ಕಾವ್ಯಸಂಗಾತಿ
ಮೊದಲ ಮಳೆ
ಅನ್ನಪೂರ್ಣ ಸಕ್ರೋಜಿ
ತವರ್ಮನಿ ಅಂದ್ರ ನನಗೆಷ್ಟು ಖುಷಿನೋ
ಅಷ್ಟಽ ಖುಷಿ ನಮ್ಮ ಮಳೆರಾಯಗ
ಧಾರವಾಡಾ ಅಂದ್ರ ಸಾಕು
ಕುಣ್ಕೊಂತ ನಕ್ಕೊಂತ ಬರ್ತಾನ
ಕೆಂಪ ಮಣ್ಣಾಗ ಹಸಽರ ಎಮ್ಮಿ ಹೋಗುದ ನೋಡಿ
ಬಣ್ಣಕ್ಕ ಮಳ್ಳ ಆಗಿ ಜೋರಾಗ್ತಾನ
ಕೆಂಪ ರಾಡಿ ನೀರಾಗ ಮಕ್ಳಾಟ ನೋಡಿ
ತಾನೂ ಕುಣಿದಾಡತಾನ
ಕರೇ ಎರಿ ಹೊಲ್ದಾಗ ಬಿಳೇ
ಎತ್ತುಗೋಳ ಊಳೂದ ನೋಡ್ತಾನ
ನಕ್ಕೊಂತ ಹಾಡ್ಕೊಂತ ಬಿತ್ತೋ
ರೈತಗ ತಾನೂ ಕೈ ಜೋಡಸ್ತಾನ
ಬಿಸಿ ಬಿಸಿ ಥಾಲಿಪಟ್ಟ ಮಾಡೂದ್ನ
ಹಂಚಿನೊಳಗಿಂದ ಹಣಿಕಿ ಹಾಕ್ತಾನ
ತವಿ ಮ್ಯಾಲ ಬಿದ್ದು ಚುರ್ ಅಂದಾಗ
ಗಂಗವ್ವ ಮ್ಯಾಲ ನೋಡ್ದಾಗ ಅಡಕ್ಕೊಂತಾನ
ಅಭ್ಯಾಸ ಮಾಡವರನ ನೋಡಿ
ಗೊತ್ತಾಗದ್ಹಂಗ ಲೈಟ ತಗೀತಾನ
ಗಿರ್ಮಿಟ್ ಮಿರ್ಚಿಭಜಿ ತಿನ್ನುದ್ನೋಡಿ
ಕೆಟ್ಟೆನಿಸಿ ಕಣ್ಣೀರ ಸುರಸ್ತಾನ
ಸಂಗೀತಗಾರರ ಊರಂತ ಗೊತ್ತು
ಶೃತಿ ತಾಳ ಲಯದೊಂದಿಗೆ
ಬರ್ತಾನ
ಪೇಢಾದ್ಹಂಗ ಜನರ ಮನಸೂ ಸಿಹಿ ಮೆತ್ತಗ
ಇರೂದಕ್ಕ ಪ್ರೀತಿ ಮಾಡತಾನ
ಸಾಹಿತಿ ಕವಿಗಳ್ನ ಹೊರಗ
ಬರ್ಯೋ ಅಂತ ಕರೀತಾನ
ಕಾಳಿದಾಸಾ ಮೋಡದ ಮ್ಯಾಲ
ಬರದ್ಹಾಂಗ ನನ ಮ್ಯಾಲನೂ ಬರೀರಿ ಅಂತಾನ
ಬರ್ದ ಕವಿತಾ ಓದಿ ಹೇಳಾಕ
ಪೂಣಾಕ ಬರ್ರಿ ಅಂತಾನ