ಸುಜಾತ ಲಕ್ಷ್ಮೀಪುರ ಕವಿತೆ-ಆಯುಧಗಳು

ಕಾವ್ಯ ಸಂಗಾತಿ

ಆಯುಧಗಳು

ಸುಜಾತ ಲಕ್ಷ್ಮೀಪುರ

ಬಾಲ್ಯದಿ ಮಚ್ಚು ಚೂರಿಗೆ ನಾಮವಿಟ್ಟು
ಹಲಗೆ ಬಳಪ ಪಕ್ಕದಲ್ಲಿಟ್ಟು
ಕಾಯೊಡೆದು ದೀಪ ಬೆಳಗಿ
ಪೂಜಿಸುವುದನು ಕಲಿಸಿದ್ದ ಅಪ್ಪ.
ಕಾಯಿನೀರು ಕುಡಿದು, ಕಾಯಿಚೂರು ಜಗಿದು
ಕಡಲೆಪುರಿ ಮುಕ್ಕಿ ನಲಿಯುತ್ತಿದ್ದೆ.

ದಿನಕಳೆದಂತೆಲ್ಲಾ ಸೈಕಲ್ಲು ಸ್ಕೂಟರ್ರು
ಕಾರು ಬಸ್ಸು ಲಾರಿಗೆ ಕುಂಕುಮವಿರಿಸಿ
ಕುಂಬಳಕಾಯಿ ಒಡೆದು, ಕರ್ಪೂರ ಬೆಳಗಿ
ಸ್ವೀಟ್ ಹಂಚಿದ್ದನ್ನು ಪಡೆದು ತಿಂದು
ಬಾಯಿ ಸಿಹಿಯಾಗಿಸಿಕೊಂಡೆ.

ಬುದ್ದಿಬಲಿತಂತೆಲ್ಲಾ
ಆಯುಧಗಳ ಸ್ವರೂಪ
ಬದಲಾಗುತಿದೆ ಅನ್ನಿಸಿ
ಪಟ್ಟಿ ಮಾಡಲು ಕುಳಿತಿದ್ದೇನೆ

ಓದುವ ಪುಸ್ತಕ, ಬರೆವ ಲೇಖನಿ
ಗುರಾಯಿಸುವ,ಹಿಂಸಿಸುವ ಕಣ್ಣುಗಳು
ಜೊಲ್ಲು ಸುರಿಸುವ ನಾಲಿಗೆಗಳು
ಹಿತ್ತಾಳೆ ಕಿವಿಗಳು
ನಂಜನ್ನೆ ತುಂಬಿಕೊಂಡ‌ ಮನಸ್ಸುಗಳು
ಇರಿವ ಮೌನ, ಸುಡುವ ಮಾತು
ಆವರಿಸಿ ಮುಳುಗಿಸುವ ಪ್ರೀತಿ
ಕೊಲ್ಲುವ ದ್ವೇಷ
ಥಟ್ಟನೆ ನುಗ್ಗಿ ಬಂದು ಮನದೊಳಗೆ ಹಿಂಡುವ
ನೆನಪುಗಳು
ಆಕರ್ಷಿಸಿ ಬೆನ್ನುಹತ್ತಿ ಜುಟ್ಟು ಹಿಡಿವ ಕೀರ್ತಿಶನಿ
ಮಂಗನಂತೆ ಕುಣಿಸಿ ತಲೆ ನಿಲ್ಲದಂತೆ ಮಾಡುವ
ಹಣ ಸಂಪತ್ತು
ಪದವಿಗಳ ಜ್ಞಾನದ ಅಲಗಿಡಿದು
ಸರ್ವನಾಶ ಮಾಡುವ ಬುದ್ದಿವಂತಿಕೆ
ಕರ ಮಧ್ಯೆ ಬಂದು ಕುಳಿತು
ಮನುಷ್ಯ ಕಳೆದು ಹೋಗುವಂತೆ ಮಾಡುತ್ತಿರುವ ಮೊಬೈಲ್
ಹಸಿವು, ರೋಗಗಳ ಹಿಡಿದು ಕೊಲ್ಲುವ ಸಾವು
ಥಟ್ಟನೆ ಕೈಕೊಡುವ ಸಮಯ
ಅಮ್ಮಮ್ಮಾ…
ಎಷ್ಟೊಂದು ಆಯುಧಗಳು ನಮ್ಮೊಳಗೆ ಹೊರಗೆ !!

ಈಗ, ಮೊದಲು ಯಾವ ಆಯುಧಕೆ
ಎಲ್ಲಿಂದ, ಹೇಗೆ ಪೂಜೆ ಮಾಡುವುದು
ಪೂಜೆ ಮಾಡಲೇಬೇಕಾ ಎಂಬಿತ್ಯಾದಿ
ಪ್ರಶ್ನೆಗಳಿಗೆ ಬಂದು ನಿಂತಿದ್ದೇನೆ.


ಸುಜಾತ ಲಕ್ಷ್ಮೀಪುರ.

2 thoughts on “ಸುಜಾತ ಲಕ್ಷ್ಮೀಪುರ ಕವಿತೆ-ಆಯುಧಗಳು

  1. ಸತ್ಯಗಳ ಆತ್ಮಾವಲೋಕನ!
    ಆಯುಧಗಳ ಹೊಳಪು ಥಳ ಥಳಿಸಿದೆ !!

  2. ಮೊದಲು ಮೊಬೈಲ್ ನಿಂದಲೇ ಪೂಜೆ ಶುರು ಮಾಡಿದರಾಯಿತು.
    ಕವಿತೆ “ಆಯುಧಗಳು” ನೈಜತೆಗೆ ಹತ್ತಿರವಾಗಿದೆ.

Leave a Reply

Back To Top