ಪ್ರೇಮಲತಾ ಬಸವರಾಜಯ್ಯ ಅವರಿಗೆ
ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021 ಪ್ರದಾನ
ಧಾರವಾಡ: ಇಂಗ್ಲೆಂಡ್ ನಿವಾಸಿ , ಲೇಖಕಿ ಪ್ರೇಮಲತಾ ಬಸವರಾಜಯ್ಯ ಅವರಿಗೆ ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021ನ್ನು ಅ.7 ರಂದು ಬೇಂದ್ರೆ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಶ್ರಾವಣಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ, ಹುಬ್ಬಳ್ಳಿ ಧಾರವಾಡ ಹಾಗೂ ಶ್ರಾವಣ ಬ್ಲಾಗ್ ವತಿಯಿಂದ ಕೊಡಮಾಡಿದ ಮೊದಲ ಪ್ರಶಸ್ತಿ ಇದಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿರಿಯ ಕವಯಿತ್ರಿ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಪ್ರೇಮಲತಾ ಕಳೆದ 20 ವರ್ಷಗಳಿಂದ ಇಂಗ್ಲೆಂಡ್ ನಿವಾಸಿಯಾಗಿ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿದ್ದು ಮಹತ್ವದ ಕೆಲಸ. ಶ್ರಾವಣ ಬ್ಲಾಗ್ ಗೆ ಅವರು ಬರೆಯುವ ಆರೋಗ್ಯದ ಅಂಕಣ ತುಂಬಾ ಉಪಕಾರಿಯಾಗಿದೆ ಎಂದರು. ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು , ಅಕಾಡೆಮಿಗಳು, ಪ್ರಾಧಿಕಾರಗಳು ಏನಾಗಿವೆ ಎಂಬುದೇ ತಿಳಿಯುತ್ತಿಲ್ಲ. ರಚನಾತ್ಮಕ ಕೆಲಸಗಳಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ರಂಗ ಕರ್ಮಿಗಳಾದ ಅರವಿಂದ ಕುಲಕರ್ಣಿ ಮಾತಾನಾಡಿ ಮನುಷ್ಯ ಅನೇಕ ಭಾಷೆಗಳನ್ನು ಕಲಿತಷ್ಟು ಶ್ರೀಮಂತನಾಗುತ್ತಾನೆ ಎಂದರು . ಕನ್ನಡ ಕಟ್ಟುವ ಕೆಲಸವನ್ನು ವಿದೇಶಿ ನೆಲದಲ್ಲಿ ಮಾಡುವ ಪ್ರೇಮಲತಾ ದಂತ ವೈದ್ಯಕೀಯದ ಬಗ್ಗೆ ಬರೆದ ಬಾಯಿಎಂಬ ಬ್ರಾಹ್ಮಾಂಡ ಪುಸ್ತಕ ಉಪಯುಕ್ತ ಎಂದರು.
ಶ್ರಾವಣ ಬ್ಲಾಗ್ ನ ಸಂಪಾದಕ ರವಿಶಂಕರ ಗಡಿಪ್ಪನವರ್ ಮಾತನಾಡಿ ,ವಿದೇಶದಲ್ಲಿದ್ದು ಪ್ರತಿವಾರ ಶ್ರಾವಣಕ್ಕೆ ಪ್ರೇಮಲತಾ ಅವರು ನಮ್ಮ ಬ್ಲಾಗನ ಸ್ಟಾರ್ ಬರಹಗಾರ್ತಿ. ಅವರ ಅಂಕಣಕ್ಕೆ ೫೦ ಸಾವಿರಕ್ಕಿಂತ ಹೆಚ್ಚು ಓದುಗರು ಇದ್ದಾರೆಂಬುದು ಹೆಮ್ಮೆ ಎಂದರು. ಕತೆ, ಕಾವ್ಯ , ಲೇಖನ, ವೈದ್ಯಕೀಯ ಲೇಖನದ ಮೂಲಕ ಹೆಸರು ಮಾಡಿದ್ದಾರೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕಿ ಪ್ರೇಮಲತಾ ಬಸವರಾಜಯ್ಯ ಅವರು ಇಂಗ್ಲೆಂಡನ ಜನರ ಮಾತುಗಾರಿಕೆ, ಅವರ ಸೌಜನ್ಯ ಹಾಗೂ ಭಾರತೀಯರ ಬಗ್ಗೆ ಇರುವ ಗೌರವ ಭಾವನೆಯನ್ನು ಪ್ರೇಕ್ಷಕರಿಗೆ ವಿವರಿಸಿದರು. ಶ್ರಾವಣ ಬ್ಲಾಗ್ ನೀಡಿದ ಪ್ರಶಸ್ತಿ ಯನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ. ಈ ಕಾರಣದಿಂದ ಬೇಂದ್ರೆ ಅವರ ಮನೆ ಹಾಗೂ ಅನೇಕ ಲೇಖಕ- ಲೇಖಕಿಯರನ್ನು ಖುದ್ದಾಗಿ ಕಾಣುವಂತಾಯಿತು . ಅನೇಕ ವರ್ಷಗಳಿಂದ ಕೇವಲ ಪತ್ರ ಹಾಗೂ ಅಂತರ್ಜಾಲದಲ್ಲಿ ಪರಿಚಿತರ ಸ್ನೇಹ ,ಪ್ರೀತಿ ಕಣ್ಣಾರೆ ದಕ್ಕಿತು ಎಂದರು . ಇಂಗ್ಲೆಂಡ್ ಜನರು ಭಾಷೆ ,ಸಂಸ್ಕೃತಿ, ಗ್ರಂಥಾಲಯ, ರೀಡರ್ಸ ಕ್ಲಬ್ ಗೆ ನೀಡಿರುವ ಮಹತ್ವವನ್ನು ಸಹ ಅವರು ವಿವರಿಸಿದರು. ಪ್ರೇಮಾ ಬಾಗಲಕೋಟ ಅವರು ಪ್ರೇಮಲತಾ ಅವರ ಅಂಕಣ ಬರಹ ಹಾಗೂ ಪ್ರಕಟಿತ ವೈದ್ಯಕೀಯ ಪುಸ್ತಕಗಳನ್ನು ಪರಿಚಯಿಸಿದರು.ಶಿವಾನಂದ ನಾಗೂರು ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಸಾಹಿತಿ ಪ್ರಕಾಶ ಕಡಮೆ, ಪತ್ರಕರ್ತ ನಾಗರಾಜ ಹರಪನಹಳ್ಳಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಡಾ.ಬಸು ಬೇವಿನಗಿಡದ ಹಾಜರಿದ್ದು ಸನ್ಮಾನಿತರಿಗೆ ಶುಭ ಹಾರೈಸಿದರು.