ಲಲಿತ ಪ್ರಬಂಧ
ಬೇಡವೆಂದರೂ ಬರುವ ಅತಿಥಿ
ರೂಪ ಮಂಜುನಾಥ
ವೃದ್ದಾಶ್ರಮದ ಬಗ್ಗೆ ಲೇಖನ ಬರೆಯಲು ಹೀಗೇ ಒಂದು ಸಂದೇಶ ಬಂದಾಗ, ಮನಸಿಗೆ ಅನಿಸಿದ್ದು ಇಷ್ಟೆ. ಕರುಣಾ ರಸದ ಲೇಖನಗಳುa ಪ್ರವಾಹದ ರೂಪದಲ್ಲಿ ಹರಿದು ಬರುವವೆಂದು. ನಿಜ ಅಲ್ವೇ¿ ಈ ವಿಷಯದಲ್ಲಿ ಸಂತೋಷವಾಗಿ ಬರೆಯುವ ವಿಷಯ ಹುಡುಕಿದರೂ ಬಹುಶಃ ಸಿಗಲ್ವೇನೋ”¡ಯಾಕೆಂದರೆ, ವೃದ್ದಾಶ್ರಮವೆಂಬ ಒಂದು ಪರಿಕಲ್ಪನೆ ಇತ್ತೀಚಿನದ್ದು. ಪಾಶ್ಚ್ಯಾತ್ಯ ಸಂಸ್ಕೃತಿಯ ಅನುಸರಣೆಯಲ್ಲಿ, ನಮ್ಮದು,ಇದೂ ಒಂದು ಹೆಜ್ಜೆ.ಸರಿಯೋ ತಪ್ಪೋ, ವಿವೇಚನೆಯಿಲ್ಲದೆ ಅನುಸರಿಸುವುದು ನಮ್ಮ ಗುಣವೆಂದು ಅಂದುಕೊಂಡರೂ ಕಾಲಕಾಲಕ್ಕೆ ಬದಲಾದ ಜೀವನಶೈಲಿಗನುಸಾರವಾಗಿ, ಕೆಲವು ಬದಲಾವಣೆಗಳು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬರ್ತಾಬರ್ತಾ ಅನಿವಾರ್ಯತೆ ಬದಲಾಗಿ ಅವಶ್ಯಕತೆಯಾಗತೊಡಗಿರುವುದು ಬಲು ಖೇದದ ಸಂಗತಿ! ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಎಲ್ಲೆಡೆ ನಾಯಿಕೊಡೆಗಳಂತೆ ಎದ್ದಿರುವ ವೃದ್ದಾಶ್ರಮಗಳೇ ಸಾಕ್ಷಿ!
ಹಿಂದಿನ ಕಾಲಗಳಲ್ಲಿ, ತಮ್ಮ ಜವಾಬ್ದಾರಿಗಳು ಮುಗಿದ ಮೇಲೆ, ಮಕ್ಕಳು ಎಲ್ಲ ನಿಗಾ ವಹಿಸುವಂತಾದ ಮೇಲೆ, ಅವರಿಗೆ ಮದುವೆ ಮಾಡಿ, ಜವಾಬ್ದಾರಿಯನ್ನು ಬಿಟ್ಟುಕೊಟ್ಟು, ಮೊಮ್ಮಕ್ಕಳನ್ನು ನೋಡಿ ಮುದ್ದಾಡಿ, ವಾನಪ್ರಸ್ಥಕ್ಕೆ ಹಿರಿಯರು ಹೊರಡುತ್ತಿದ್ದರು. ಹಾಗಾಗಿ, ವೃದ್ದರ ಜಂಜಾಟ ಯಾರಿಗೂ ಇರುತ್ತಿರಲಿಲ್ಲ. ಕಾಲಕ್ರಮೇಣ ಮನುಷ್ಯನಿಗೆ ಆಸೆಗಳು ಹೆಚ್ಚಾದಂತೆ,ದೇಹದಲ್ಲಿ ರೋಗಗಳೂ ಸೇರಿಕೊಂಡು,ಮದುವೆಯ ವಯಸ್ಸು ಹೆಚ್ಚಿದಂತೆ, ಇತ್ಯಾದಿ ಇತ್ಯಾದಿ ಕಾರಣಗಳಿಗೆ, ವಾಸಪ್ರಸ್ಥಹಾಗೇ ತೆರೆಯ ಮರೆಗೆ ಸರಿಯಿತು.ಇದಕ್ಕೂ ಮೀರಿ ಕೆಲವರಿಗೆ ಹೋಗಬೇಕೆನಿಸಿದರೂ,ಈಗಂತೂ ವಾನಪ್ರಸ್ಥಕ್ಕೆ ತೆರಳೋಣಾಂದ್ರೆ, ವನಗಳೇ ಇಲ್ವಲ್ರೀ!
ಮನೆಯಲ್ಲೇ ಸೇರಿಕೊಂಡ ಅತ್ತೆ ಮಾವ ಸೊಸೆ ಮೊಮ್ಮಕ್ಕಳ ವಿರುದ್ದ ಯೋಚನೆಗಳಲ್ಲೆ, ಅಭಿರುಚಿಗಳಲ್ಲಿ ವ್ಯತ್ಯಾಸವಾಗಿ ಕೆಲವು ಸಾರಿ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಮನಸ್ತಾಪಗಳಾದರೆ, ಕೆಲವು ಸಾರಿ ಜ್ವಾಲಾಮುಖಿ ಉಗುಳುವ ಬೆಂಕಿಯುಂಡೆಯಂತೆ ಪರಿಸರವು ಬದಲಾಗುತ್ತದೆ.ಮನಸ್ಸು ಬದಲಾಯಿಸಿಕೊಳ್ಳಲು ಪ್ರಾಯದವರು ಬೇಕಾದ ದಾರಿಗಳನ್ನ ಹುಡುಕಿಕೊಂಡು ಆಚೆ ನಡೆಯುತ್ತಾರೆ. ಆ ಚಾಯ್ಸು ವೃದ್ದರಿಗೆಲ್ಲಿದೆ ಹೇಳೀ?ಇದಲ್ಲದೆ ಈಗಿನ ಜನರೇಷನ್ನು ಮಾಡುವ ಮಜಾ ನೋಡಿದರೆ, “ಅಯ್ಯೋ ನಾವು ಏನೂ ಮಾಡದಲೇ ವಯಸ್ಸಾಗೋಯ್ತಲ್ಲಾ”, ಅಂತ ಖಂಡಿತಾ ನನಗಾದರೂ ಅನಿಸಿಯೇ ಅನಿಸುತ್ತದೆ. ಕೈಲಾಗದವನು ಮೈ ಪರಚಿಕೊಂಡ ಅನ್ನುವಂತೆ ಆಡಂಗಿಲ್ಲ, ಅನ್ಭವಿಸೋ ಹಂಗಿಲ್ಲ. ಕೊನೆಗೆ ಮಜಾ ಮಾಡೋಣವೆಂದ್ರೆ ತ್ರಾಣವೂ ಸಹಕರಿಸೋಲ್ಲ!
ಜೆನರೇಷನ್ ಗ್ಯಾಪಿನಿಂದ,ಒಬ್ಬರ ಮೆಂಟಾಲಿಟಿ ಒಬ್ಬರಿಗೆ ಹೊಂದೋಲ್ಲ. ಅವರ ಆಚರಣೆ, ಅಡುಗೆ, ಸಂಪ್ರದಾಯ, ಉಡುಗೆ, ತೊಡುಗೆ ಇವರಿಗೆ ಒಪ್ಪುವುದಿಲ್ಲ. ಹೀಗೆ ಪ್ರತಿಯೊಂದರಲ್ಲೂ ಡಿಫರೆನ್ಸ್ ಆಫ್ ಒಪೀನಿಯನ್!
ಇದರ ಸಂದಿಯಲ್ಲಿ , ಹೊರಗಿನಿಂದ ಸಾಕಾಗಿ ಬಂದ ಗಂಡಸಿನ ಪಾಡು, ಯಾವ ಶೋಕ ಗೀತೆಗೂ ಮೀರಿ ಸಂಕಟ ಪಡುವಂಥ ಪರಿಸ್ಥಿತಿ.ಅವನು ಅತ್ತ ನಡೆಯಲು ದರಿ, ಇತ್ತ ನಡೆಯಲು ಪುಲಿ¡ಮುತ್ತಿನಾ ಮತ್ತು, ತುತ್ತಿನಾ ಗಮ್ಮತ್ತು, ಎರಡರ ಇಕ್ಕಟ್ಟಿನಲ್ಲಿ ಸತ್ತು ಸುಣ್ಣವಾಗುವಾಗ, ಹುಟ್ಟುವುದೇ ಈ ವೃದ್ದಾಶ್ರಮದ ಆಲೋಚನೆಗಳು.ಈ ಸಂದಿಗ್ಧದಲ್ಲಿ ಗೆಲ್ಲುವವಳು ಹೆಂಡತಿಯೇ. ಬಿಡಿಸಿ ಹೇಳುವುದೇನು ಬೇಡ ಬಿಡಿ, ಕಾರಣ ಎಲ್ಲರಿಗೂ ಗೊತ್ತು.
ಯಾಕೆಂದರೆ, ಮಕ್ಕಳನ್ನ ಕಳಿಸಲು ಚೈಲ್ಡ್ ಕೇರುಗಳು, ಹಿರಿಯರಿಗಾಗಿ ಓಲ್ಡೇಜ್ ಹೋಮ್ಗಳು ಇವೆ. ಆದರೆ ಹೆಂಡತಿಯನ್ನ ಕಳಿಸೋಕೆ ಯಾವ ಬೀವಿ ಕೇರುಗಳು, ಹೋಮುಗಳೂ ಇನ್ನೂ ಹುಟ್ಟಿಕೊಂಡಿಲ್ಲದಿರುವುದೂ ಒಂದು ಕಾರಣವಾಗಿ, ಮನೆಯಲ್ಲಿ ತೊಂದರೆ ಕಂಡ ಪಕ್ಷದಲ್ಲಿ ವೃದ್ದರೇ ಜಾಗ ಖಾಲಿ ಮಾಡಬೇಕು.
ಇನ್ನೂ ಕೆಲವೊಮ್ಮೆ, ಮನೆಯ ಸೂನುಗಳೇ ಎಡವಟ್ಟುಗಳಾಗಿ ಹುಟ್ಟಿರುತ್ತವೆ ಬಿಡಿ, ಆ ಗ್ರಹಚಾರಕ್ಕೆ, ಯಾರೇನೂ ಮಾಡಲಾಗುವುದಿಲ್ಲ. ಎಲ್ಲದಕ್ಕೂ, ಸೊಸೆಯಂದಿರನ್ನೇ ಮೂದಲಿಸುವುದು ತಪ್ಪು. ಒಳ್ಳೆ ಗುಣದ ಹೆಣ್ಣು ಮಕ್ಕಳೂ, ಸಂಸ್ಕಾರವಂತರೂ, ವಿನಯವಂತರೂ ಭೂಮಿಯ ಮೇಲೆ ಇಲ್ಲದಿಲ್ಲ.ಒಟ್ಟಿನಲ್ಲಿ ಎಲ್ಲ ಗ್ರಹಗಳೂ ಹೊಂದಿ ನಡೆಯಬೇಕಾದರೆ, ನಮ್ಮ ಪೂರ್ವಾರ್ಜಿತ ಚೆನ್ನಾಗಿರಬೇಕು. ಅದಂತೂ ನಿಜ!
ನಮ್ಮ ಮನೆಯಲ್ಲಿ ಸಾಮಾನ್ಯವಾಗಿ, ಮಕ್ಕಳ ಹುಟ್ಟುಹಬ್ಬಗಳಂದು, ನಮ್ಮ ವಿವಾಹ ವಾರ್ಷಿಕೋತ್ಸವವಂದು ವೃದ್ದಾಶ್ರಮಕ್ಕೋ, ಅನಾಥಾಲಯಕ್ಕೋ ಹೋಗಿ, ನಮ್ಮ ಕೈಲಾದದ್ದು, ಅವರಿಗೆ ಅವಶ್ಯಕತೆ ಇರುವಂಥದ್ದು ಕೊಟ್ಟು ಬರುತ್ತೇವೆ.
ಹದಿನೈದು ದಿನಗಳ ಕೆಳಗೆ ನನ್ನ ಚಿಕ್ಕ ಮಗನ ಹುಟ್ಟಿದ ಹಬ್ಬ.
ನಮ್ಮೂರಿನ ಬಳಿ ಚನ್ನರಾಯಪಟ್ಟಣದಲ್ಲಿ ಇರುವ ಒಂದ ವೃದ್ದಾಶ್ರಮದಲ್ಲಿ ನಾನು ಹೋದಾಗ ನನಗಾದ ಅನುಭವವನ್ನ ಹೇಳಬೇಕೆನಿಸುತ್ತಿದೆ.ಅಲ್ಲಿ ಒಂದು ಹಣ್ಣುಹಣ್ಣು ಮುದುಕಿ, ತೊಂಭತ್ತರ ಮೀರಿ ವಯಸ್ಸಾಗಿರಬಹುದು.ಕುಗ್ಗಿದ ದೇಹ, ಬಾಗಿದ ನಡು, ಕೃಶವಾದ ಶರೀರ, ನಾವು ಕಾರಿನಿಂದ ಇಳಿದ ಕೂಡಲೇ ಸೀರೆ ಸುತ್ತಿದ ಗಂಟೊಂದನ್ನ ಹಿಡಿದು ಕಾರಿನ ಕಿಟಿಕಿ ಗಟ್ಟಿಯಾಗಿ ಹಿಡಿದು ನಿಂತೇಬಿಟ್ಟಳು.”ನನ್ನನ್ನ ನಮ್ಮೂರಿಗೆ ಕರೆದುಕೊಂಡು ಹೋಗಿ, ನಿಮ್ಮ ದಮ್ಮಯ್ಯಾ¡ “ಎಂದು ಅಳುತ್ತಾ ಗೋಗರೆಯತೊಡಗಿದಳು.ಆಶ್ರಮದ ಹುಡುಗನೊಬ್ಬ ಓಡಿಬಂದು ಅಜ್ಜಿಯ ಗದರುತ್ತಾ ಬಲವಂತವಾಗಿ ಎಳೆದರೂ, ಬರದಿದ್ದಕ್ಕೆ, ಕೊನೆಗೆ ಅನಾಮತ್ತು ಮಗುವಿನಂತೇ ಎತ್ತಿಕೊಂಡೇ ಒಳನಡೆದು ಆಕೆಯನ್ನು ಅವಳ ಕೋಣೆಗೆ ಸೇರಿಸಿ ಬಂದ.
ಕಾರಣ ನಂತರ ತಿಳಿಯಿಕು, ಅಜ್ಜಿಯ ಮನೆಯಲ್ಲಿ ಕೊರೋನಾ ಮಾರಿಗೆ, ಮನೆಯಲಿದ್ದವರೆಲ್ಲಾ ಶಿವನಪಾದ ಸೇರಿದ್ದರು ಎಂದು. ಅರುಳೋ ಮರುಳಿನ ಅಜ್ಜಿ ಇನ್ನೂ ಈ ಘೋರವನ್ನು ಅರಗಿಸಿಕೊಳ್ಳಲಾಗದೆ, ಭ್ರಮೆಯಲ್ಲಿ, ಮನೆಯವರ ನೆನೆದೂನೆನೆದೂ ,ಗೋಳಾಡುತ್ತಿತ್ತು.ಎಂದು ಹೋಗಿ ಸಂಸಾರವನ್ನು ಸೇರುವೆನೋ, ಸಂತೋಷವಾಗಿರುವೆನೋ ಎಂಬ ಭ್ರಮೆಯಲ್ಲಿತ್ತು.
ನೋಡಿ, ಈ ಘಟನೆ ನೋಡಿದಾಗ, ವೃದ್ದಾಶ್ರಮದ ಅಗತ್ಯ ನಮಗಿದೆ ,ಅನ್ನುತ್ತೀರೋ, ಬೇಡವೆನ್ನುತ್ತೀರೋ¿ಹೌದು, ಯಾರೂ ಗತಿಯಿಲ್ಲದ ಸಮಯದಲ್ಲಿ, ನಿರ್ಗತಿಕರಾಗಿ ಹೊಟ್ಟೆಗಿಲ್ಲದೆ ಬೀದಿ ಹೆಣಗಳಾಗಿ ಸಾಯುವ ಬದಲು, ಇಂಥ ಒಂದು ಗೂಡಿಗೆ ಸೇರಿದರೆ, ಮೂರುಹೊತ್ತಿನ ಕೂಳಿನ ಕತೆ ಹೇಗೋ ಕಳೆದುಹೋಗುತ್ತದೆ.ಆಗಲೇ ನನಗೆ ವೃದ್ದಾಶ್ರಮಗಳ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾದದ್ದು.
ಆದರೆ, ಅಲ್ಲೇ ಇರುವ ಮತ್ತೊಬ್ಬ ವ್ಯಕ್ತಿ, ಆಷ್ಟೇನೂ ವೃದ್ದನಲ್ಲ. ಸುಮಾರು ಅರವತ್ತೈದರ ಆಸುಪಾಸು.
ಕಾರಣ ಗೊತ್ತಿಲ್ಲ. ಕುಂಟುತ್ತಿದ್ದ. ಕೋಲಿನ ಸಹಾಯದೊಂದಿಗೆ ನಡೆಯುತ್ತಿದ್ದ. ನೋಡಲು ಎಲ್ಲರಂತೆ ಕೊಳೆಕೊಳೆಯಾಗಿರದೆ, ಶುಭ್ರವಾಗಿ, ಒಳ್ಳೆಯ ಬಟ್ಟೆಗಳನ್ನೇ ಹಾಕಿದ್ದ.ಅವರ ವಿಷಯ ತಿಳಿದಿದ್ದೇನೆಂದರೆ, ಮಗ ಡಾಕ್ಟರ್ ಎಂದು. ತಂದೆಯನ್ನು ನೋಡಿಕೊಳ್ಳಲಾಗದೆ ಆಶ್ರಮಕ್ಕೆ ಸೇರಿಸಿದ್ದನೆಂದು!ನೋಡಿ ಹೇಗಿದೆ ವಿದ್ಯವಂತರು,ಸುಸಂಸ್ೃತರು ಎನಿಸಿಕೊಂಡವರ ಲಕ್ಷಣ!ಇದರ ಮೇಲೂ ಆ ವ್ಯಕ್ತಿಯ ನಡುವಳಿಕೆ ಹೇಗಿತ್ತೋ, ಅವರನ್ನ ಅಲ್ಲಿ ಸೇರಿಸಲು ನಿಜವಾದ ಕಾರಣಗಳೂ ಇದ್ದವೇನೋ?ಅದೂ ಗೊತಿಲ್ಲ. ಆದರೆ,ಹೊರಗೆ ಕಾಣುವುದರ ಮೇಲೆ ನಮ್ಮ ಅಭಿಪ್ರಾಯ ನಿಂತಿರುತ್ತದೆ ಎನ್ನುವುದೂ ಒಪ್ಪಲೇ ಬೇಕು.
ನಾನು ಮೇಲೆ ತಿಳಿಸಿರುವ ವಿಚಾರದಲ್ಲಿ, ವೃದ್ದಾಶ್ರಮಗಳು ಬೇಕೇ ಆದರೂ, ಅದನ್ನ ಅನಾವಶ್ಯಕವಾಗಿ , ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚು. ಹಾಗಾಗಿಯೇ ಆಶ್ರಮಗಳ ಸಂಖ್ಯೆ ಮಿತಿಮೀರುತ್ತಿರುವುದು.ನೀವು ಅದನ್ನ ಹೇಗೆ ನಿಯಂತ್ರಿಸಲು ಸಾಧ್ಯ ಹೇಳಿ¿ ಸರಿ ತಪ್ಪುಗಳ ವಿಶ್ಲೇಷಣೆ,ಹೇಗೆ ಬೇಕಾದರೂ ಚರ್ಚೆಯಾಗಬಹುದು.ಆದರೆ,ಬೇಕು ಎನ್ನಲು ಅಲ್ಲೂ ಕೆಲವು ಕಾರಣಗಳು ಕಾಣಸಿಗುತ್ತದೆ.
ನೋಡೀ, ಈಗಿನ ಕಾಲದಲ್ಲಿ ಸಂಸಾರಕ್ಕೊಂದೇ ಮಗು. ಆ ಮಗ, ನಗರದಲ್ಲಿದ್ದರೆ, ಅವನ ಸಂಸಾರ ತೂಗಿಸಲು, ಈಗಿನ ಕಾಲದ ಖರ್ಚುಗಳನ್ನು ಭರಿಸಲು, ಸಮಾಜದಲ್ಲಿ ಎಲ್ಲರಂತೆ ಬದುಕಲು ಒಬ್ಬನ ದುಡಿಮ ಸಾದ್ಯವಿಲ್ಲದ್ದಕ್ಕೆ, ಸೊಸೆಯೂ ದುಡಿಯಬೇಕು. ಇಬ್ಬರೂ ಹೊರಗೆ ಹೋಗುವವರಾದರೆ ಮನೆಯಲಿರುವ ವೃದ್ದರ ನೋಡಿಕೊಳ್ಳುವವರ್ಯಾರು¿ಪ್ರಶ್ನೆಗಳು ಪುಂಖಾನು ಪುಂಖವಾಗಿ ಬರುತ್ತಿದ್ದರೆ, ಉತ್ತರಗಳಿಗೆ ತಡಕಾಡಬೇಕಾಗುತ್ತದೆ.ಸಂಸ್ಕೃತಿ ಬೆಳೆದಂತೆ ಸಂಸ್ಕಾರ ಮರೆಯಾಗುತ್ತಾ ಹೋಗುತ್ತಿದೆ. ಮಕ್ಕಳನ್ನು ನೋಡಿಕೊಳ್ಳು ತಾಳ್ಮೆಯೂ ಇಲ್ಲ, ಹಿರಿಯರನ್ನ ಸೇವಿಸುವ ವ್ಯವಧಾನವೂ ಇಲ್ಲ.ಮಕ್ಕಳಿಗೆ ಚೈಲ್ಡ್ ಕೇರ್ಗಳು ತಾಯಿಯ ಮಡಿಲಾದರೆ, ವೃದ್ದರಿಗೆ ಓಲ್ಡೇಜ್ ಹೋಂಗಳೇ ಆಶ್ರಯತಾಣಗಳು. ಇನ್ನು ನಡು ವಯಸ್ಸಿನವರಿಗೆ ದುಡಿದು ಗುಡ್ಡೆ ಹಾಕುತ್ತಿದ್ದೇವೆಂಬ ಭ್ರಮೆಯಲ್ಲಿ, ಯಾರಲ್ಲಿಯೂ ಕಳಕಳಿಯಿಲ್ಲ. ಅವರಿಗೆ ಬೇಯಿಸಿಕೊಳ್ಳುವುದಕೇ ಸಮಯವಿಲ್ಲದೆ ಸ್ವಿಗ್ಗೀ, ಜ಼ೊಮಾಟೋಗಳ ದಯೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಬಂದಾಗ, ಅವರನ್ನ ತಾನೇ ಹೇಗೆ ಹಳಿಯುವುದು ಹೇಳಿ¿
ತಾಂತ್ರಿಕತೆ ಬೆಳೆದಂತೆ ಜೀವನ ಯಾಂತ್ರಿಕದತ್ತ ಹೊರಟಾಗಿದೆ. ಯಾರಲ್ಲೂ ಸತ್ವವಿಲ್ಲ, ಬರೀ ತೋರಿಕೆಯ ಜೀವನ. ಅದು ದೈಹಿಕವಾಗಿಯಾದರೂ ಸರಿಯೆ, ಮಾನಸಿಕವಾಗಿಯಾದರೂ ಸರಿಯೆ. ಮಾನವನೀಗ ಟೊಳ್ಳು, ಬರೀ ಜೊಳ್ಳುಗಳ ಗೂಡಾಗಿರುವಾ.ಹೊರಗಡೆ ನೋಡಲು ಮಾತ್ರ ಸ್ಟೈಲೋ ಸ್ಟೈಲು¡
ಒಂದಾನೊಂದು ಕಾಲದಲ್ಲಿ ಗಂಡ, ಹೆಂಡತಿ,ಮಕ್ಕಳು, ಅಜ್ಜಿ, ತಾತ, ಎಲ್ಲರೂ ಒಟ್ಟಿಗೇ ಊಟಕ್ಕೆ ಕೂರುವುದು ಸಾಮಾನ್ಯವಾಗಿತ್ತು. ಈಗ, ಮನೆಯಲ್ಲಿರುವ ಮೂರು ಮತ್ತೊಂದು ಅಂದ್ರೆ ನಿಜ ಹೆಚ್ಚಾಗತ್ತ!ಈಗ ಮನೆಯಲ್ಲಿರುವ ಒಂದು ಮತ್ತೊಂದು ಪ್ರಾಣಿಗಳೇ ಬೇರೆ ಬೇರೆ ಶಿಫ್ಟ್ ಗಳಲ್ಲಿ ಕೆಲಸ ಮಾಡಿಕೊಂಡು, ಗಂಡನ ಮುಖ ವಾರವಾದ್ರೂ ಹೆಂಡತಿ ನೋಡಿರಲ್ಲ. ಹೆಂಡತಿ ಮೋರೇನ ಗಂಡ ವಾರವಾದ್ರೂ ಕಂಡಿರಲ್ಲ. ಇನ್ನು ಇವರಿಗೆ ಮಕ್ಕಳಾದ್ರೂ ಹೆಂಗಾದಾವು ಹೇಳಿ?
ಇದೆಲ್ಲಾ ನೋಡ್ತಾ ಇದ್ರೆ, ಒಂಥರದಲ್ಲಿ ವೃದ್ದಾಶ್ರಮದ ಜೀವನ ವಾಸಿ ಅನ್ನಿಸೋದೇ ಇರಲ್ಲ ರೀ. ಯಾಕೆ ಗೊತ್ತೇ¿ಅಲ್ಲಿ ಇರೊರೆಲ್ಲಾ ಸಮಾನ ಮನಸ್ಕರು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳಬಹುದು. ಅವರ ಹಳೆಯ ನೆನಪುಗಳನ್ನ ಹೇಳಿಕೊಳ್ಳಬಹುದು. ಹೊತ್ತೂ ಕಳೆಯಬಹುದು. ಹೊತ್ತೊತ್ತಿಗೆ ಬಿಸಿಯಾದ ಆಹಾರವೂ ಸೇವಿಸಬಹುದು.ಒಬ್ಬರ ಮತ್ತೊಬ್ಬರು ನೋಡಿ, ಎಲ್ಲರ ವ್ಯಥೆ-ಕತೆಗಳನ್ನ ಕೇಳಿಕೊಂಡು, ಸಮಾಧಾನವಾದರೂ ಪಟ್ಟುಕೊಳ್ಳಬಹುದು. ಇದೆಲ್ಲ ಮನೆಯಲ್ಲಿ ಕೇಳೋ ವ್ಯವಧಾನ ಯಾರಿಗಿರುತ್ತೆ ಹೇಳಿ¿
ಇಷ್ಟಕ್ಕೂ ಈಗ ನನ್ನ ಅನಿಸಿಕೆಯನ್ನ ನಾನು ಹೇಳ್ತಿದ್ದೇನೆ . ಆದರೆ , ಕೆಲವೊಮ್ಮೆ, ನಮ್ಮ ಬಾಳಿನ ಸಂಜೆಯನ್ನ ಹೇಗೆ ಕಳೆಯಬೇಕೂಂತ ನಾವು ಪ್ಲಾನ್ ಮಾಡಿಕೊಂಡರೆ, ಅದು ನೆರವೇರುತ್ತದೆಯೇ¿ಗೊತ್ತಿಲ್ಲಾರೀ. ಯಾಕೇಂದ್ರೆ, ಅದೆಲ್ಲಾ ನಮ್ಮ ಮಕ್ಕಳ ಸಂಸ್ಕಾರಕ್ಕೆ ಬಿಟ್ಟಿದ್ದು. ಆಮೇಲೆ, ಇಲ್ಲಿ ನಾನು ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇಬೇಕು.ಈಗೇನಾದರೂ ನಮ್ಮ ಕೈಕಾಲು ಬಿದ್ದು ಹೋಗಿ ಮೂಲೆ ಸೇರಿಕೊಂಡರೆ, ಎತ್ತಿ ಇಳಿಸಿ ಸೇವೆ ಮಾಡೋ ತಾಕತ್ತು , ಸಮಯ, ಸಂಯಮ ಯಾರಿಗಿದೆ ಹೇಳಿ¿ ಆಗ, ಮನೆಗೆ ಬರುವ ಹೊಂ ನರ್ಸ್ ಗಳಿಗೆ ಸಂಬಳ ಎಷ್ಟು ಗೊತ್ತೆ¿ ಊಟ ತಿಂಡಿ ಇರೋಕೆ ಜಾಗ ಕೊಟ್ಟು ಇಪ್ಪತ್ತೈದರಿಂದ ಮೂವತ್ತು ಸಾವಿರ ಸಂಬಳ ಕೊಡಬೇಕು.ಜೊತೆಗೆ, ಅಡಲ್ಟ್ ಡಯಾಪರ್ಸ್, ಔಷಧಿ, ಮಾತ್ರೆ, ಹಾಳೂ ಮೂಳೂಂತ ಬೇಸಿಕ್ ಖರ್ಚೇ ಮುಗಿಲು ಮುಟ್ಟಿ ಹೋಗುತ್ತೆ. ಜೊತೆಗೇನಾದರೂ ಎಕ್ಸ್ಟ್ರಾ ರೋಗಗಳೇನಾದರೂ ವಕ್ಕರಿಸಿಕೊಂಡಿದ್ರೆ, ಅನುಭವಿಸೋರಿಗೊಂದು ನರಕ.ಅವರ ಸೇವೆ ಮಾಡೋರಿಗೊಂದು ನರಕ.ಆ ಖರ್ಚುಗಳನ್ನ ನಿಭಾಯಿಸೋರಿಗಂತೂ ನರಕವೋ ನರಕ! ಪುಣ್ಯಕ್ಕೆ ಈ ಖರ್ಚು ವೆಚ್ಚಗಳಿಗೆಲ್ಲಾ, ವಯಸ್ಸಿನಲ್ಲಿ ಬುದ್ದಿವಂತಿಕೆಯಿಂದ ಕೈಲಿ ಒಂದಷ್ಟು ಕಾಸಿಟ್ಟುಕೊಂಡಿದ್ರೆ ಬಚಾವು.ಇಲ್ಲವಾದಲ್ಲಿ, ನಮ್ಮಿಂದ ಯಾರಿಗೆಷ್ಟು ನೋವೂ? ಹೌದಲ್ವೇನ್ರೀ? ಜೀವನದ ಪ್ಲಾನಿಂಗ್ ಬಹು ಮುಖ್ಯ. ಇಲ್ಲವಾದರೆ, ಅದರ ನೋವು, ಛೇ ಬಿಡಿ, ಅನುಭವಿಸಿದವರಿಗೇ ಗೊತ್ತು. ಇಂಥ ಸಂದಿಗ್ಧ ಒದಗಿದಾಗ ಮಕ್ಕಳು ಮಾಡಲಿಲ್ಲವೆಂದು ಹಂಗಿಸುವ ಜನರಿಗೇನೂ ಕಮ್ಮಿ ಇಲ್ಲ. ಆದರೆ,ಕೆಲವು ವಿಚಾರಗಳಲ್ಲಿ ನಮ್ಮ ಪಾತ್ರವೂ ಈ ಸಂಕಟಕ್ಕೆ ಕಾರಣವಾಗುತ್ತದೆ ಎಂಬುದಂತೂ ಸುಳ್ಳಲ್ಲ. ಆದರೆ, ಅದನ್ನ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆಯೂ ಇರಬೇಕು.ಮನಿ ಮ್ಯಾನೇಜ್ಮೆಂಟು, ಹೆಲ್ತ್ ಮ್ಯಾನೇಜ್ಮೆಂಟು,ಟೈಮ್ ಮ್ಯಾನೇಜ್ಮೆಂಟು, ಲೈಫ್ ಮ್ಯಾನೇಜ್ಮೆಂಟಿನ ಬಗ್ಗೆ ಬದುಕನ್ನ ಗಂಭೀರವಾಗಿ ತೆಗೆದುಕೊಳ್ಳುವ ಪ್ರಯತ್ನವಂತೂ ಖಂಡಿತ ಮಾಡಲೇಬೇಕು. ಇದನ್ನೂ ಮೀರಿ ಏನೇ ನಡೆದರೂ ಅದು ದೈವೀಚ್ಛೆ! ಜೊತೆಗೆ ನಮ್ಮ ಪ್ರಯತ್ನವಿದ್ದೂ ಸಂದರ್ಭಗಳು ಕೈಮೀರಿದರೆ, ಅಷ್ಟು ನೋವೂ ಆಗುವುದಿಲ್ಲ. ಪಾಪ ಪ್ರಜ್ಞೆ ಕಾಡುವುದಿಲ್ಲ.ಪ್ರಾಯಶ್ಚಿತದ ಅವಶ್ಯಕತೆಯಿಲ್ಲ.
ಮತ್ತೊಂದು ಮಾತೂಂತ ಹೇಳಬೇಕೆಂದರೆ, ಹುಟ್ಟಿದ ಮೇಲೆ, ಎಲ್ಲ ಘಟ್ಟಗಳನ್ನೂ ಮಾಗುತ್ತಾ ಮಾಗುತ್ತಾ ಹಣ್ಣಾಗುವತ್ತ ಸಾಗಲೇ ಬೇಕು. ವೃದ್ದಾಪ್ಯ ಬೇಡಾಂದ್ರೆ ಆಗುತ್ಯೇ? ಖಂಡಿತ ಬರ್ಲಿ. ಆದರೆ, ಖಂಡಿತ ನಮ್ ಕೆಲಸ ನಾವು ಮಾಡಿಕೊಳ್ಳೋ ತನಕ ಭಗವಂತ ಆಯಸ್ಸು ಕೊಡ್ಲಿ. ಆದ್ರೆ, ಎಲ್ರಿಗೂ ತೊಂದ್ರೆ ಕೊಡುವಷ್ಟು ಕಾಲ ಬದುಕಿರೋದು ಬೇಡರೀ¡ ಅದು ನನ್ ಆಸೆ.(ಇದರ ಬಗ್ಗೆಯೂ ಕೆಲವರ ಅಭಿಪ್ರಾಯ ಹೀಗಿರುತ್ತದೆ,”ಅಯ್ಯೋ, ಹೆತ್ತೂ ಹೊತ್ತೂ ಬೆಳಸಿಲ್ವೇ?ಬೇಕ್ಬೇಕಾದ್ದಂಗೆ ಖರ್ಚು ಮಾಡಿಲ್ವೇ?ಈಗ್ ಅವ್ರ ಸರ್ದಿ.ಮಾಡ್ಲಿ ಬಿಡೀ. ಅಷ್ಟ್ ಮಾತ್ರ ಅವ್ರಿಗೂ ಕರ್ತವ್ಯ ಇರೋದಿಲ್ವಾ?”ಅನ್ನುವ ಮಾತುಗಳನ್ನ ಕೆಲವರು ವೃದ್ದರಾಡುವುದೂ ಕೇಳಿದೀನಿ)
ಸಾಕು, ನಮ್ಮದೂಂತ ಇಲ್ಲಿ ಯಾವ ಸಾಮ್ರಾಜ್ಯವೂ ನಾವು ಕಟ್ಟಿಲ್ಲ. ದೊಡ್ಡದೊಡ್ಡ ಸಾಮ್ರಾಜ್ಯ ಕಟ್ಟಿದೋರೇ ಉಳಿದಿಲ್ಲ, ಒಂದು ಸಾಸಿವೆ ಕಾಳನ್ನೂ ತಮ್ ಜೊತೆ ತಗೊಂಡು ಹೋಗ್ಲಿಲ್ಲ! ಹೀಗಿದ್ದಾಗ ನಾವು ಅತಿ ಸಾಮಾನ್ಯರು ಏನ್ ಮಹಾ¿
ಹೌದು, ದಿಕ್ಕಿಲ್ಲದೋರಿಗೆ ವೃದ್ದಾಶ್ರಮಗಳು ಬೇಕು. ಮಿಕ್ಕಿದೋರ ವಿಷಯ ನಾನು ಹೇಳೋಲ್ಲ. ಯಾಕೇಂದ್ರೆ, ಅವರವರ ಕರ್ತವ್ಯ ಅವರೇ ತಿಳಿದುಕೊಳ್ಳಬೇಕು. ಒಪ್ಪುವಂಥ ಕಾರಣಗಳಿದ್ರೆ, ಎಲ್ಲರಿಗೂ ಮಾಫಿ ಇದೆ. ಆದರೆ, ಕಳ್ಳನೆಪಗಳನ್ನ ಹುಡುಕಿ ಹೆತ್ತೋರನ್ನ ವೃದ್ದಾಶ್ರಮಕ್ಕೆ ತಳ್ಳೋರಿಗೆ, ಮುಂದೆ ಕಾಲಚಕ್ರ ಉರುಳಿದಾಗ, ಕಾಲ, ಅವರನ್ನ ದೋಸೆಯಂತೆ ತಿರುವಿ ಹಾಕದೇ ಇರುತ್ತದೆಯೇ¿ಒಟ್ಟಿನಲ್ಲಿ, ಗತಿಯಿಲ್ಲದವರಿಗೆ ಸದ್ಗತಿ ಕರುಣಿಸುವ ಧಾಮ,” ವೃದ್ದಾಶ್ರಮಕ್ಕೆ ಜೈ¡” ಬಿಕಾಸ್ ಅಂಥವರಿಗೆ “ ವೃದ್ದಾಶ್ರಮ ಹೈ!”
ಹೌದು ರೀ, ಒಂದು ಕಾಲಕ್ಕೆ ವೃದ್ದಾಶ್ರಮಗಳ ಅನುಕೂಲಗಳೇನೂ ಇಲ್ಲವಾದಾಗ, ಕೈಲಾಗದೆ ಮೂಲೆ ಸೇರಿಕೊಂಡ ವೃದ್ದರನ್ನ ಬಲು ಕೇವಲವಾಗಿ ಕಂಡು ಮನೆಯ ಹಿಂಭಾಗದ ಗಾಳಿ ಬೆಳಕಿಲ್ಲದ ಕೋಣೆಗಳಲ್ಲೋ, ಓಟ್ ಹೌಸುಗಳಲ್ಲೋ ಏಕಾಂತವಾಗಿ ಬಿಟ್ಟಿರುವ ಜನರನ್ನೂ ಕಣ್ಣಾರೆ ಕಂಡಿದ್ದೇನೆ. ಅಂಥ ನಿಕೃಷ್ಟರಾಗಿ ಮನೆಯಲ್ಲಿ ಬಾಳುವುದಕಿಂತ ವೃದ್ದಾಶ್ರಮದ ಜೀವನವೇ ಲೇಸಲ್ಲವೇ? ನಮ್ಮವರೆನ್ನುವರು ನಿರ್ಲಕ್ಷ್ಯ ಮಾಡಿದರೆ ಆಗುವಷ್ಟು ನೋವು ವೃದ್ದಾಶ್ರಮದಲ್ಲಿ ಬೈದರೂ ಆಗುವುದಿಲ್ಲ. ನಿಜ ತಾನೇ? ಇದಕ್ಕೆ ನೀವೇನ್ಹೇಳ್ತೀರೀ?
ಇನ್ನು ಹಣದ ವಿಚಾರವಾಗಿಯಾದರೂ ಸರಿ, ಈಗಂತೂ ಅನುಕೂಲವಿಲ್ಲದವರಿಗೆ ಉಚಿತ ವೃದ್ದಾಶ್ರಮಗಳನ್ನೂ ನಡೆಸುತ್ತಿರುವ ಪುಣ್ಯಾತ್ಮರಿದ್ದಾರೆ. ಕಾಸಿಗೆ ತಕ್ಕ ಕಜ್ಜಾಯದಂತೆ ಬೇಸಿಕ್ ಅಮಿನಿಟೀಸ್ ನಿಂದ ಹಿಡಿದು ಫೈವ್ ಸ್ಟಾರ್ ಫೆಸೆಲಿಟೀಸ್ ಇರುವ ವೃದ್ದಾಶ್ರಮಗಳೂ ಕೈಗೆಟುಕುವಷ್ಟು ದೂರದಲ್ಲಿವೆ.ಅಂಥ ಪರಿಸ್ಥಿತಿ ಬಂದವರು ಹೋಗಿ ಹಾಯಾಗ್ ಇದ್ದಾ,ಹೇಗೂ ಟಿಕೆಟ್ ರಿಸರ್ವ್ ಆಗಿರುತ್ತೆ.ಆ ದಿನ ಬಿದ್ರು ಮೋಟಾರ್ ಹತ್ಕೊಂಡು ರೈಟ್ ಅಂದ್ರಾಯ್ತು.ಆ ಟೈಮಲ್ಲಂತೂ ಎಲ್ರೂ ಸೆಂಡಾಫ್ ಕೊಟ್ಟು,ಬೈ ಮಾಡಿ ಹೋಗೋಕಂತೂ ಬಾಜಾಭಜಂತ್ರಿ ಸಮೇತ ಬಂದೇ ಬರ್ತಾರೆ! ನಾವೂ ನಗ್ನಗ್ತಾ ಟಾಟಾ ಮಾಡಿ ಜಾಗ ಖಾಲಿ ಮಾಡುದ್ರಾಯ್ತು.
ಇದ್ರಲ್ ಏನೇ ಕಷ್ಟವಿದೆ ಅಲ್ವೇ?
ಲಾಸ್ಟ್ ಪಂಚ್……….ಜೀವನವೆಂಬ ಜೋಕಾಲಿಯಲ್ಲಿ ಬಾಲ್ಯ, ಯೌವನಾವಸ್ಥೆಗಳು ಆಟವಾಡುತ್ತಾ,ಕಾಲವನ್ನೂ ಮೀರಿಸುತ್ತಾ ಉತ್ಸಾಹದಲ್ಲಿ ಓಡಿಯೇ ಬಿಡುತ್ತವೆ. ಆದರೆ ವೃದಾಪ್ಯವು ನೋಡುನೋಡುತ್ತಲೇ ಅತಿಥಿಯಂತೆ ನಮ್ ದೇಹವೆಂಬ ಆಲಯದೊಳಗೆ ನಾವು
ಸೇರಿಸಿಕೊಳ್ಳ ಬಯಸದಿದ್ದರೂ, ಆದರಿಸದಿದ್ದರೂ ,ಬಂದೇಬಿಡುತ್ತದೆ.
ಆದರೆ, ಈ ಕೊನೆಯ ಕಾಲ ಕಳೆಯುವುದು ಕ್ಷಣಕ್ಷಣವೂ ಸಮರಸಾಹಸವೇ! ಅನಾನುಕೂಲದ
ವೃದ್ದಾಪ್ಯವು ಒಂದು ಶಾಪವೇ ನಿಜ. ಆದರೂ……ಎಸ್ಕೇಪಿಸಮ್ ಎಂಬ ಮಾತೇ ಇಲ್ಲ. ಬದುಕಿನ ಮಿಕ್ಕೆರೆಡು ಘಟ್ಟಗಳನ್ನು ದಾಟಿದಂತೆ ವೃದ್ದಾಪ್ಯವನ್ನೂ ದಾಟಲೇಬೇಕು. ಈಸಬೇಕು ಇದ್ದು ಜೈಸಬೇಕು!
ಬದಲಾಗುವ ಕಾಲದ ಜೊತೆ ನಾವೂ ಹೊಂದಿಕೊಳ್ಳುತ್ತಾ,ವೃದ್ದಾಪ್ಯದಲ್ಲಿ ಸಮಯ ಕಳೆಯಲು ಸಿದ್ದತೆ ಮಾಡಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನ ಮೈಗೂಡಿಸಿಕೊಂಡು, ಅನುಭವಿಸಿದರೆ ವೃದ್ದಾಪ್ಯದಲ್ಲೂ ಕಾಣಬಹುದು ಆನಂದದ ಸೆಲೆ! ಇಲ್ಲವಾದರೆ ವೃದ್ದಾಪ್ಯವು ಒಂದು ಬೆಂಕಿಯ ಬಲೆ!
ರೂಪ ಮಂಜುನಾಥ,
ತುಂಬಾ ಚೆನ್ನಾಗಿದೆ ಲೇಖನ. ಎಲ್ಲಾ ವಿಮರ್ಶಿತ ಅಂಶಗಳೂ ನೈಜತೆಯಿಂದ ಕೂಡಿವೆ. ಅಭಿನಂದನೆಗಳು.
ನಿಮ್ಮ ಮೆಚ್ಚುಕೆಗೆ ಧನ್ಯವಾದಗಳು.
ಉತ್ತಮ ಲೇಖನ..ವೃದ್ಯಾಪ ಒಂದು
ಜೀವನದ ಅನಿವಾರ್ಯ ಘಟ್ಟ.ಇಷ್ಟಪಟ್ಟೊ ಕಷ್ಟಪಟ್ಟೊ ಒಪ್ಪಿಕೊಳ್ಳಲೇ ಬೇಕು. ಜಯಿಸಬೇಕು.
ವಂದನೆಗಳು
ಬಹಳ ಉತ್ತಮವಾಗಿ ಪ್ರಬುದ್ಧವಾಗಿ ಮೂಡಿ ಬಂದ ಲೇಖನವಾಗಿದೆ, ನಿಮ್ಮ ಲೇಖನದಲ್ಲಿ.. ವೃದ್ಯಾಪದ ಸಮಸ್ಯೆಗಳು ಮತ್ತು ಈಗಿನವರ ಸ್ವಾರ್ಥ ಚಿಂತನೆಗಳು ಸೇರಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂಬ ಕಾರಣವೂ ಸರಿ.