ನಿನ್ನಾಣೆ-ಶಾರು ಕವಿತೆ

ಕಾವ್ಯ ಸಂಗಾತಿ

ನಿನ್ನಾಣೆ

ಶಾರು

ನೆನಪ ಪಾತ್ರೆಯಲಿ ಎಸರು ಕುದಿಯುತಿದೆ
ಕಣ್ಹನಿ ಗಲ್ಲ ತಾಗುವ ಮುನ್ನ ಉಕ್ಕದಂತೆ|
ಬೆಸೆದ ಕೈಬೆರಳು ಬಿಸಿಯಾಗಿ ಕರಗುತಿದೆ
ಮೌನವದು‌ ಪದದನಿಲಿ ಮರುಗಿದಂತೆ||

ದಡ ಸಿಗದೆ ದೋಣಿ ನಡುಮಡುವಲಿ ತೊಳಲಿದೆ
ಮುಳುಗದಂತೆ ಮುಂದೆ ಚಲಿಸದಂತೆ|
ತೀರದಲಿ ತೀರದಂತಾಡಿದ ಮಾತು ಮೂಕವಾಗಿದೆ
ಕರಗಲರಿಯದೀ ಕಣ್ಹನಿ ಘನಿಕರಿಸಿದಂತೆ ||

ಅರಿವ ಜಾಗರಣೆಯಲಿ ಪ್ರೀತಿ ವಿರಮಿಸಿದೆ
ಆಳದಗಲದರಿವು ನಿಲುಕದೆ ಪರಿಮಿಸಿದಂತೆ||
ನೀಲ ಬಾನ ಚುಕ್ಕಿ ಕಾಡಿದೆ ಎಣಿಕೆಗೆ ಸಿಗದಂತಿದೆ
ಮಡುಗಟ್ಟಿದ ಮೋಡದಲದು ಮರೆಯಾದಂತೆ||

ಶುದ್ಧ ಪಳುಕಿನ ಸ್ನೇಹವಾರಿಧಿ ಕಣ್ತುಳುಕಿಸಿದೆ
ಹರಿವನದಿಯೆದೆಯಲಿ ಕವಲು ಮೂಡಿದಂತೆ|
ದೂರ ಪಯಣದ ಹಾದಿ ಬಳಲಿ ಸೋತಿದೆ
ಕಸುವು ಕೊಡುವ ಜೀವ ಕಾಣದಂತೆ||

ಉಪಮೆಯದು ಹಾಲಬೆಳದಿಂಗಳಲಿ ಸೋರಿದೆ
ದನಿಪದದಲಿ ನುಣುಚಿ ಕಂಡು ಕಾಣದಂತೆ|
ಏನಿದೇನಿದು ದುಮ್ಮುವ ಭಾವ ಬಿಸಿಲ ಹಣ್ಣಾಗಿದೆ
ತಂಪಿಸಿದರು ತಣಿಯದೆ ಬೇಗೆ ಹೆಚ್ಚಿದಂತೆ||


Leave a Reply

Back To Top