‌‌‌‌ಜ್ಯೋತಿ , ಡಿ.ಬೊಮ್ಮಾ…ಲಲಿತ ಪ್ರಬಂಧ

ಪ್ರಬಂಧ

ಲಲಿತ ಪ್ರಬಂಧ

ಮೈಕೈ ನೋವು ಮತ್ತು ನಾವು

ಜ್ಯೋತಿ , ಡಿ.ಬೊಮ್ಮಾ

:ಮೈಕೈ ನೋವು ಮತ್ತು ನಾವು.

ಹರಟೆ ಕಟ್ಟೆಯಲ್ಲಿ ಕುಳಿತ ಮಹಿಳಾ ಮಣಿಗಳೆಲ್ಲ ಈ ಮೈಕೈ ನೋವನ್ನು ರಾಷ್ಟ್ರಿಯ ರೋಗವೆಂದು ಘೋಷಿಸಬೇಕು ಎಂದು ಒಮ್ಮತದ ನಿರ್ಧಾರ ಕ್ಕೆ ಬಂದಾಯಿತು.ಹಾಗೆ ನೋಡಿದರೆ ನಮ್ಮ ಹೆಂಗಳೆಯರಲ್ಲಿ ಒಮ್ಮತದ ನಿರ್ಧಾರ ಎಂಬುದು ಯಾವಾಗಲೋ ಒಮ್ಮೆ ಅಪರೂಪಕ್ಕೆ ಘಟಿಸುವಂತದ್ದು. ಅದಕ್ಕೆ ಪ್ರಪಂಚದಲ್ಲಿ ಎಲ್ಲರಿಗೂ ಕಾಡುವ ಮೈಕೈ ನೋವು ಏಕೆ ರಾಷ್ಟ್ರೀಯ ರೋಗವಾಗಬಾರದು ಎಂಬ ಜಿಜ್ಞಾಸೆ ಮೇಲೆ ಚರ್ಚೆ ಶುರುವಾಯಿತು. ರಾಷ್ಟ್ರೀಯ ಪಕ್ಷಿ , ಪ್ರಾಣಿ , ಹಾಡು , ಇತರೆಗಳಂತೆ ರೋಗಗಳಿಗೂ ಆದ್ಯತೆ ಕೋಡಬೇಕಲ್ಲವೇ , ಅದಕ್ಕೆ ರಾಷ್ಟ್ರೀಯ ರೋಗವಾಗಲು ಮೈಕೈ ನೋವೆಂಬ ರೋಗವಲ್ಲದ ರೋಗವೇ ಸೂಕ್ತ ಎಂಬುವದು ಎಲ್ಲರ ಅಭಿಪ್ರಾಯವಾಗಿತ್ತು

.

ಈ ಮೈಕೈ ನೋವನ್ನು ಹೇಗೆ ಪರಿಗಣಿಸುವದು..! ಕೈ ಎಂದರೆ ಒಂದು ಪ್ರತ್ಯೇಕ ಅಂಗ. ಕೈ ನೋವು ಎಂದರೆ ಹೀಗೀಗೆ ಆಗುತ್ತಿದೆ ಎಂದು ವಿವರಿಸಬಹುದು.ಈ ಮೈ ನೋವನ್ನು ವಿವರಿಸುವದು ಹೇಗೆ..! ಮೈ ಎನ್ನುವದು ದೇಹದ ಎಲ್ಲಾ ಅಂಗಗಳನ್ನು ಒಳಗೊಂಡಿರುವದು . ಎಲ್ಲಾ ಅಂಗಗಳು ಏಕ ಕಾಲಕ್ಕೆ ನೋಯುವ ಸಂದರ್ಭ ಕಡಿಮೆ. ಇಲ್ಲಿ ಮೈ ಎಂದರೆ ನಮ್ಮ ಶಬ್ದಕೋಶ ದಲ್ಲಿ ಕೈಕಾಲು ಬೆನ್ನು ಭುಜ ಕತ್ತು ಮಂಡಿ ಯಂತಹ ಅಂಗಗಳು ಬರುತ್ತವೆ . ಹೊಟ್ಟೆ ಎದೆ ಹಲ್ಲು ತಲೆಗಳಲ್ಲಿನ ನೋವುಗಳು ಆ ಅಂಗಗಳ ಹೆಸರಿನಿಂದ ಸೂಚಿಸಲ್ಪಡುತ್ತವೆ. ಹೊಟ್ಟೆ ಎದೆ ನೋವುಗಳ ಬಗ್ಗೆ ಕಾಳಜಿವಹಿಸುವ ಎಲ್ಲರೂ ಮೈಕೈ ನೋವನ್ನು ಸಾಮಾನ್ಯವಾಗಿ ಪರಿಗಣಿಸತ್ತಾರೆ.ಅದಕ್ಕೆ ಮೈಕೈ ನೋವನ್ನು ರೋಗ ಎನ್ನಬೇಕು ಅಥವಾ ಮನಸ್ಸಿನ ಭಾವನೆ ಎನ್ನಬೇಕೋ ಇನ್ನೂ ನಿರ್ಧಾರ ವಾಗಿಲ್ಲವೆನಿಸುತ್ತದೆ.

 ನಮ್ಮ ಹೆಂಗಳೆಯರಿಗೆ ಮೈಕೈ ನೋವೆಂಬುವದು ನಿತ್ಯ ಭಾದಿಸುವಂತದ್ದು. ಜಾಸ್ತಿ ಕೆಲಸಕಾರ್ಯಗಳು ಮಾಡಿದಾಗ , ಸುಸ್ತಾದಾಗ , ಪ್ರವಾಸಮಾಡಿದಾಗ, ಕೆಲವೊಮ್ಮೆ ಬೇಜಾರಾದಾಗಲೂ ಮೈಕೈ ನೋವು ಕಾಡುತ್ತದೆ.ಹಾಗಂತ ಮೈಕೈ ನೋವೆಂದು ನಾವೇನು ಬೆಚ್ಚಗೆ ಹಚ್ಚಿಕೊಂಡು ಮಲಗುವದಿಲ್ಲ.ಆ ನೋವಿನೊಂದಿಗೆ ದಿನನಿತ್ಯದ ಕೆಲಸ ಕಾರ್ಯಗಳು ಮಾಡುತ್ತಿರುತ್ತೆವೆ.ನಿತ್ಯವೂ ಒಕ್ಕರಿಸು ಸೊಂಟ ಕೈಕಾಲುಗಳ ನೋವಿಗೆ ಎಷ್ಟಂತ ಆರೈಕೆ ಮಾಡಿಕೊಳ್ಳುವದು.ಊಟ , ನಿದ್ರೆಯಂತಹ ದಿನನಿತ್ಯದ ಕಾಯಕಗಳಲ್ಲಿ ಮೈಕೈ ನೋವು ನಮ್ಮೊಂದಿಗೆ ಬೆರೆತು ನಮ್ಮಲ್ಲಿ ಒಂದಾಗಿದೆ.

ಶ್ರಮಜೀವಿ ಮಹಿಳೆಯರು ಕೂಲಿ ಕೆಲಸ ಮಾಡುವದರಿಂದ ಭಾರವಾದ ವಸ್ತುಗಳು ಎತ್ತುವದು ಇಳಿಸುದರಿಂದ ದೇಹ ದುರ್ಬಲ ವಾಗಿ ಅಥವಾ ಪೌಷ್ಟಿಕಾಂಶ ಗಳ ಕೊರತೆಯಿಂದ ದಿನವೂ ಮೈಕೈ ನೋವು ಭಾದಿಸುತ್ತದೆ. ಆದರು  ಅವರು ಅದನ್ನು ನಿರ್ಲಕ್ಷಿಸಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ದಿನವೂ ಶ್ರಮವಹಿಸುವದು ಅನಿವಾರ್ಯ. ಇನ್ನುಳಿದ ಮದ್ಯಮ ವರ್ಗದ ಗೃಹಿಣಿಯರು ಮನೆಯಲ್ಲಿ ಮುಂಜಾನೆಯಿಂದ ಪಾತ್ರೆ , ಬಟ್ಟೆ ,ಕಸ,ಮುಸುರೆ, ಅಡುಗೆ ಹೀಗೆ ಮುಗಿಯದ ಕೆಲಸಗಳ ಸರಣಿಯಲ್ಲಿ ಬಳಲುತ್ತ ಮೈಕೈ ನೋವು ಅನುಭವಿಸುತ್ತಾರೆ. ಮನೆಯಲ್ಲಿ ಮತ್ತು ಹೊರಗೆ ದುಡಿಯುವ ಉದ್ಯೋಗಸ್ಥ ಸ್ತ್ರೀ ಯರ ಬವಣೆ ಹೇಳತೀರದು.ಬೆಳಿಗ್ಗೆ ಮನೆಗೆಲಸ ಮುಗಿಸಿ ಹೊರಗೆ ದುಡಿದು ಮತ್ತೆ ರಾತ್ರಿ ಮನೆಯಲ್ಲಿ ದುಡಿಯುವ ಇಂತಹವರಿಗೆ ಮೈಕೈ ನೋವು ಭಾದಿಸದೆ ಇರಲು ಸಾದ್ಯವೇ..! ಕೆಲಸ ಕಾರ್ಯಗಳ ಒತ್ತಡವು ದಣಿವಿಗೆ ಕಾರಣವಾಗುತ್ತದೆ. ದಿನನಿತ್ಯದ ಬಿಡುವಿಲ್ಲದ ಕೆಲಸಕಾರ್ಯಗಳು ದೇಹವನ್ನು ಬಳಲಿಸಿ ಮೈಕೈನೋವಿಗೆ ಕಾರಣವಾಗುತ್ತವೆ.  .ದಿನವೆಲ್ಲ ಒಳಗೆ ಅವಿತಿರುವ ನೋವುಗಳು ಸಂ ಜೆಯಾಗುತ್ತಿದ್ದಂತೆ ದೇಹದ ಮೇಲೆ ದಾಳಿ ಮಾಡುತ್ತವೆ.ಇದನ್ನು ಶಮನ‌ಗೊಳಿಸಲು ಕೆಲವರು ಕುಡಿತದ ಮೊರೆ ಹೋಗುತ್ತಾರೆ.ಕೃಮೇಣ ಇದು ರೂಢಿಯಾಗಿ ಆರೋಗ್ಯ ಹದಗೆಡಲು ಪ್ರಾರಂಭಿಸುತ್ತದೆ, ಇದರೊಂದಿಗೆ ಆರ್ಥಿಕ ಪರಿಸ್ಥಿತಿಯೂ .

ಹೀಗೆ ಭಾದಿಸುವ ನೋವಿನ ಪರಿಹಾರಕ್ಕಾಗಿ ಡಾಕ್ಟರ್ ಎಂಬ ಆಪತ್ಭಾಂಧವನ ಹತ್ತಿರ ಹೋದರೆ ಮಹಾಶಯರು ರೋಗದ ಹೆಸರು ಸೂಚಿಸುವದೆ ತಡ ರಾಶಿ ಮಾತ್ರೆ ಬರೆದುಕೊಡುತ್ತಾರೆ.ಮೈಕೈ ನೋವೆಂದು ಹೇಳಿದರೆ , ಕೈ ನೋವೆ ಅಥವಾ ದೇಹದ ಯಾವ ಅಂಗದಲ್ಲಿ ನೋವಿದೆ ಎಂದು ಕೇಳುವ ವ್ಯವಧಾನವು ಇರದು ಅವರಿಗೆ. ನೇರವಾಗಿ ಕ್ಯಾಲ್ಸಿಯಂ ,ವಿಟಮಿನ್ , ಪ್ರೊಟಿನ್ ಮಾತ್ರೆಗಳು

 ಇಲ್ಲವೇ ನಿರೋಬಿಯನ್ ಇಂಜೆಕನ್ ಚುಚ್ಚಿ ಕಳಿಸುತ್ತಾರೆ.ರೋಗಿಗಳೊಂದಿಗೆ ಆಪ್ತ ವಾಗಿ ಮಾತಾಡಿ ರೋಗದ ಮೂಲ ಕಂಡು ಹಿಡಿದು ತಿಳಿಸಿದರೆ ರೋಗಿಗಳಿಗೆ ಎಷ್ಟೊ  ಸಮಾಧಾನವಾಗುತ್ತದೆ.ರೋಗಿಗಳನ್ನು ಬೇಗ ಸಾಗಿ ಹಾಕಿ ಮೊಬೈಲ್ ನೋಡುತ್ತ ಕುಳಿತುಕೊಳ್ಳುತ್ತಾರೆ.ಅದಕ್ಕೆ ಈ ಮೈಕೈ ನೋವಿಗೆಲ್ಲ ಡಾಕ್ಟರ್ ಮೋರೆಹೋಗದೆ ನಮ್ಮ ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು  ನಮ್ಮ ದೇಹ ಸಹಕರಿಸುವಷ್ಟೆ ಕೆಲಸ ಕಾರ್ಯಗಳು ಮಾಡುವದೊಳಿತು.

ಈ ಮೈಕೈ ನೋವಿಗೆ ಡಾಕ್ಟರ್ ಕೊಡುವ ಔಷಧಿಗಿಂತ ಒಬ್ಬರಿಗೊಬ್ಬರು ಹೇಳಿಕೊಂಡು ಸಹಾನುಭೂತಿ ತೋರಿಸುವದೆ ಉತ್ತಮ ಮದ್ದು. ಆದರೆ ಮನೆಯವರೆದುರು ಇದನ್ನು ತೋಡಿಕೊಳ್ಳಲಾಗದು.ನಿತ್ಯ ಸಾಯುವವರಿಗೆ ಅಳುವವರಾರು ಎಂಬಂತಾಗುತ್ತದೆ ಸ್ಥಿತಿ. ನಮ್ಮಂತೆ ಮೈಕೈ ನೋವಿನಿಂದ ಬಳಲುವ ಸಮಾನಮನಸ್ಕರೇ ನಮ್ಮ ನಮ್ಮ ಆಪ್ತ ಸಮಾಲೋಚಕರು.ಅದಕ್ಕೆ ಸಂಜೆಯಾಗುತಿದ್ದಂತೆ ಹರಟೆ ಕಟ್ಟೆಯಲ್ಲಿ ಪವಡಿಸಿ ಮೈಕೈ ನೋವುಗಳ ವಿನಿಮಯವಾದರೆ ಮನೆಗೆ ಬರುವಷ್ಟರಲ್ಲಿ ಎಪ್ಪತ್ತು ಪ್ರತಿಶತ ನೋವು ಮಾಯವಾಗಿರುತ್ತದೆ.

ರೋಗ ಬಂದ ಮನುಷ್ಯ ಊಟ ತಿಂಡಿ ಬಿಟ್ಟು ಮಾಂಕಾಗಿದ್ದರೆ ನೋಡುವವರಿಗೂ ಅವರ ರೋಗದ ಲಕ್ಷಣಗಳು ಗೋಚರಿಸುತ್ತವೆ.ಆದರೆ ಈ ಮೈಕೈ ನೋವೆಂಬ ರೋಗಕ್ಕೆ ಯಾವದೇ ಲಕ್ಷಣಗಳಿಲ್ಲ.ಊಟ ತಿಂಡಿ ಮಾಡುತ್ತ ಎಲ್ಲಾ ಕೆಲಸಕಾರ್ಯಗಳು ಮಾಡುತ್ತ ಮತ್ತೆ ಮೈಕೈ ನೋವು ಎಂದು ಕೊಸರಾಡುತ್ತ, ಹೇಳುವವರಿಗೂ ಕೇಳುವವರಿಗೂ ಮತ್ತು ನೋಡುವವರಿಗೂ ಇದು ಸಾಮಾನ್ಯ. ಅದಕ್ಕೆ ಮೈಕೈ ನೋವೆಂಬ ರೋಗಕ್ಕೆ ನಿರಾದರವೇ ಹೆಚ್ಚು.

ವಯಸ್ಸು ಸರಿಯುತಿದ್ದಂತೆ ರೋಗಗಳು ಒಂದೊಂದಾಗಿ ದಾಂಗುಡಿ ಇಡಲು ಶುರುವಾಗುತ್ತದೆ. ಆದರೆ ಈಗ ರೋಗಗಳಿಗೆ ವಯಸ್ಸಿನ ತಾರತಮ್ಯ ಉಳಿದಿಲ್ಲ.ಹರೆಯದವರೆ ಹೆಚ್ಚಾಗಿ ರೋಗಗಳಿಗೆ ತುತ್ತಾಗುತ್ತಿರುವದು ವಿಪರ್ಯಾಸ. ಯಾವ ಕೆಲಸ ಕಾರ್ಯಗಳನ್ನು ಮಾಡಬಯಸದ ಯುವ ಜನಾಗ

 ಸದಾ ಟಿ ವಿ , ಮೋಬೈಲ್ ನೋಡುತ್ತ ಕಾಲಕಳೆಯುವ ಪರಿಸ್ಥಿತಿ ಅವರನ್ನು ಆಲಸಿ ಮತ್ತು ರೋಗಿಗಳನ್ನಾಗಿ ಮಾಡುತ್ತಿದೆ.ಮನೆಯಲ್ಲಿ ಏನಾದರು ಕೆಲಸ ಹೇಳಿದರೆ ಅವರಿಗೆ ಮೈಕೈ ನೋವು ಶುರುವಾಗುತ್ತದೆ. ಮೈಗಳ್ಳರಿಗೂ ಮತ್ತು ಈ ಮೈಕೈ ನೋವಿಗೂ ಬಹಳ ಆಪ್ತ ಸಂಬಂಧ.

ಮೈಕೈ ನೋವೆಂಬುದು ಕೇವಲ ಹೆಂಗಸರಿಗೆ ಭಾದಿಸುವ ರೋಗ ಎಂದು ತಿಳಿಯಬೇಡಿ.ಗಂಡಸರಿಗೂ ಭಾದಿಸುತ್ತದೆ.ಅವರು ಶ್ರಮಜೀವಿಗಳು ಪಾಪ. ಆದರೆ ಮೈಕೈ ನೋವೆಂದು ಅವರಂತೆ ಮೈ ಎಲ್ಲಾ ಝಂಡು ಬಾಮ್ ಹಚ್ಚಿಕೊಂಡು ದಿನವೆಲ್ಲ ನಾಲೈದು ಸಲ ಚಾ ಕುಡಿಯುತ್ತ ಮಲಗಲು ಹೆಂಗಸರಿಗೆ ಆಗದು. ಮನೆಗೆಲಸಗಳ ಹೊರೆ ಅವಳನ್ನು ಮೈಕೈ ನೋವೆಂದು ಮಲಗಲು ಬಿಡದು.

ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗಲು ಮನಸ್ಸಿಲ್ಲದ ಕಾರಣ ಏನಾದರೂ ಒಂದು ಕುಂಟು ನೆಪ ಹುಡುಕುತಿದ್ದೆವು.ಆಗ ಸುಲಭವಾಗಿ ಕೈಗೆ ಸಿಗುತಿದ್ದ ಅಂಗ ಹೊಟ್ಟೆ. ಹೊಟ್ಟೆ ಮೇಲೆ ಕೈ ಇಟ್ಟು ಮುಖ ಕಿವಿಚಿದರೆ ಸಾಕು ಎದುರಿವರು ಶಾಲೆಗೆ ಚಕ್ಕರ ಹಾಕುವ ನಮ್ಮ ಮನಸ್ಥಿತಿ ಉಹಿಸಿ ಬಿಡುತಿದ್ದರು.ನಮ್ಮ ಮನೆಯಲ್ಲಿನ ಏಳು ವರ್ಷದ ಮಗು ಒಂದು ಶಾಲೆಗೆ ಹೋಗಲು ಮನಸ್ಸಿಲ್ಲದೆ ಮೈ ಎಲ್ಲಾ ಮಣಿಸುತ್ತ ಮೈಕೈ ನೋವು ಶಾಲೆಗೆ ಹೋಗಲ್ಲ ಎಂದಿತು. ಅದರ ಕುಂಟು ನೆಪ ನಗು ತರಿಸಿತು.

ಸೌಂಡ್‌ ಮೈಂಡ್ ಈಜ್ ಸೌಂಡ್ ಬಾಡಿ ಎಂಬ ಹೇಳಿಕೆಯನ್ನು ಪರಿಗಣಿಸಬೇಕು.ಮಾನಸಿಕ ಸ್ಥಿತಿ ಉತ್ತಮ ವಾಗಿದ್ದರೆ ದೈಹಿಕ ಸ್ಥಿತಿಯು ಉತ್ತಮವಾಗೆ ಇರುತ್ತದೆ.ಮನಸ್ಸಿನ ಭಾವನೆಗಳು ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಮನಸ್ಸು ಉಲ್ಲಾಸ ಭರಿತವಾಗಿದ್ದರೆ ಕೆಲಸಗಳ ಹೊರೆ ಹಗುರವೇ ಎನಿಸುವದು.ಇಲ್ಲದಿದ್ದರೆ ದೈನಂದಿನ ಕೆಲಸಗಳು ಹೊರೆ ಎನಿಸುತ್ತವೆ.ರೋಗ ಎನ್ನುವುದು ನಮ್ಮ ಮನಸ್ಸಿನ ಭಾವನೆ.ಇದೆಯೋ ಇಲ್ಲವೋ ನಿರ್ಧಾರವೂ ನಮ್ಮದೇ ಆಗಿರುತ್ತದೆ. ದೇವನೂರರ

ಒಡಲಾಳದ ಸಾಕವ್ವನ ಮೊಮ್ಮೊಗ ದುಪ್ಟಿಕಮಿಷ್ನರ್ ಪಾತ್ರ ನನಗೆ ಬಹಳ ಕಾಡುತ್ತದೆ. ತನಗೆ ಹುಟ್ಟಿನಿಂದ ಏನೋ ರೋಗ ಇದೆ ಎಂದು ಭಾವಿಸುವ ಮನೆಯವರು ಮತ್ತು ಅದೇ ಭ್ರಮೆಯಲ್ಲಿ ರೋಗಿಯಂತೆ ಜೀವಿಸುವ ಅವನ ಪಾತ್ರ ಚಿಂತನೆಗೆ ಹಚ್ಚುತ್ತದೆ. ನಾವು ಕೂಡ ಸಾಕವ್ವನ ಮೊಮ್ಮೊಗನಂತೆ ಇರಲಾರದ ರೋಗದ ಭ್ರಮೆಯಲ್ಲಿ ಬಳಲುತ್ತಿರುತ್ತೆವೆ.ಯಾವದೇ ರೋಗವಾದರು ಸರಿ ಅದು ಮನಸ್ಸಿನ ರೋಗವಾಗಲು ಬಿಡಬಾರದು.


    ‌‌‌‌‌      ಜ್ಯೋತಿ , ಡಿ.ಬೊಮ್ಮಾ.

3 thoughts on “‌‌‌‌ಜ್ಯೋತಿ , ಡಿ.ಬೊಮ್ಮಾ…ಲಲಿತ ಪ್ರಬಂಧ

  1. ಈ ಪ್ರಬಂಧದಲ್ಲಿ ಮೈಕೈ ನೋವಿಗೆ ಕಾರಣ ಪರಿಹಾರ ಸಂದರ್ಭ ಎಲ್ಲವನ್ನೂ ಸೊಗಸಾಗಿ,ಸ್ವಾರಸ್ಯಕರವಾಗಿ ವಿವರಿಸಿದ್ದೀರಿ…ಧನ್ಯವಾದಗಳು

Leave a Reply

Back To Top