ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ


ಆತಂಕದ ಬದುಕು ನಿಂತು ನೀ ಪ್ರಕೃತಿಯ ನೋಡಿರುವೆಯಾ
ಆ ದೊಡ್ಡ ಮರದ ಕೊಂಬೆ ನೆರಳ ಒಮ್ಮೆ ನಿಂತಿರುವೆಯ
ನಿಲ್ಲದೆ ಬಿಡುವಿರದ ಏಕ ಲಕ್ಷ್ಯ ಗಳಿಕೆಯ ಜೀವನ ನಿನ್ನದಾಯ್ತು
ಮೇಕೆ ಕುರಿ ನೆಮ್ಮದಿಯಲಿ ಮೇಯುವುದನು ಕಂಡಿರುವೆಯಾ
ಸ್ವಚ್ಛಂದ ಹಾರುತಿಹ ಅಲ್ಪಾಯು ಚಿಟ್ಟೆಯ ಮೋಜಿನಾಟ ನೋಡು
ಇಣಚಿ ಹುಲ್ಲಲಿ ಕಾಳುಹುಡುಕಿ ಕುಣಿವುದ ಗಮನಿಸಿದೆಯಾ .
ಪ್ರಖರ ಬೆಳಗುವ ಸೂರ್ಯ ಸುಂಕವೇನೂ ವಿಧಿಸನು ನೋಡು ಪುಕ್ಕಟ್ಟೆ
ನಮಸ್ಕಾರ ಪ್ರಿಯ ವಂದನೆಯ ಬೇಡುತಿಹ ಆಲಿಸಿದೆಯಾ
ರಾತ್ರಿ ನಕ್ಷತ್ರಗಳ ಹೊಳೆ ನಭದಿ ಹರಿವುದು ನೋಡ ಮರೆಯದಿರು
ಗಮನ ಸೆಳೆಯೆ ಅರುಂಧತಿ ಮಿನುಗಿಹಳು ವೀಕ್ಷಿಸಿದೆಯಾ
ಲಲನೆ ಸೌಂದರ್ಯ ಝಳಕು ನಯನಾನಂದಕರ ಗೊತ್ತೇ ನಿನಗೆ
ಶೋಡಷಿಯ ಪಾದ ಹೇಗೆ ನರ್ತಿಪವೆಂದು ಊಹಿಸಿದೆಯಾ
ಮಂದಸ್ಮಿತೆ ಸಿಂಗರವಾದ ಮುಖವನು ನೋಡಬಾರದೇಕೆ
ಶೃಂಗಾರ ಕಣ್ಣಿಗಿಳಿದು ರೆಪ್ಪೆ ಕುಣಿವುದೆಂದುತಿಳಿದಿದೆಯಾ
ಸಮಯವಿಲ್ಲಾ! ಕೃಷ್ಣಾ ನಿನಗೆ ಆದಕೆಲ್ಲಾ ಸಮಯವಿಲ್ಲ
ಬರೀ ಗಳಿಕೆಯ ಬದುಕು ಯಾರಿಗಾಗಿ ಅರಿತಿರುವೆಯಾ.
ಬಾಗೇಪಲ್ಲಿ
ಬದುಕಿನ ಸತ್ಯ ದರ್ಶನ.