ಕಾಯಕವೇ ಕೈಲಾಸ…!

ಕಾವ್ಯ ಸಂಗಾತಿ

ಕಾಯಕವೇ ಕೈಲಾಸ…!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಸೋಮವಾರ ಬಂದದ್ದೇ ಅರಿವಾಗಲಿಲ್ಲ
ಶನಿವಾರ ಕಳೆದ ಮರುದಿನ
ಸೋಮವಾರವೋ ಎಂಬಂತೆ!
ಹೊಸ ವಾರ ಮೊದಲ ದಿನ
ಬಂದಾಗಿದೆ ಇನ್ನೂ ಹುರುಪಿಲ್ಲ
ಈಗಲೂ ಕಳೆದುಹೋದ
ಆ ರಜಾದಿನದ ಹುಲ್ಲಿನ ಮೆಲಕು!

ಕಛೇರಿಯಲ್ಲಿ ಇನ್ನೂ ನೆಟ್ಟಗೆ
ತಳ ಊರಿಲ್ಲ
ಆಗಲೆ ಬರುವ ಶನಿವಾರಕ್ಕೆ
ಇನ್ನೆಷ್ಟು ದಿನ ಘಂಟೆ
ಎಂಬ ದಿನಂಪ್ರತಿ ಚಿಂತೆ
ಇದು ಇಲ್ಲಿ ಹಾಸುಹೊಕ್ಕಾದ ಕತೆ!

ಅಷ್ಟೊಂದು ಪರಿಣತಿಯ ಕಾಯಕ!
ಅಷ್ಟಲ್ಲದೆ ಅಧಿಕೃತ
ಸಾಲುಸಾಲು ರಜೆಗಳು
ಇನ್ನಿತರ ಭತ್ಸ್ಯಭರಿತ ಸೂಟಿಗಳು!
ಹೌದು, ಇಷ್ಟೊಂದು ಬಿಡುವಿನ
ನಡುವೆ ಹಾಗಾದರೆ
ಕಛೇರಿ ದೈನಂದಿನ ಕಸುಬು?
ಅಲ್ಲಿ ಇಲ್ಲಿ ಚಲ್ಲಾಪಿಲ್ಲಿ
ಯಾದ ಆ ಕಡತಗಳಲ್ಲಿ
ಮತ್ತವು ಹೂತುಹೋದ
ಧೂಳಿನ ಸಮಾಧಿಗಳಲ್ಲಿ
ಇದೇ ಇಲ್ಲಿಯ ನಿರಂತರ ವ್ಯಥೆ!

ಆದರೂ ಜರುಗುತ್ತಲೇ ಇರುವುದು
ಪವಾಡಸದೃಶ
ಭಾರತ ಬೃಹತ್ ಯಂತ್ರ
ಅಸಂಖ್ಯ ಗುಂಡಿ ಗುನ್ನಗಳ
ಡಾಂಬರು ರಸ್ತೆಗಳಲಿ ನಿಸ್ತೇಜ
ಉರುಳುರುಳಿ ಹರಿವಂತೆ
ವೈವಿಧ್ಯಮಯ ಗಾಡಿಗಳು!


One thought on “ಕಾಯಕವೇ ಕೈಲಾಸ…!

  1. ಸೋಮವಾರ ಬಂದದ್ದೇ ತಿಳಿಯಲಿಲ್ಲ
    ಆರಂಭಧ ಸಾಲೇ ಚೆನ್ನಾಗಿರುವುದರ ಆರಂಭ
    Congrats Murthy

Leave a Reply

Back To Top