ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ

ಜುಲ್ ಕಾಫಿಯಾ ಗಝಲ್

ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆ
ಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ

ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆ
ಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ

ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರ
ಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ

ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣ
ಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ

ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು ‘ವಿಜಯ’ ಪಥದ ಜಾಡು ಹಿಡಿದು
ಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ.

————————————

ವಿಜಯಪ್ರಕಾಶ್ ಕೆ

ರೆಪ್ಪೆಗಳನು ಮಿಟುಕಿಸದ ಕಂಗಳಲಿ ಅಪೇಕ್ಷೆಗಳ ಕೊಲ್ಲುವುದು ಖಾತ್ರಿಯಾಗಿದೆ
ತುಡಿತಕೆ ಮಿಡಿಯದ ಮನದಿ ಮರುಕಗಳ ಮುದುಡಿಸುವುದು ಖಾತ್ರಿಯಾಗಿದೆ

ಸ್ವೇಚ್ಛೆಯಲಿ ಘೀಳಿಡುತಿಹುದು ಮುಗ್ಧತೆಯ ಛಾಯೆ ಕುಣಿಕೆಗೆ ಕೊರಳೊಡ್ಡಿದಂತೆ
ಆಸರೆಗಾಣದ ಅಕ್ಕರೆಯಲಿ ಹಿಂಜಿ ಭಾವನೆಗಳ ಹಿಸುಕುವುದು ಖಾತ್ರಿಯಾಗಿದೆ

ಅನತಿ ದೂರದಲೇ ಹೊಳೆಯುತಿಹುದು ಹೊಂಗನಸು ಮುಗಿಲ ಚೆಲುವಿಗೆ ನೆಚ್ಚಿ
ಬೆಚ್ಚಗಾಗದ ವಾಂಛೆಗಳೊಳು ಕ್ಲೇಶ ಅಶ್ರುಗಳ ಕುಂದಿಸುವುದು ಖಾತ್ರಿಯಾಗಿದೆ

ನಂಟ ಸೆಳೆದ ಅಸುವಿನಲಿ ಮರೀಚಿಕೆಯಾಗುತಲಿದೆ ಹಿತದ ಸಖ್ಯ ಕಳಚಿ ಬೆಸುಗೆ
ಹರೆಯದ ಹಂಬಲಿಕೆಯಲಿ ಹುಸಿಬಣ್ಣಗಳ ಮಸುಕಾಗಿಸುವುದು ಖಾತ್ರಿಯಾಗಿದೆ

ಅಂಕೆ ಮೀರುತಿಹ ಚಲನೆಯಲಿ ಸ್ಥಿತಪ್ರಜ್ಞಳಾಗು ‘ನಯನ’ ಉತ್ಸುಕತೆಯ ಸೌಖ್ಯಕೆ
ಹುಂಬತನದ ಪರಮಾವಧಿಯಲಿ ಹಸಿಸಂಚುಗಳ ಕಿವುಚುವುದು ಖಾತ್ರಿಯಾಗಿದೆ.

————————–

ನಯನ. ಜಿ. ಎಸ್.

Leave a Reply

Back To Top