ಕಾವ್ಯ ಸಂಗಾತಿ
ಇಂದೇಕೋ ಬಹಳ ಕಾಡುತ್ತಿದ್ದಾಳೆ
ಶಶಿಧರ ಹೆಗಡೆ ಕೊಳಗಿ
ದೂರದ ದಾರಿಯ ಪ್ರತಿ ತಿರುವಿನಲ್ಲೂ ,
ಹಿಂದಿರುಗಿ ನನ್ನ.ಬರುವಿಕೆಯನ್ನು
ಓರೆಗಣ್ಣಲ್ಲೇ ಗಮನಿಸುತಾ , ನನ್ನ ನೋಟ ಆ ನೋಟದೊಳಗೆ ನಿಟ್ಟುವುದರೊಳಗೆ ಮತ್ತೆ ಮುಂದಿರುಗಿ ಕಣ್ಣ ಸಂಭಾಷಣೆ ನಡೆದೇ ಇಲ್ಲ ಎಂಬಂತೆ ಸಹಜವಾಗಿ ಮುನ್ನಡೆದ ಅವಳು ಇಂದೇಕೋ ಬಹಳ ಕಾಡುತ್ತಿದ್ದಾಳೆ…
ಪುಟ್ಟ ಪುಟ್ಟ ಹೆಜ್ಜೆಯಿಡುತಾ , ಹಿಂದಿರುಗಲು ಕುಂಟು ನೆಪವೊಂದ ಹುಡುಕುತಾ , ಗಕ್ಕನೆ ಹಿಂದಿರುಗಿ ನಾಚಿ ನಗುತಾ ಕಣ್ಣಂಚಿನ ಮುಂಗುರುಳ ತಿದ್ದುತಾ ,
ಮಾದಕತೆಯಲಿ ನನ್ನ ಮುಳುಗಿಸಿದ ಅವಳು ಇಂದೇಕೋ ಬಹಳ ಕಾಡುತ್ತಿದ್ದಾಳೆ…
ಲೆಕ್ಕವಿರದಷ್ಟು ನಡೆದ ಮೈಲಿಗಳಲಿ , ನೆನಪಿನ ಮೈಲಿಗಲ್ಲನು ಸೃಷ್ಟಿಸುತಾ, ಸಮಯದ ಅರಿವಿರದೇ ಇನ್ನಷ್ಟು ದೂರ ನಡೆಯಬೇಕೆಂಬ ಹೆಬ್ಬಯಕೆ ಮೂಡಿಸಿದ ನಯನ ಮನೋಹರಿ ಇಂದೇಕೋ ಬಹಳ ಕಾಡುತ್ತಿದ್ದಾಳೆ..
ಪ್ರತಿದಿನವೂ ಹಿಂಬಾಲಿಸುವ ಹುಚ್ಚು ಹಿಡಿಸಿದ ಅವಳು
ಕಣ್ಣಲೇ ಭಾವ ವಿನಿಮಯ ಮಾಡುವ ರುಜುತ್ವವ ಕಲಿಸಿ,
ದಿನವೆರಡರಿಂದ ಕಾಣದೇ ನನ್ನೊಳಗೆ ಭ್ರಾಂತಿಯ ಚಡಪಡಿಕೆಯನೆಬ್ಬಿಸಿ ಇಂದೇಕೋ ಬಹಳ ಕಾಡುತ್ತಿದ್ದಾಳೆ… ಕಾಣದೇ ಮತ್ತೆ ಮತ್ತೆ ಕಾಡುತ್ತಿದ್ದಾಳೆ…