಮನನ್ನು ವಿಚಾರಿಸಿದ.
‘ಇಲ್ಲ ಅಪ್ಪ ಅವನಿಗೆ ಟೈಫಾಯಿಡ್ ಆಗಿದೆಯಂತೆ. ಜ್ವರ ತಹಬಂದಿಗೆ ಬರುತ್ತಿಲ್ಲ. ಏನು ಮಾಡೋದು ?’ ಹತಾಶಳಾಗಿ ಅಮ್ಮ ಹೇಳಿದಳು.
‘ಅಮ್ಮ ನೀವು ಯೋಚಿಸಬೇಡಿ, ಶ್ರೀಕರ ಆದಷ್ಟು ಬೇಗ ಹುಷ್ಯಾರು ಆಗುತ್ತಾನೆ.’
‘ಅಪ್ಪಾ…ನಿನ್ನ ಹಾರೈಕೆ ನಿಜವಾಗಲಿ ‘ ಎಂದಳು ಅಮ್ಮ.
ಆಗ ರಾತ್ರಿ ಹತ್ತು ಗಂಟೆಗೆ ವೈದ್ಯರು ತಪಾಸಣೆ ಮಾಡಲು ಬಂದಿದ್ದರು. ಪರಿಸ್ಥಿತಿ ಇನ್ನೂ ಸರಿ ಹೋಗಿಲ್ಲ ಒಂದೆರಡು ದಿನ ಕಾಯಬೇಕು, ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ಹೇಳಿ ಹೊರಟು ಹೋದರು. ಅಪ್ಪ, ಅಮ್ಮ ಇಬ್ಬರೂ ಚಿಂತಾಕ್ರಾಂತರಾದರು. ಯಥಾ ಪ್ರಕಾರ ಒತ್ತಾಯ ಮಾಡಿ ಶ್ರೀನಾಥನನ್ನು ಮನೆಗೆಕಳಿಸಿದರು. ತಾವು ಅಲ್ಲಿಯೇ ವಾಸ್ತವ್ಯ ಮಾಡಿದರು.
ಇತ್ತ ಶ್ರೀನಾಥ ಮನೆಗೆ ಹೋದವನೇ ರೂಮಿನಲ್ಲಿ ಬಾಗಿಲು ಹಾಕಿಕೊಂಡು ದುಃಖಿಸುತ್ತಾ ಮಲಗಿಕೊಂಡನು. ಅವನ ತಾಯಿ ಬಾಗಿಲು ಬಡಿದು, ಕೂಗಿ ಕೂಗಿ ಕರೆದಳು. ಆದರೇ, ಆತನಿಗೆ ದುಃಖ ತಡೆಯಲಾರದೆ, ಅತ್ತು ಅತ್ತು ಹಾಗೆಯೆ ಮಲಗಿಕೊಂಡ. ಮಲಗಿದಲ್ಲಿಯೇ, ಸ್ನೇಹಿತನ ನೆನೆದು ಕನವರಿಸುತ್ತಿದ್ದವನು ಘಾಡ ನಿದ್ರೆಗೆ ಹೋದ. ಆದರೇ, ಅವನನ್ನು ಪರಿಸ್ಥಿತಿ ಕಾಡದೇ ಬಿಡಲಿಲ್ಲ. ಆತನಿಗೊಂದು ಕೆಟ್ಟ ಕನಸು ಆವರಿಸಿತು. ಆ ಕನಸಿನಲ್ಲಿ ;
ಆತ ಒಮ್ಮಿದೊಮ್ಮೆಲೇ ಶ್ರೀಕರನ ಮನೆಯಲ್ಲಿ ಇದ್ದ ಹಾಗೆ ಭಾಸವಾಗಿ ನೋಡುತ್ತಾನೆ, ಸ್ನೇಹಿತ ಸಾವು ಬದುಕಿನ ಮಧ್ಯೆ ತೊಳಲಾಡುತ್ತಿದ್ದಾನೆ. ತಾನು ಏನೂ ಮಾಡದ ಹಾಗೆ ಅಸಹಾಯಕನಾಗಿ ಬಿಟ್ಟಿದ್ದೇನೆ ಎಂದು ಅಸಹ್ಯವಾಯಿತು. ಕೂಡಲೇ ಹೊರಗೆ ಹೊರಟು ಬಿಡುತ್ತಾನೆ. ಹೋಗ್ತಾ ಹೋಗ್ತಾ ಒಂದು ದೊಡ್ಡ ಪರ್ವತ ಕಂಡಾಗ , ಅದನ್ನು ಏರಿ ಮೇಲೆ ಹೋಗುತ್ತಾನೆ. ಏರಿದ ಮೇಲೆ ಆತ ಆಯ ತಪ್ಪಿ ಬಿದ್ದು ತಲೆಗೆ ಪೆಟ್ಟಾಗಿ ಎಚ್ಚರ ತಪ್ಪಿ ಬೀಳುತ್ತಾನೆ. ಆಗ ಆತನನ್ನು ಯಾರೋ ಎತ್ತಿಕೊಂಡು ಹೋಗುವ ಹಾಗೆ ಭಾಸವಾಗುತ್ತದೆ. ಸುಮಾರು ಹೊತ್ತಾದ ಬಳಿಕ, ಆತ ಒಂದು ದೊಡ್ಡ ದ್ವಾರದ ಬಳಿ ಬಿದ್ದಿರುತ್ತಾನೆ. ಎಚ್ಚರವಾದಾಗ, ಅಲ್ಲಿ ಮಹಾದ್ವಾರ ಕಾಯುವ ವಿಕಾರ ವ್ಯಕ್ತಿಗಳಿರುತ್ತಾರೆ. ಅವರನ್ನು ನೋಡಿ ಗಾಭರಿ ಯಾಗುತ್ತಾನೆ. ಸ್ವಲ್ಪ ಹೊತ್ತಿನಲ್ಲಿಯೇ ಇಬ್ಬರು ಅಜಾನು ಬಾಹು ವ್ಯಕ್ತಿಗಳು ಒಬ್ಬನನ್ನು ಎಳೆದು ತರುವ ದೃಶ್ಯ ಕಂಡಿತು !
‘ಅರೇ … ಅವನು ಶ್ರೀಕರ. ಅವನನ್ನು ಇಲ್ಲಿಗೆ ಯಾಕೆ ಕರೆ ತರುತ್ತಿದ್ದಾರೆ. ಇದು ಯಾವ ಸ್ಥಳ’ ಎಂಬುದು ಆತನಿಗೆ ಅರ್ಥವಾಗಲಿಲ್ಲ. ಆಗ ಸ್ನೇಹಿತನ ಬಳಿಗೆ ಹೋದನು.
‘ಅಯ್ಯಾ ..ನನ್ನ ಸ್ನೇಹಿತನನ್ನು ಯಾಕೆ ಎಳೆದುಕೊಂಡು ಹೋಗುತ್ತೀರಾ ? ಅವನೇನು ತಪ್ಪು ಮಾಡಿದ್ದಾನೆ ?’ ಎಂದು ಅಜಾನು ಬಾಹು ವ್ಯಕ್ತಿಯನ್ನು ಪ್ರಶ್ನಿಸಿದ. ಆಗ ಆತ ಹೇಳಿದ;
‘ನೀನು ಯಾರು ? ನಾವು ಕರೆಯದೇ ನೀನು ಇಲ್ಲಿಗೆ ಹೇಗೆ ಬಂದೆ ? ಯಾರು ಕರೆ ತಂದರು ?’
‘ಅಯ್ಯಾ… ನನಗೆ ತಿಳಿದಿಲ್ಲ. ಯಾರೋ ನನ್ನನ್ನು ಹೊತ್ತು ತಂದು ಇಲ್ಲಿ ಬಿಟ್ಟಿದ್ದಾರೆ.’ ಎಂದ ಶ್ರೀನಾಥ.
‘ಇಲ್ಲಿಗೆ ಆಯುಷ್ಯ ಮುಗಿದವರು ಮಾತ್ರ ಬರುತ್ತಾರೆ..ನೀನು ಹೇಗೆ ಬಂದೆ ?’
‘ಅಂದ್ರೇ..ಇದು ಯಾವ ಸ್ಥಳ ?’
‘ಬರೀ ಸ್ಥಳವಲ್ಲ ಇದು ಯಮಲೋಕ ‘ ಎಂದ.
‘ಹಾಗಾದರೇ ,ನನ್ನ ಸ್ನೇಹಿತನನ್ನು ಯಮಲೋಕಕ್ಕೆ ಕರೆದುಕೊಂಡು ಬಂದೀರಾ ?’
‘ಹೌದು ಅವನ ಆಯುಷ್ಯ ಮುಗಿಯಿತು. ಇನ್ನು ಲೆಕ್ಖಾಚಾರ ನಮ್ಮವರು ನಿರ್ಧರಿಸುತ್ತಾರೆ ‘.
ಆಗ ಅವನು ತನ್ನ ಸ್ನೇಹಿತನನ್ನು ಕೂಲಂಕುಷವಾಗಿ ನೋಡುತ್ತಾನೆ. ಅವನನ್ನು ಹಗ್ಗದಿಂದ ಬಂಧಿಸಿದ್ದಾರೆ. ಆಗ ಶ್ರೀನಾಥ ಧೈರ್ಯ ಮಾಡಿ ಹಗ್ಗವನ್ನು ಬಿಚ್ಚಿ, ತಾನೂ ಅಗ್ಗದಲ್ಲಿ ಸೇರಿ ಸ್ನೇಹಿತನೊಟ್ಟಿಗೆ ಹಗ್ಗವನ್ನು ಬಿಗಿದು ಕೊಳ್ಳುತ್ತಾನೆ. ಅದನ್ನು ನೋಡಿ ಯಮದೂತರು ಕೋಪ ಗೊಳ್ತಾರೆ.
‘ಏಯ್ .. ಏಷ್ಟು ಧೈರ್ಯ ನಿನಗೆ. ನಮ್ಮನ್ನು ನೋಡಿ ಹೆದರಿಕೆ ಆಗುವುದಿಲ್ಲವೇ ?’
‘ಅಯ್ಯಾ, ನಾನೂ ಮರಣಿಸಲು ಸಿದ್ಧ. ನನ್ನ ಸ್ನೇಹಿತನ ಜೊತೆಗೆ ನನ್ನನ್ನೂ ಕರೆದೊಯ್ಯಿರಿ ‘ ಎಂದ.
‘ಹಾಗೆ ಮಾಡಲು ಬರುವುದಿಲ್ಲ. ಅದಕ್ಕೆ ನಮ್ಮ ಯಮರಾಜನ ಅಪ್ಪಣೆ ಬೇಕು’ ಎಂದ ಯಮದೂತ.
‘ಅಲ್ಲಿಗೆ ನನ್ನ ಕರೆದೊಯ್ಯಿರಿ, ನಾನು ಅವರನ್ನು ಕೇಳಿಕೊಳ್ತೇನೆ’.
‘ಅದು ಸಾಧ್ಯವಿಲ್ಲದ ಮಾತು. ನೀನು ಹೇಳಿದ ಹಾಗೆ ಕೇಳಲು ನಾವುಗಳಿಲ್ಲ’ ಎಂದ ಖಡಾ ಖಂಡಿತವಾಗಿ.
‘ನಾನು ನಿಮ್ಮನ್ನು ಬಿಡುವುದಿಲ್ಲ. ನನ್ನನ್ನು ನೀವು ಕರೆದೊಯ್ಯಲೇ ಬೇಕು ‘ ಎಂದು ಹಠ ಹಿಡಿದ ಶ್ರೀನಾಥ.
‘ನೀನು ನಮ್ಮ ಸಮಯ ಹಾಳು ಮಾಡುತ್ತೀಯ, ಇದನ್ನೇ ನಮ್ಮ ಯಮರಾಜನಿಗೆ ಹೇಳಿದರೆ, ನಿನ್ನನ್ನು ನೇರವಾಗಿ ನರಕಕ್ಕೆ ಕಳಿಸಿ ಬಿಡುತ್ತಾರೆ. ಸುಮ್ಮನೆ ನಮ್ಮನ್ನು ಕಾಡಬೇಡ. ನಿನಗೂ ಒಳ್ಳೆಯದಲ್ಲ ‘ ಎಂದ ಯಮದೂತ.
‘ಬಿಡಯ್ಯಾ..ಅದೇನು ಮಾಡ್ತೀರೋ ಮಾಡಿ, ನಾನು ನರಕಕ್ಕೆ ಹೋದರೂ ಪರವಾ ಇಲ್ಲ, ನನ್ನ ಸ್ನೇಹಿತನನ್ನು ಬಿಡಲಾರೆ’ ಎಂದು ಗಟ್ಟಿಯಾಗಿ ಸ್ನೇಹಿತನ ಬಾಹು ಬಳಸಿ ಸುತ್ತಿಕೊಂಡ.
‘ಇದು ಒಳ್ಳೆ ಪೀಕಲಾಟವಾಯ್ತಲ್ಲ..’ ಎಂದರು ಯಮದೂತರು.
ಆಗ ಅನಿವಾರ್ಯವಾಗಿ ಆತನನ್ನು ಕರೆದುಕೊಂಡು ಹೋಗಿ ಯಮಧರ್ಮರಾಜರ ದರ್ಬಾರಿನಲ್ಲಿ ನಿಲ್ಲಿಸಿದರು. ಆಗ ಯಮಧರ್ಮ;
‘ಎನ್ರೋ….. ಒಬ್ಬನನ್ನು ಕರೆದುಕೊಂಡು ಬಾ ಅಂದ್ರೇ ಇಬ್ಬರನ್ನು ತಂದಿದ್ದೀರಿ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು ?’
‘ಕ್ಷಮಿಸಿ ಪ್ರಭು..ಈತ ನಮ್ಮ ಲೋಕದಲ್ಲಿ ಆಗಲೇ ಬಂದಿದ್ದ. ದ್ವಾರ ಬಾಗಿಲ ಹತ್ತಿರ ನಮ್ಮನ್ನು ನೋಡಿ ನಮ್ಮ ಹಿಂದೆಯೇ ಬಂದ’. ನಮ್ಮನ್ನು ಕಾಡಿ ಈ ಅವಸ್ಥೆ ತಂದಿದ್ದಾನೆ.’ ಎಂದು ಶ್ರೀನಾಥನ ಕಡೆಗೆ ಬೆರಳು ಮಾಡಿ ತೋರಿಸಿದ.
‘ಮೂರ್ಖರಾ ..ನಮ್ಮ ಲೋಕಕ್ಕೆ ಅವಮಾನ ಮಾಡ್ತಾ ಇದ್ದೀರಾ’ ಎಂದು ಕೋಪಗೊಂಡ ಯಮಧರ್ಮ ಚಿತ್ರಗುಪ್ತನ ಕಡೆನೋಡಿ;
‘ಚಿತ್ರಗುಪ್ತರೇ..ಇವನ ಮತ್ತು ಇವನ ಸ್ನೇಹಿತನ ಮೇಲಿನ ಷಲೆಕ್ಖಾಚಾರ ನೋಡಿ’ ಎಂದರು.
‘ಸರಿ.. ಮಹಾರಾಜರೇ ‘ ಎಂದು ಆತ ತನ್ನಲ್ಲಿದ್ದ ಯಮ ಖಾತೆಯನ್ನು ತೆರೆದು ನೋಡಿ ಆಶ್ಚರ್ಯಚಕಿತನಾದ ! ಆಮೇಲೆ ತನ್ನ ಪುಸ್ತಕದಲ್ಲಿಯ ಬರಹಗಳನ್ನು ಓದಿ ಹೀಗೆ ಹೇಳಿದ.
‘ಮಹಾರಾಜರೇ, ನಮ್ಮ ದೂತರು ಎರಡು ತಪ್ಪುಗಳನ್ನು ಮಾಡಿದ್ದಾರೆ. ಮೊದಲನೆಯದು ; ಅವನು ಜೀವಂತ ಇದ್ದು, ಇನ್ನೂ ಒಂದು ಘಳಿಗೆ ಸಮಯ ಇರುವಾಗಲೇ ಆತನಿಗೆ ಉರುಳು ಹಾಕಿದ್ದಾರೆ. ಹಾಗಾಗಿ, ನಮ್ಮಲ್ಲಿಯ ವ್ಯವಸ್ಥೆಗೆ ಕಳಂಕ ತಂದಿದ್ದಾರೆ. ಎರಡನೆಯದಾಗಿ, ಯಾರೋ ಸ್ನೇಹಿತ ಎಂದು ಹೇಳಿಕೊಂಡು ಬಂದ ವ್ಯಕ್ತಿಯನ್ನು ತಡೆಯದೇ, ಆತನ ಮೃತ ಅವಧಿ ಅಪಾರ ಇದ್ದಾಗಲೂ ನಮ್ಮಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಹಾಗಾಗಿ, ನಮ್ಮ ಲೆಕ್ಖಚಾರವನ್ನೇ ಬುಡ ಮೇಲು ಮಾಡಿದ್ದಾರೆ’ ಎಂದ.
‘ಈಗ ಏನು ಮಾಡುವದು ?’
‘ಇಬ್ಬರೂ ಸ್ನೇಹಿತರನ್ನು ಬಿಡುಗಡೆ ಮಾಡಿ, ನಮ್ಮ ದೂತರಿಗೆ ನರಕಕ್ಕೆ ಕಳಿಸುವದೊಂದೇ ದಾರಿ’ ಎಂದ ಚಿತ್ರಗುಪ್ತ .
‘ಸರಿ ಹಾಗೆಯೇ ಮಾಡಿ. ದೂತರೇ, ಇವರಿಬ್ಬರನ್ನೂ ಭೂಲೋಕಕ್ಕೆ ಒಯ್ದು ಬಿಟ್ಟು ಬನ್ನಿ ಎಂದು ಯಮ ಧರ್ಮರಾಜ ಆಜ್ಞೆಮಾಡಿದ.’
ಆಗ ಅವರಿಬ್ಬರನ್ನು ಶರವೇಗದಂತೆ ಕೊಂಡೊಯ್ದು, ಭೂಲೋಕದಲ್ಲಿ ಬಿಟ್ಟು ಬಿಟ್ಟರು. ಆಗ ಶ್ರೀಕರ ತನ್ನ ಸ್ನೇಹಿತನನ್ನು ಗಟ್ಟಿಯಾಗಿ ತಬ್ಬಿಕೊಂಡು ದುಃಖ ತುಂಬಿಕೊಂಡ. ಶ್ರೀನಾಥನೂ ಅಳಲು ಪ್ರಾರಂಭಿಸಿದ.’
ಆಗ ಶ್ರೀನಾಥನಿಗೆ ಒಮ್ಮೆಲೇ ‘ಕನಸಿನಿಂದ’ ಎಚ್ಚರವಾಯಿತು. ಆತ ತನ್ನ ಹಾಸಿಗೆಯಲ್ಲಿಯೇ ಇದ್ದ. ‘ಕಂಡದ್ದು ಕನಸು’ ಏಂದು ಆತ ಅರಿತ. ಬಾಗಿಲು ತೆಗೆದು ಹೊರಬಂದು ಆಸ್ಪತ್ರೆ ಕಡೆಗೆ ಹೊರಟ. ಸ್ವಲ್ಪ ಹೊತ್ತಿನಲ್ಲಿ ಆಸ್ಪತ್ರೆ ತಲುಪಿದ. ಆಗ ರಾತ್ರಿ ಒಂದು ಗಂಟೆಯ ಸಮಯ.
ಆತನಿಗೆ ತಡೆಯಲಾಗಲಿಲ್ಲ, ಓಡಿ ಹೋಗಿ ಶ್ರೀಕರನ ಅಪ್ಪ ಮತ್ತು ಅಮ್ಮರನ್ನು ಭೇಟಿ ಮಾಡಿದ. ಅವರು ಹಸನ್ಮುಖಿಯಾಗಿದ್ದರು. ಅವರು ಈತನನ್ನು ನೋಡಿ;
‘ಅಪ್ಪ, ಶ್ರೀಕರನಿಗೆ ಜ್ಞಾನ ಬಂದಿದೆ. ಒಂದು ಲೋಟ ಹಾಲು ಕುಡಿದ. ಅವನು ಯಥಾ ಪ್ರಕಾರ ಮೊದಲಿನಂತೆಯೇ ಆಗಿದ್ದಾನೆ. ಎಲ್ಲ ಭಗವಂತನ ಕೃಪೆ’ ಎಂದಳು ಅಮ್ಮ.
ಶ್ರೀನಾಥನಿಗೆ ತಡೆಯಲಾಗಲಿಲ್ಲ, ದಾದಿಯರನ್ನು ಕೇಳಿಕೊಂಡು ಶ್ರೀಕರನನ್ನು ಭೇಟಿಮಾಡಿ ಆತನನ್ನು ಆಲಂಗಿಸಿಕೊಂಡ. ಬಹುಷಃ ‘ಯಮರಾಜನಕೃಪೆ’ ಯೇ ಇದಕ್ಕೆ ಕಾರಣ ಎಂದು ಹಿಗ್ಗಿದ. ತನ್ನ ಮೇಲೆ ಅಪಾರ ಪ್ರೀತಿ ತೋರಿಸಿದ ಶ್ರೀನಾಥನನ್ನು ಶ್ರೀಕರ ಆಲಂಗಿಸಿ ಕೊಂಡ.
Fantasy and reality are mixed nicely
Thanq Sir., for your supportive comments.
Very nice story and it will touching our hearts.
You are kind enough to appreciate my work. Thanq.
A typical story with unshakable friendship. Style of writing is very good. Abhinandanegalu sir
ಧನ್ಯವಾದಗಳು ಧಲಬಂಜನ್ ಸರ್.