ಪಾಪ ಅನಿಸುತಿದೆ-ನಿಂಗಮ್ಮ ಭಾವಿಕಟ್ಟಿ ಕವಿತೆ

ಕಾವ್ಯ ಸಂಗಾತಿ

ಪಾಪ ಅನಿಸುತಿದೆ

ನಿಂಗಮ್ಮ ಭಾವಿಕಟ್ಟಿ

ರಾಜಧಾನಿ ಬೆಂಗಳೂರಿನಲ್ಲೂ
ಬೆಚ್ಚಗೆ ಮೊಮ್ಮಕ್ಕಳೊಂದಿಗೆ
ಮನೆಯಲ್ಲಿ ಇರಬೇಕಾದ
ಎಪ್ಪತ್ತರ ಹಿರಿ ಜೀವ
ರೂ. 10 ರೂಪಾಯಿ ಕಿವಿಕಡ್ಡಿ
ಗೋಳಿ ಸೊಪ್ಪು ಹಿಡಿದು
ನಿಂತಕಾರಿಗೆ ಬಾಗಿ ಮಾರುವುದ ಕಂಡು
ಪಾಪ ಅನಿಸುತ್ತಿದೆ

ಸಂದ್ರಗಳ ಸಂಧಿಗಳ ಗಿಜಿ ಗಿಜಿಯಲ್ಲಿ
ಸಿಕ್ಕು
ಮುಂದೆ ಹೋಗದ ಬೈಕುಗಳ
ರಮಿಸುವ ಝೋಮ್ಯಾಟೋ ಹುಡುಗರ
ಹಸಿವು ಕಂಡು ಪಾಪ ಅನಿಸುತ್ತಿದೆ

ತಾರುಣ್ಯದ ಹಬ್ಬದಲ್ಲೂ
ಮುಖ ಬಿಗಿದು ಕರುಣೆ ಪ್ರೀತಿಗಳ
ಕಳೆದುಕೊಂಡು ನಿರ್ಜೀವಿಗಳಂತೆ
ಆಚೀಚೆ ಏನಾದರೂ ತಿರುಗದೆ ನಡೆವ
ಬೊಂಬೆಗಳ ಕಂಡು ಪಾಪ ಅನಿಸುತಿದೆ

ಗಗನಚುಂಬಿ ಕಟ್ಟಡದ ಕೆಲಸದಾಕೆಯ
ಕೂಸು ಷಡ್ಡಿನಲ್ಲಿ ಗಂಟಲಾರಿ ಅಳಲಾಗದೆ
ಗುಸು ಗುಸು ಒದ್ದಾಟಕೆ
ಕ್ರೇನಿನೊಂದಿಗೆ ಕೆಳಗಿಳಿವ ತಾಯಿಯ ಎದೆ ಹಸಿಯಾದುದ
ಕಂಡು ಪಾಪ ಅನಿಸುತ್ತಿದೆ

ಆಟವಾಡುವ ಧನಿಕರ ಮಕ್ಕಳ
ಬೆವರಿಗೆ ನ್ಯಾಪ್ಕಿನ್ ನೀರು ಕೊಡುವ
ಬಡ ಮಕ್ಕಳ ದೈನತೆ ಕಂಡು
ಗೋಡಂಬಿ ತಿನ್ನುತ ಟಿವಿ ನೋಡುವ
ಸಿರಿವಂತೆಯ ಕಾಲು ಎತ್ತಿ ನೆಲ ಒರೆಸುವ
ಅಮ್ಮನ ವಯಸ್ಸು ಕಂಡು
ಪಾಪ ಅನಿಸುತ್ತಿದೆ


ಕೊಟ್ಟಿದ್ದೆ ಹಂಚು ತಿನ್ನಲು
ಜೀವವಿಟ್ಟಿದ್ದೆ ಹೊಂದಿ ಬಾಳಲು
ನಮ್ಮಂತೆ ಅವರೂ ಎಂದು ಎಂದೂ
ಅಂದುಕೊಳ್ಳದವರ ಕಂಡು
ಪಾಪ ಅನಿಸುತ್ತಿದೆ


ನಿಂಗಮ್ಮ ಭಾವಿಕಟ್ಟಿ

ಕಾವ್ಯ ಸಂಗಾತಿ

2 thoughts on “ಪಾಪ ಅನಿಸುತಿದೆ-ನಿಂಗಮ್ಮ ಭಾವಿಕಟ್ಟಿ ಕವಿತೆ

Leave a Reply

Back To Top