ರಾಘವೇಂದ್ರ ಮಂಗಳೂರು-ಕಥೆ- ಮದುವೆಗೆ ಹಣ ಸಹಾಯ

ಕಥಾ ಸಂಗಾತಿ

ಮದುವೆಗೆ ಹಣ ಸಹಾಯ

ರಾಘವೇಂದ್ರ ಮಂಗಳೂರು

.

   –

ಟಿ.ವಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಬರುತ್ತಿದ್ದ  ಬ್ರೇಕಿಂಗ್ ನ್ಯೂಸ್ ನೋಡುತ್ತಿದ್ದ ನಾನು ಹೆಂಡತಿ ಅರುಣಗೆ ಸ್ಟ್ರಾಂಗ್ ಟೀ ಮಾಡಿ ಕೊಡಲು ಆರ್ಡರ್ ಮಾಡಿದೆ.

ಕಾಲಿಂಗ್ ಬೆಲ್  ಶಬ್ದವಾಯಿತು. ಬಾಗಿಲು ತೆರೆದಾಗ ಎದುರಿಗೆ  ವಾಚಮನ್ – ಕಂ – ಸೆಕ್ಯುರಿಟಿ ರಾಮಪ್ಪ ಹಲ್ಕಿರಿಯುತ್ತ ನಿಂತಿದ್ದ.

ಒಳಗೆ ಬಾ ಎಂದು ಕರೆದೆ. ಯಥಾ ರೀತಿ ಬಂದು ವಾಡಿಕೆಯಂತೆ ಹಾಲಿನ ಮೂಲೆಯಲ್ಲಿ ಕುಕ್ಕರುಗಾಲು ಹಾಕಿ ಕುಳಿತ. ಮುಖ ನೋಡಿದೆ. ಯಾವುದೋ ಸಾಲಕ್ಕೆ ಅರ್ಜಿ ಹಾಕಲು ಬಂದಿದ್ದಾನೆ ಎಂದು ಬ್ಯಾಂಕ್  ಮ್ಯಾನೇಜರ್ ಆಗಿ ರಿಟೈರ್ ಆದ ನಾನು ಸುಲಭವಾಗಿ ಊಹಿಸಿದೆ.

ರಾಮಪ್ಪ ಬರುವದನ್ನು ಕಿಚನ್ ನಿಂದ ನೋಡಿದ್ದ ನನ್ನ ಮಡದಿ ಅರುಣ ಟ್ರೇಯಲ್ಲಿ ಮೂರು ಕಪ್ ಟೀ ತಂದಳು. ನನಗೊಂದು, ರಾಮಪ್ಪನಿಗೊಂದು ಕೊಟ್ಟು ತಾನೊಂದು  ಕಪ್ ಹಿಡಿದು ಸೋಫಾದಲ್ಲಿ ನನ್ನ ಪಕ್ಕ ಅಸೀನಳಾದಳು…

ಟೀ ಕುಡಿದು ಟಿಪಾಯ್ ಮೇಲೆ ಖಾಲಿ ಕಪ್ ಇಡುತ್ತಾ ” ಹೇಳು ರಾಮಪ್ಪ…ಏನು ಬಂದ ವಿಷಯ” ಎಂದು ಕೇಳಿದೆ.

“ನಮ್ಮ ದೊಡ್ಡ ಮಗಳಿಗೆ ಮದುವೆ ಗೊತ್ತು ಮಾಡಿದ್ದೇವೆ ಸಾರ್…” ಎಂದ ಸಂತಸದ ಸ್ವರದಲ್ಲಿ.

ನಾವು ದಂಪತಿಗಳು ತಕ್ಷಣಕ್ಕೆ ಏನೂ  ಮಾತನಾಡಲಿಲ್ಲ.

ಅಲ್ಪ ವಿರಾಮದ ಬಳಿಕ ರಾಮಪ್ಪನೇ ಮಾತು ಮುಂದುವರೆಸಿದ. ” ಮದುವೆಗೆ ಇನ್ನೊಂದು ತಿಂಗಳು ಕೂಡ ಉಳಿದಿಲ್ಲ ಸಾರ್… ಮಗಳ ಮದುವೆ ಅಂದರೆ ನಿಮಗೆ  ಗೊತ್ತೇ ಇರುತ್ತೆ… ವರದಕ್ಷಿಣೆ, ಬಂಗಾರ, ಬೆಳ್ಳಿ , ಬಟ್ಟೆ ಬರೆ ಅಲ್ಲದೇ ಮದುವೆ ಸಹಾ ನಾವೇ  ಮಾಡಿಕೊಡಬೇಕು ಸಾರ್… ಇದಕ್ಕೆಲ್ಲ ಬಹಳ ಖರ್ಚು ಬರುತ್ತದೆ… ದಯಮಾಡಿ      ತಾವೊಂದಿಷ್ಟು ಹಣ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು…” ಎಂದು ಸಂಕೋಚದಿಂದ ಕೈ ಮುಗಿಯುತ್ತ ನುಡಿದ.

ವಿಷಯ ಏನೆಂದು ತಿಳಿಯಿತು. ಪಕ್ಕದಲ್ಲಿದ್ದ ಹೆಂಡತಿಯ ಮುಖವನ್ನೊಮ್ಮೆ ನೋಡಿದೆ ರಾಮಪ್ಪನಿಗೆ  ಏನು ಉತ್ತರ ನೀಡಲಿ ಎನ್ನುವಂತೆ..

“ಆಗಲಿ ರಾಮಪ್ಪ …ನಿನ್ನ ಮಗಳ ಮದುವೆಗೆ ಅಲ್ಲದೆ ಇನ್ನು ಯಾವಾಗ ನಾವು ಸಹಾಯ  ಮಾಡೋದು ಹೇಳು…” ಎಂದು ಅರುಣ ನನ್ನ ಪರವಾಗಿ ಭರವಸೆ ನೀಡಿದಳು.

“ಎಷ್ಟು ಹಣವನ್ನು  ನಮ್ಮಿಂದ ನಿರೀಕ್ಷೆ ಮಾಡುತ್ತಿರುವಿ ಹೇಳು…”  ಎಂದು ರಾಮಪ್ಪನನ್ನು ನೇರವಾಗಿ ಪ್ರಶ್ನಿಸಿದೆ.

ಆ ಮಾತು ಕೇಳಿ ರಾಮಪ್ಪನ ಮುಖ ಅರಳಿತು.

“ಕನಿಷ್ಟಪಕ್ಷ  ಇಪ್ಪತ್ತೈದು ಸಾವಿರ  ಸಾರ್… ಎಂತಹ ಬಡವರ ಮನೆಯ ಮದುವೆಯಾದರೂ   ಇವತ್ತಿನ ದಿನ ಮಾನಗಳಲ್ಲಿ ಕನಿಷ್ಟ  ಒಂದು ಲಕ್ಷ ರೂಪಾಯಿಗಳಾದರು  ಬೇಕು ತಾನೆ… ನಾನು ಇಲ್ಲಿ ಲಕ್ಷಗಟ್ಟಲೆ  ಸಂಪಾದಿಸುತ್ತಿರುವೆ ಅಂತ ನಮ್ಮ ಹಳ್ಳಿಯಲ್ಲಿನ ನೆಂಟರು ಭಾವಿಸುತ್ತಾರೆ.  ಆದರೆ ಸಿಟಿಯಲ್ಲಿನ ಖರ್ಚು ವೆಚ್ಚಗಳು ಅವರಿಗೇನು ಗೊತ್ತು ಸಾರ್?…ನಾಲ್ಕು ಜನರ ಸಂಸಾರದ ಭಾರ ಅಂದರೆ ಸುಮ್ಮನೆ ಅಲ್ಲವಲ್ಲ… ಯಾವ ಖರ್ಚು ಕಡಿಮೆ ಮಾಡಬೇಕೋ ಒಂದೂ ಗೊತ್ತಾಗುತ್ತಿಲ್ಲ…ಕಿರಾಣಿ, ಬಟ್ಟೆ, ಸ್ಕೂಲ್ ಫೀಸ್ ಎಲ್ಲ ದುಬಾರಿ… ಒಂದು  ದೊಡ್ಡ ಹಬ್ಬ ಬಂತೆಂದರೆ  ನಿಮ್ಮಂತಹ ಸಾರುಗಳ ಹತ್ತಿರ ಕೈ  ಒಡ್ಡದೆ ಬೇರೆ ದಾರಿಯಿಲ್ಲ …” ಎಂದು ತನ್ನ ತಾಪತ್ರಯಗಳ ಪಟ್ಟಿ ಓದಲು ಶುರು ಮಾಡಿದ.

ನನ್ನ ಹೆಂಡತಿ ಜಾಣೆ. ರಾಮಪ್ಪ  ಬೇಗ ಮಾತು ಮುಗಿಸುವದಿಲ್ಲ ಅಲ್ಲದೇ ಯಾವುದಕ್ಕೂ ಕೂಡಲೇ ಕಮಿಟ್ ಅಗಬರದೆಂದು ಅರುಣಗೆ ಗೊತ್ತು. ಅದಕ್ಕಾಗಿ “ನಿಮ್ಮ ಸಾರ್ ಗೆ ಯಾರೋ ಅರ್ಜೆಂಟ್ ಆಗಿ ಬಾ ಎಂದು ಫೋನ್ ಮಾಡಿದ್ದಾರೆ. ಅವರು ಈಗ ಹೊರಗೆ ಹೋಗುತ್ತಿದ್ದಾರೆ. ಮದುವೆಗೆ ಇನ್ನೂ ಟೈಂ ಇದೆಯಲ್ಲ… ಏನಾದರೂ ಮಾಡೋಣ. ಚಿಂತೆ ಮಾಡಬೇಡ… ಸರೀನಾ ರಾಮಪ್ಪ” ಎಂದಳು.

ಅರ್ಥ ಮಾಡಿಕೊಂಡ ರಾಮಪ್ಪ ಎದ್ದು “ಏನೋ ಈ  ಬಡವನನ್ನು  ಹೇಗಾದರೂ ಮಾಡಿ ನೀವೇ ಕಾಪಾಡಬೇಕು  ತಾಯಿ…” ಎನ್ನುತ್ತ  ನಮಸ್ಕಾರ ಮಾಡಿ ಹೊರಟ.

ರಾಮಪ್ಪ  ಹೋದ ಬಳಿಕ ಮನೆಯ ಆರ್ಥಿಕ ತಜ್ಞೆ ಅರುಣಳನ್ನು ಕೇಳಿದೆ

“ಏನು ಮಾಡೋಣ..?”

“ಇಪ್ಪತ್ತೈದು  ಸಾವಿರ ಅರ್ಥಿಕವಾಗಿ ತಕ್ಕ ಮಟ್ಟಿಗೆ ಇರುವ ನಮಗೆ ದೊಡ್ಡ ಮೊತ್ತವೇನಲ್ಲ… ಹಾಗಂತ ಅಷ್ಟೊಂದು ದಾನ ಮಾಡೋಕೆ ಮನಸು ಒಪ್ಪುತ್ತಿಲ್ಲ…ಹೋಗಲಿ ಸಾಲ ಅಂತ ಕೊಟ್ರೆ ಅದನ್ನ  ಕಂತುಗಳಲ್ಲಿ ಎಷ್ಟು ತಿಂಗಳು ಅಂತ ರಾಮಪ್ಪ ಹಿಂದಿರುಗಿಸಬೇಕು… ಅದಕ್ಕೆ ಎಷ್ಟು ವರ್ಷ ಬೇಕಾಗುತ್ತದೋ ಎನೋ?..ಅದು ಮುಟ್ಟುವದರೊಳಗೆ ಇರೋರು ಯಾರೋ.. ಹೋಗೋರು ಯಾರೋ?…ಅದಕ್ಕೆ ನಾನು ಒಂದು ಐಡಿಯಾ ಹೇಳುತ್ತೇನೆ ಕೇಳಿ..” ಎಂದು ತನ್ನ ಮಾಸ್ಟರ್ ಪ್ಲಾನ್ ಹೇಳಿದಳು.

ಅದನ್ನು ಕೇಳಿ ನಾನು ಸಂತೋಷದಿಂದ ‘ಹುರ್ರೇ..’ ಎಂದು ಚೀರಿದೆ.  ಅರುಣ ನನ್ನನ್ನು ಮೃದುವಾಗಿ  ಗದರಿದಳು ಸಾಕು ಸುಮ್ಮನಿರಿ ಎನ್ನುವಂತೆ…

           ***

ಕೋವಿಡ್-19 ಬಂದ ನಂತರ ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ಮೇಲೆ ನಂಬಿಕೆ ಪೂರ್ತಿಯಾಗಿ ಹೋಗಿಬಿಟ್ಟಿದೆ. ನಮ್ಮ ‘ಶ್ರೀನಿಧಿ ಅಪಾರ್ಟ್ಮೆಂಟ್ಸ್’ ನ ನಾಲ್ಕು ಬ್ಲಾಕುಗಳಲ್ಲಿ ಒಟ್ಟು ನಲವತ್ತು ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ಒಂದು ಕುಟುಂಬದವರು ಇನ್ನೊಂದು ಕುಟುಂಬ ಸದಸ್ಯರನ್ನು ಕೇವಲ ಗಣಪತಿ ಹಬ್ಬದಲ್ಲೊ,  ದೀಪಾವಳಿಯಲ್ಲೊ, ಇಲ್ಲಾ ಅಪಾರ್ಟ್ಮೆಂಟ್ ನಿವಾಸಿಗಳ ಹುಟ್ಟುಹಬ್ಬದ ಸಡಗರದಲ್ಲೋ ಅಥವಾ ಮದುವೆ ಪಾರ್ಟಿಯ ಸಮಾರಂಭದಲ್ಲೋ  ‘ಸೆಲ್ಲಾರಿನಲ್ಲಿ’  ಅಥವಾ ‘ಟೆಂಟ್ ಹೌಸ್’ ನಲ್ಲಿ ಮಾತ್ರ ಪರಸ್ಪರ ಒಟ್ಟಾಗಿ ಭೇಟಿಯಾಗುತ್ತಿದ್ದೆವು.

ಉಳಿದ ಸಾಮಾನ್ಯ ದಿನಗಳಲ್ಲಿ ಯಾರಾದರೂ ಎದುರಾದರೆ ಒಂದು ಕೃತಕ ನಗೆ ಬೀರಿ  ‘ಹಾಯ್.. ಹಲೋ…ಗುಡ್ ಮಾರ್ನಿಂಗ್’  ಇತ್ಯಾದಿ ಅಲಂಕಾರಿಕ ಶಬ್ದಗಳನ್ನಷ್ಟೇ ಬಳಸಿ ಮುಂದೆ ಹೆಜ್ಜೆ ಹಾಕುತ್ತಿದ್ದೆವು. ಲಿಫ್ಟ್ ಉಪಯೋಗಿಸುವಾಗ ಯಾರಾದರೂ ಎದುರಾದರೆ ‘ಚೆನ್ನಾಗಿದ್ದೀರಾ..’ ಎಂಬ ಪದಪುಂಜವನ್ನು ಬಳಕೆ ಹೆಚ್ಚು ಕಡಿಮೆ ಎಲ್ಲ ಅಪಾರ್ಟ್ಮೆಂಟ್ ಸದಸ್ಯರು ಬಳಸುತ್ತಿದ್ದರು.

ನಮ್ಮ ಸದಾ ಬ್ಯುಸಿ ಲೈಫ್ ಗಿಂತ ರಾಮಪ್ಪನ ಬದುಕು ತುಂಬಾ ಪ್ರಶಾಂತವಾದದ್ದು ಎಂದು ನಮ್ಮೆಲ್ಲರ ಒಮ್ಮತದ ಅನಿಸಿಕೆ.  ಕಾರಣ  ಹಲವಾರು ಮಂತ್ಲಿ  ಇನ್ಸ್ಟಾಲ್ಮೆಂಟುಗಳು ಪ್ರತಿ ದಿನ ನಮಗಾಗಿ ಎದುರು ನೋಡುತ್ತವೆ. ಉದಾಹರಣೆಗೆ  ಕಾರ್ ಈಎಂಐ, ಅಪಾರ್ಟ್ಮೆಂಟ್ ಈಎಂಐ, ಸ್ಕೂಲ್  ಡೋನೇಷನ್, ಟ್ಯೂಷನ್, ಮಂತ್ಲಿ  ಫೀಸ್, ಮಾಲ್, ದರ್ಶನಿ,  ಮೆಟ್ರೋ  ಪಾಸ್ ಗಳು,  ಹೈ ಫೈ ಲೈಫ್ ಖರ್ಚುಗಳು, ಟರ್ಮ್,  ಹೆಲ್ತ್ , ವೆಹಿಕಲ್, ಲೈಫ್

ಇನ್ಸುರೆನ್ಸ್  ಪಾಲಸಿ ಪ್ರೀಮಿಯಂಗಳು ಇತ್ಯಾದಿ ಇತ್ಯಾದಿಗಳ  ಗೊಡವೆಯೇ ಇಲ್ಲ….ನಮ್ಮಂತೆ ಫಾಲ್ಸ್ ಸೋಷಿಯಲ್ ಸ್ಟೇಟಸ್  ಮೆಂಟೈನ್ ಮಾಡುವ ಅವಶ್ಯಕತೆ ರಾಮಪ್ಪನ ಕುಟುಂಬಕ್ಕೆ ಇಲ್ಲವೇ ಇಲ್ಲ… ಸೆಲ್ಲಾರ್ ನಲ್ಲಿ ಲಿಫ್ಟ್ ಹತ್ತಿರ ಇರುವ ಒಂದೇ ವಾಸದ ದೊಡ್ಡ ರೂಮು ಆತನ ಕುಟುಂಬಕ್ಕೆ ಎಲ್ಲವೂ ಹೌದು… ಅದೇ ಡ್ರಾಯಿಂಗ್ ರೂಮ್ ಕಂ ಸಿಟೌಟ್ ಕಂ ಕಿಚನ್ ಕಂ ಪೂಜಾ ಕಂ ಬೆಡ್ ರೂಮ್ ಕಂ ಟಾಯ್ಲೆಟ್ ರೂಮ್ ಕೂಡ ಅದೇ ಆಗಿದೆ… ಹೀಗಾಗಿ ಆ ಕುಟುಂಬಕ್ಕೆ ಅದೇ ‘ಅಲ್ ಇನ್ ಒನ್’…ಅದರಲ್ಲೇ ರಾಮಪ್ಪ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದ.

ಆತನ ದಿನಚರಿ ಎಂದರೆ ಬೆಳಿಗ್ಗೆ ಎದ್ದ ಕೂಡಲೇ ಅಪಾರ್ಟ್ಮೆಂಟಿನ ಎಲ್ಲ ಫ್ಲೋರ್ ಗಳನ್ನು ಮತ್ತು ಸ್ಟೇರ್ ಕೇಸುಗಳನ್ನು  ಹೆಂಡತಿಯೊಂದಿಗೆ  ಸ್ವಚ್ಛಗೊಳಿಸುವದು… ಕಾರುಗಳನ್ನು ಕ್ವೀನ್  ಮಾಡುವದು…. ರಾತ್ರಿ ಕಸದ ಬುಟ್ಟಿಗಳನ್ನು ಶೇಖರಿಸಿ ಅವುಗಳಲ್ಲಿನ ಕಸವನ್ನು ಬೆಳಿಗ್ಗೆ ಕಾರ್ಪೋರೇಷನ್ ಲಾರಿಯಲ್ಲಿ ಹಾಕುವದು… ಕಾವೇರಿ ನೀರು ಬಂದಾಗ  ಮನೆಯೊಳಗೆ ಇರುವವರಿಗೆ ಗೊತ್ತಾಗುವ ಹಾಗೆ ಸೀಟಿ ಹೊಡೆಯುವದು…. ಬೆಳಿಗ್ಗೆ ತಿಂಡಿಯ ಬಳಿಕ ಅಪಾರ್ಟ್ಮೆಂಟ್ ಸದಸ್ಯರು ಹಾಕಿದ ಬಟ್ಟೆಗಳನ್ನು ಇಸ್ತ್ರೀ ಮಾಡುವದು… ತರಕಾರಿ, ಹಾಲು ಇತ್ಯಾದಿ  ಮಾರಲು ಬಂದಾಗ ಜೋರಾಗಿ ಕೂಗಿ ಹೇಳುವದು… ಬೇಕಾದವರಿಗೆ  ಬಾಡಿಗೆ ಆಟೋ ಅಥವಾ ಕಾರ್ ವ್ಯವಸ್ಥೆ ಮಾಡಿಕೊಡುವದು…ಖಾಲಿ ಸಮಯದಲ್ಲಿ ಒಂದು ಚೇರ್ – ಟೇಬಲ್ ಹಾಕಿಕೊಂಡು ಕುಳಿತು ಅಪಾರ್ಟ್ಮೆಂಟ್ ಒಳಗೆ ಬರುವ ಅಪರಿಚಿತರ ವಿವರಗಳನ್ನು  ‘ವಿಸಿಟರ್ಸ್ ಬುಕ್’ ನಲ್ಲಿ  ದಾಖಲಿಸುವದು… ಈ ಎಲ್ಲ ಕೆಲಸಗಳಿಗೆ ಸಮಯ ಸಿಕ್ಕಾಗ ರಾಮಪ್ಪನ ಮಕ್ಕಳು ಸಹಾಯ ಮಾಡುತ್ತಿದ್ದರು… ಅಲ್ಲದೇ  ರಾಮಪ್ಪನ ಹೆಂಡತಿ , ಮಗಳು ಸೇರಿ ಐದು ಅಪಾರ್ಟ್ಮೆಂಟ್ ಮನೆಗಳ ಕಸ ಮುಸುರೆ ಕೆಲಸ ಮಾಡುತ್ತಿದ್ದರು. ಹೀಗಾಗಿ  ಬೆಳಿಗ್ಗೆಯಿಂದ ರಾತ್ರಿಯವರೆಗೆ ರಾಮಪ್ಪನ ಕುಟುಂಬ ಸತತವಾಗಿ ಬ್ಯುಸಿಯಾಗಿರುತ್ತಿತ್ತು.

       ***

ನಾನು ಅಪಾರ್ಟ್ಮೆಂಟ್  ಸೊಸೈಟಿಯ ವೆಲ್ಫೇರ್ ಸೆಕ್ರೆಟರಿಯಾಗಿ ಬಹಳ ವರ್ಷಗಳಿಂದ ಕಾರ್ಯ

ನಿರ್ವಹಿಸುತ್ತಿದ್ದರಿಂದ ನನ್ನನ್ನು ಕಂಡರೆ ರಾಮಪ್ಪನ ಕುಟುಂಬಕ್ಕೆ ಗೌರವ… ನನಗೂ ರಾಮಪ್ಪನೆಂದರೆ ಅಚ್ಚು ಮೆಚ್ಚು… ಅಲ್ಲದೇ ನಮ್ಮ ಮಕ್ಕಳ ಬಟ್ಟೆಗಳನ್ನು ಪೂರ್ತಿ ಹಳತಾಗುವ ಮುಂಚೆಯೇ ರಾಮಪ್ಪನ ಕುಟುಂಬಕ್ಕೆ ನೀಡುತ್ತಿದ್ದೆವು… ಅದೇ ರೀತಿ ನನ್ನ ಹೆಂಡತಿ ಕೂಡ ಒಳ್ಳೆಯ ಸೀರೆಗಳನ್ನು ರಾಮಪ್ಪನ ಹೆಂಡತಿಗೆ ಹಬ್ಬ ಹರಿದಿನಗಳಿಗಾಗಿ  ಕೊಡುತ್ತಿದ್ದಳು.

ಒಟ್ಟಿನಲ್ಲಿ  ಅಪಾರ್ಟಮೆಂಟಿನಲ್ಲಿ ವಾಸಿಸುವ ನಲವತ್ತು ಕುಟುಂಬಗಳ ಪೈಕಿ ನಾವೆಂದರೆ ಹೆಚ್ಚು ಇಷ್ಟಪಡುತ್ತಿತ್ತು ರಾಮಪ್ಪನ ಸಂಸಾರ… ಅದೂ ಅಲ್ಲದೆ ಆಗಾಗ್ಗೆ ನನ್ನ ಹೆಂಡತಿ ಅರುಣ ಅವರ ಮಕ್ಕಳ ಓದಿನ ಬಗ್ಗೆ, ಕುಟುಂಬ ಕ್ಷೇಮದ ಕುರಿತು ವಿಚಾರಿಸುತ್ತಿದ್ದಳು. ಅವರಿಗೆ ಧಿಡೀರ್ ಆಗಿ ಬೇಕಾದಾಗ ಹಣದ ಸಹಾಯ ಮಾಡುತ್ತಿದ್ದೆವು. ಹೀಗಾಗಿ  ನಮ್ಮಿಬ್ಬರ ಕುಟುಂಬಗಳು ಹಲವು ವಿಷಯಗಳಲ್ಲಿ ಪರಸ್ಪರ ಅವಲಂಬಿತವಾಗಿದ್ದವು.

ರಾಮಪ್ಪ ನಮ್ಮ ಮನೆಗೆ ಬಂದು ಮಗಳ ಮದುವೆ ಸಹಾಯಕ್ಕಾಗಿ ಅಹವಾಲು ಸಲ್ಲಿಸಿ ಒಂದು ವಾರವಾಗಿತ್ತು… ತಿಂಗಳ ಎರಡನೆಯ ಭಾನುವಾರದಂದು ಸೆಲ್ಲಾರ್ ಆಫೀಸ್ ರೂಮಿನಲ್ಲಿ ಸಂಜೆ 5 ಘಂಟೆಗೆ ನಡೆಯುವ ಮಾಸಿಕ ಸಭೆಗೆ ತಪ್ಪದೆ ಹಾಜರಾಗಬೇಕೆಂದು ಸುತ್ತೋಲೆಯನ್ನು ರಾಮಪ್ಪನ ಮುಖಾಂತರ ಎರಡು ದಿನ ಮುಂಚೆಯೇ ಕಳಿಸಿ ನಂತರ  ಅದನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕಿಸಿದೆ…

ಈ ಸಭೆಯಲ್ಲಿ ಅರುಣ ನೀಡಿದ ಪ್ಲಾನ್ ತಪ್ಪದೆ ಆಚರಣೆಗೆ ತರಬೇಕೆಂದು ಮನಸ್ಸಿನಲ್ಲೇ ನಿರ್ಧರಿಸಿದೆ. ಅದರಂತೆ ಸಂಜೆ ಸಭೆಗೆ   ಅಪಾರ್ಟ್ಮೆಂಟ್ ನ ಸೊಸೈಟಿ ಸದಸ್ಯರನ್ನು ಉದ್ದೇಶಿಸಿ ನುಡಿದೆ.

“ನಿಮಗೆಲ್ಲಾ ಗೊತ್ತಿರೋ ಹಾಗೆ ನಮ್ಮ ‘ಶ್ರೀನಿಧಿ’ ಅಪಾರ್ಟ್ಮೆಂಟ್ ನ ಕೇರ್ ಟೇಕರ್ ರಾಮಪ್ಪನ ಮಗಳ ಮದುವೆ ಹತ್ತಿರ ಬರ್ತಾ ಇದೆ… ಮಗಳ ಮದುವೆ ಅಂದರೆ ಎಷ್ಟು ಖರ್ಚು ಬರುತ್ತೆ ಅಂತ ಹೆಣ್ಣು ಮಕ್ಕಳನ್ನು ಹೆತ್ತ ತಂದೆಯರಿಗೆ ಗೊತ್ತು… ಆ ಕಾರಣಕ್ಕೆ ರಾಮಪ್ಪ ತನ್ನ ಮಗಳ ಮದುವೆಗೆ ನೆರವಾಗುವಂತೆ ಆರ್ಥಿಕ ಸಹಾಯ ಕೋರಿ ಅರ್ಜಿಯ ಮೂಲಕ ಮನವಿ ಮಾಡಿದ್ದಾನೆ. ಅದನ್ನು ಈಗಾಗಲೇ ತಮಗೆ ತಿಳಿಸಲಾಗಿದೆ. ಆದರೂ ಎಲ್ಲರೂ ದಯವಿಟ್ಟು ಮತ್ತೊಮ್ಮೆ ಅದನ್ನು ಓದಿ ಈ ಉತ್ತಮ ಕಾರ್ಯಕ್ಕೆ ಧನ ಸಹಾಯ ಮಾಡುತ್ತೀರೆಂದು ನಂಬುತ್ತೇನೆ. ಇದು ನಮ್ಮ ನಿಮ್ಮೆಲ್ಲರ ಮನೆಯ ಮದುವೆ ಎಂದು ಭಾವಿಸಿ ಕೈ ಜೋಡಿಸುತ್ತೀರೆಂದು ಆಶಿಸುತ್ತೇನೆ. ರಾಮಪ್ಪನ ಕುಟುಂಬಕ್ಕೆ ನೆರವಾಗಲು ಮೊದಲ ಕಾಣಿಕೆಯಾಗಿ ನಾನು ಹತ್ತು ಸಾವಿರ ರೂಪಾಯಿಗಳನ್ನು  ನೀಡುತ್ತಿರುವೆ…” ಎಂದು ಘೋಷಣೆ ಮಾಡಿ,  ಮಾತು ಮುಗಿಸಿ ಪರ್ಸ್ ನಿಂದ ಹಣ ತೆಗೆದು ಟೇಬಲ್ ಮೇಲಿಟ್ಟೆ….

ಐದು ನಿಮಿಷ ನಿಶ್ಯಬ್ದ ಎಲ್ಲರ ಮಧ್ಯೆ… ನಂತರ ಮೊದಲನೆಯ ಫ್ಲೋರಿನಲ್ಲಿನ ‘ಜಿಪುಣರಲ್ಲಿ ಅತ್ಯಂತ ಜಿಪುಣ..’ ಎಂದು ಬಿರುದು ಪಡೆದ ರಮೇಶ್ ರಾವ್ “ನಾನು ಈ ಉತ್ತಮ ಕಾರ್ಯಕ್ಕೆ ಒಂದು ಸಾವಿರದ ಒಂದು ನೂರ ಹನ್ನೊಂದು ರೂಪಾಯಿಗಳನ್ನು ನೀಡುತ್ತೇನೆ ” ಎಂದು ಜೋರಾಗಿ ಹೇಳಿ ಟೇಬಲ್ ಮೇಲೆ ಹಣವನ್ನು ಇಟ್ಟಕೂಡಲೇ ಉಳಿದವರು ಆಚ್ಚರಿಗೊಂಡರು ಮತ್ತು ಕೊಂಚ ಗಲಿಬಿಲಿಗೆ ಈಡಾದರು  ಕೂಡ!

ಕಾರಣ  ಜಿಪುಣರಲ್ಲಿ ಅಗ್ರಗಣ್ಯನಾದ

ರಮೇಶ್ ರಾವ್ ಅವರೇ ಒಂದು ಸಾವಿರದ  ಒಂದು ನೂರ ಹನ್ನೊಂದು ರೂಪಾಯಿಗಳನ್ನು  ಕೊಟ್ಟಬಳಿಕ ಉಳಿದವರು ಅದಕ್ಕಿಂತ ಹೆಚ್ಚು ಕೊಡಬೇಕಾಯಿತಲ್ಲ ಎನ್ನುವ ಚಿಂತೆ ಶುರುವಾಯಿತು ಮನಸಿನಲ್ಲೇ ಉಳಿದವರಿಗೆ…ಕೆಲವರು ಹೆಚ್ಚು, ಹಲವರು ಕಡಿಮೆ… ಗೂಗಲ್ – ಫೋನ್ ಪೇ ಮುಖಾಂತರ ಹಣವನ್ನು  ರಾಮಪ್ಪನ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು… ಕೆಲವರು ಚೆಕ್ ನೀಡಿದರು… ಇನ್ನು ಹಲವರು ಒಂದೆರಡು  ದಿನಗಳ ಬಳಿಕ ನೀಡುವದಾಗಿ ವಾಗ್ದಾನ ಮಾಡಿದರು…

ಟೀ ಬ್ರೇಕ್ ಬಳಿಕ  ಹಾರ್ಡ್ ಕ್ಯಾಶ್, ಚೆಕ್ ಮುಖಾಂತರ ಬರೆದ ಹಣ,  ರಾಮಪ್ಪನ ಬ್ಯಾಂಕ್ ಖಾತೆಗೆ ಜಮಾ ಅದ ಮೊತ್ತವನ್ನು ಎಲ್ಲ ಲೆಕ್ಕ ಹಾಕಿ ನೋಡಿದಾಗ ಒಟ್ಟು ಎಪ್ಪತ್ತೈದು ಸಾವಿರ ದಾಟಿತ್ತು.  ಕೆಲವರು ಇಷ್ಟದಿಂದ ಮತ್ತೆ ಹಲವರು ಕಷ್ಟದಿಂದ  ಮನಸ್ಸಿನಲ್ಲೇ ಶಪಿಸುತ್ತ  ನೀಡಿದ್ದು ಸುಳ್ಳಲ್ಲ!

ರಾಮಪ್ಪ ದಂಪತಿಗಳನ್ನು ಕರೆದು ಆ ಹಣವನ್ನು ಅವರಿಗೆ ನಾನು ನೀಡಿದಾಗ 

ಅವರು ಕಣ್ಣಲ್ಲೇ ಕೃತಜ್ಞತೆ ವ್ಯಕ್ತಪಡಿಸಿದರು…

 ಹಲವು  ದಿನಗಳ ಬಳಿಕ ರಾಮಪ್ಪನ ಸ್ವಗ್ರಾಮದಲ್ಲಿ  ಮದುವೆ ಬರುವ ಭಾನುವಾರ ನಡೆಯಲಿದೆ… ಎಲ್ಲಾರು ತಪ್ಪದೆ  ಬರಬೇಕೆಂದು ಮನವಿ ಮಾಡಿದ ಪತ್ರವನ್ನು ಲಗ್ನ ಪತ್ರಿಕೆಯ ಜೊತೆ  ನೋಟಿಸ್ ಬೋರ್ಡಿಗೆ ಹಾಕಿದ ರಾಮಪ್ಪ. ನಮಗೆ ಪ್ರತ್ಯೇಕವಾಗಿ ಲಗ್ನ ಪತ್ರಿಕೆ ಕೊಟ್ಟರು ರಾಮಪ್ಪ ದಂಪತಿಗಳು.

ನಂತರ ಉಳಿದ ಸೊಸೈಟಿ ಸದಸ್ಯರ ಬಳಿ ಹೋಗಿ  ಮದುವೆಗೆ ಬರಲು ಹೇಳಿ ಬಂದ ರಾಮಪ್ಪ.

ಸರಿಯಾಗಿ ಹತ್ತು ದಿನಗಳ ಬಳಿಕ ರಾಮಪ್ಪ ದಂಪತಿಗಳು ಹೊಸದಾಗಿ ಮದುವೆಯಾದ ಮಗಳು – ಅಳಿಯನೊಂದಿಗೆ ಬಂದು ನಮ್ಮಿಬ್ಬರ ಕಾಲಿಗೆ ನಮಸ್ಕಾರ ಮಾಡಿದರು.

ನನ್ನ ಹೆಂಡತಿ ರಾಮಪ್ಪ ದಂಪತಿಗಳಿಗಷ್ಟೇ ಅಲ್ಲ ಹೊಸ ದಂಪತಿಗಳಿಗೂ ನೂತನ ವಸ್ತ್ರಗಳನ್ನು ನೀಡಿದಳು.  ಜೊತೆಗೆ ಅರಿಶಿಣ, ಕುಂಕುಮ, ಹಸಿರು ಬಳೆಗಳನ್ನು ನೀಡಿ ಸೌಭಾಗ್ಯವತಿಯಾಗಿ ನೂರು ವರುಷ ಸಂತೋಷದಿಂದ ಬಾಳು ಎಂದು ರಾಮಪ್ಪನ ಮಗಳಿಗೆ ಆಶೀರ್ವಾದ ಮಾಡಿದಳು. ಈ ಸತ್ಕಾರದಿಂದ ಅವರಿಗಾದ ಸಂತೋಷವನ್ನು ಅವರ ಕಣ್ಣಿಂದ ಹೊರ ಬಂದ ಆನಂದಭಾಷ್ಪಗಳೇ ಸಾಕ್ಷಿ ಹೇಳುತ್ತಿದ್ದವು…

ತಮ್ಮ ಮಗಳ ಮದುವೆ ಅದ್ದೂರಿಯಾಗಿ ನಡೆದಿದ್ದಕ್ಕೆ ನಾನು ಕಾರಣ ಎಂದು ಸೊಸೈಟಿಯ ಮೂರು ನಾಲ್ಕು ಸದಸ್ಯರ ಮುಂದೆ ರಾಮಪ್ಪ ಹೇಳಿದ್ದನಂತೆ… ಅದು ನನ್ನ ಕಿವಿಗೂ ತಲುಪಿತ್ತು… ಸಾರ್ ಮುತುವರ್ಜಿ ವಹಿಸಿಕೊಂಡು ಸೊಸೈಟಿ ಮೀಟಿಂಗಿನಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಹಣ ಕೂಡಿಸಿ ಕೊಡದಿದ್ದರೆ ನಾನು ಮಗಳ ಮದುವೆ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ ಎಂದು ನನ್ನನ್ನು ಅವರಿವರ ಮುಂದೆ ಮನಸ್ಫೂರ್ತಿಯಿಂದ  ಹೊಗಳಿದ್ದ ಸುದ್ದಿ ಕೂಡ ನನಗೆ ಮುಟ್ಟಿತ್ತು…

ನನ್ನ ಮೊದಲ ದೇಣಿಗೆಯು ಇತರರಿಗೆ ಮೇಲ್ಪಂಕ್ತಿ ಆಗಿ ರಾಮಪ್ಪನ ಮಗಳ ಮದುವೆಗೆ ನೆರವು ಹರಿದು ಬಂದದ್ದು ನನಗೂ ಸಂತೋಷ ತಂದಿತ್ತು… ಸಾಲದ ಬದಲು ವಾಪಸು ಮರಳಿಸುವ ಅವಶ್ಯಕತೆ ಇಲ್ಲದ ಸಹಾಯ ಧನದಿಂದ ರಾಮಪ್ಪನಿಗೆ ತುಂಬಾ ಉಪಯೋಗವಾಗಿತ್ತು… ‘ಹನಿ ಹನಿ ಕೂಡಿದರೆ  ಹಳ್ಳ’ ಎನ್ನುವ  ನಾಣ್ಣುಡಿ ರಾಮಪ್ಪನ ವಿಷಯದಲ್ಲಿ ನಿಜವಾಗಿತ್ತು. ಅಲ್ಲದೇ ಒಬ್ಬ ಮನುಷ್ಯನಾಗಿ ಇನ್ನೊಬ್ಬನ ಕಷ್ಟಕ್ಕೆ ಸ್ಪಂದಿಸಿದ ತೃಪ್ತಿ ನನಗಾಗಿತ್ತು.

ವಾಸ್ತವವಾಗಿ ಸೊಸೈಟಿ ಮೀಟಿಂಗ್ ಮಾಡಿ ಎಲ್ಲ ಸದಸ್ಯರನ್ನು ಸೇರಿಸಿ ರಾಮಪ್ಪನ ಮಗಳ  ಮದುವೆ ವಿಷಯ ಪ್ರಸ್ತಾವಿಸಿ ಹಣ ಸಂಗ್ರಹ ಮಾಡುವ ಐಡಿಯಾ ಕೊಟ್ಟ ನನ್ನ ಹೆಂಡತಿ ಅರುಣಗೆ  ಇದರ ಕ್ರೆಡಿಟ್ ಸೇರಬೇಕೆ ಹೊರತು ನನಗಂತೂ ಅಲ್ಲವೇ ಅಲ್ಲ!

          ————————————–

ರಾಘವೇಂದ್ರ ಮಂಗಳೂರು

22 thoughts on “ರಾಘವೇಂದ್ರ ಮಂಗಳೂರು-ಕಥೆ- ಮದುವೆಗೆ ಹಣ ಸಹಾಯ

  1. ನಿಜವಾಗಿಯೂ ನಿಮ್ಮ ಶ್ರೀಮತಿ ಬುದ್ಧಿವಂತರು. ಕಾಳಜಿ ತೋರಿಸಿದ ಹಾಗೆ ಆಯಿತು ಅಲ್ಲದೇ ಹಣ ಸಂಗ್ರಹದ ವ್ಯವಸ್ಥೆ ಕೂಡಾ ಆಯಿತು. ಧನ್ಯರು ನೀವು. ಸೂಪರ್ !

  2. ವಾಸ್ತವ ಕಥಾವಸ್ತುವಿನೊಂದಿಗೆ ಮೂಡಿಬಂದ ಕಥೆ ‘ಮದುವೆಗೆ ಹಣ ಸಹಾಯ’ ನಿಜಕ್ಕೂ ಇತರರಿಗೆ ಮಾದರಿಯಾಗುವ ಮಾರ್ಗಸೂಚಿ. ಕಥೆಯನ್ನು ಓದುವಾಗ ನಮ್ಮ ಅಪಾರ್ಟ್ಮೆಂಟ್ನಲ್ಲಿ ಇತ್ತೀಚೆಗೆ ನಡೆದ ಇಂತಹ ಘಟನೆ ನೆನಪಾಯಿತು. ನಮ್ಮ ಅಪಾರ್ಟ್ಮಮೆಂಟಿನ 44 ಫ್ಲ್ಯಾಟ್ಗಳಲ್ಲಿ ಕೇವಲ ಇಪ್ಪತ್ತು ಭರ್ತಿಯಾಗಿದ್ದವು. ಸೆಕ್ಯೂರಿಟಿ ಮಗನಿಗೆ ಹೊಸದಾಗಿ ಶಾಲೆಗೆ ಸೇರಿಸಲು 22000/- ಬೇಕಾಗಿತ್ತು. ನಮ್ಮ whatsapp group ನಲ್ಲಿ ಈ ವಿಷಯ ಪ್ರಸ್ತಾಪವಾದದ್ದೇ ತಡ ಒಂದೆರಡು ಗಂಟೆಗಳಲ್ಲಿ ಹಣ ಜಮಾವಣೆಯಾಗಿ ಆ ಹುಡುಗ ಶಾಲೆಗೆ ಸೇರುವಂತಾಯಿತು. ನಮ್ಮಲ್ಲಿ ಸೊಸೈಟಿಯಿನ್ನೂ ಆಗಿಲ್ಲ. ಪ್ರತಿಭಾ ಮೇಡಂ ಅನ್ನುವವರು ಎಲ್ಲದರ ಮುತುವರ್ಜಿ ವಹಿಸುವ ಧೀಮಂತ ಮಹಿಳೆ.

    ಎಲ್ಲರೂ ಯಾವುದಾದರೂ ಅವಶ್ಯಕವಾದ ಜವಾಬ್ದಾರಿಯನ್ನು ಕೂಡಿ ಹಂಚಿಕೊಂಡರೆ ಅದರಲ್ಲಿ ವೈಯಕ್ತಿಕವಾಗಿ ಆರ್ಥಿಕ ಭಾರವಿರದೆ ಮನಸ್ಸಿಗೆ ನೆಮ್ಮದಿಯೂ ಇರುತ್ತದೆ.

    ಅಭಿನಂದನೆಗಳು

    1. ವಾಚ್ ಮ್ಯಾನ್ ರಾಮಪ್ಪನ ಮಗಳ ಮದುವೆ ಆಗುವದಕ್ಕೆ ಅಪಾರ್ಟ್ ಮೆಂಟ್ ನಿವಾಸಿಗಳ ಸಹಕಾರ, ಧನ ಸಹಾಯ ಮೆಚ್ಚುಗೆ ಗೆ ಪಾತ್ರವಾಗಿದೆ. ಇದು ಆಗುವದಕ್ಕೆ ವೆಲ್ ಫೇರ್ ಸೆಕ್ರೆಟರಿ ಅವರ ಪತ್ನಿಯವರು ಕೊಟ್ಟ ಸಲಹೆ ಯಶಸ್ವಿ ಆಯಿತು.
      ಕಥೆ ಚೆನ್ನಾಗಿದೆ ರಾಘವೇಂದ್ರ ಅವರೇ

  3. ಅಪಾರ್ಟ್ಮೆಂಟ್ ಎಲ್ಲ ಸದಸ್ಯರನ್ನು ಒಂದು ಗುಡಿಸಿ ರಾಮಪ್ಪನ್ ಮಗಳ ಮದುವೆಯನ್ನು ಸಂಭ್ರಮದಿಂದ ಆಗಲು ಕಾರಣಿ ಭೂತರಾಗಿ ಗಂಡ ಮತ್ತು ಹೆಂಡತಿಯ ಒಳ್ಳೆಯ ಬುದ್ದಿವಂತಿಕೆಯಿಂದ
    ಎಲ್ಲರ ಸಹಾಯ ಪಡೆದುಕೊಂಡು ಲಗ್ನವನ್ನು ನಡಿಸಿಕೊಟ್ಟಿರುವದು ಶಾಗ್ಲಾನಿಯ.

  4. ಇಂತಹ ಘಟನೆ ಅಲ್ಲಲ್ಲಿ ನಡೆದಿರುತ್ತದೆ. ರಾಘಣ್ಣ, ನೀವು ಅದಕ್ಕೆ ಕಥೆಯ ಹೂರಣ ತುಂಬಿ ಸೊಗಸಾಗಿ ಸಿದ್ಧಪಡಿಸುವುದರಲ್ಲಿ ಸಿದ್ಧಹಸ್ತರು. ಅಭಿನಂದನೆಗಳು.

  5. ಒಂದು ಸಮಾಯೋಚಿತ ಸಲಹೆ ಬೆಟ್ಟದಂಥ ಕಷ್ಟಕ್ಕೆ ಪರಿಹಾರವಾಯಿತು. ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  6. ಅಂತೂ ರಾಮಪ್ಪನ ಮಗಳ ಮದುವೆಯನ್ನು ವಿಜೃಂಭಣೆಯಿಂದ ಜರುಗುವಂತೆ ಮಾಡಿರುವ ಕಥಾ ಲಹರಿ ಓದುಗರ ಮನ ಸೆಳೆಯದೇ ಇರಲಾರದು. ಶ್ರೀಮತಿಯವರ ಮಾಸ್ಟರ್ ಮೈಂಡ್ ಮೆಚ್ಚುವಂಥಹದು. ಅಭಿನಂದನೆಗಳು.

  7. ಕಥೆ ಚೆನ್ನಾಗಿದೆ. ಚಾಲೆಂಜನ್ನು ಸ್ವೀಕರಿಸಿ, ಹೊಣೆಯನ್ನು ಇತರರಿಗೂ ಹಂಚಿ ಒಂದು ಒಳ್ಳೆಯ ಕಾರ್ಯದ ನಿಭಾವಣೆ ತುಂಬಾ ಹಿಡಿಸಿತು. ಮಂಗಳೂರು ರಾಘವೇಂದ್ರರ ಮಾಂಗಲ್ಯಮ್ ಸಹಾಯತಾನೇನ (ಮದುವೆಗೆ ಹಣ ಸಹಾಯ) ಕಥೆ ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.

  8. ಕೆಲವು ಪ್ರಸಂಗ ಗಳು ..ಬಿಸಿ ತುಪ್ಪ.ವಾಗುತ್ತವೆ. ಅರುಣ ಇಂಥ ಸನ್ನಿವೇಶ.ವನ್ನು ಚಾಕ ಚಕ್ಯತೆ ಯಿಂದ.ನಿರ್ವಹಿಸಿ ಕರಣೇಶು.ಮಂತ್ರಿ ಎಂಬುದಕ್ಕೆ ನಿದರ್ಶನ ವಾಗಿದ್ದಾಳೆ.
    hats off to.aruna

Leave a Reply

Back To Top