ಕಾವ್ಯಯಾನ

ಈ ಚಳಿಗೆ ದಯೆಯಿಲ್ಲ.

Woman In Grey Jacket

ದಾಕ್ಷಾಯಿಣಿ ವಿ ಹುಡೇದ

ಈ ಚಳಿಗೆ ದಯೆಯಿಲ್ಲ

ಈ ಚಳಿಗೆ ದಯೆಯಿಲ್ಲ ;
ಬೀಸಿ ತಂಗಾಳಿ
ಮಂಜನು ಉದುರಿಸಿ
ಪಕ್ಕೆಲುಬುಗಳಲಿ ನಡುಕ ಹುಟ್ಟಿಸಿ
ಹೊಕ್ಕಳ ನಡು ಮಧ್ಯದಿಂದ ನಿನ್ನ ನೆನಪಿಗೆ ಆಹ್ವಾನ ನೀಡಿದೆ.

ಈ ಚಳಿಗೆ ದಯೆಯಿಲ್ಲ ;
ನಿನ್ನ ಬಿಸಿಯಪ್ಪುಗೆಯ
ಬಿಸುಪಿಗೆ ಸವಾಲೊಡ್ಡಿ
ಸೆಣಸಾಡಿ ಸೋತದ್ದಕ್ಕೀಗ
ಸೇಡು ತೀರಿಸಿಕೊಳ್ಳುತ್ತಿದೆ,
ಒಂಟಿ ಹೆಣ್ಣ ಕಣ್ಣ ಕಾಡಿದೆ
ಅಪ್ಪಿ ನನ್ನನೇ ಬೇಡಿದೆ.

ಈ ಚಳಿಗೆ ದಯೆಯಿಲ್ಲ ;
ನೀನಿಲ್ಲದ ಈ ಘಳಿಗೆಗಳಲ್ಲಿ
ಇದನ್ನೆಲ್ಲ ಎದುರಿಸುವ
ವಿಫಲ ಯತ್ನ ನಡೆದೇ ಇದೆ ;
ವ್ಹಿಸ್ಕಿ, ರಮ್ಮು, ಟಕೀಲಾಗಳ ಜೊತೆ ನಿನ್ನ ಬೆರೆಸಿ ಕುಡಿದು ಸೋತಿದ್ದೇನೆ.

ಈ ಚಳಿಗೆ ದಯೆಯಿಲ್ಲ ;
ಮೈ ಮೇಲೆ ದಾಳಿ ಮಾಡಿ
ಸೊಕ್ಕಿದೆದೆಗಳ ಮೇಲೆ ಪತಾಕೆ ಹಾರಿಸಿದೆ ;
ನಿನ್ನ ನೆನಪ ಮೆರವಣಿಗೆಯ ದೊಂದಿ ಹಿಡಿದಿದೆ.

ಈ ಚಳಿಗೆ ದಯೆಯಿಲ್ಲ ;
ವಿರಹದುರಿಗೆ ಸಿಲುಕಿದವಳ ಅಣಕಿಸಿದೆ,
ಏನು ಕುಡಿದರೇನು? ಕುಡಿಯಬೇಕಿದ್ದವನನ್ನು ಕುಡಿದಿದ್ದರೆ
ಹೀಗೆ ನಡುಗಬೇಕಿರಲಿಲ್ಲ ಎಂದು ಚಾಡಿ ಹೇಳಿದೆ.

********

Leave a Reply

Back To Top