ಹೀಗೊಂದು ಪ್ರೇಮ ಪತ್ರ

ಹೀಗೊಂದು ಪ್ರೇಮ ಪತ್ರ

ನನ್ನೊಲವಿನ ಇನಿಯನಿಗೆ

ಅನ್ಸೀರಾ

.

ನನ್ನೊಲವಿನ ಇನಿಯನಿಗೆ,

  ಪ್ರೇಮವೆಂದರೆ ಅದೊಂದು ತಪ್ಪಸ್ಸು ಎಂದು ಈಗೀಗ ನನ್ನರಿವಿಗೆ ಬಂದಿದೆ ನೋಡು, ನಮ್ಮಿಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಉಳಿಯುವುದೆಂದು ನನ್ನರಿವಿಗೆ ಬರುವಷ್ಟರಲ್ಲಿ ಅದ್ಹೇಗೋ ನಿನ್ನ ಮೇಲೆ ಸ್ನೇಹವಿದ್ದ ನನ್ನ ಮನಸಲ್ಲಿ ಪ್ರೀತಿ ಹುಟ್ಟಿದ್ದಾದರೂ ಎಂದೂ ಎಂಬ ಪ್ರಶ್ನೆ ನನ್ನ ಕಾಡುತ್ತಿದೆ.

ಬಹು ವರ್ಷಗಳವರೆಗೆ ಗೆಳೆಯನಾದವನು ಈಗ ಪ್ರೇಮಿಯಾಗಿ ಮೈಮನವನ್ನು ತುಂಬುವನೆಂಬ ಸಣ್ಣ ಅರಿವಿಲ್ಲದೆ ನನ್ನ ಲೋಕದಲ್ಲಿ ನಾನಯಿತು ನನ್ನ ಪಾಡಾಯಿತು ಎಂಬಂತಿದ್ದೆ.

ನನ್ನಲ್ಲಿ ನಿನ್ನ ಮೇಲೆ ಒಲವು, ನಿನ್ನ ಮೇಲೆ ಅತಿಯಾದ ಕಾಳಜಿ, ಪ್ರೀತಿಯಿಂದ ತೋರುವ ನಿನ್ನ ಮಾತು ನನ್ನ ಮನಸ್ಸು ಹಕ್ಕಿಯಂತೆ ಹಾರತೊಡಗಿದೆ.

ನನ್ನ ಮಾತೇ ನಾನು ಕೇಳದಂತಿದ್ದವಳು ಅದೇಗೋ ನಿನ್ನ ಮಾತಿನ ಮೋಡಿಗೆ ನಾನು ಸಿಲುಕಿರುವೆ ಒಂದು ಸಣ್ಣ ಸುಳುಹು ಸಹ ನನಗೆ ಬರದಾಯಿತೆ ಗೆಳತಿಯಾಗಿದ್ದ ನಾನು ನಿನ್ನೊಂದಿಗೆ ಪ್ರೇಮದ ಹಸ್ತ ಚಾಚಲು ನನ್ನ ಮನ ಒದ್ದಾಡುತ್ತಿದೆ.

ಎಷ್ಟೋಂದು ಹೇಳಬಯಸುವ ನನ್ನ ಮನಸ್ಸಿನಲ್ಲಿರುವ ಕಾದಾಟ, ಗುದ್ದಾಟಕ್ಕೆ ಈ ಪ್ರೇಮ ಪತ್ರವೇ ಸಾಕ್ಷಿಯಾಗಿದೆ.

ನನ್ನ ಸ್ನೇಹಿತನಾದ ನೀನು ಮನದರಸನಾಗ ಬಯಸುವ ಎಲ್ಲಾ ಗುಣಗಳನ್ನು ನಾ ನಿನ್ನಲ್ಲಿ ಕಂಡೆ.

ಗೆಳತಿಯಾಗಿದ್ದಾಗ ಅರುಳು ಹುರಿದಂತೆ ಪಟಪಟನೇ ಮಾತನಾಡುತ್ತಿದ್ದ ನನಗೆ, ಇಂದು ಪ್ರೇಮಿಯಾಗಿ ನಿನ್ನ ಮುಂದೆ ಇನಿಯನ ಸ್ಥಾನ ಕೇಳಲು ಯಾಕಿಷ್ಟು ತಳಮಳವೆಂದು ನನಗರಿವಾಗುತ್ತಿಲ್ಲ.

ಎಷ್ಟೋ ವರ್ಷದ ತಪಸ್ಸಿನಂತೆ ನೀ ನನಗೆ ಸಿಗಲು ಕಾರಣವಿರಬಹುದು, ಬಯಸಿದ್ದು ಪಡೆಯಲು ಎಲ್ಲವೂ ದೇವರಿಚ್ಛೆ ಆದರೆ, ಬಯಸದೇ ಬಂದ ಭಾಗ್ಯದಂತೆ ನೀ ನನ್ನ ಪ್ರಿಯತಮನ ಸ್ಥಾನ ತುಂಬಲು ನಿನ್ನ ಹೊರತು ಆ ಸ್ಥಾನಕ್ಕೆ ಯಾರನ್ನೂ ಊಹೆ ಸಹ ನಾ ಮಾಡಲಾರೆ.

ತೆರೆದ ಹೃದಯದಂತೆ ನನ್ನ ‌ಮನಸ್ಸಿನ ಎಲ್ಲಾ ಭಾವನೆಗಳನ್ನು ಇಲ್ಲಿ ಪದಗಳ ರೂಪದಲ್ಲಿ ಪೋಣಿಸಿರುವೆ.

ಏನು ಹೇಳದೆ ಸುಮ್ಮನಿರುವ ನಿನ್ನ ಮನಸ್ಸು ಅರಿತೆನಾ ನಿನ್ನ ಕಣ್ಣಲ್ಲಿ ಎಲ್ಲವೂ.

ಜೀವನದಲ್ಲಿ ನನ್ನ ಹೃದಯದಲ್ಲಿ ಮುಖ್ಯ ಪಾತ್ರವಾಗಿರುವೆ, ನನ್ನ ಪ್ರೀತಿ ವ್ಯಕ್ತಪಡಿಸಲು ಪದಗಳೇ ಸಾಲದು ಅಷ್ಟೊಂದು ಆಳದಲ್ಲಿ ಸಿಲುಕಿದೆ ನಿನ್ನ ಮೇಲಿರುವ ನನ್ನ ಪ್ರೀತಿ.

ಒಂದೇ ಉಸಿರಲ್ಲಿ‌, ಒಂದೇ ಧಾಟಿಯಲ್ಲಿ ಈ ಪ್ರೇಮ ಪತ್ರ ಬರೆದೇ ಅದಕ್ಕೆ ನಿನ್ನ ಪ್ರೀತಿಯೇ ಕಾರಣ ಓ ನನ್ನ ನಲ್ಲನೇ.

ನನ್ನ ಪ್ರೇಮ ನಿವೇದನೆ ನಾನಿಂದು ಪತ್ರದ ಮೂಲಕ ತಿಳಿಸದಿದ್ದರೇ ಅಪರಾಧವಾದೀತೆಂಬ ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿದೆ.

ನನ್ನ ನೋಡದೇ ಒಂದು ವರ್ಷ ಸ್ನೇಹದಿಂದ ಆ ಪ್ರೀತಿ ತುಂಬಿದ ಮಾತನ್ನು ನಾಕಂಡೆ ನಿನ್ನಲ್ಲಿರುವ ಆ ದೊಡ್ಡತನ.  ಇಬ್ಬರು ಒಬ್ಬರನ್ನೊಬ್ಬರು ನೋಡದೇ ಶುರುವಾದ ಸ್ನೇಹ ಇಂದು ಅಗಾಧ ಪ್ರೀತಿ ತೋರುವ ನಲ್ಲನಾಗಿರುವೆ ನಿನ್ನ ದೊಡ್ಡತನಕೆ ನಿನ್ನ ಪ್ರೀತಿಸುವ ನನ್ನ ಹೃದಯ ನನ್ನ ಮಾತೇ ಕೇಳುತ್ತಿಲ್ಲ ಸಂದೇಶದ ಮೂಲಕವೂ ಹೇಳಲಾಗದ ನನ್ನ ನಿವೇದನೆ ಇಂದು ಈ ಪತ್ರದಲ್ಲಿ ಭಾವನೆಗಳ ಜೊತೆ ಪದಗಳನ್ನ ಪೋಣಿಸುತ ನಿನ್ನ ನೆನಪಿನಿಂದ ಹೊರ ಬರಲಾಗದೇ ಒದ್ದಾಡುತ್ತಿದೆ.

ಇದು ಕನಸೋ ನನಸೋ ಎಲ್ಲಾ ಮಾಯೆ ಎಂಬಂತೆ ನನ್ನ ನಿನ್ನ ಸ್ನೇಹ ಹಾಗೂ ಪ್ರೀತಿಗೆ ಹತ್ತು ವರ್ಷಗಳೆ ಕಳೆಯಿತು. ನನ್ನಾ ನಿನ್ನ ಮೊದಲ ಭೇಟಿ ನನ್ನಲ್ಲಿ ರೋಮಾಂಚನ ಉಂಟು ಮಾಡಿತು.

ಅಂದು ನಿನ್ನ ಮೊದಲ ನೋಟ ಬಾಣದಂತೆ ಬಂದು ನನ್ನ ಹೃದಯಕ್ಕೆ ಪ್ರೀತಿಯಾಗಿ ನಾಟಿತು. ಮನಸ್ಸೊಂದು ಕನ್ನಡಿಯಂತೆ ನಿನ್ನ ಮನಸ್ಸನ್ನು ನಾನು ನಿನ್ನ ಕಣ್ಣುಗಳಿಂದಲೆ ಎಲ್ಲಾ ಭಾವನೆಗಳನ್ನ ಅರಿತೆ . ನೀನು ಎದುರಿರುವಾಗ ಎಷ್ಟೋ ಬಾರಿ ಪ್ರೇಮ ನಿವೇದನೆ ಹೇಳಬಯಸುತ್ತಿದ್ದ ನನ್ನ‌ ಮನಸ್ಸು ನಿನ್ನ ಕಣ್ಣುಗಳು ನೋಡಿದಾಗ ಎಲ್ಲವನ್ನೂ ಮರೆತು ಮೌನವಾಗಿರುವ ನನ್ನ ಮನಸ್ಸಿಗೇನಾಯಿತೆಂಬುದೆ ನನ್ನರಿವಿಗೆ ಬಾರದಂತಾಗಿದೆ, ಹೃದಯ ಬಯಸುತ್ತಿದೆ ಮತ್ತೆ ಮತ್ತೆ‌ ನಿನ್ನ ನೋಡಬಯಸುತಿದೆ.

ಮಧುರವಾದ ಆ ಸಮಯ ಮತ್ತೆ ಬಯಸುತಿದೆ ಹೃದಯ ನಿನ್ನ ಪ್ರೀತಿಯಲ್ಲಿ ಕಳೆದು ಹೋದ ನನ್ನೆಲ್ಲ ಭಾವನೆ ನನ್ನ‌ ಮನದ ನೋವು ಆಳಕ್ಕೆ ಇಳಿದು ನಿನ್ನ ‌ಪ್ರೇಮವೆಂಬ ಸಾಗರದಿ ಮುಳುಗುವಾಸೆ. ನಿನ್ನ ನೋಟಕೆ ನನ್ನ‌ ಮನಸ್ಸು ಸೋತಿದೆ. ಸೂರ್ಯ ಮುಳುವಂತೆ ನಾನು ನಿನ್ನ ಪ್ರೀತಿಲಿ ಮುಳುಗಿರುವೆ.

ಎಷ್ಟೋ‌ ದಿನದಿಂದ ನಿನ್ನಲ್ಲಿ ಪ್ರೇಮ ನಿವೇದನೆ ಮಾಡಲು ಒದ್ದಾಡುತ್ತಿರುವ ಮನಕೆ ಇಂದು ಎಲ್ಲಿಲ್ಲದ ಸಡಗರ. ಜೊತೆಗೆ ಗೆಳೆಯ ಒಪ್ಪುತ್ತಾನೋ,‌ಇಲ್ಲವೋ ಎಂಬ ಭಯ ಕೂಡ….

ಇಂದು ಜಗತ್ತು ಅದೆಷ್ಟೋ ಮುಂದುವರೆದು ಎಲ್ಲರೂ ಮೆಸೇಜ್, ಫೇಸ್ಬುಕ್, ವಾಟ್ಸಾಪ್ ಮಾಡುವ ಕಾಲದಲ್ಲಿ ಇದೇನು ಈ ಪೆದ್ದು ಹುಡುಗಿ ಪ್ರೇಮಪತ್ರ ಬರೆದಿದ್ದಾಳಲ್ಲ? ಅಂದುಕೊಳ್ಳಬೇಡ.

ಒಂದು ಪದದಲ್ಲಿ ಐ ಲವ್ ಯೂ ಹೇಳಿ ಸುಮ್ಮನಾಗುವುದಾದರೆ ಅದಕ್ಕೆ ಇಷ್ಟೊಂದು ತಯಾರಿಯ ಅಗತ್ಯವಿರಲಿಲ್ಲವೇನೋ?.. ನನಗೆ ನಿನ್ನ ಮೇಲಿರುವ ಪ್ರೀತಿಯನ್ನು ಕೇವಲ ಮಾತುಗಳಲ್ಲಿ ಹೇಳಲಾರೆ; ನಾ ಬರೆದ ಓಲವ ಓಲೆ ನಿನ್ನ ಮನಸ್ಸು ಮುಟ್ಟಬೇಕು, ಮಾತುಗಳಲ್ಲಿ ಹೇಳಲಾಗದ್ದನ್ನು ಕಣ್ಣು ಹೇಳುತ್ತದೆ ಅಂತೆಯೇ, ಹೃದಯ ಹೃದಯ ಬೆಸೆಯಲು ಈ ಪತ್ರ ಕೊಂಡಿಯಾಗಬಹುದೆಂಬ ಬಲವಾದ ನಂಬಿಕೆ ನನ್ನದು…

   ಇಂದೇಕೊ ಕ್ಷಣಗಳು ಯುಗಗಳ ಹಾಗೆ ಭಾಸವಾಗುತ್ತಿದೆ. ನನ್ನ ಮನದಂಗಳದಿ ಬಿತ್ತಿದ ನಿನ್ನ ಪ್ರೀತಿಯ ಬೀಜ ಮೊಳಕೆಯೊಡೆದು ಹಸಿರಾಗಿ ಹೂ ಬಿಡುವ ಮುನ್ನವೇ ನನ್ನ ಮನದ ಭಾವಗಳನ್ನು ಹೇಳದೆ ಹೋದರೆ ಬದುಕುಳಿದೇನು ಎಂಬ ನಂಬಿಕೆ ನನಗಿಲ್ಲ..

ಅಂದಿನಿಂದ ಇಂದಿಗೆ ಸುಮಾರು ಹತ್ತು ವರುಷಗಳು ಕಳೆದರೂ ನಮ್ಮಿಬ್ಬರ ಸ್ನೇಹ ಹೀಗೆಯೇ ಉಳಿದಿದೆ.

ಇದಕ್ಕೆ ಪ್ರೇಮದ ಹೆಸರಿಟ್ಟು ಕೊನೆಯವರೆಗೂ ಹೆಜ್ಜೆಗೆ ಹೆಜ್ಜೆ ಬೆಸೆದು ನಿನ್ನ ಬಾಳಸಂಗಾತಿಯಾಗಿ ಬದುಕಿನುದ್ದಕ್ಕೂ ನಡೆವಾಸೆ. ಓಲವ ಕೋರಿಕೆಗೆ ಇನಿಯಾ ಹ್ಮೂಂಗುಟ್ಟುವನೇ?ನಾನರಿಯೇ….

  ನನಗರಿವಿಲ್ಲದೇ ನಿನ್ನ ಸಂತೋಷದಲ್ಲಿ ನನ್ನ ಸಂತಸ ಹುಡುಕಿದೆ; ನಿನ್ನ ನಗುವಿನಲ್ಲಿ‌ ನನ್ನ ನೋವನ್ನು ಮರೆತೆ.

ನೀ ಜೊತೆಯಿರುವಾಗ ಪ್ರಪಂಚದ ಸರ್ವಸುಖಗಳು ಕಡಿಮೆಯೆನಿಸುತ್ತದೆ, ನಿನ್ನ ಪ್ರೇಮವೇ ಮೇರು ಸ್ಥಾನ‌ ಮುಟ್ಟುತ್ತದೆ. ಅವರಿವರ ಬಳಿ ನಿನ್ನ ಬಗ್ಗೆ ಹೇಳಲಾರೆ, ನಿನ್ನ ಬಳಿ ಹೇಳಿ ಅವರ ಕಣ್ಣಲ್ಲಿ ಹುಟ್ಟುವ ಆಸೆ,ಸಡಗರ ನನ್ನಲ್ಲಿ ಅಸೂಯೆ,ಕೋಪ ಹುಟ್ಟಿಸುವುದೆಂಬ ಭಯ ನನಗೆ.

ಅವರಿವರು ನನ್ನ ಹುಡುಗನ ಬಗ್ಗೆ ತೋರುವ ಆಸಕ್ತಿ ಸಹಃ ಸಹಿಸದಷ್ಟು ನಿನ್ನ ಬಗ್ಗೆ ಅಸೂಯೆಗೊಂಡಿರುವ ಮನಕೆ ನಿನ್ನ ಪ್ರೀತಿಯೊಂದೆ ತಂಪೆರೆಯಬಹುದೆಂಬ ಬಲವಾದ ನಂಬಿಕೆ ನನ್ನದು..

“ಓಲವ ಜೇನ ಸವಿಯುತಾ

ಅಪ್ಪಿ ಒಮ್ಮೆ ಒಪ್ಪಿ ಬಿಡು ಇನಿಯಾ”..

ಮತ್ತೇನೂ‌ ಹೇಳಲಾರೆ, ಬೇರೆನೂ ಕೇಳಲಾರೆ

ಬದುಕ ಒಪ್ಪಿಸಿ ಬಿಡುವೆ,ಓಲವ ಪ್ರೀತಿ‌ ಮೊಗೆದು ಕೊಡುವೆ

ಹೆಗಲಿಗೆ ಹೆಗಲ ಬಳಸಿ ಬೆಸೆವೆ ತೋಳಬಂಧಿ,

ಕಳೆದು‌ಬಿಡುವೆ ಬದುಕ ಹೀಗೆ ಇನಿಯನ ಮಡಿಲಿನಲಿ..

ಈ‌ ಬದುಕು ಮುಂದುವರೆಯಬೇಕಿದೆ,ನಿನ್ನ ಜೊತೆ ಬದುಕ ತೇರಾ ಎಳೆಯಬೇಕಿದೆ. ಈ ಪ್ರೀತಿ,ಅಂತರಾಳದ ಕೋರಿಕೆಯ ನಿನ್ನ ಮುಂದೆ ಅರುಹಿರುವೆ ಒಪ್ಪುವೆಯೆಂಬ‌ ನಂಬಿಕೆಯಲ್ಲಿರುವೆ.

‘ಓಲವ ಪತ್ರ ಕೈ ಸೇರಿದ ಕೂಡಲೇ ತಪ್ಪದೇ ನಿನ್ನಂತರಾಳವ ತೆರೆದಿಡು, ಸ್ನೇಹದ ಕಡಲಲ್ಲಿ ಹುಟ್ಟಿದ ನಮ್ಮಿಬ್ಬರ ಪ್ರೀತಿ‌ ನೌಕೆ ದಡ ಸೇರುವುದೇ?

ಇತಿ ನಿನ್ನ, ನಲ್ಲೆ


One thought on “ಹೀಗೊಂದು ಪ್ರೇಮ ಪತ್ರ

  1. ಪ್ರೇಮ ಪತ್ರ ನೈಜ ಪ್ರೇಮ ತೋರಿಸುತ್ತದೆ. ಇದರಲ್ಲಿ ಧೈರ್ಯದ ಒಲವು ಕೂಡಾ ಇದೆ. ಅಭಿನಂದನೆಗಳು.-ಬಿ.ಟಿ.ನಾಯಕ್.

Leave a Reply

Back To Top