ರಾಯರ ರೋಮ್ಯಾನ್ಸ್-ಬಿ.ಟಿ.ನಾಯಕ್ ಕಥೆ

ಕಾವ್ಯ ಸಂಗಾತಿ

ರಾಯರ ರೋಮ್ಯಾನ್ಸ್

ಬಿ.ಟಿ.ನಾಯಕ್

ಅದೊಂದು ದಿನ ಮುಸ್ಸಂಜೆಯಲ್ಲಿ ಮೆಲ್ಲಗೆ ಕತ್ತಲೆಯ ಛಾಯೆ ಏರತೊಡಗಿತು. ಆಗ  ಮಸುಕಾಗಿದ್ದ                   ಚಂದ್ರಮ ಇಣುಕಿ ನೋಡುತ್ತಿದ್ದ. ಅದನ್ನು ಗಮನಿಸಿದ ರಾಯರು ಇಂದು ಬೇಗ ಊಟದ ಶಾಸ್ತ್ರ ಮುಗಿಸಿ ಛಾವಣಿ ಮೇಲೆಯೇ ಮಲಗಿಕೊಳ್ಳಬೇಕೆನಿಸಿತು. ಆಗ ಶ್ರೀಮತಿಯವರ ಹತ್ತಿರ ಹೋಗಿ;

‘ಏಕೋ ಹಸಿವು ಅನ್ನಿಸುತ್ತಿದೆ ಕಣೆ.  ಏನಾದರೂ ಹಗುರವಾದ ತಿಂಡಿ ಕೊಟ್ಟು ಬಿಡು’ ಎಂದಾಗ ಶ್ರೀಮತಿ; ಏನ್ರೀ, ಹೀಗೆ ಏಳು ಗಂಟೆಗೇನೆ ಹಸಿವು ಎಂದರೇ ಹೇಗೆ ? ತಿಂಡಿ ಮಾಡಬೇಕು ತಾನೇ ? ಅದಕ್ಕೆ ಸಮಯ ಬೇಕು ತಾನೇ ? ನೀವು ಗಂಡಸರಿಗೆ ಏನೂ ಅರ್ಥವಾಗೋದಿಲ್ಲ. ಬಂದು ತಟ್ಟೆಯ ಮುಂದೆ ಕುಳಿತುಕೊಳ್ಳುವುದೊಂದೇ ಗೊತ್ತು !

‘ಅಯ್ಯೋ, ಕೋಪ ಬೇಡ್ವೇ.  ಏಕೋ ಹಸಿವು ಅನ್ನಿಸಿತು, ಹಾಗಾಗಿ ನಿನಗೆ ಹೇಳಬೇಕಾಯಿತು.  ಇದು ತಪ್ಪು ಅಂತೀಯಾ ?’ ಎಂದರು.

‘ಯಾವುದು ಸರಿ ಯಾವುದು ತಪ್ಪು ಎಂದು ನಿಮಗೆ ನೀವೇ ಕೇಳಿಕೊಳ್ಳಿ. ನನಗೆ ಇನ್ನೂ ಬಹಳ ಕೆಲಸ ಇವೆ. ಅವೆಲ್ಲ ಮುಗಿದಾದ ಮೇಲೆ ತಿಂಡಿ ಮಾಡಲಿಕ್ಕೆ ಹೋಗ್ತೇನೆ’ ಎಂದಳು ಶ್ರೀಮತಿ.

‘ಸರಿ….ಸ್ವಲ್ಪ ಹೊತ್ತು ನಾನು ಹೊರಗೆ ತಿರುಗಾಡಿ ಬರಲೇ ?’

‘ಯಾಕೆ ? ಕುರುಕುಲು ತಿಂಡಿ ಮೇಯೋದಕ್ಕಾ ?’ ಎಂದು ಮೂದಲಿಸಿದಳು.

‘ಅಯ್ಯೋ ಮಹಾರಾಯಿತಿ, ನನ್ನ ಮೇಲೆ ಅದೆಷ್ಟು ತಪ್ಪು ತಿಳುವಳಿಕೆ ?’. ಎಂದರು ರಾಯರು.

‘ಹಸಿವು ಆಗಿದೆ ಅಂದವರೇ ನೀವು, ಹೊರಗೆ ಹೋಗುತ್ತೇನೆ ಎನ್ನೋರು ನೀವೇ , ಹಾಗಾಗಿ ಹೊರಗೆ ಹೋಗಲಿಕ್ಕೆ ಮತ್ತೇನು ಇರುತ್ತೆ  ?’ ಎಂದಳು.

‘ಸರಿ ನಾನು ಹೊರಗೆ ಹೋಗೋದಿಲ್ಲ ಬಿಡು, ಮತ್ತೇ ಏನಾದರೂ ಸ್ವಲ್ಪ ವ್ಯವಸ್ಥೆ ಮಾಡು’ ಎಂದರು.

‘ನೋಡಿ, ಈಗ ಏನಾದರೂ ತಿಂದರೆ ಆಮೇಲೆ ಊಟ ಸೇರುವುದಿಲ್ಲ.  ಹಾಗಾಗಿ ಬೇಡ, ಸ್ವಲ್ಪ ಹೊತ್ತು ಕಾಯಿರಿ. ಬೇಕಾದ್ರೆ ನನಗೆ ಕೆಲಸದಲ್ಲಿ ನೀವು ಸಹಾಯ ಮಾಡಿದರೆ, ನಿಮಗೆ ಆದಷ್ಟು ಬೇಗ ತಿಂಡಿ ಸಿಗುತ್ತದೆ. ‘ ಎಂದಳು.

‘ಆಯಿತು.. ಅದೇನು ಮಾಡಬೇಕು ಹೇಳು’ ಎಂದಾಗ;

‘ಹೆಚ್ಚಿನದೇನೂ ಬೇಡ, ನೀವು ಬೆಡ್ ರೂಮ್ ಮತ್ತು ಡ್ರಾಯಿಂಗ್ ರೂಮಿನಲ್ಲಿ ಸ್ವಲ್ಪ                       ಅಸ್ತವ್ಯಸ್ತವಿದ್ದುದನ್ನು ಸರಿಪಡಿಸಿದರೆ ಸಾಕು, ನಾನು ಒಂದರ್ಧ ಗಂಟೆಯಲ್ಲಿ ಪೊಂಗಲ್ ಮತ್ತು ಕೇಸರಿ ಬಾತ್ ಮಾಡ್ತೇನೆ, ಜೊತೆಗೆ ಹಪ್ಪಳ ಸಂಡಿಗೆನೂ ತಯಾರು ಮಾಡುತ್ತೇನೆ’ ಎಂದಾಗ ರಾಯರು ತಲೆ ಹಾಕಿ ಬೆಡ್ ರೂಮಿನೊಳಕ್ಕೆ ಹೋದರು.

ಶ್ರೀಮತಿ ತಿಂಡಿಗಳನ್ನು ವ್ಯವಸ್ಥಿಸಿ ತಯಾರಿಸುವದರಲ್ಲಿ, ರಾಯರು ಅವರ ಪಾಲಿನ ಯೋಜಿತ ಕಾರ್ಯಕ್ರಮಗಳನ್ನು ಮುಗಿಸಿ ಶ್ರೀಮತಿಯನ್ನು ಭೇಟಿ ಮಾಡಲು ಬಂದವರೇ ;

‘ನೋಡು ಕಣೆ, ನನ್ನ ಕೆಲಸ ಮುಗಿಯಿತು. ಇನ್ನು ನೀನು ಪ್ಲೇಟು ಹಾಕಿ ಬಡಿಸುವುದೊಂದೇ ಕಾರ್ಯಕ್ರಮ’ ಎಂದರು. ಆಗ ಶ್ರೀಮತಿ;

‘ಇದೇ ಈಗ ಬಿಸಿ ಬಿಸಿ ತಿಂಡಿ ಮಾಡಿದ್ದೇನೆ. ಅವನ್ನೆಲ್ಲಾ ಹೊಂದಿಸಿ ತರ್ತೇನೆ, ನೀವು ಪ್ಲೇಟು ಇಟ್ಟು ಕುಡಿಯಲಿಕ್ಕೆ ನೀರಿನ ವ್ಯವಸ್ಥೆ ಮಾಡಿರಿ’ ಎಂದಳು.

‘ಆಯಿತು ‘ ಎಂದು ಊಟದ ಟೇಬಲಿನ ಕಡೆಗೆ ಹೋಗಿ, ಹೇಳಿದ್ದನ್ನು ವ್ಯವಸ್ಥೆ ಮಾಡಿ ಅಲ್ಲಿಯೇ ಆಸೀನರಾದರು.                                                         ಆಗ ಊಟದ ಎಲ್ಲಾ ಐಟಂಗಳನ್ನು ಶ್ರೀಮತಿ ಟೇಬಲಿಗೆ ತಂದರು.

ಆಮೇಲೆ, ಇಬ್ಬರೂ ಕುಳಿತುಕೊಂಡು ರುಚಿ ರುಚಿಯಾದ ಪೊಂಗಲ್ ಮತ್ತು ಕೇಸರಿ ಬಾತ್ ಚಪ್ಪರಿಸಿದರು.  ಆಗ ರಾಯರು ಹೀಗೆ ಹೇಳಿದರು;

‘ತಿಂಡಿ ಸೂಪರ್ ಕಣೆ.. ಯಾಕೋ ಇಂದು ಟೆರೇಸ್ ಮೇಲೆ ಒಂದೆರಡು ಗಂಟೆ ನಾನೂ ನೀನೂ ಕುಳಿತುಕೊಂಡು ಹರಟೆ ಹೊಡೆಯ ಬೇಕೆನ್ನಿಸುತ್ತದೆ, ಛಾವಣಿ ಮೇಲೆ ಹೋಗೋಣವಾ ?’  ಎಂದಾಗ;

‘ಸರಿ.. ಆದರೇ, ನನ್ನ ಕೆಲಸ ಮುಗಿದ ಮೇಲೆ’ ಎಂದಳು.

‘ಅಯ್ಯೋ.. ಬೇಗ ಮುಗಿಸಿ ಬಾರೆ’ ಎಂದರು.

‘ಸರಿ..ನೀವು ಹೋಗಿ.. ನಾನು ಒಂದು ಹದಿನೈದು ಇಪ್ಪತ್ತು ನಿಮಿಷದಲ್ಲಿ ಬರ್ತೇನೆ ‘ ಎಂದಳು.                                          

ರಾಯರಿಗೆ ಖುಷಿ ಆಯಿತು. ಅವರು ನೇರ ಬೆಡ್ ರೂಮಿಗೆ ಹೋಗಿ ಒಂದು ಮೆತ್ತನೆಯ ಕಾರ್ಪೆಟ್ ಮತ್ತು ಎರಡು ದಿಂಬು ತೆಗೆದುಕೊಂಡು, ಮೆಟ್ಟಲುಗಳನ್ನು ಏರುತ್ತಾ ಮೇಲ್ಛಾವಣಿಗೆ ಬಂದರು.  ಅಲ್ಲಿ ಹೋಗಿ ಆಕಾಶದ ಕಡೆಗೆ ಕಣ್ಣು ಹಾಯಿಸಿ ಕಂಡ ದೃಶ್ಯ ನೋಡಿ ಆನಂದಗೊಂಡರು. ಚಂದಿರನು ಗಾಳಿಯಲ್ಲಿ ತೇಲಿ ಹೋಗುವಂತಿತ್ತು.  ವಾತಾವರಣದ ಗಾಳಿ ಚುಮು ಚುಮು ಎಂದು, ಕಾರಂಜಿಯ ಸಣ್ಣ  ತೂತುಗಳಿಂದ ಎರಚುವ ನೀರಿನಂತಿತ್ತು. ಈ ಅಲ್ಹಾದಕರ ವಾತಾವರಣದಲ್ಲಿ ಶ್ರೀಮತಿಯ ಜೊತೆಗೆ ಕಾಲ ಹರಣ ಅದೇಕೋ ಅಪ್ಯಾಯ ಎನಿಸುತ್ತದೆ ಎಂದು ಕೊಂಡರು.  ಆಕೆ ಆದಷ್ಟು ಬೇಗ ಬರಲಿ ಎಂದು ತಂದ ಕಾರ್ಪೆಟ್ ಹಾಸಿ, ಎರಡು ದಿಂಬು ಜೋಡಿಸಿದರು.  ಏನೋ ಆಕೆ ಬರುವದರೊಳಗೆ ಆಕಾಶದೆಡೆ  ಒಮ್ಮೆ ಅಂಗಾತ ಮಲಗಿಕೊಳ್ಳಬೇಕೆನಿಸಿತು.  ಹಾಗಾಗಿ, ಎರಡೂ  ಕೈ ಮತ್ತು ಕಾಲುಗಳನ್ನು ಚಾಚಿಕೊಂಡು ಆಕಾಶವನ್ನೇ ನೋಡುತ್ತಾ ಆನಂದಿಸಿದರು. ಆಮೇಲೆ ಎದ್ದು ಕುಳಿತು ಸುತ್ತಲೂ ನೋಡಿದರು. ತಾವು ತಮ್ಮ ಕೈಯಾರೆ ಬೆಳೆಸಿದ ಹೂವಿನ ಸಸಿಗಳ ಕಡೆ ಲಕ್ಷ್ಯ ಹೋಯಿತು. ವಿಧವಿಧವಾದ ರಂಗು ರಂಗಿನ ಹೂಗಳು ಆ ತಂಪು ಗಾಳಿಗೆ ತಲೆಯನ್ನು  ಹಾಕುತ್ತಿದ್ದವು. ಅಲ್ಲಿಯ ಕಾಮ ಕಸ್ತೂರಿ ಸಸ್ಯ ತನ್ನ ಪರಿಮಳ ಸೂಸುತ್ತಿತ್ತು.

ಈ ಮಧ್ಯೇ ಅವರು ಶ್ರೀಮತಿ ಬರುವದನ್ನು ಪದೇ ಪದೇ ಮೇಲ್ಛಾವಣಿಯಿಂದ ಇಣುಕಿ ನೋಡುತ್ತಿದ್ದರು.  ಆದರೇ, ಆಕೆ ಇನ್ನೂ ಬರಲೇ ಇಲ್ಲ.  ಹೋಗಿ ಕರೆದುಕೊಂಡು ಬರಬೇಕೆಂದರೆ, ನಲವತ್ತು ಮೆಟ್ಟಿಲುಗಳನ್ನು ಇಳಿಯಬೇಕು.  ಆದರೇ, ಅದು ಈಗ ಆಗದು.  ಹೇಗೋ ಅವಳ ದಾರಿ ಇನ್ನೂ ಸ್ವಲ್ಪ ಹೊತ್ತು ಕಾದು ನೋಡಬೇಕು ಎಂದು ಅಂದುಕೊಂಡರು.’    ಅವರಿಗೋ ಏಕೋ ಇಂದು ರೋಮ್ಯಾನ್ಸ್ ಬಹಳೇ ಉಕ್ಕಿ ಬರ್ತಾ ಇದೆ.  ಅದನ್ನು ಹೇಳಿಕೊಳ್ಳಲು ಬಹಳೇ ತವಕ.  ಆದರೆ, ಅವಳು ಇನ್ನೂ ಬರಲಿಲ್ವೆ ?.  ಈ ಹೆಂಗಸರೇ ಹೀಗೆ ಮದುವೆಯಾಗಿ ಸಂಸಾರ ಮಾಡುವ ಗಂಡನನ್ನೇ ಕಾಯಿಸಿ ಕೊಲ್ಲುತ್ತಾರೆ ಎಂದನಿಸಿತು.  ಶ್ರೀಮತಿ ಬಂದ ಹಾಗೆ ಏನೋ ಸ್ಪಷ್ಟವಾದ ಶಬ್ದ ಕೇಳಿಸಿದ ಹಾಗೆ ಅನಿಸಿತು. ಆಗ ಅವಳನ್ನು ಸ್ವಾಗತಿಸಲು ಬರಿಗೈಯಲ್ಲಿ ಹೋಗಲು ಇಷ್ಟವಿಲ್ಲವೆಂದು ಅಲ್ಲಿಯೇ ಗುಲಾಬಿ ಹೂವೊಂದು ಕಿತ್ತು ಕೊಂಡು, ಆಕೆ ಬರುವ ದಾರಿಯಲ್ಲಿ ನಿಂತರು. ಆದರೇ, ಇನ್ನೊಮ್ಮೆ ಮುಗುದೊಮ್ಮೆ ಇಣುಕಿ ನೋಡಿದಾಗ ಕಾಣಲೇ ಇಲ್ಲ.  ಇವರಿಗೆ ತಾಳ್ಮೆ ತಪ್ಪಿ ತಡೆಯಲಾಗಲಿಲ್ಲ.  ಇನ್ನೇನು ನಲವತ್ತು ಮೆಟ್ಟಿಲುಗಳನ್ನು ಇಳಿದೇಬಿಡುತ್ತೇನೆ ಎಂದು ಹೆಜ್ಜೆ ಹಾಕಿದಾಗ;

ಶ್ರೀಮತಿ ಎದುರಿಗೇನೇ ಬಂದರು.  ಇವರ ಮುಖ ಅರಳಿತು. ಆಗ ಕಿತ್ತ ಹೂವನ್ನು ಆಕೆಗೆ ಕೊಡಬೇಕೆಂದರು. ಆದರೆ, ಕೊಡುವ ಧೈರ್ಯವಾಗಲಿಲ್ಲ.  ಹಾಗಾಗಿ, ಅದನ್ನು ಬೆನ್ನ ಹಿಂದೆ ಅಡಗಿಸಿಕೊಂಡರು. 

ಕೊಂಚ ಕೃತಕ ನಗೆ ಬೀರುತ್ತಾ ;  

‘ಬರಬೇಕು..ಬರಬೇಕು. ಏನು ಶ್ರೀಮತಿಯವರು ಕೊಂಚ ತಡ ಮಾಡಿದಂತಿದೆ ?’ ಆಗ ಧಿಡೀರನೆ ಶ್ರೀಮತಿ;

‘ತಡನಾss ? ಸಾಯುತ್ತಾ ಓಡಿ ಬಂದೆ’ ಎಂದಳು ಸ್ವಲ್ಪ ಕೋಪದಿಂದ.

‘ಅರೇ ! ಹಾಗೇಕೆ ಕೋಪ…ತಾಪ ?  ತೊಂದರೆ ಏನು ಬಂತು ?’

‘ಹಾಗೆಯೇಬರಲಿಕ್ಕೆ  ಆಗುತ್ತದೆಯೇ.  ಮೆನ್  ಗೇಟಿನ ಬಾಗಿಲು ಭದ್ರ ಮಾಡಬೇಕು,             ಎಲ್ಲ ಫ್ಯಾನುಗಳನ್ನು ತೆಗೆಯ ಬೇಕು, ಊಟವಾದ ತಟ್ಟೆಗಳನ್ನು ತೊಳೆಯುವ ಕೋಣೆಯಲ್ಲಿ

ಸೇರಿಸಬೇಕು. ಅದರಲ್ಲಿ ನೀವು ಬರುವಾಗ ಏನು ಮಾಡಿದ್ರೋ ಏನೋ ‘ಹಾಲ್’ ನಲ್ಲಿ ನೀರು ಚೆಲ್ಲಿತ್ತು. ಅದನ್ನು ಕೂಡ ಸರಿ ಮಾಡಿ ಬಂದೆ. ನೀವಾದ್ರೋ ಹಾಗೆಯೇ ಓಡಿ ಬಂದು ಬಿಟ್ರೀ ‘ ಎಂದಳು.

‘ಆಯಿತು..ಇನ್ನೇನು ಉಳಿದಿಲ್ಲ ತಾನೇ ?’.

‘ಎಲ್ಲ ಆಯಿತು ಅನ್ಕೊಂಡಿದ್ದೇನೆ. ಆಮೇಲೆ ಏನು ನೆನಪು ಬರುತ್ತೋ ಏನೋ ?’ ಎಂದಳು.

ಇಷ್ಟೆಲ್ಲ ಆಕೆ ಹೇಳಿದ ಮೇಲೆ ಏರುತ್ತಿದ್ದ ಅವರ ಉತ್ಸಾಹದ ಮಟ್ಟ ಕೊಂಚ ಮಟ್ಟಿಗೆ ಕೆಳಗೆ

ಇಳಿಯುತ್ತಿದೆಯೋ ಏನೋ ಅನ್ನಿಸಿತು.                                                                          ಆದರೂ ಅದನ್ನು ತೋರಿಸಿಕೊಳ್ಳದೆ ಮತ್ತೇ ಶ್ರೀಮತಿಯನ್ನು ರೋಮ್ಯಾಂಟಿಕ್ ಆಗಿ ಪ್ರಶ್ನಿಸಿದರು;

‘ಏನು, ಶ್ರೀಮತಿಯವರು ಸ್ವಲ್ಪ ಸುಧಾರಿಸಿಕೊಂಡು ಈ ಹೊರ ಮಾಳಿಗೆಯ ಮೇಲಿರುವ ಸಸ್ಯ ರಾಶಿಗಳು ಹೂಗಳು ಮತ್ತು ಅವುಗಳ ನಲಿವಿಕೆ ನೋಡಿ ಆನಂದ ಪಡಬಹುದಲ್ಲ ? ಅಲ್ಲದೇ ಇಲ್ಲಿಯ ತಂಪಾದ ಗಾಳಿ ಮತ್ತು ಹೂವಿನ ಪರಿಮಳ ಇವೆಲ್ಲ ನಿಮಗೆ ಮುದ ನೀಡುತ್ತಿರಬಹುದಲ್ಲವೇ .?’ ಎಂದಾಗ ಅವಳು ;

‘ಇವೇನು ನನಗೆ ಹೊಸದಾ ?  ನಾನು ಬಂದು ಆಗಲೇ ಮೂವತ್ತು ವರ್ಷ ಆಯಿತು ಕಣ್ರೀ, ದಿನಾಲೂ ಬೆಳಗ್ಗೆ ಇವಕ್ಕೆ ನಾನೇ ನೀರು ಹಾಕುತ್ತೇನೆ.  ಬರೀ ಸಸಿಗಳನ್ನು ನೆಟ್ಟರೇ  ಸಾಕಾ, ಅವನ್ನು ಸರಿಯಾಗಿ ಬೆಳೆಸಬೇಕು.  ಅದನ್ನು ನಾನು ಮಾಡಿದ್ದೇನೆ, ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿದಳು.

‘ಅಲ್ವೇ , ನಾನು ಬೆಳೆಸಲಿ ಅಥವಾ ನೀನಾದರೂ ಬೆಳೆಸಲಿ, ಅವುಗಳ ಚಂದದ ಸ್ವಾದವನ್ನು ನಾವಿಬ್ಬರೂ ಸವಿಯ ಬೇಡ್ವೇ ?’

‘ಬಿಡ್ರೀ , ಹೊಸದೇನಾದ್ರೂ ಇದ್ರೇ ಹೇಳಿ, ಈ ಹಳೆ ಡೈಲಾಗ್  ಮತ್ತೆ ಮತ್ತೆ ಹೇಳ ಬೇಡಿ ‘ ಎಂದಳು.

‘ಹೋಗ್ಲಿ ಬಿಡು, ತಂಗಾಳಿಯಾದ್ರೂ ನಿನ್ನ ಮೈ ತಟ್ಟುತ್ತಿದೆಯಾ ? ಮೇಲೆ ಚಂದ್ರಮನ ಸೊಗಸು

ಹೇಗಿದೆ ? ಸ್ವಲ್ಪ ಕತ್ತೆತ್ತಿ ನೋಡು’. ಎಂದಾಗ;

‘ಏನ್ರೀ ಇದು,  ಇಷ್ಟು ಹೊತ್ತು ಸಾಯುವ ಹಾಗೆ ಕೆಲಸ ಮಾಡಿ ಬಂದು, ಮೇಲೆ ನೋಡು, ಕೆಳಗೆ ನೋಡು, ಅದು ನೋಡು, ಇದು ನೋಡು ಅಂದ್ರೇ ಏನರ್ಥ ?’

‘ಅಲ್ವೇ, ಈ ಹೂಗಳಿಂದ ಕಣ್ಣುಗಳು ಇಂಪಾಗುತ್ತವೆ, ತಂಗಾಳಿ ಮೈಗೆ ಸೋಕಿದಾಗ ಮೈ ನವಿರೇಳುತ್ತದೆ.ಚಂದ್ರಮ ನಮಗೆ ತಂಪು  ಕೊಡ್ತಾನೆ ‘ ಏನ್ನೋವಾಗ ಮದ್ಯದಲ್ಲಿ ಬಾಯಿ ಹಾಕಿ;

‘ಅಯ್ಯೋ, ಅದು ಹೋಗಲಿ  ಬಿಡ್ರೀ, ನನ್ನ ಮರೆವಿಗೆ ಬೆಂಕಿ ಹಾಕ ! ನಾನು ಮರೆತೇ ಬಿಟ್ಟಿದ್ದೆ.                              

ಈಗ ನೆನಪಾಯುತು ನೋಡಿ’ ಎಂದಳು.

‘ಈ ಶುಭ ಸಂಜೆಯಲ್ಲಿ ಏನು ನೆನಪಾಯಿತೇ ?’ ಎಂದು ರಾಯರು ಕೇಳಿದಾಗ;

‘ಅದೇ… ಮನೆಯಲ್ಲಿ  ಬಹಳೇ ದಿನಸಿ ಖಾಲಿಯಾಗಿವೆ. ಈಗ ಪಟ್ಟಿ ಮಾಡ್ಬಿಡಿ ನಾಳೆ ಬೆಳಗ್ಗೆ     ತರುವೀರಂತೆ’ ಎಂದಳು.

ರಾಯರಿಗೋ ಬ್ರಹ್ಮಾಂಡ ಉರಿ ಉಂಟಾಯಿತು. ಇಂತಹ ತಂಪು ವಾತಾವರಣದಲ್ಲಿ ಇವಳು ನನ್ನ

ಆಸೆಗಳಿಗೆ ಕೊಳ್ಳಿ ಇಟ್ಟುಬಿಟ್ಟಳು ! ಇವಳು ಶುದ್ಧ ಅವಿವೇಕಿ ಎಂದು ಮನದಲ್ಲಿ ಅಂದು ಕೊಂಡರು.                                                                                          

ಆದರೇ, ಹಾಗೆಯೇ ಹೇಳುವಂತಿಲ್ಲ. ಅವರು ಮೇಲೆದ್ದು ನಿಂತು ಹೋಗಲು ತಯಾರಾಗಿ ಹೀಗೆ ಹೇಳಿದರು ;

‘ದಿನಸಿ ಪಟ್ಟಿಯಂತೆ.. ಪಟ್ಟಿ.. ಅದೂ ನಲವತ್ತು ಮೆಟ್ಟಿಲು ಏರಿ ಬಂದು ಇಲ್ಲಿ ಬರೆಯಬೇಕೆ ? ಅಲ್ಲೇ ಆಗಲೇ ಹೇಳಿದ್ರೆ ಅದನ್ನು ಬರೆದು ಮುಗಿಸಿ ಇಲ್ಲಿಗೆ ಬರುತ್ತಿದ್ದೆನಲ್ಲ. ನಡಿಯೇ    ಕೆಳಗೆ  ಹೋಗೋಣ.’                                                      

ಎಂದು ಭೃಗು ಮುನಿಯಂತೆ ಕೆಂಡ ಕಾರುತ್ತಾ ಕೆಳಗೆ ಹೋಗೇ ಬಿಟ್ಟರು.  ಆಕೆಯೋ ಕೂಗಿದಳು.

‘ಅಯ್ಯೋ, ಏನ್    ಮಹಾರಾಯಪ್ಪ ನೀವು.. ಈಗೇ ಸತ್ತು ಸತ್ತು ಮೇಲೆ ಬಂದೆ, ಮತ್ತೇ ಕೆಳಗೆ ಇಳೀ

ಬೇಕಾ ?  ಸ್ವಲ್ಪನಾದ್ರೂ ತಾಳ್ಮೆ ಇಲ್ಲ, ದಿನಸಿ ಖಾಲಿ ಅಂದ್ರೆ ಕೋಪ ಯಾಕೆ ? ನಾವು ಹೆಂಗಸ್ರು ಏನಾದ್ರೂ ಹೇಳಿದ್ರೇ ಇವ್ರಿಗೆ ಕೋಪ ಬಂದೇ ಬಿಡ್ತದೆ ಗಂಡಸರೇ ಹೀಗೆ ‘                                              

ಎಂದು ಶ್ರೀಮತಿ ಎದ್ದು ಕೆಳಗಿಳಿಯಲು ಮೆಟ್ಟಲಿನ ಕಡೆಗೆ ನಡೆದಳು.

ಅಷ್ಟರಲ್ಲಿ ರಾಯರು ಗೊಣಗುತ್ತ  ‘ಸಮಯ ಸಂಧರ್ಭ ಈ ಮೂವತ್ತು ವರ್ಷಗಳಾದ್ರೂ  ಇವಳಿಗೆ ಅರ್ಥವಾಗಲೇ ಇಲ್ಲ, ಎಲ್ಲಾ ನನ್ನ ಹಣೆಬರಹ ‘ ಎಂದು ಸರ ಸರನೇ ವೇಗದಲ್ಲಿ ಮೆಟ್ಟಿಲು ಇಳಿದು ಹೋದರು. ಆಗ ರಾಯರ ರೋಮ್ಯಾನ್ಸ್ ಛಿದ್ರವಾಗಿತ್ತು ! 


12 thoughts on “ರಾಯರ ರೋಮ್ಯಾನ್ಸ್-ಬಿ.ಟಿ.ನಾಯಕ್ ಕಥೆ

  1. ರಾಯರ ಸರಸದ ಆಸೆ ಕೈಗೂಡಲಾರದ್ದು ನಿಜಕ್ಕೂ ಬೇಸರ ತಂದಿತು… ಕಥೆ ತುಂಬಾ ರೋಮ್ಯಾನ್ಸ್ ಅಗಿದೆ. ಅಭಿನಂದನೆಗಳು ಸಾರ್

    1. ಧನ್ಯವಾದಗಳು. ನಿಮ್ಮ ಅನಿಸಿಕೆ ನನಗೆ ಪ್ರೋತ್ಸಾಹ.

  2. ಬದುಕಿಗೆ ಹತ್ತಿರವಾದ ಸಂಗತಿಗಳನ್ನು ಬರಹದ ಮೂಲಕ
    ಉಣಬಡಿಸುವ ಕಲೆ ನಿಮಗೆ ಕರಗತವಾದ. ನಿಮ್ಮ ಸಾಹಿತ್ಯದ ಕೃಷಿ ಹೀಗೆಯೇ ಮುಂದುವರೆಯಲಿ.

    1. ಪ್ರಕಾಶ್ ಕುಂದಾಪುರ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Leave a Reply

Back To Top