ಕಾವ್ಯ ಸಂಗಾತಿ
ಸೀಗೆ ಹುಣ್ಣಿಮೆ
ಶಾಲಿನಿ ರುದ್ರಮುನಿ
ತಂಗಾಳಿ ಬೀಸುತಿದೆ
ಬಸುರಿ ಭುತಾಯಿ
ತೆನೆಹೊತ್ತು ನಗುತಾಳ
ಹೊಸಕಳೆ ಹೊಸಬೆಡಗು
ಮುಡಿತುಂಬ ಹೂ ಮುಡಿದು
ಉಡಿತುಂಬ ಹಸನದ
ಹಸಿರ ತೆನೆ’ ಮನ ತುಂಬಿ
ಒಕ್ಕಲ ಮಕ್ಕಳ ಹರಸ್ಯಾಳ,
ಹಸನಾದ ಹೊಲಕ
ಭ್ರೂಣಕಟ್ಟಿ, ಕನಸು
ಹುಟ್ಟಿ ,ತೆನೆ ತೂಗೂತ
ಧರಣಿಯ ಮೈಮನ
ಹರುಷದ ಹಮ್ಮಿನಲಿ
ಹಸಿರುಟ್ಟು ಅವನೊಲವ
ನೆನೆಸ್ಯಾಳ ಮುದದಲಿ
ದುಡಿದು ದಣಿದು ಬಂದ
ಒಕ್ಕಲ ಮಕ್ಕಳ ಹರಸ್ಯಾಳ
ತೆನೆಕಾಳಿನೆದೆ ಹಾಲಲಿ
ಕರುಣೆ ತುಂಬಿ ಕಣ್ಣಾಲಿಲಿ
ಮಂಜಿನ ಸೆರಗು
ಮೈತುಂಬ ಹೊದ್ದು
ಸಿಂಧೂರ ರವಿಕಿರಣ
ಲಲಾಟದೊಳಿಟ್ಟು
ಎದೆಯ ಕದವ
ತೆರೆದಿಟ್ಟು ಕಾಯ್ದಾಳ
ಸೀಗೆ ಹುಣ್ಣಿಮೆ ಮುಂದೆ
ಬೈಗು ಜಾವದಲಿ
ಸೋಗಿನಲೆ ಬರುವ
ಚಳಿಯಾಕೆಯ ಕಾಣುತಲಿ
ಒಕ್ಕಲ ಮಕ್ಕಳ ಹರಸ್ಯಾಳ
ತರ ತರದ ತಿನಿಸು
ಹೋಳಿಗೆ ಕಡುಬು
ಬ್ಯಾಳಿ,ತಪ್ಪಲ ಪಲ್ಯ
ಜೋಳ ಸಜ್ಹಿ ರೊಟ್ಟೆ
ಬುಟ್ಟಿ ತುಂಬಾ ತುಂಬುತ
ಚವಳಿ ಬದನೆ ಗೆಣಸು
ಕುಂಬಳಕಾಯಿ ಪದಾರ್ಥ,
ಗುರೆಳ್ಳು ಶೇಂಗಾ ಚಟ್ನಿ,
ಮಡಿಕೆ ಕಡ್ಲಿ ಕಾಳು
ಪಾಯಸಾನ್ನಗಳೆಲ್ಲ
ಹುಲ್ಲುಲ್ಲಿಗು ಉಣಿಸುತ
ಚರಗಾವ ಚೆಲ್ಲುತಾ
ಬಸಿರ ಬಯಕೆಯ ತಣಿಸುತ,
ಋಣಿಯಾಗಿ ಶರಣಾಗಿ
ನಮಿಸುತ್ತ ಸಾಗುವ
ಒಕ್ಕಲ ಮಕ್ಕಳ ಹರಸ್ಯಾಳ,
ಸೀಗೆ ಹುಣ್ಣಿಮೆಯ ವರ್ಣನೆ ಬಾಯಲ್ಲಿ ನೀರೂರಿಸುತ್ತೆ ಮೇಡಂ
ಅಭಿನಂದನೆಗಳು!!