ಕಾವ್ಯಸಂಗಾತಿ
ಲೀಲಾ ವಿನೋದ
ಹಂಸಪ್ರಿಯ
ಲೀಲಾ ವಿನೋದ ಕೂಡಿದೆ ಕಡಲೊಳು
ಭಯವಿನ್ಯಾಕೆ ನದಿಯೇ? ಜಲಸಿರಿಯೆ! …//ಪ //
ಗಿರಿಶೃಂಗ ಗರ್ಭಸೀಳಿ
ಧುಮಿಕಿದೆ
ನಾಟ್ಯವಾಡುತ ನಯನ ಮನೋಹರಿ……
ಕಣಿವೆಗಳಲ್ಲಿ
ಕುಣಿ – ಕುಣಿದು,
ಕೊಳ್ಳಗಳ ಸೃಜಸಿದೆ.
ಜನ – ಜಾನುವಾರು –
ಜಲಚರಗಳ
ಜೀವ ನಿಧಿಯೇ……..
ಸಾಗಿ ಬಂದ ಹಾದಿ
ಸುಗಮವೋ
ದುರ್ಗಮವೋ
ರುದ್ರ ರಮಣೀಯವೋ
ಹಿಂತಿರುಗಿ ಹೋಗಲಾರೆ…..
ಫಲ ತುಂಬಿದ ತರು
ಪರ್ಣ ಕಳಚಿ ಬಾಗಿದಂತೆ
ಅಹಂತೊರೆದು ಒಂದಾಗು ಕಡಲೊಳಗೆ..
ಮಾಗಿದ ಹಣ್ಣು
ಮರದ ಹಂಗು ತೊರೆದಂತೆ
ತೊರೆ, ನೀ ಸಾಗರದಲಿ ಲೀನವಾಗು.
ಸಾವಲ್ಲ ; ಶರಧಿಯೊಳಗೊಂದಾಗುವುದು
ನಿಜಸ್ಥಾನ ಮಿಲನವು,
ಲೀಲಾ ವಿನೋದವು.