ಮೂಗು ಮುರಿಯಬೇಡಿ… ಲಲಿತ ಪ್ರಬಂಧ –  ಗಿರೀಶ ಸೊಲ್ಲಾಪುರ

ಇತರೆ

ಮೂಗು ಮುರಿಯಬೇಡಿ…

ಗಿರೀಶ ಸೊಲ್ಲಾಪುರ

     ಮನುಷ್ಯನ ಮುಖದ ಅಂದ ಹೆಚ್ಚಿಸುವಲ್ಲಿ ಮೂಗಿನ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಹೌದು ಇವತ್ತು ನಾನು ಹೇಳಲು ಹೊರಟಿರುವುದು ಮೂಗಿನ ಕಹಾನಿ. ಮೂಗಿಗೆ ಮೂಗೇ ಸರಿಸಾಟಿ. ಅದು ಪಂಚೇಂದ್ರಿಯಗಳಲ್ಲಿ ಒಂದು. ಮೂಗಿಲ್ಲದ ಮುಖವನ್ನು ಒಂದು ಕ್ಷಣ ಕಲ್ಪಿಸಿಕೊಂಡರೆ ನಿಮ್ಮ ಮುಖದಲ್ಲಿ ನಗೆ ಜಾರಿಗೆ ಬರುವುದು ಪಕ್ಕಾ! ಇಷ್ಟಕ್ಕೂ ಮೂಗು ಅಂದ್ರೆ ಏನು ಅಂತ ತಿಳ್ಕೊಂಡಿದ್ದೀರಾ? “ಅಯ್ಯೋ ಮೂಗಿನ ಬಗ್ಗೆ ನಮಗೆ ಗೊತ್ತಿಲ್ವ?” ಅಂತ ಮೂಗು ಮುರಿಯಬೇಡಿ.

         ಈ ಮೂಗು ಇದೆಯಲ್ಲ ಅದು ದೇವನ ವಿಶಿಷ್ಟ ಕೊಡುಗೆ. ಅಂದಹಾಗೆ ಪ್ರತಿಯೊಬ್ಬ ಮನುಷ್ಯನಿಗೂ ಮೂಗು ಇದ್ದೇ ಇದೆ. ನಾಸಿಕ ಎಂತಲೂ ಕರೆಸಿಕೊಳ್ಳುವ ಮೂಗಿನ ಘನತೆ ಬಹಳ ದೊಡ್ಡದು. ಆರಡಿ ಏಳಡಿ ಉದ್ದದ ಮನುಷ್ಯನನ್ನು ಬದುಕಿ ಓಡಾಡುವಂತೆ ಮಾಡುವುದು ಎರಡು ಇಂಚಿನ ಮೂಗು ಎಂಬುದು ಸುಳ್ಳಲ್ಲ! ಕಣ್ಣಿಲ್ಲ ದಿದ್ದರೆ ಬದುಕಬಹುದು, ಕಿವಿ ಇಲ್ಲದಿದ್ದರೆ ಬದುಕಬಹುದು ಆದರೆ ಮೂಗೇ ಇಲ್ಲದಿದ್ದರೆ…..? ಮನುಷ್ಯನಿಗೆ ಬೇಕಾದ ಉಸಿರಾಟ ಕ್ರಿಯೆಯು ಸರಾಗವಾಗಿ ನಡೆಯಲು ಮೂಗು ಎಂಬ ‘ಮಹಾಶಯ’ ಬೇಕೇ ಬೇಕು.

            ಇನ್ನು ಮೂಗು ಕೆಲವರಲ್ಲಿ ಬದಲಾದ ಆಕಾರದಲ್ಲಿ ರಾರಾಜಿಸುತ್ತದೆ. ಕೆಲವರು ಗಿಣಿ ಯಂತಹ ಮೂಗು (ಡಾ. ರಾಜ್ ತರಹ) ಹೊಂದಿದ್ದರೆ; ಮತ್ತೆ ಕೆಲವರು ದೊಣ್ಣೆ ಮೆಣಸಿನಕಾಯಿಯಂತಹ ದಪ್ಪನೆಯ ಮೂಗು ಹೊಂದಿರುತ್ತಾರೆ. ಮತ್ತೆ ಕೆಲವರು ಕಿರಿದಾದ ಚೋಟು ಮೂಗು, ದುಂಡನೆಯ ಮೂಗು, ಚಪ್ಪಟೆ ಮೂಗು ಹೀಗೆ ವಿಭಿನ್ನ ಮೂಗು ಹೊತ್ತು ತಿರುಗಾಡುತ್ತಾರೆ. ಗಾತ್ರ, ಆಕಾರ ಹೇಗೆ ಇದ್ದರೂ ಮಾಡುವ ಕೆಲಸದಲ್ಲಿ ಮಾತ್ರ ಮೋಸ ತೋರುವುದಿಲ್ಲ ಎಂಬುದು ಮೂಗಿನ ಹೆಗ್ಗಳಿಕೆ ಎನ್ನಬಹುದು. ಇದನ್ನು ವಿವಿಧತೆಯಲ್ಲಿ ಏಕತೆ ಎಂದು ಕರೆಯಬಹುದೇನೋ?! ಪ್ರತಿಯೊಬ್ಬರ ಮೂಗಿಗೆ ಎರಡು ಹೊರಳೆಗಳಿದ್ದು ಥೇಟ್ ಗುಹೆಗಳಂತೆ ಭಾಸವಾದರೂ ಅಚ್ಚರಿಯಿಲ್ಲ! ಈ ಗುಹೆಗಳನ್ನು ಸ್ವಚ್ಛಗೊಳಿಸುವ ಕಾಯಕವನ್ನು ಪ್ರತಿನಿತ್ಯ ಕಾಯಾ-ವಾಚಾ-ಮನಸಾ ಮಾಡಬೇಕಾಗುತ್ತದೆ. ಆದರೆ ಎಲ್ಲೆಂದರಲ್ಲಿ ಈ ಕಾಯಕ ಶುರು ಮಾಡಿಕೊಂಡರೆ ನೋಡುಗರಿಗೆ ಅಸಹ್ಯವೆನಿಸುತ್ತದೆ.

     ಮೂಗು ಭಾವನಾತ್ಮಕವಾಗಿ ಸೂಕ್ಷ್ಮ ಅಂಗ. ಒಂದು ಚಿಕ್ಕ ಧೂಳಿನ ಕಣ ಪ್ರವೇಶಿಸಿದರೂ “ಹೊರಗಿನವರಿಗೆ ಅವಕಾಶವಿಲ್ಲ” ಎಂಬಂತೆ ಆ…ಕ್ಷಿ… ಎನ್ನುವ ಮೂಲಕ ಧೂಳಿನ ಕಣವನ್ನು ಪ್ರತಿಭಟನೆ ಮಾಡುತ್ತದೆ. ಹಾಗೆಲ್ಲ ಸುಲಭಕ್ಕೆ ಹೊರಗಿನವರನ್ನು ಒಳಗಡೆ ಬಿಟ್ಟುಕೊಳ್ಳಲು ತಯಾರಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. ನಿಜಕ್ಕೂ ಅದರ ಪ್ರತಿಭಟನಾ ಸ್ವಭಾವವನ್ನು ಮೆಚ್ಚಲೇಬೇಕು. ಮೂಗು ಮಾಡುವ ಕೆಲಸ ಅಷ್ಟಿಷ್ಟಲ್ಲ. ಥೇಟ್ ಪೊಲೀಸರ ಬುದ್ದಿ ಅದರದು. ವಾಸನೆಯನ್ನು ಗ್ರಹಿಸುವ ಅದರ ವಿಶೇಷ ಶಕ್ತಿಯೇ ಕಾರಣ. ಎಲ್ಲ ಬಗೆಯ ವಾಸನೆಯನ್ನು ಆಘ್ರಾಣಿಸಿ ಮೆದುಳಿಗೆ ಕ್ಷಣಾರ್ಧದಲ್ಲಿಯೇ ಸಂದೇಶ ರವಾನಿಸಬಲ್ಲದು. ನಮಗಿಷ್ಟವಾದ ತಿನ್ನುವ ಪದಾರ್ಥದ ವಾಸನೆ ಬಂದರೆ ಬಾಯಲ್ಲಿ ನೀರು ತರಿಸುವ ಮಾಂತ್ರಿಕ ಶಕ್ತಿಯೂ ಅದಕ್ಕಿದೆ. ಸುಗಂಧದ ವಾಸನೆ ಬೀರಿದಾಗ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಅದೇ ರೀತಿ ಕೆಟ್ಟ ವಾಸನೆ ಬಂದಾಗ ಅಲ್ಲಿಂದ ತುಸು ದೂರ ಎದ್ದು ಹೋಗುವಂತೆ ಕಾಲಿಗೆ ಬುದ್ಧಿ ಹೇಳುವ ಚಾಲಾಕಿಯೂ ಹೌದು. ತನ್ನಲ್ಲಿ ವಿಶೇಷ ರೋಮಗಳನ್ನಿಟ್ಟುಕೊಂಡು ಹೊರಗಿನಿಂದ ಆಕ್ರಮಣಕಾರ ಮೂಗಿನೊಳಗೆ ಸುಲಭವಾಗಿ ನುಸುಳದಂತೆ ಎಚ್ಚರವಹಿಸುತ್ತದೆ.

         ಇಂತಹ ಮೂಗು ಹೆಣ್ಣುಮಕ್ಕಳ ದಿಸೆಯಿಂದ ವರ್ಣನೆಗೆ ಒಳಪಟ್ಟಿದೆ. ಆ ಮೂಲಕ ಮೂಗಿಗೂ ಕೊಂಚ ಗೌರವ ದೊರಕಿದಂತಾಗಿದೆ. ಸಾಹಿತ್ಯದಲ್ಲಿ, ಸಿನಿಮಾ ಹಾಡುಗಳಲ್ಲಿ ಕವಿಗಳಿಂದ ಮೂಗು ಪುಂಕಾನುಪುಂಕವಾಗಿ ವರ್ಣಿಸಲ್ಪಟ್ಟಿದೆ. ಸೌಂದರ್ಯ ಪ್ರೇಮಿಗಳಾದ ಹೆಣ್ಣುಮಕ್ಕಳು ಮೂಗನ್ನು ಕೂಡ ಅಲಂಕಾರಕ್ಕಾಗಿ ಬಳಸುತ್ತಾರೆ. ಅವರು ಧರಿಸುವ ವಿವಿಧ ಬಗೆಯ ಮೂಗುತಿ ಗಳನ್ನು ಕಂಡಾಗ ನಿಬ್ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ! ಹೀಗೆ ಹೆಂಗಳೆಯರು ಮತ್ತಷ್ಟು ಸುಂದರವಾಗಿ ಕಾಣಿಸಲು ಮೂಗು ಸ್ಥಳವಕಾಶ ನೀಡಿದ್ದು ಅದರ ಉದಾರತೆಗೆ ಸಾಕ್ಷಿ!

                ಇಷ್ಟೆಲ್ಲಾ ಹಿರಿಮೆಯನ್ನು ಹೊತ್ತಿರುವ ಮೂಗು ಅನಾವಶ್ಯಕವಾಗಿ ಶಿಕ್ಷೆಗೆ ಒಳಪಟ್ಟಿದೆ. ರಾಮಾಯಣದಲ್ಲಿ ಶೂರ್ಪನಖಿಯ ಮೂಗು ಲಕ್ಷ್ಮಣನಿಂದ ವಧೆಗೆ ಒಳಗಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ವಾತಾವರಣ ಬದಲಾವಣೆಯಿಂದಲೋ, ಸಾಂಕ್ರಾಮಿಕ ವಾಗಿಯೋ ನೆಗಡಿ ಎಂಬ ರೋಗಕ್ಕೆ ತುತ್ತಾಗಿ ಮೂಗು ಕಟ್ಟಿ ಬಿಡುತ್ತದೆ. ನೆಗಡಿ ಒಂದು ಸಾಮಾನ್ಯ ರೋಗವಾದರೂ “ಬುಗುಡಿ ಅಂತಹ ಆಭರಣವಿಲ್ಲ; ನೆಗಡಿಯಂತಹ ರೋಗವಿಲ್ಲ” ಎಂಬ ನಾಣ್ನುಡಿಯು ನೆಗಡಿಯ ಹಿಂಸೆಯನ್ನು ಬಿಂಬಿಸುತ್ತದೆ. ನೆಗಡಿ ಎಂಬ ಮಾಯಾವಿ ಅನಾಮತ್ತಾಗಿ ಮೂಗಿನ ಮೇಲೆ ದಾಳಿ ಮಾಡಿ ಬಿಡುತ್ತದೆ. ಈಗಂತೂ ಯಾರೋ ಮಾಡಿದ ಲಂಪಟತನದಿಂದ ಕರೋನ ವೈರಸ್ ರೂಪಾಂತರಗೊಂಡು ಜಗತ್ತನ್ನೇ ತಲ್ಲಣಗೊಳಿಸಿದೆ. ಈ ರಣಭೀಕರ ವೈರಸ್ ನಮ್ಮ ದೇಹ ಸೇರುವುದು ಮೂಗಿನ ಮೂಲಕ ಎಂಬುದು ಕಳವಳಕಾರಿ ಸಂಗತಿ. ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ’ ಎಂಬ ಗಾದೆ ಮಾತು ಮೂಗಿನ ವಿಷಯದಲ್ಲಿ ದಿಟವಾಗಿದೆ. ಅದು ಹೇಗೆ ಅಂತೀರಾ? ಕಣ್ಣು ಮಾಡುವ ತಪ್ಪಿಗೆ ಚಸ್ಮಾ ಎಂಬ ಭಾರವನ್ನು ಮೂಗು ಹೊರಬೇಕಾಗುತ್ತದೆ. ಅದೇ ರೀತಿ ಇನ್ನೊಬ್ಬರ ವಿಚಾರದಲ್ಲಿ ಪದೇಪದೇ ಭಾಗವಹಿಸುವುದನ್ನು ಕಂಡು “ನನ್ನ ವಿಷಯದಲ್ಲಿ ಮೂಗು ತೋರಿಸಬೇಡ” ಎಂದು ಗದರುತ್ತೇವೆ. ಇಲ್ಲಿಯೂ ಬಡಪಾಯಿ ಮೂಗು ಆಪಾದನೆಗೆ ಒಳಗಾಯಿತು. ಪ್ರಾಥಮಿಕ ಶಾಲೆಯಲ್ಲಿ ತಪ್ಪು ಉತ್ತರ ನೀಡಿದಾಗ ಸರಿ ಉತ್ತರ ಕೊಟ್ಟವನಿಂದ ಶಿಕ್ಷೆ ಕೊಡಿಸಲು ಗುರುಗಳು “ಮೂಗು ಹಿಡಿದು ಕಪಾಳಕ್ಕೆ ಹೊಡೆ” ಎಂದು ಆಜ್ಞೆ ಮಾಡಿದ್ದು ಎಲ್ಲರಿಗೂ ನೆನಪಿರುತ್ತದೆ. ಇಲ್ಲಿ ತಪ್ಪು ಉತ್ತರ ಹೊರಹಾಕಿದ ಬಾಯಿಯು ಯಾವ ಶಿಕ್ಷೆಯೂ ಇಲ್ಲದೆ ಬಚಾವಾಯಿತು! ಇನ್ನು ಊದುಬತ್ತಿಯ ಹಾಗೂ ಪೇಂಟ್ ವಾಸನೆಯ ಅಲರ್ಜಿ ಇದ್ದವರಿಗಂತೂ ಸೀನುಗಳು ಹೇಗೆ ಬರುತ್ತವೆ ಎಂದರೆ ಟ್ರಾಫಿಕ್ ನಲ್ಲಿ ಹಸಿರು ದೀಪ ಬಂದಾಗ ಒಂದಾದ ಮೇಲೆ ಒಂದರಂತೆ ವಾಹನಗಳು ಹೇಗೆ ಸಾಗುತ್ತವೆಯೋ ಹಾಗೆ. ಆ ಸಂದರ್ಭದಲ್ಲಿ ಮೂಗು ಕತ್ತರಿಸಿಯೇ ಬಿಡೋಣ ಅನ್ನಿಸಿರುತ್ತದೆ ಅವರಿಗೆ. ಆದರೆ ಅವಾಗ “ನೆಗಡಿಗೆ ಅಂಜಿ ಮೂಗು ಕತ್ತರಿಸಿಕೊಳ್ಳಬಾರದು” ಎಂಬ ಗಾದೆಮಾತು ಉಪಯೋಗಕ್ಕೆ ಬರುತ್ತದೆ.

            ಅದೇನೇ ಇರಲಿ ಮೂಗಿನ ಕಾಳಜಿಯನ್ನು ಮಾಡೋಣ. ಅದಕ್ಕಾಗಿ ಒಂದಷ್ಟು ಅನುಲೋಮ ವಿಲೋಮ, ಭಸ್ತ್ರಿಕಾ ಪ್ರಾಣಾಯಾಮ, ನಾಡಿಶೋಧನ ವಿಧಾನಗಳನ್ನು ಗುರುಮುಖೇನ ಕಲಿತು ಪ್ರತಿನಿತ್ಯ ಅಭ್ಯಾಸ ಮಾಡಿ ಸ್ವಸ್ಥ ಜೀವನ ಸಾಗಿಸೋಣ.


Leave a Reply

Back To Top