ಕಾವ್ಯ ಸಂಗಾತಿ
ಗಜಲ್
ಡಾ.ವಾಯ್.ಎಮ್ ಯಾಕೊಳ್ಳಿ
ಗಜಲ್ ( ನಿನ್ನೆ ರಾತ್ರಿ ಒಂದೆ ಎಳೆ ಮಗು ತಮ್ಮ ತಂದೆಯನ್ನು ಅಪ್ಪಿಕೊಂಡದ್ದು ಕಂಡು ೨೫ ವರ್ಷದ ಹಿಂದಿನ ಸಂದರ್ಭ ನೆನಪಾಯಿತು)
ಮಗು ಓಡಿ ಬಂದು ಅಪ್ಪಿಕೊಂಡಾಗ ನಿನ್ನ ನೆನಪಾಗುತ್ತದೆ ಮಗಾ
ನಿನಗೀಗ ಮಗುವಿನ ತಂದೆಯಾಗುವ ವಯಸು ಮರೆತು ಹೋಗುತ್ತದೆ ಮಗಾ
ಹೆಗಲ ಮೇಲೆ ಹೊತ್ತು ಊರೂರ ಜಾತ್ರೆ ನಿಬ್ಬಣಗಳ ತಿರುಗಿದ್ದೆ
ಮನದಿ ಹಸಿರಾಗುಳಿದ ನಿನ್ನ ಬಾಲ್ಯ ಮತ್ತೆ ಮತ್ತೆ ಮುದ ನೀಡುತ್ತದೆ ಮಗಾ
ಹೊರಗೆ ಹೊರಟವನನ್ನು ಅಂಬೆಗಾಲಿಡುತ ಬಂದು ತಡೆಯುತ್ತಿದ್ದೆ
ಬಾಲಕೃಷ್ಣನಂತೆ ಸುಂದರ ಮುಖ ಈಗಲೂ ಕಣ್ಮುಂದೆ ಬರುತ್ತದೆ ಮಗಾ
ಅದೆಷ್ಟು ತಕರಾರು ಪ್ರಶ್ನೆಗಳು ಉತ್ತರಿಸಲು ಸೋಲುತ್ತಿದ್ದೆ ನಾನು
ತಂಟೆ ಮಾಡುತ ಮನಸೆಳೆದ ಪೋರ ನೀನೇನಾ ಅಚ್ಚರಿಯಾಗುತ್ತದೆ ಮಗಾ
ತೊದಲು ನುಡಿ ಮಾತಾಡಿ
ಬೆರಗು ತೋರಿದ ಬಾಲ ನೀನು
ಶಾಲೆಯ ಅಂಗಳ ಸಾಲದೆ ಊರೆಲ್ಲ ಅಲೆದಾಡಿದ್ದು ಈಗ ಕಾಡುತ್ತದೆ ಮಗಾ
ನಿನ್ನ ತಿಳುವಳಿಕೆಯ ಅಗಾಧ ಸಾಗರವ ಕಂಡು ನಾವೀಗ ಮೂಕ ಪ್ರೇಕ್ಷಕರು
ಕಠಿಣ ಪ್ರಶ್ನೆಗೂ ಉತ್ತರಿಸುವ ಚತುರತೆಗೆ ಮನ ಸೋಲುತ್ತದೆ ಮಗಾ
‘ಯಯಾ’ ನ ಬಾಳ ನಂದನದಲಿ ಅರಳಿ ನಿಂತಿರುವ ಹೂವು ನೀನು
ಬದುಕಲಿ ನಗೆ ಬೆಳದಿಂಗಳಿರಲೆಂದು ಹೃದಯ ಹಾರೈಸುತ್ತದೆ ಮಗಾ
ಗಜಲ್ ಓದುಗರಿಗೆ ತಮ್ಮ ಮಕ್ಕಳ ಬಾಲ್ಯವನ್ನು ನೆನಪಿಸುತ್ತದೆ ಸರ್. ಸೂಪರ್.
ಸರ್ ಅಥ೯ಪೂಣ೯ವಾದ ಗಜಲ್ ಅಭಿನ೦ದನೆಗಳು.