ಕಲ್ಲು ಹೃದಯ ಅರಳಿತು -ಬಿ.ಟಿ.ನಾಯಕ್ ಅವರಹೊ ಕಥೆ

ಕಥಾ ಸಂಗಾತಿ

ಕಲ್ಲು ಹೃದಯ ಅರಳಿತು

ಬಿ.ಟಿ.ನಾಯಕ್

ಸಾಬಣ್ಣನ ಕುಟುಂಬ ಏಂದರೆ, ಆತನ ಹೆಂಡತಿ ಪಾರವ್ವ, ಮಗ ಪರಮೇಶಪ್ಪ, ಸೊಸೆ ಸರಸ್ವತಿ ಮತ್ತು ಮೊಮ್ಮಕ್ಕಳಾದ ಬೀರೇಶ ಮತ್ತು ಹನುಮ. ಸಾಬಣ್ಣನ ಕೃಷಿ ಕೆಲಸ ಯಾರಿಗೂ ಬರುತ್ತಿರಲಿಲ್ಲ. ಆತ ತನ್ನ ಕೃಷಿ ಜ್ಞಾನದಿಂದ ಕಷ್ಟಪಟ್ಟು ಮಣ್ಣಿನಿಂದ ಚಿನ್ನವನ್ನು ತೆಗೆಯುತ್ತಿದ್ದ. ಆದರೆ, ಆತ ತೀರಾ ಮುಂಗೋಪಿಯಾಗಿದ್ದ. ಆತನು ಬಹಳೇ ಕೋಪದ ಸ್ವಭಾವದವನು. ಅದೇ ಕಾರಣದಿಂದಲೇ ಆತನು ಏನೂ ಮಾತಾಡದೇ ತನ್ನ ಕುಟುಂಬದಿಂದ ಯಾವಾಗಲೂ ದೂರ ಇರುತ್ತಿದ್ದ. ಆತನಿಗೆ ಯಾವುದೇ ವಿಷಯದ ಬಗ್ಗೆ, ಏನೂ ಹೇಳಿದರೂ, ಎಷ್ಟು ಹೇಳಿದರೂ ಒಪ್ಪದ ಮನುಷ್ಯ. ಆತನಿಗೆ ತಿಳಿಸಿ ಹೇಳುವ ಧೈರ್ಯ ಆತನ ಕುಟುಂಬದಲ್ಲಿ ಯಾರಿಗೂ ಇರಲಿಲ್ಲ. ಮೊದಲು ಅಲ್ಪ ಸ್ವಲ್ಪ ಉತ್ತಮವಿದ್ದ ಆತ ಕಠಿಣವಾಗಲು ಅವನ ಮಗ ಪರಮೇಶಿನೇ ಕಾರಣ ! ಪರಮೇಶಿ ಮದುವೆಯಾಗುವಾಗ, ಹುಡುಗಿಯ ಆಯ್ಕೆಗೆ ಪಟ್ಟು ಹಿಡಿದು ದೂರದ ಸಂಬಂಧಿ ಸರಸ್ವತಿಯನ್ನು ಮದುವೆ ಆಗುವದಾಗಿ ತಿಳಿಸಿದ್ದ. ಅದು ಸಾಬಣ್ಣಗೆ ಇಷ್ಟವಿರಲಿಲ್ಲ. ಸಾಬಣ್ಣ ತನ್ನ ಸೋದರ ಸೊಸೆ ಯನ್ನು ತಂದು ಕೊಳ್ಳಬೇಕೆಂದಿದ್ದ. ಹಾಗೆಯೇ ಪಾರವ್ವ ಕೂಡ ತನ್ನ ಸಹೋದರನ ಮಗಳನ್ನು ತರಬೇಕೆಂದಿದ್ದಳು. ಈ ಇಬ್ಬರ ಆಯ್ಕೆ ಧಿಕ್ಕರಿಸಿ ಪರಮೇಶಿ ಸರಸ್ವತಿಯನ್ನು ವಿವಾಹವಾಗಿದ್ದ. ಏನೋ ಮನಸಿಲ್ಲದೆಯೇ ಅವನ ತಂದೆ, ತಾಯೀ ಒಪ್ಪಿ ಕೊಂಡಿದ್ದರು. ಪಾರವ್ವಳ ಧ್ವನಿ ಅಷ್ಟು ಗಟ್ಟಿಯಾಗಿರಲಿಲ್ಲ, ಆದರೆ, ಸಾಬಣ್ಣನ ಹಠ ಬಹಳ ಕಠೋರ ಇತ್ತು. ಹಾಗಾಗಿ, ಅಗಾಗ ಬೆಂಕಿಯಾಗಿ ಬಿಡುತ್ತಿದ್ದ ! ಆದರೇ, ನಿರ್ವಾಹವಿಲ್ಲದೇ ಎಲ್ಲರೂ ಸೇರಿ ಸಂಸಾರ ಮಾಡುತ್ತಿದ್ದರು. ಸಾಬಣ್ಣ ಪರಮೇಶಿ ಮತ್ತು ಸರಸ್ವತಿ ಕಡೆಗೆ ಸನ್ನೆ ಮಾತ್ರ ಮಾಡಿ ‘ಹ್ಞೂಂ’ ,’ ಹಾಂ’ ಎಂದು ಮಾತ್ರ ಹೇಳುತ್ತಿದ್ದ. ಪರಮೇಶಿಗಾದರೋ, ತನ್ನ ಅಪ್ಪ ಬಹು ಬೇಗ ಸುಧಾರಿಸಿಕೊಳ್ಳಲಿ ಎಂದು ದೇವರಲ್ಲಿ ಯಾವಾಗಲೂ ಪ್ರಾರ್ಥಿಸುತ್ತಿದ್ದ.

ಹೀಗಿರುವಾಗ, ಒಂದು ದಿನ ಕುಟುಂಬದವರು ಎಲ್ಲರೂ ಸೇರಿ ಊಟದ ಬುತ್ತಿ ಕಟ್ಟಿಕೊಂಡು ತಮ್ಮ ಹೊಲಕ್ಕೆ ಹೋಗಿ ಅಲ್ಲಿಯೇ ಎಲ್ಲರೂ ಸಮಯ ಕಳೆಯಲು ನಿರ್ಧಾರ ಮಾಡಿದರು. ಆಗ ಮೊದ ಮೊದಲು ಧಿಕ್ಕರಿಸಿದ ಸಾಬಣ್ಣ, ಪಾರವ್ವನ ಒತ್ತಾಯಕ್ಕೆ ಮಣಿದು ‘ಹ್ಞೂಂ’ ಎಂದ. ಹಾಗಾಗಿ, ಎಲ್ಲ ಸಿಹಿ ತಿಂಡಿ ತಿನಿಸುಗಳನ್ನು ಮತ್ತು ಇತರೇ ಊಟದ ಬುತ್ತಿಯನ್ನು ತಯಾರು ಮಾಡಿಕೊಂಡು ಎಲ್ಲರೂ ಸೇರಿ ಎತ್ತಿನ ಚಕ್ಕಡಿಯಲ್ಲಿ ಹೊರಟರು. ಸುಮಾರು ಒಂದು ಅಥವಾ ಒಂದೂವರೆ ಕಿಲೋಮೀಟರು ದೂರ ಇರುವದರಿಂದ ತಲುಪಲು ಸ್ವಲ್ಪ ತಡವೇ ಆಯಿತು. ಅಲ್ಲಿ ಒಂದು ದೊಡ್ಡ ಮರವಿತ್ತು. ಮರಕ್ಕೆ ಹೊಂದಿಕೊಂಡು ಒಂದು ಚೌಕಾಕಾರದ ಕಟ್ಟೆಯನ್ನು ಸಾಬಣ್ಣ ಕಟ್ಟಿಸಿದ್ದ. ಅವರೆಲ್ಲ ಅಲ್ಲಿಗೆ ಬಂದಾಗ ಜಮಖಾನೆಯನ್ನು ಹಾಸಿ , ಅದರ ಮೇಲೆ ಕುಳಿತು ಸಕತ್ತಾಗಿ ಭೋಜನಮಾಡಿ ಹರಟೆ ಹೊಡೆಯುತ್ತಿದ್ದರು. ಅದರ ಹಾಗೆಯೆ ಆ ಕಟ್ಟೆಯ ಮೇಲೆ ಈ ಬಾರಿಯೂ ತಂದ ಜಮಖಾನೆಯನ್ನು ಹಾಸಿ , ಎಲ್ಲ ತಿನಿಸುಗಳನ್ನು ಮತ್ತು ತಟ್ಟೆಗಳನ್ನು ಜೋಡಿಸಿದರು. ಆಗ, ಸಾಬಣ್ಣನು ತನ್ನ ಜೀವನದ ಅತ್ಯಮೂಲ್ಯವಾದ ಮತ್ತು ಬಹಳೇ ಇಷ್ಟವಾದ ಹೊಲವನ್ನು ಸುತ್ತು ಹಾಕಲು ಹೋರಟನು. ಅಲ್ಲಿ ಹುಲುಸಾದ ಪೈರು, ತಲೆ ಹಾಕುವಂತಿರುವ ಸೂರ್ಯಕಾಂತಿ ಬೆಳೆ ಮತ್ತು ನಿರಿ ನಿರಿ ಜೋಳದ ತೆನೆಗಳನ್ನೂ ನೋಡಿ ಆನಂದ ಪಟ್ಟನು. ಸುಮಾರು ಒಂದು ಘಂಟೆ ಕಾಲ ಆತ ಹಾಗೆಯೆ ಕಳೆದ. ಪರಮೇಶಿ ಜೋರಾಗಿ ಕೂಗಿದ ಹಾಗೆ ಅನ್ನಿಸಿದೆ ಆತ ಆ ಧ್ವನಿಯ ಕಡೆಗೆ ಹೊರಟ. ಆ ಕಟ್ಟೆಯ ಕಡೆಗೆಯೇ ಬಂದ. ಅಲ್ಲಿ ಆಗಲೇ, ಎಲ್ಲರಿಗೂ ತಟ್ಟೆಯಲ್ಲಿ ಊಟ ಬಡಿಸಲಾಗಿತ್ತು. ಆತ ಕೈ ಕಾಲು ತೊಳೆದುಕೊಂಡು ಕಟ್ಟೆಯ ಮೇಲೆ ಕುಳಿತನು. ಹಾಗೆಯೆ ಪರಮೇಶಿ ಕೂಡ ಆತನ ಜೊತೆಗೆ ಕುಳಿತುಕೊಂಡನು. ಅಷ್ಟರಲ್ಲಿ ಸರಸ್ವತಿ ಜೋರಾಗಿ ಕೂಗಿಕೊಂಡ ಧ್ವನಿ ಕೇಳಿಸಿತು. ‘ಓ … ಹನುಮ….ಓ ಹನುಮ’
ಆಗ ಸಾಬಣ್ಣ ಮತ್ತು ಪರಮೇಶಿಯ ಲಕ್ಷ್ಯ ಸರಸ್ವತಿಯ ಧ್ವನಿ ಕಡೆಗೆ ಹೋಯಿತು. ಪರಮೇಶಿ ಅವಳ ಹತ್ತಿರ ಹೋಗಿ ;
‘ಏನದು ಯಾಕೆ ಹಾಗೆ ಕೂಗುತ್ತಿಯಾ ?’ ಎಂದು ಕೇಳಿದ ಗಾಭರಿಯಾಗಿ; ‘ಹನುಮ ಆಡುತ್ತ ಹೊಲದೊಳಕ್ಕೆ.. ಹೋಗಿದ್ದಾನೆ ಕಾಣಿಸುತ್ತಿಲ್ಲ.. ಸ್ವಲ್ಪ ನೀವು ನೋಡಬಾರದೇ ?’
‘ಸರಿ.. ಸರಿ… ನಾನು ಹೋಗುತ್ತೇನೆ’ ಎಂದು ಹೊಲದಲ್ಲಿ ಬೆಳೆಯ ಒಳಗೆ ಹುಡುಕುತ್ತ ಹೋದ.
ಇತ್ತ ಸಾಬಣ್ಣನಿಗೆ ಏಕೋ ಕಸಿವಿಸಿಯಾಯಿತು. ಆತನೂ ಊಟ ಮಾಡದೇ ‘ ಪರಮೇಶಿ ‘ ಬರಲಿ ಎಂದು ಸುಮ್ಮನೆ ಕುಳಿತ.
ಆಗ ಸರಸ್ವತಿ ಕಟ್ಟೆಯ ಹತ್ತಿರ ಬಂದು ತನ್ನ ಅತ್ತೆಗೆ ಹೇಳಿದಳು;
‘ಅತ್ತೇ …… ಹನುಮ ಕಾಣುತ್ತಿಲ್ಲ… ಭಯವಾಗ್ತಿದೆ ‘
‘ಅದೇನಮ್ಮಾ ಈಗ ನೋಡ್ತೀಯ. ಇಷ್ಟರವರೆಗೆ ಅವನ ಕಡೆ ಲಕ್ಷ್ಯ ಇರಲಿಲ್ಲವಾ ? ಅದೆಂಥಹ
ಆಸಡ್ಡೆ ನೀನು ?’ ಎಂದಳು ಬೇಜಾರಿನಿಂದ.
ಸರಸ್ವತಿ ಅಳಲು ಆರಂಭಿಸಿದಳು. ಇದನ್ನು ನೋಡಿದ ಸಾಬಣ್ಣ, ಊಟದ ತಟ್ಟೆಯಲ್ಲಿ ಕೈ ಹಾಕಿದ್ದವನು, ಕಟ್ಟೆಯಿಂದ ಕೆಳಗೆ ಇಳಿದು ಕೈ ತೊಳೆದುಕೊಂಡ. ಆಮೇಲೆ ಸುತ್ತಲೂ ನೋಡಿದ. ಸರ್ರನೇ ಅಲ್ಲಿಂದ ಹೊರಟು ಬಿಟ್ಟ.


ಸಾಬಣ್ಣ ತನ್ನದೇ ಒಂದು ದಿಕ್ಕನ್ನು ಆಯ್ಕೆ ಮಾಡಿ ಹಾಗೆಯೇ ನಡೆದ. ಎಡಕ್ಕೆ ಬಲಕ್ಕೆ ಉದ್ದುದ್ದನೆಯ ಬೆಳೆದ ಬೆಳೆಗಳನ್ನು ಭರ್ರನೇ ಸರಿಸುತ್ತ ದಿಕ್ಕೆಟ್ಟು ಹೋಗುವವನಂತೆ ರಭಸವಾಗಿ ಹೋಗುತ್ತಿದ್ದ. ಹಾಗೆ ಹೋಗುತ್ತಿರುವವನು, ಒಮ್ಮೆಲೇ ಗಕ್ಕನೇ ಒಂದು ಕಡೆ ನಿಂತು ಬಿಟ್ಟ. ಅಲ್ಲಿ ನೋಡುತ್ತಾನೆ, ಹನುಮ ಹೆಡೆ ಏತ್ತಿದ ನಾಗರಹಾವಿನೊಡನೆ ಆಟವಾಡುತ್ತಿದ್ದಾನೆ ! ಅದನ್ನು ನೋಡಿ ಸಾಬಣ್ಣಗೆ ಮೈಯೆಲ್ಲಾ ಜುಮ್ ಎಂದಿತು. ಸಾಬಣ್ಣನಿಗೆ ಹಿಂಬದಿಯಾಗಿ ಹಾವು ತಲೆ ಎತ್ತಿ ನಿಂತಿತ್ತು. ಅದು ಹನುಮನ ಕಡೆ ಮುಖ ಮಾಡಿತ್ತು. ಹನುಮನ ಮುಖ ಸಾಬಣ್ಣನಿಗೆ ಕಾಣಿಸುತ್ತಿತ್ತು. ಆದರೆ ಹನುಮ ಆನಂದದಿಂದ ಹಾವಿನ ಕಡೆಗೆಯೇ ನೋಡುತ್ತಿದ್ದ. ತನ್ನ ಎರಡೂ ಕೈಗಳನ್ನು ಮೇಲೆ ಎತ್ತಿ , ಅದು ತಲೆ ಹಾಕಿದಂತೆ ತಾನೂ ತಲೆ ಅಲ್ಲಾಡಿಸುತ್ತಿದ್ದ. ಸಾಬಣ್ಣ ಅಲ್ಲಿಂದ ಸರಿದು, ಮೆಲ್ಲಗೇ ಸಪ್ಪಳ ಮಾಡದೆಯೇ ಹನುಮನ ಬೆನ್ನ ಹಿಂದೆ ಬರಲು ಆಚೆ ನಡೆದ. ಕ್ಷಣದಲ್ಲಿಯೇ, ಆತ ಹನುಮನ ಹಿಂದೆ ಹೋಗಿ ಮುಂದೆ ಹೆಜ್ಜೆ ಹಾಕಿ ಅವನನ್ನು ರಭಸದಿಂದ ಎತ್ತಿ ಕೊಂಡ. ಸಾಬಣ್ಣನನ್ನು ನೋಡಿದ ನಾಗರಹಾವು ಅಲ್ಲಿಂದ ನುಸುಳಿ ಸರಸರನೇ ಹೊರಟು ಹೋಯಿತು. ಸಾಬಣ್ಣಗೆ ಕಣ್ಣಲ್ಲಿ ನೀರು ತುಂಬಿತು ! ಗಂಟಲು ಮಾತಾಡದ ಹಾಗೆ ಉಬ್ಬಿಕೊಂಡಿತು. ಸರಸ್ವತಿ ಮತ್ತು ಪರಮೇಶಿ ಇಬ್ಬರೂ ‘ಹನುಮ…. ಹನುಮ…’ ಎಂದು ಕೂಗುತ್ತಲೇ ಸಾಬಣ್ಣ ಇದ್ದಲ್ಲಿಗೆಯೇ ಬಂದರು. ಆತನ ಮಡಿಲಲ್ಲಿ ಮಗುವನ್ನು ನೋಡಿ ಆತಂಕಗೊಂಡರು. ಸಾಬಣ್ಣ ಗಳ ಗಳನೇ ಅಳುತ್ತಿದ್ದ. ಆತನ ಅಳು ನಿಲ್ಲದಾಗಿತ್ತು. ಸರಸ್ವತಿ ಬಂದು ಮಾವನಿಗೆ ಹೀಗೆ ಹೇಳಿದಳು ; ‘ಮಾವಯ್ಯ ಕೊಡಿ ನನ್ನ ಮಗುವನ್ನು’ ಏಂದಾಗ ಸಾಬಣ್ಣ;
‘ಇಲ್ಲ, ನಾನು ಕೊಡೋದಿಲ್ಲ, ಇದು ನನ್ನ ಮೊಮ್ಮಗು ‘ ಎಂದು ಬಿಕ್ಕುತ್ತಲೇ ಹೇಳಿದ.
ಅವರಿಗೆ ಏನೂ ಅರ್ಥವಾಗಲಿಲ್ಲ. ಆತನ ಕೈಯಲ್ಲಿದ್ದ ಮಗುವನ್ನು ಕೂಡ ಕೇಳಲು ಮತ್ತೇ ಯಾರೂ ಮುಂದೆ ಬರಲಿಲ್ಲ. ಸಾಬಣ್ಣ ಮಗುವನ್ನು ಎತ್ತಿಕೊಂಡು ಕಟ್ಟೆಯ ಕಡೆಗೆ ಸರಸರನೆ ನಡೆದ. ಆತನ ಹಿಂದೆಯೇ ಪರಮೇಶಿ ಮತ್ತು ಸರಸ್ವತಿ ಹೊರಟರು.
ಕಟ್ಟೆಯ ಮೇಲೆ ಕುಳಿತು ಆ ಮುದ್ದು ‘ಹನುಮನನ್ನು’ ಏದೆಗಪ್ಪಿಕೊಂಡು ಮುದ್ದಾಡಿದ. ತಾನು ನೋಡಿದ ದೃಶ್ಯವನ್ನು ಅವರೆಲ್ಲರಿಗೆ ವಿವರವಾಗಿ ಹೇಳಿದ. ಅವರು ಆಶ್ಚರ್ಯ ಚಕಿತರಾದರು !
ಆತನನ್ನು ಸಮಾಧಾನ ಪಡಿಸಿದ ಪರಮೇಶಿ ತಾನೂ ಅಳಲೂ ಪ್ರಾರಂಭಿಸಿದ, ಸರಸ್ವತಿಯೂ ಕಣ್ಣೀರು ಹಾಕಿದಳು. ಆಗ ಸಾಬಣ್ಣ ಹೀಗೆ ಹೇಳಿದ;
‘ದೇವರು ದೊಡ್ಡವನು, ನನ್ನ ಮೊಮ್ಮನಿಗೆ ನನ್ನ ಕಣ್ಣ ಮುಂದೆಯೇ ಯಾವ ತರಹದ ಅಪಾಯ ಆಗಲಿಲ್ಲ’. ಆತನು ಆಕಾಶದ ಕಡೆಗೆ ನೋಡಿ ದೇವರೇ…ನೀನು ನನ್ನನ್ನು ಆತಂಕದಿಂದ ಪಾರು ಮಾಡಿ, ನನ್ನ ಮೊಮ್ಮಗನನ್ನು ಉಳಿಸಿದೆ. ನಿನಗೆ ಅನಂತಾನಂತ ಧನ್ಯವಾದಗಳು ‘ ಎಂದ.
ಹನುಮನನ್ನು ತೊಡೆಯ ಮೇಲೆ ಕೂಡ್ರಿಸಿಕೊಂಡೇ ಊಟಮಾಡಿದ. ನಂತರ, ಉಳಿದವರು ಊಟಮಾಡುವವರೆಗೆ ಹನುಮನನ್ನು ಎತ್ತಿಕೊಂಡು ಮತ್ತೇ ಹೊಲದೊಳಕ್ಕೆ ತಿರುಗಾಡಿ ಬರಲು ಮತ್ತೇ ಹೊರಟುಹೋದ. ಮಗುವನ್ನು ಮೇಲೆತ್ತಿ ಆನಂದಪಡುತ್ತಿದ್ದ. ಎಲ್ಲರೂ ಮನೆಗೆ ಹೋಗುವವರೆಗೆ ಹನುಮ ಸಾಬಣ್ಣನ ಮಡಿಲಲ್ಲಿಯೇ ಇದ್ದ. ಆಗ, ಸಾಬಣ್ಣನ ‘ಕಲ್ಲು ಹೃದಯ’ ಅರಳಿತ್ತು. ಪರಮೇಶಿ ತಲೆ ಎತ್ತಿ
ಆ ದಯಾಮಯೀ ದೇವರಿಗೆ ಧನ್ಯವಾದ ಹೇಳಿದ !


ಬಿ.ಟಿ.ನಾಯಕ್,

12 thoughts on “ಕಲ್ಲು ಹೃದಯ ಅರಳಿತು -ಬಿ.ಟಿ.ನಾಯಕ್ ಅವರಹೊ ಕಥೆ

  1. ಸುಂದರ ಕತೆ. ಬಿ ಟಿ ನಾಯಕರೆ , ನಿಮ್ಮ ಕತೆ ಸರಳವಾಗಿ ಮನಮುಟ್ಟುವಂತೆ ಇದೆ .
    – ಎಸ್ ಆರ್ ಸೊಂಡೂರು ಗಂಗಾವತಿ

    1. ಅನಾಮಿಕರು ನನಗೆ ಪ್ರೋತ್ಸಾಹ ನೀಡುತ್ತಿರುವುದು ಬಹಳೇ ಸಂತೋಷ ತಂದಿದೆ. ಧನ್ಯವಾದಗಳು

Leave a Reply

Back To Top