ಕಾವ್ಯ ಸಂಗಾತಿ
ಅರ್ಥ ಕಾವ್ಯ
ಮಹಾದೇವ ಕಾನತ್ತಿಲ
ನೆಟ್ಟೆ!
ಹೊಸತೊಂದು ಆಸೆಯಲಿ
ಒಂದು ಬಿದಿರ ಗಿಡ ನೆಟ್ಟೆ!
ಬೇರಿಳಿಸಿ ನೆಲೆಯೊಳಗೆ
ಗಿಡವದೇ ಬೆಳೆ ಬೆಳೆದು
ಆಗಸಕೆ ಮೊಳೆ ಹೊಡೆದು
ತನ್ನದೇ ಬುಡದಿಂದ
ನೂರು ಗಿಡ ಮೊಳೆತು
ಮನೆಯಿಂದ ಮನದಾಟಿ
ಊರು ಊರನು ದಾಟಿ
ನಾಡೆಲ್ಲ ಕಾಡಾಗಿ
ಹಬ್ಬಿತೋ ಹಬ್ಬಿತು!
ಕಡಿದೆ?!
ಕಾಸಿ ಕಬ್ಬಿಣವನು
ಕಮ್ಮಾರ ಮಾಡಿದ ಕೊಡಲಿ
ಗಿಡವೆಲ್ಲ ಮುಳ್ಳು
ಮುಳ್ಳುಗಳ ಗೆಲ್ಲು
ಒಂದೊಂದು ಹೆಣೆ ಹೆಣೆದು
ಬಿದಿರ ಸಮಾಜವದೆಷ್ಟು ಗೋಜಲು
ಒಂದೊಂದೇ ಮುಳ್ಳನ್ನು ಕಡಿಯಲು
ಬಿದಿರ ಮೆಳೆ ಬಿಡಿಸಲು
ಅಬ್ಬಾ ಊರೆಲ್ಲ ಖಾಲಿ!
ಗಾಳಿಯೋ ಗಾಳಿ
ಮಾರಿದೆ!
ಮನೆ ಮಾಡಿಗೂ
ಇಲಿಹಿಡಿವ ಗೂಡಿಗೂ
ಬಿದಿರನ್ನು ಸೀಳಿದೆ
ಗಾಡಿಯನು ಕಟ್ಟಿದೆ
ಎಷ್ಟೊಂದು ಉಳಿದವೆಂದು
ಪರವೂರ ಸಾಹುಕಾರನಿಗೆ
ಮಾರಿ ಮಾರಿದೆ
ಅವ ಮಾರಿದ ಕಾಗದದ ಕಾರ್ಖಾನೆಗೆ
ಕಾಗದವದೋ ಅತ್ಯುತ್ಕೃಷ್ಟ
ನನಗಿವೇ ಕಾಗದಗಳು ಬೇಕೆಂದು
ದೇಶ ನಡೆಸುವ ಬ್ಯಾಂಕು ಠಂಕಿಸಿತು ನೋಡಿದಷ್ಟು ಬಳಲುವಷ್ಟು
ನೋಟ ಕುರುಡಾಗುವಷ್ಟು
ಅದಕೆ ನೋಟು ಇದಕೆ ನೋಟು
ಎದೆ ಬಡಿತಕೆ ನೋಟು
ಎಲ್ಲಕ್ಕೂ ನೋಟು
ಅರ್ಥ
ಓಹೋ
ಅರ್ಥ ಆಗಲಿಲ್ಲವೇ!
ಅರ್ಥ ಹುಡುಕಲು ಹೋಗದಿರು ಗೆಳೆಯಾ
ಇರುವಂತೆ ಇರುವಲ್ಲಿ, ನಡೆದಂತೆ ನಡೆದಲ್ಲಿ
ಬೇಕು ಬೇಡದ ನಡುವೆ
ತಾಸು ತ್ರಾಸಿನ ಮೀರಿದಾ ಅಳತೆ
ಸೆನ್ಸೆಕ್ಸು ಸಂಖ್ಯೆಯಲಿ
ಪಾದದೆಕ್ಕಡದಲ್ಲಿ
ಕೊರಳ ನೆಕ್ಲೇಸಿನಲ್ಲಿ
ಜಡೆಯೇರಿ ಮುಡಿ ಮೀರಿ
ಹಾವಾಗಿ ಹಾವಭಾವವಾಗಿ
ಅರ್ಥ ಹರಿಯುತ್ತಿದೆ ಕಾಣೆಯಾ!
ಮಹಾದೇವ ಕಾನತ್ತಿಲ
ತುಂಬ ಅರ್ಥಗರ್ಭಿತ ಮತ್ತು ಸಮಯೋಚಿತ ಕವಿತೆ.ನೆಟ್ಟೆ- ಕಡಿದೆ-ಮಾರಿದೆ ಪದಗಳಿಗೆ ಅರ್ಥ ಹುಡುಕುವ ಹುನ್ನಾರನು ಮಾಡದಿರು ಎಂದು ಕವಿ, ಚಾಟಿ ಏಟು ಬೀಸುವಲ್ಲಿ ವಿಶ್ವ ಪರಿಸರ ಕಾಳಜಿ ಕಾಳಜಿ ಇದೆ. ಅರ್ಥ ದಲ್ಲಿ ಪ್ರಶ್ನೆಯೂ ಇದೆ.ಅದು ಕವಿತೆಯ ಗಮ್ಮತ್ತು.
ಅದೇಕೋ ಕವಿ ತಿರುಮಲೇಶರ ‘ ನೂರು ಮಂದಿ ‘ ಕವಿತೆ ನೆನಪಿಗೆ ಬಂತು.
ಅಭಿನಂದನೆಗಳು ಮಹದೇವ ಅವರೆ.
ಕಿಶನ್ ಸರ್
ನೀವು ನೋಡಿದ ನೋಟದಿಂದ ಕವಿತೆ ಸಂಭ್ರಮಿಸಿ ಅರಳಿದೆ. ಹೊಸ ಬಣ್ಣ ಕವಿತೆ ಕನ್ನೆಯ ಕೆನ್ನೆಗೆ.
ತಿರುಮಲೇಶ್ ಅವರ ‘ನೂರು ಮಂದಿ ಮನುಷ್ಯರು’ ನಾನು ಓದಿದ ಕವಿತೆಗಳಲ್ಲೇ ಅತ್ಯಂತ ಅರ್ಥಪೂರ್ಣ ಕವಿತೆ. ಅದರ ಒಂದು ಸಾಲಿನಷ್ಟು ಅರ್ಥ ನನ್ನ ಕವಿತೆ ಸೂಸಿದರೂ ನಾನು ಧನ್ಯ.
ನಿಮ್ಮಂತಹ, ಸಾಹಿತಿ, ವಿಮರ್ಶಕರು ಕವಿತೆಯ ಬಗ್ಗೆ ನರೆವ ಸಾಲುಗಳು ನಮಗೆ ಸಿಗುವ ಪ್ರೋತ್ಸಾಹ.
ತುಂಬಾ ತುಂಬಾ ಧನ್ಯವಾದಗಳು ಸರ್
Your poem Mahadeva, is a reflection of the dilemma of human existense…to blend and be one with nature or to ride the mirage of the materialistic world. Desires take us away from the roots, branches and the very leaves that fed us…only to return back to the core like Paulo Coelho’s ‘the alchemist’
ತುಂಬಾ ಚೆನ್ನಾಗಿ ಅರ್ಥ ವಿವರಿಸಿದಿರಿ ಫರೀದಾ. ಆಂಗ್ಲಭಾಷೆಯ ಅಷ್ಟೊಂದು ಅದ್ಭುತ ಕಾವ್ಯಗಳನ್ನು ಬೊಗಸೆ ತುಂಬಿ ದಿನದಿನವೂ ಕುಡಿದು ಪಕ್ವವಾದ ನಿಮ್ಮ ಕಾವ್ಯಾವಲೋಕನದ ಚಿತ್ತಭಿತ್ತಿಯಲ್ಲಿ ನಮ್ನ ಕವನದ ಬಗ್ಗೆ ಮೂಡಿದ ಚಿಂತನೆ ನನ್ನನ್ನು ಧನ್ಯನನ್ನಾಗಿಸಿದೆ. ನಮಿಪೆ.
ನೆಟ್ಟು, ಅರ್ಥವನರಿಯದೆ ಕಡಿದು ಮಾರಿದ ನಂತರ ಅರ್ಥವ ಹುಡುಕಿದರೆ ಅರ್ಥ ದೊರೆಯಬಹುದೇ.ದೊರೆತರೂ ಭೌತಿಕ ,ಪ್ರಾಪಂಚಿಕ ಸುಖಕ್ಕಾಗಿ ಮಾಡಿದ ಕೃತ್ಯ ಸಂತಸ ತಂದೀತೇ.ಮಹದೇವರೇ ನಿಮ್ಮ ಕವಿತೆ ಸರಳ ಪದಗಳ ಗರ್ಭದಲ್ಲಿ ಅಗಾಧ ಅರ್ಥವನ್ನು ಹುದುಗಿಸಿಕೊಂಡು ನಿಂತು ಪ್ರಶ್ನಿಸುತ್ತಿದೆ.
ಮೀರಾ ಜೋಶಿ ಮ್ಯಾಡಂ
ಕವಿತೆಯ ತಿರುಳನ್ನು ತಿಳಿವಾಗಿಸುವ ನಿಮ್ಮ ತಿಳಿಮನಸ್ಸಿನ ಪ್ರತಿಕ್ರಿಯೆ, ಕಾವ್ಯಕ್ಕೆ ಮಾತೃ ಸೆಲೆ.
ತುಂಬಾ ತುಂಬಾ ಧನ್ಯವಾದಗಳು.
ತಾನು ನಾಶವಾದೆನೆಂದು ಬಿದಿರು ಅಳಬೇಕೋ ಜಂಭದ ಚೀಲಗಳಗಳ ಒಳ ಪದರಗಳಲ್ಲಿ ಬೆವರುತ್ತ ಮುದುರಿದೆನೆಂದು ಸಂಭ್ರಮಿಸಬೇಕೋ ತಿಳಿಯದ ವರ್ತುಲ. ಮನುಷ್ಯನು ಏನು ಮಾಡಿದರೂ ತನ್ನ ಲಾಭಕ್ಕೇ. ಮತ್ತೆ ಅವನಿಗೆ ಕವಿತೆ ಅರ್ಥವಾಗುವುದಾದರೂ ಹೇಗೆ !
ಮತ್ತೆ ಅವನಿಗೆ ಕವಿತೆ ಅರ್ಥವಾಗುವುದು ಹೇಗೆ?!!
ರಮೇಶ್ ಸರ್, ಎಷ್ಟೊಂದು ಅರ್ಥಸಾಧ್ಯತೆಗಳನ್ನು ತೆರೆದಿರಿ, ಕವಿತೆಗೆ. ನಿಮ್ಮ ಕವಿಹೃದಯದ ಉಲಿಕೆ ಅದು.
ನಿಮಗೆ ಕವಿತೆ ಅರ್ಥವಾಗಲು ಕಾರಣವೇ ನಿಮ್ಮ ನಿಸ್ವಾರ್ಥ ಹೃದಯ.
ನಮಿಪೆ ಸದಾ
ತುಂಬ ಅರ್ಥಗರ್ಭಿತ ಕವನ. ಸರಳ ಪದಗಳಲ್ಲಿ ಬಹಳಷ್ಟು ಮಾತನಾಡುತ್ತಿದೆ. ಬಿದಿರು ತಾನು ಒಂಟಿಯಾಗಿ ಬೆಳೆಯುವುದಿಲ್ಲ. ಎತ್ತರೆತ್ತರಕ್ಕೆ ಬೆಳೆಯುತ್ತ ಮರಿಮರಿಗಳ ಹುಟ್ಟುಹಾಕಿ ಬೆಳೆಸುತ್ತ ಸಾಗುವ ಪಯಣ…ಕಡಿದು..ಮಾರಿ…ಅಂತ್ಯದಲ್ಲೂ ಉಗಮ. ಹೊಸ ದಿರಿಸು..ವ್ಯಾವಹಾರಿಕ ಲೋಕ..ಮತ್ತೆ ಮತ್ತೆ ಇನ್ನಷ್ಟು ಬಹಳಷ್ಟು ಪಾಠವಾಗುವ ಕ್ರಿಯೆ..ಪ್ರಕ್ರಿಯೆ..
ಇಷ್ಟವಾಯಿತು
ಪೂರ್ಣಿಮಾ ಅವರೇ, ಕವಿತೆಯೊಳಗೊಂದು ಒಳಸುಳಿಯನ್ನೂ, ಆವರ್ತನವನ್ನೂ ನೀವು ಗಮನಿಸಿದ್ದೀರಿ. ಅದು ಕವಿಹೃದಯಕ್ಕೆ ಸಲ್ಲುವ ನೈವೇದ್ಯ.
ನಿಮ್ಮ ಬೆಂಬಲ ಸದಾ ಇರಲಿ.
ವಂದಿಪೆ
ಮಹಾದೇವ ಅವರೆ, ಬಹಳ ಅರ್ಥಗರ್ಭಿತ ಕವನಗಳು. ಎಲ್ಲಕ್ಕೂ ಬೇಕು ನೋಟು, ಕಾಗದದ ತುಣುಕೊಂದದು consumerism ಪಥದಲ್ಲಿ ಮನುಷ್ಯನನ್ನು ಸಾಗಿಸಿ, ಅವನ ಮಾನವೀಯತೆಯನ್ನು ಅಪಹರಿಸುವ ವಿಷಯ ಮಾರ್ಮಿಕವಾಗಿ ವ್ಯಕ್ತಗೊಂಡಿದೆ.
ಉದಾತ್ತತೆಯಿಂದ ಸ್ವಾರ್ಥದತ್ತ ಸಾಗುವ ಪಯಣವನ್ನು ಕವಿತೆಗಳ ‘ಟ್ರೈಯಾಲಜಿ’ ಸರಳವಾಗಿ, ಮನೋಜ್ಞವಾಗಿ ಸೆರೆಹಿಡಿದಿದೆ.
ಪ್ರಹ್ಲಾದ ಜೋಶಿ ಸರ್, ನೀವು ಹೈದರಾಬಾದ್ ನ ಕವಿಗಳ ಪಥದ ಮುಂಚೂಣಿಯಲ್ಲಿರುವವರು. ಅಷ್ಟೇ ಚೆನ್ನಾದ ಕಲಾವಿದರು. ಹಾಗಾಗಿ ಕವನಸಾಧ್ಯತೆಗಳು ನಿಮಗೆ ತೆರೆದುಕೊಳ್ಳುವ ಪರಿಯೇ ಅನನ್ಯ. ಕನ್ಸ್ಯೂಮರಿಸಂ ನ ಹೊಳಹನ್ನು, ಅರ್ಥ ಹುಡುಕುತ್ತಾ ಅರ್ಥಶಾಸ್ತ್ರದ ಪುಟಗಳು ಸಮಾಜದ ಒಳಹೊರಗಿನ ಇತಿಹಾಸ ಬರೆಯುವುದನ್ನು ಗಮನಿಸಿದ್ದೀರಿ.
ಹೇಗೆ ನಮಿಸಲಿ ಪ್ರೀತಿಯ ಪಲ್ಲಣ್ಣ.
ಧನ್ಯೋಸ್ಮಿ
ಸೊಗಸಾದ ಗದ್ಯಗಂಧೀ ರಚನೆ..ಮಾನವಕೇಂದ್ರಿತ ಅಭಿವೃದ್ಧಿ ಯೋಜನೆಗಳು ತನ್ನ ಹುಟ್ಟಿನ ಮೂಲದಲ್ಲೇ ದುರಂತದ ಬೀಜಗಳನ್ನು ಧರಿಸಿರುವ ಪರಿಗೆ ನಿಮ್ಮ ಕವಿತೆ ಕನ್ನಡಿ ಹಿಡಿದಂತಿದೆ. ನಮ್ಮ ಅರ್ಥ- ಸ್ವಾರ್ಥಕ್ಕಾಗಿ ನಾವೇ ಕಟ್ಟಿಕೊಂಡಿರೋ ಅಭಿವೃದ್ಧಿ ಮೀಮಾಂಸೆಯ ಟೊಳ್ಳುತನವನ್ನು ‘ಅರ್ಥ’ಪೂರ್ಣವಾಗಿ ‘ಕಾವ್ಯ’ವಾಗಿಸಿರುವ ಪರಿಗೆ ಶರಣು ಮಹಾದೇವ್ ಜೀ
ನೋಡಿದಿರಾ!
ಎಷ್ಟೊಂದು ಆಳಕ್ಕೆ ನೀನು ಇಳಿಯಬಲ್ಲಿರಿ ನೀವು!.
ಕಾವ್ಯಕ್ಕೂ ಕಾವು ಕೊಟ್ಟು ಹೊಸ ಜನ್ಮ ಕೊಡುವ ಮಡಿಲತತ್ವಕ್ಕೆ ಪ್ರಣಾಮಗಳು.
ಅಭಿವೃದ್ಧಿ ಮೀಮಾಂಸೆ ತುಂಬಾ ಸುಂದರ ಪದಯುಗ್ಮ.
ಪ್ರಬುದ್ಧ ಪ್ರತಿಕ್ರಿಯೆಗೆ ಧನ್ಯವಾದಗಳು