ಕಾವ್ಯ ಸಂಗಾತಿ
ಒಂಟಿ ಹಕ್ಕಿಯ ಸ್ವಗತ
ಶಂಕರಾನಂದ ಹೆಬ್ಬಾಳ


ಮುರಿದ ರೆಕ್ಕೆಯ ಹಕ್ಕಿಯ ಅಳಲಿದು
ಹರಿದ ಗಾಳಿಯ ಪಟದ ಚಿತ್ರವಿದು
ನುಡಿಯಲ್ಲಿ ಸಾಂತ್ವನವಿಲ್ಲ
ಕನಸುಗಳು ಕೊನರಲಿಲ್ಲ
ಮುಳುಗುವ ವಹಿತ್ರವಾದ ಬದುಕಿದು
ಸಂತೆಯೂರಿನಲ್ಲಿನ ಚಿಂತೆಯಿದು
ಕಂತೆ ಪುರಾಣಗಳ ಕಥೆಯಿದು
ಕೊರೆವ ಆರ್ತನಾದ
ಅಂತರಾಳದ ಬೋಧ
ಉರಿಯುವ ಜ್ವಾಲಾಮುಖಿ ಕುಂಡವಿದು
ಬಣ್ಣ ಬದಲಾಯಿಸುವ ಸಮಾಜವಿದು
ಕಣ್ಣಿದ್ದು ಕುರುಡರಂತಿರುವ ಕಾಯವಿದು
ಕಿನಿಸುಗಳ ಮೂಟೆಯಲಿ
ಕ್ರೋಧಗಳ ದಾರಿಯಲಿ
ಬೆರೆಯುವ ಪಾಪಿಷ್ಠರ ದುರ್ಮಾರ್ಗವಿದು
ಅವಿವೇಕಿಗಳ ಗೊಂದಲದ ಗೂಡಿದು
ನೊಂದಮನಸುಗಳ ಮುಗಿಯದ ಹಾಡಿದು
ಹೇಳತೀರದ ಆಲಾಪ
ಹುಚ್ಚರಂತೆ ಪ್ರಲಾಪ
ಯಕ್ಷಪ್ರಶ್ನೆಯಾಗಿ ಉಳಿದ ಕರಾಳ ನೆನಪಿದು