ಜಯಶ್ರೀ.ಭ.ಭಂಡಾರಿ-ಗಝಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ.ಭ.ಭಂಡಾರಿ

ಬೆವರಿಗೆ ಕರಗಿದ ಕುಂಕುಮ ಬಾಳಿನ ಪುಟಕ್ಕೆ ತಿರುವು ನೀಡೀತೆ ಹೇಳು.
ಮರುಗಿ ಮರುಳೆ ತವರು ಮನೆಗೆ ಹೋಗದೆ ಮನವು ಕಾಡೀತೆ ಹೇಳು

ಬಾಲ್ಯದ ನೆನಪು ಉಮ್ಮಳಿಸಿ ಬಂದು ಮೂಕಳಾಗಿ ನಿಂತೆ ಏನು ಕೋಮಲೇ
ಸಲ್ಲದ ಅಪವಾದ ಅನುಮಾನ ಶೋಕದಿ ಆರ್ತಳಾಗಿ ಬೆಂದು ದೂಡೀತೆ ಹೇಳು.

ಮುತ್ತಿನಂಥ ಸಂಸಾರ ದೇವತೆಯಂಥ ಅತ್ತೆ ಇರುವಾಗ ಮರುಗದಿರು ಮಗಳೆ 
ಕತ್ತೆತ್ತಿ ನೋಡದೆ ಸುತ್ತಿ ಬಳಸಿ ಮಾತನಾಡದೆ ತರಳೆ ಇರುಳ ಬವಣೆ ಮೂಡೀತೆ ಹೇಳು.

ದೂರುವದ ಬಿಟ್ಟು ದೊರೆ ಸಾನಿಯಾಗಿ ಒಲವ ಬೇರು ಊರು ಮಂಗಳೆ.
ದೂರ ದೃಷ್ಟಿ ನೆಟ್ಟು ದಾರಿಗೆ ಹಡೆದವ್ವನ ಕನಸಿನ ಬಲವ ಬೇಡೀತೆ ಹೇಳು.

ಇಷ್ಟಪಟ್ಟು ಬದುಕು  ಜಯಾ ಕಷ್ಟಗಳಿಗೆ ಕೃಷ್ಣನ ಅಭಯವಿದೆ .
ನಷ್ಟವೇನೇ ಬರಲಿ ಬೆದರದೆ ಗೋವಿಂದನ ಅನುಪಮ ದಯೆಯ ಹಾಡೀತೆ ಹೇಳು.


Leave a Reply

Back To Top