ಡಾ. ನಿರ್ಮಲ ಬಟ್ಟಲ ಕವಿತೆ-ಕಿತ್ತ ಹೂವಿನ ಗಿಡ

ಕಾವ್ಯಸಂಗಾತಿ

ಕಿತ್ತ ಹೂವಿನ ಗಿಡ

ಡಾ. ನಿರ್ಮಲ ಬಟ್ಟಲ

ಕಿತ್ತರೇನು ಗೆಳತಿ
ಅಂಗಳದಿ ನೀ ನೆಟ್ಟ
ಪ್ರೀತಿಯ
ಹೂ ಗಿಡ ಬಳ್ಳಿ….

ಅಕ್ಕರದಿ ಬೆಳಸಿದ
ನಿನಗೆ ಸಂತಸ
ಅಂಗಳಕೆ ಶೋಭೆ
ಹೂ ಕೊಟ್ಟ ಗಿಡ ಬಳ್ಳಿ..‌..

ಕಿತ್ತು ಗಿಡಕೆ
ಬೇರು ಬಿಡಲು
ಜತನದಿಂದ ನೆಡಲು
ಜಾಗ ಕೊಡಲಿ…..

ನಿನ್ನಂತೆ ಅಕ್ಕರದಿ
ನೀರೆರೆದು ಪೋಷಿಸಲಿ
ಕಿತ್ತಗಿಡದಲ್ಲಿ ಮತ್ತೆ
ಹೂ ನಗಲಿ…

ಬೇರೂರಿದ ಗಿಡದಲ್ಲಿ
ನಾಲ್ಕಾರ ಹೂ ತರು ಬಿಡಲಿ
ಬರಿದಾದ ನಿನ್ನ
ಅಂಗಳ ನೆನಪಾಗಲಿ….

ತಪ್ಪು ಅರಿವಾಗಿ
ತರುಗಳ ತಂದು
ಮರಳಿ ನಿನಗೆ
ಉಡುಗೊರೆಯಾಗಿ ಕೊಡಲಿ….

ಸಂಕಟಪಡದಿರು ಗೆಳತಿ
ಕರುಳ ಬಳ್ಳಿಯ ಹೆರವರಿಗೆ
ಕೊಟ್ಟು ಕಣ್ಣೋರಸಿಕೊಂಡ
ಅವ್ವ ನೆನಪಾಗುತ್ತಾಳೆ …

ಕರುಳಬಳ್ಳಿಯಂತೆ ಬೆಸೆಯಲಿ
ಹೂ ಬಳ್ಳಿ ಮತ್ತೆ ಅಂಗಳದಿ
ಹೂ ನಗಲಿ ಮನ
ಹೂ ಬನವಾಗಲಿ….


Leave a Reply

Back To Top