ಅಂಕಣ ಸಂಗಾತಿ

ಸಕಾಲ

ನೀನು ಸಾವಿಗೆ ಸಿದ್ದನಾಗಿದ್ದಿಯಾ?

ಪ್ರತಿ ದಿನ ಶಾಲೆಗೆಬಹೊರಟಾಗ “ನೀನೇಕೆ ಶಾಲೆಗೆ ಹೋಗಬೇಕು? ಎಂಬ ಪ್ರಶ್ನೆಯನ್ನು ನನ್ನ ಮನಸ್ಸು ಆಗಾಗ ಕೇಳುತ್ತಿತ್ತು.ಮನೆಯಲ್ಲಿ ತಿಂದುಂಡು ಆರಾಮಾಗಿ ಇರೋದು ಎಷ್ಟು ಮಜಾ? ಅನ್ನಿಸಿದ್ದು ಇದೆ.ಬೆಳಿಗ್ಗೆ ಬೇಗ ಏಳದಿದ್ದರೆ ಅಮ್ಮನ ಗುಮ್ಮ ನನ್ನ ನಿದ್ದೆ ಕೆಡಿಸಿದಾಗಂತೂ ಅಯ್ಯೋ ಇವತ್ತು ಸಂಡೇ ಆಗಬಾರದಾ? ಶಾಲೆಗೆ ಹೋಗಬೇಕಾ ಅಂತ ಶಪಿಸಿದ್ದು ಇದೆ‌.ಪ್ರತಿ ದಿನ ಮನಸ್ಸಿನದ್ದು ಇದೇ ಪ್ರತಿಭಟನೆ.

ನೀನು ಶಾಲೆಗೆ ಹೋಗಬೇಡ, ಥಿಯೇಟರ್‌ನಲ್ಲಿ ಹೊಸ ಪಿಚ್ಚರ್ ಬಂದಿದೆ ಅದು ರಾಜಕುಮಾರದು ನಮ್ಮ ಅವ್ವನಿಗೆ ಅದೆಂಥ ಖುಷಿಯೆಂದರೆ ಮೊದಲ ದಿನ ಮೊದಲು ಆ ಸಿನೆಮಾ ಥಿಯೇಟರ್ನಲ್ಲಿ ನೋಡಬೇಕು.ಸಂಜೆ ಶಾಲೆಯಿಂದ ಬಂದ ಕೂಡಲೆ ಟಿಕೇಟ್ ತಗಿಯಲು ನಾನು ಪುರ್ ಪುರ್ ಅವಾಜ್ ಮಾಡಕೋತ ಥಿಯೇಟರ್ ತನಕ ಓಡೋ ಪೆಟ್ರೋಲ್ ಇಲ್ಲದ ಗಾಡಿನಂದು.ಅದಕ ಹತ್ತು ಪೈಸೆ ಫ್ರೀ ಇನ್ನೇನು ಬೇಕು.ದೇವರೆ ದಿನಾ ಹೊಸ ಸಿನೆಮಾ ಬರುವಂಗ ಮಾಡು ನಾ ಶಾಲಿಗೆ ಹೋಗಾಕ ಒಲ್ಲೆಯೆಂದು ಒಳಮನಸ್ಸು ಕೂಗುತ್ತಿತ್ತು.ಹೋಮವರ್ಕ ಆಗಿಲ್ಲಂದ್ರ ಚಡಿ ಚಮ್ ಚಮ್ ಎನ್ನುವ ಅಕ್ಕೊರ ನೆನೆದು ಯಪ್ಪಾ ಇವತ್ತು ಬ್ಯಾಡ ಅನ್ನಿಸಿತ್ತು.

ಶಾಲೆಗೆ ಬಂಕ್‌ ಮಾಡಿ ಸ್ನೇಹಿತರ ಜತೆ ಸುತ್ತಾಡಲು ಹೋಗು ಎಂದು ಮನಸ್ಸು ಹೇಳುವುದಿದೆ.ಆದ್ರ ನಾನೊಬ್ಬಳು ಬಂಕ್ ಮಾಡಿದ್ರ ಏನ್ ಪ್ರಯೋಜನ? ಸ್ನೇಹಿತರು ಬರಬೇಕಲ್ಲ? ಪಾಪ ನನ್ನಂತೆ ಅವರು ಬೆತ್ತಕ್ಕ ಹೆದರಿ ಅರ್ಧಮರ್ಧ ಮನಸ್ಸು ಮಾಡುವಾಗ, ನಾನು ಮನಸ್ಸಿನ ಎಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ, ಮನಸ್ಸನ್ನು ಕೇಂದ್ರೀಕರಿಸಿ ಶಾಲೆ ಮೆಟ್ಟಿಲೇರುತ್ತಿದ್ದಾಗ ಅದೊಂದು ಶಕ್ತಿ ನನ್ನ ಮನಸ್ಸಿಗೆ ಧೈರ್ಯ ತುಂಬುತ್ತ ನಿನ್ನ ಗುರಿಯತ್ತ ಸಾಗು ಎಂದು ಒಳಧ್ವನಿ ಹೇಳುವಾಗ ಇದು ನನ್ನ ಮನಸ್ಸಾ? ಸೊಂಬೆರಿಯಂತೆ ಹೊಚ್ಚಹಾಸಕೊಂಡು ಮಲಗು ಎನ್ನುತ್ತಿದ್ದುದು,ಈಗ ಹಿಂಗ ಹೇಳತಿದೆಯಲ್ಲಾ? ವಿಚಿತ್ರ ಆದ್ರೆ ಅದು ಸತ್ಯವೇ ಯಾಕೆಂದರೆ ನನಗೆ ನನ್ನ ಜೀವನದ ಗುರಿ ಮುಟ್ಟುವುದು ಅನಿವಾರ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದಂತಿತ್ತು.

ಹಾಗೆಂದು ನಾನು ಮುಖ್ಯಮಂತ್ರಿ ಅಥವಾ ಬಿಲಿಯನೇರ್‌ ಆಗುವ ಕನಸು ಕಾಣುತ್ತಿದ್ದೀನಿ ಅಂತ ಭಾವಿಸಬೇಡಿ. ನನ್ನ ಪ್ರಕಾರ ಇದ್ಯಾವುದೂ ಜೀವನದ ಗುರಿ ಎನ್ನಲು ಅರ್ಹವಾದುದಲ್ಲ. ಒಮ್ಮೆ ಒಬ್ಬ ಉತ್ಸಾಹಿ ಯುವಕ ನನ್ನ ಜೀವನದ ಗುರಿ ರಾಜನಾಗುವುದು ಎಂದಿದ್ದ.ಅದರಂತೆ ಆತ  ತನ್ನಿಚ್ಛೆಯಂತೆ ರಾಜನಾದ ಅವನ ಸಂತೋಷಕ್ಕೆ ಕೊನೆಯಿಲ್ಲದಂತಾಗಿ ತಾನು ಕಂಡ ಕನಸ ಪೂರ್ಣ ಮಾಡಿದೆ ಮಹಾಸ್ವಾಮಿ ಎಂದು ಭಗವಾನ್ ಬುದ್ದನ ಚರಣಗಳಿಗೆರಗಿ ತನ್ನ ಖುಷಿಯ ಕಣ್ಣೀರಿನಿಂದ ಪಾದ ತೊಳೆದು ಕರಮುಗಿದಾ ಬಳಿಕ  ಆ ಯುವಕನ್ನು ಮಂದಹಾಸದಿ ನಿರ್ಲಿಪ್ತಭಾವದಿ ನೋಡುತ್ತಲಿ ಭಗವಾನ್ ಬುದ್ದ, ಕೇಳಿದ ಮೊದಲ ಪ್ರಶ್ನೆ ‘ನೀನು ಸಾವಿಗೆ ಸಿದ್ಧನಾಗಿದ್ದೀಯಾ’? ಎಂದು ಈ ಪ್ರಶ್ನೆಯ ಒಳಾರ್ಥ ಅಷ್ಟು ಸುಲಭವಾಗಿ ಹೌದು ಎನ್ನಲಾದಿತೆ? ಕಷ್ಟ ಪಟ್ಟು ರಾಜನಾಗುವುದು,ತಕ್ಷಣ ಸಾವಿಗೆ ಸಿದ್ದನಾಗುವುದು ಉಹಿಸಲು ಅಸಾಧ್ಯ! ಬುದ್ಧನ ಪ್ರಕಾರ ತಮ್ಮ ಬಯಕೆ ಈಡೇರಿಸಿದ ಬಳಿಕ ಜೀವನ ಸಾರ್ಥಕವಾಗುತ್ತದೆ ಎಂಬುದಾದರೆ, ತನ್ನ ಗುರಿ ತಲುಪಿದ ಬಳಿಕ ನಾನು ಸಾವಿಗೆ ಅಂಜುವುದಿಲ್ಲ ಎಂಬ ಭಾವನೆ ಬಂದಾಗ ಮಾತ್ರ ನಾವು ಗುರಿಯನ್ನು ಕ್ರಮಿಸಿದ್ದೇವೆ ಎಂದರ್ಥವಲ್ಲವೇ.

ಅಬ್ಬಾ! ಹಾಗಂತ ನಾನು ನನ್ನ ಜೀವನದಲ್ಲಿ ಇಷ್ಟೊಂದು ತತ್ವ ಶಾಸ್ತ್ರದ ಸಿದ್ಧಾಂತಗಳನ್ನು ಅಳವಡಿಸಿದ್ದೇನೆ ಅಂತಾಗಲಿ, ನನ್ನ ಗುರಿಯನ್ನು ಇಲ್ಲಿ ಪ್ರಸ್ತುತ ಪಡಿಸಲು ಈ ಉದಾಹರಣೆಯನ್ನು ಬಳಸಿದ್ದೇನೆ ಅಷ್ಟೇ. ಒಂದೇ ಮಾತಿನಲ್ಲಿ ಹೇಳುವುದಾದರೇ ನನ್ನ ಗುರಿ ನಾನು ಬೆಳಗಬೇಕು. ನನ್ನ ಜತೆ ಇತರರೂ ಬೆಳಗಬೇಕು. ನನ್ನ ಗುರಿ ಎಂದಾಗ ನೆನಪಾಗುವುದು ಅಬ್ದುಲ್‌ ಕಲಾಂ ಹೇಳಿದ ಮಾತು “ನೀನು ಸೂರ್ಯನಂತೆ ಬೆಳಗಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು.’ ಅವರ ಪ್ರಕಾರ ಕಷ್ಟಪಟ್ಟರೆ ಮಾತ್ರವೇ ಇಷ್ಟಾರ್ಥ ಈಡೇರುವುದು. ಇದೇ ಕಾರಣದಿಂದಾಗಿ ನಾನು ನನ್ನ ಗುರಿಯನ್ನು ಹೊಂದಲು ನನ್ನ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಶಾಲೆ, ಕಾಲೇಜು ಮೆಟ್ಟಿಲೇರಿ ನನ್ನ ಗುರಿಯನ್ನು ತಲುಪಬೇಕೆಂಬ ಛಲ ಹೊತ್ತ ನನ್ನ ಕಣ್ಣುಗಳು ಕನಸುಗಳಿಂದ ತುಂಬಿಕೊಂಡಿದ್ದು ಸತ್ಯಕ್ಕೆ ಪ್ರತಿ ಸೂರ್ಯನಂತೆ.ಹೊಂಗನಸಿನ ನಿದ್ರೆಯ ಮಂಪರಿನಲ್ಲಿ ಆವರಿಸುವ ಕನಸುಗಳನ್ನು ಮೀರಿಸುವಂತೆ ನನ್ನ ನಿಜ ಜೀವನದ ಕನಸುಗಳು ನನ್ನನ್ನು ಸದಾ ಎಚ್ಚರಿಸುತ್ತಿವೆ.

ಎಷ್ಟೋ ಸಮಯ ಕಲಿಯೋದ್ಯಾಕೆ? ಸುಮ್ಮನೆ ಇಷ್ಟ ಪಟ್ಟವನೊಡನೆ ಓಡಿಹೋದರಾಯಿತೆಂಬ ಗೆಳತಿಯರ ಮಾತು ಕಿವಿಗೆ ಬಿದ್ದಾಗ, ಮನಸ್ಸು ಕಠೋರತೆಯ ಮೆಟ್ಟಿಲೆರಿದ್ದು ಇದೆ.ರಾಜಕುಮಾರನಂತ,ಆಗರ್ಭ ಶ್ರೀಮಂತ,ಬೈಕು,ಕಾರು,ಸ್ವಂತಮನೆ ಹೀಗೆ ಆತನಿಗೊಂದು ಉದ್ಯೋಗ ಇದ್ದರೆ ಸಾಕೆನ್ನುವ ಹುಡಿಗಿರ ಮನಸ್ಥಿತಿಯನ್ನು ಕಂಡು ಅಯ್ಯೋ ಅನ್ನಿಸದೆ ಇರದು.ಕಲಿಯುವ ಕಲಿತು ಸಾಧಿಸುವ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳುವುದ ಮರೆತು,ಮಾನ ಪ್ರಾಣ ಎಲ್ಲವನ್ನು ಒಟ್ಟಿಗೆ ಕಳೆದುಕೊಳ್ಳುವ ಸ್ಥಿತಿ ಬೇಕಾ? ಹಾಗಂತ ಕನಸು ಕಾಣುವುದು ತಪ್ಪಲ್ಲ.ಅದಕು ಇತಿಮಿತಿ ಇರಬೇಕು.ನನಗೂ ಕನಸಿತ್ತು ಆ ಕನಸು ನೆರವೇರಬೇಕೆಂದರೆ ಜ್ಞಾನವನ್ನು ಸಂಪಾದಿಸುವುದು ಬಹುಮುಖ್ಯ ಎಂಬ ಸತ್ಯ ಮನವರಿಕೆಯಾಗಿತ್ತು.

ಪ್ರತಿಯೊಬ್ಬ ತಂದೆ- ತಾಯಿಗೆ ಪಕ್ಕದ ಮನೆಯ ಹುಡುಗ/ಗಿಗೆ ಕೆಲಸ ಸಿಕ್ಕಿದ ಸಂಭ್ರಮವನ್ನು ಕಂಡು ನನ್ನ ಮಗ/ಳಿಗೂ ಯಾವುದಾದರೂ ಒಳ್ಳೆಯ ಉದ್ಯೋಗ ಸಿಗಬೇಕು,ಕೈ ತುಂಬಾ ಸಂಬಳ ಇರಬೇಕು ಎಂದು ಬಯಸುತ್ತಾರೆ. ಅವರ ಕನಸುಗಳನ್ನು ನಾನು ಯಾವತ್ತಿಗೂ ನುಚ್ಚು ನೂರು ಮಾಡಲಾರೆ. ನಾನೂ ಅದೇ ರೀತಿ ಕನಸು ಕಾಣುತ್ತಿದ್ದೇನೆ. ತಂದೆ ತಾಯಿಯ ಆಸೆಗಳನ್ನು ಈಡೇರಿಸುವುದೂ ನನ್ನ ಗುರಿಯ ಭಾಗ.ಹೌದು ಹೆತ್ತವರ ಕನಸು ಅವರ ಮಕ್ಕಳು ಯಶಸ್ಸಿನ ಹಾದಿ ತುಳಿದಾಗಲೇ ಅವರ ಬದುಕು ಸಾರ್ಥಕವಾಗುವುದು.ಮಕ್ಕಳಾದ ನಮಗೂ ಅದರ ಬದ್ದತೆ ಇರಬೇಕು.”ಮನೆಗದ್ದು ಮಾರುಗೆದಿ” ಎಂಬ ಗಾದೆ ಸುಳ್ಳಾಗದು.ಹೆತ್ತವರ ಕನಸು ಇಡೇರಿದರೆ ನಮ್ಮ ಕನಸು ಸರಿದಾರಿಯಲ್ಲಿ ಸಾಗಿದೆಯೆಂದರ್ಥ.

ಕೇವಲ ನನ್ನ ಕುಟುಂಬಕ್ಕೇ ಉಪಕರಿಸಿದರೆ ಸಾಲದು. ನನ್ನಿಂದ ಈ ಸಮಾಜಕ್ಕೂ ಏನಾದರೂ ಉಪಕಾರವಾಗಬೇಕು. ನನ್ನ ಕುಟುಂಬ ಹಾಗೂ ಸಮಾಜ ಸೇವೆ ಮಾಡಲು,ಸಶಕ್ತ ಬುದ್ದಿವಂತ ಸತ್ ಪ್ರಜೆಯನ್ನು ನಿರ್ಮಾಣ ಮಾಡಲು ನಾನು ಉತ್ತಮ ಶಿಕ್ಷಕಿಯಾಗಬೇಕು. ಕೇವಲ ಶಿಕ್ಷಣ ನೀಡುವುದಷ್ಟೆ ಅಲ್ಲ ಅದರೊಂದಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ‌ಕಾರ್ಯ ಮಾಡುತ್ತ,ಸಮಾಜದ ನ್ಯೂನತೆಗಳನ್ನು ತಿದ್ದುವ ಕೈಂಕರ್ಯಕ್ಕೆ ಮಾಡುತ್ತ‌ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಗೆ ನನ್ನದೆಂದು ತಿಳಿದಿರುವೆ.ಇಂತ ಕನಸು ಕಾಣುವುದು ಸೂಕ್ತವೆನಿಸಿದೆ.

ಇವೆಲ್ಲವೂ ಕೈಗೆಟಕದ ಆಕಾಶದ ನಕ್ಷತ್ರವಲ್ಲ,ಕಠಿಣ ಪರಿಶ್ರಮ, ಉತ್ತಮ ಮಾರ್ಗದರ್ಶನ, ಏನೇ ಆದರೂ ಬದಲಾಯಿಸದ ಗುರಿ ಇದ್ದರೆ ಯಾವುದನ್ನಾದರೂ ಸಾಧಿಸಬಹುದು. ನಾನು ಸೂರ್ಯನಂತೆ ಹೊಳೆಯಬೇಕಾದರೇ ಸೂರ್ಯನಂತೆ ಉರಿಯಲೇಬೇಕು. ಈ ಗುರಿಯನ್ನು ಇಟ್ಟುಕೊಂಡು ಸಾಕಾರದತ್ತ ಹೊರಟಿದ್ದೇನೆ.ಇತಿಹಾಸದ ,ಸಿಹಿಗನಸಾಗಿ ಬೆಳೆದು ನಿಂತಿದೆ.ಶಂಕರನ ಎದೆಯಂಗಳದ ಮಲ್ಲಿಗೆಯಾಗಿ ಆಗಸದೆತ್ತರಕೆ ಸುವಾಸನೆಯ ಕೀರ್ತಿಯನ್ನು ಪಸರಿಸುವ ಕನಸು ಕಂಡವಳಿಗೊಂದು ಧ್ರುವ ನಕ್ಷತ್ರ ಗೋಚರಿಸಿದಂತೆ.

ಕನಸಿಗೊಂದು ಎಲ್ಲೆ ಇರಲು ಸಾಧ್ಯವಿಲ್ಲ.ಹಾಗಂತ ಸತ್ಕಾರ್ಯಗಳ ಹೊಂಗನಸಿಗೆ ಬರವಿಲ್ಲ.ನೂರಾರು ಯಶೋಗಾಥೆಗಳು ಸಾವಿರಾರು ನಕ್ಷತ್ರಗಳ ಶ್ರೇಯಾಂಕವನ್ನು ಮುಡಿಗೇರುಸಿದಂತೆ.ಸ್ವಾಮಿ ವಿವೇಕಾನಂದರ ವಾಣಿಯಂತೆ  ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

2 thoughts on “

  1. ಸಾವು ಬದುಕಿನ ನಡುವೆ ಹೋರಾಟ, ಆಸೆ ಆಕಾಂಕ್ಷೆ, ಗುರಿಗಳ ಬಗೆಗಿನ ಸಾಲುಗಳು ಸುಂದರವಾಗಿ ಮೂಡಿ ಬಂದಿದೆ.

  2. ಸಿರಿವಂತರ ವಿವಾಹವಾದರೇ ನಮ್ಮೆಲ್ಲಾ ಕನಸುಗಳ ನನಸಾಗಿಸಿಕೊಳ್ಳುವವರ ಮಾತನ್ನು ಲಕ್ಷಿಸದೇ ಗುರಿಯೆಡೆಗಿನ ಪಯಣ,ಜೊತೆನೆ ನಾನೇನು ಎಂಬುದ ಹುಡುಕುವ,ಲೇಖಕಿಯ ಮನಸ್ಥಿತಿ ಮತ್ತು ನಾನು ಬದುಕಲ್ಲಿ ಮಾಗಿದಾಗ,ಪಕ್ವತೆ ಬಂದಾಗ ಇತರರಿಗೂ ಬೆಳಕಾಗಬಹುದು ಎಂಬ ಚಿಂತನೆ ಪ್ರಶಂಸಾರ್ಹ.

Leave a Reply

Back To Top