ಕಾವ್ಯ ಸಂಗಾತಿ
ಸಂಕಲ್ಪ
ಶಾರು
ಅಪ್ಪಿ ಒಪ್ಪಿದ ಸಂಕಲ್ಪಕ್ಕೆ
ಮತ್ತೆ ಬರೆಯಬೇಕಿದೆ
ಕವನ!
ಹರವಿದ ನೂರು
ಭಾವದೊಳಗೆ
ಸಿಲುಕಿ ಚಡಪಡಿಸುವ
ಒದೊಂದೊಂದೆ ಸಾಲು
ಭಾವದ ಹಾಲು!
ಬರಿದಾಗುವ ಮುನ್ನವೆ
ಬರಿದಾಗಾಬೇಕು ಬರೆದು
ಆದರೆ…?
ಅವನೆಸರಿನ ಹಸುರು
ಕುಸುರ ಕಲ್ಪನೆಗೆ
ಜಲ್ಪನೆ ಸಾಲು ಸಾಲು
ತೂಕಡಿಸಿದಂತೆ ಮಂಪರು
ಎಳೆದೆಳೆದ ಸಾಲಲಿ
ಮನಸಿನದೇ ತೂಕದ ಮಾತು,
ಬರೆಯಲೇ ಬೆಕೆಂಬ ಹಟಕೆ
ಬರೆಯುವುದಾದರು ಏನು?
ಬರೆ ಎಳೆದ ನೋವಿಗೋ
ಬರಸೆಳೆದಪ್ಪಿ ಕಣ್ಣಿಗೊತ್ತಿದ
ಮುತ್ತಿನ ಕ್ಷಣಕೊ!
ಕಾಯುತ್ತ ಕುಳಿತಿರುವೆ ,
ಸುಮ್ಮನೇ ಕಾಯುತ್ತ ಕಾಯುತ್ತ ,
ಕುಳಿತಿರುವೆ ಪದಗಳ ಪ್ರಸವಕ್ಕೆ
ಗೀಚುತಿರುವೆ , ನೋವುಗಳಲೂ,
ಭಾರವಾದ ಕಣ್ಣೆವೆಗಳ
ಬಿಸಿಹನಿಗಳಲಿ,
ಮೀಟಿದ ವೀಣೆಯ ದನಿಗೆ
ನಾಟುವ ಸ್ವರದಾಲಾಪನೆಯಲಿ,
ಸಿಟೌಟಲಿ ಕಟ್ಟಿದ
ಗುಬ್ಬಿ ಗೂಡಿನಲಿ
ಕಿಚಿಪಿಚಿ ಮರಿಗಳ ದನಿಗೆ
ಗುಬ್ಬಿಗಳ ಪ್ರಣಯದ
ಗೂಢಗಳ ನೆನಪ ಪದ
ಹಾಸಲೆ!
ಸಂಗದಲಿ ನಿಸ್ಸಂಶಯವಾಗಿ
ನನ್ನೊಳಗಿರುವನವನ
ಬರಿ ಸವಿನೆನಪ ಹೊದಿಕೆ
ಹೊದ್ದು ಅವನೊಲವ
ಕನಸು ಮುನಿಸುಗಳ
ಮಾತು ಮೌನಗಳ
ದನಿಪದಗಳ ರಂಗೊಲಿ
ಬಿಡಿಸಲೇ!
ನಿತ್ಯ ಬೆಳಗಿನ ಕನಲಿಕೆಲಿ
ನಿಶಬ್ಧ ಮೌನ ಜಾತ್ರೆ
ನನ್ನದೆಯ ಕವಿತೆಗೆ
ಹವೆಯಾಗಿ ನಿತ್ಯ ಹೂವಾಗಿ
ಅವನುಡಿಗಿಟ್ಟ ಪದದನಿ
ಬರೆವ ಸಂಕಲ್ಪಕ್ಕೆ
ನನ್ನರ್ಪಿಸಿಕೊಂಡ
ಒಂದು ಗುಟುಕು ನೀತಿ,
ಪ್ರೀತಿ ತುತ್ತುಣಿಸಿ
ಬರೆವ ದಾಹ ತಣಿಸಲೇ?
ಸಂಕಲ್ಪಕೆ ಶರಣು ಭಾವ ಹಾಡಲೆ!…
Nice