ಅಂಕಣ ಸಂಗಾತಿ
ಸಿನಿ ಸಂಗಾತಿ
ಒಂದಲ್ಲ ಎರಡಲ್ಲ.
ಅದೊಂದು ಪುಟ್ಟ ಪೇಟೆ, ಪೇಟೆಯ ಹೊರ ಭಾಗದಲ್ಲಿ ಪುಟ್ಟ ಮನೆ, ಅಲ್ಲೊಬ್ಬ ಪುಟ್ಟ ಹುಡುಗ ಸಮೀರ, ಅವನ ಮುದ್ದಿನ ಹಸು ಬಾನು, ಸಮೀರನೊಂದಿಗೆ ಅವನ ಅಕ್ಕ ತಂದೆ ತಾತ ಎಲ್ಲರೂ ಇದ್ದಾರೆ, ಸಮೀರನ ಜೀವ ಬಾನು, ಬಾನುವೆಂದರೆ ಮನೆಯವರಿಗೆಲ್ಲ ಅಚ್ಚು ಮೆಚ್ಚು, ಸಮೀರನ ಆಟವೆಲ್ಲ ಅವನ ಹಸುವಿನ ಜೊತೆಗೆ, ಒಂದು ದಿನ ಬಾನುವಿನೊಂದಿಗೆ ಕಣ್ಣಾ ಮುಚ್ಚಾಲೆ ಆಡುವಾಗ ಆಕಸ್ಮಿಕವಾಗಿ ಬಾನು ನಿಂತಿದ್ದ ರಿಕ್ಷಾದೊಂದಿಗೆ ಏರಿ ಪೇಟೆ ಸೇರಿಬಿಡುತ್ತದೆ…!
ಕಂಗಾಲಾದ ಸಮೀರ ಬಾನುವನ್ನ ಅರಸುತ್ತಾ ಪೇಟೆಗೆ ಬರುತ್ತಾನೆ. ಅಲ್ಲಿ ಅವನ ಪರದಾಟದ ಚಿತ್ರಣವೇ ಈ ಚಿತ್ರ. ಹಾಗೆ ಅವನು ಭೇಟಿಯಾಗುವ ವ್ಯಕ್ತಿಗಳು ಸನ್ನಿವೇಶಗಳು ಒಂದಲ್ಲ ಎರಡಲ್ಲ, ಅಂತೆಯೇ ಈ ಸಿನಿಮಾದ ಹೆಸರು “ಒಂದಲ್ಲ ಎರಡಲ್ಲ” ಚಿತ್ರದ ನಿರ್ದೇಶನ ಸತ್ಯ ಪ್ರಕಾಶ್ ಅವರಿಂದ.
ಚಿತ್ರದ ನಾಯಕ ಪುಟ್ಟ ಬಾಲಕ ಸಮೀರ, ಇವನು ಮುಸ್ಲಿಂ ಸಮುದಾಯಕ್ಕೆ ಸೇರಿದವನು, ಅವನು ಭೇಟಿಯಾಗುವ ವ್ಯಕ್ತಿಗಳು ಇತರ ಸಮುದಾಯಗಳಿಗೆ ಸೇರಿದವರು.
ಅವರೆಲ್ಲ ಇವನ ನಿಷ್ಕಲ್ಮಶ ಶುದ್ಧ ಮುಗ್ಧ ಮನಸ್ಸಿನ ಮುಂದೆ ತಮ್ಮಲ್ಲಿನ ಸಣ್ಣತನ ಮೋಸ ಕಪಟಗಳನ್ನು ಕಳೆದುಕೊಳ್ಳುತ್ತಾ ಜಾತಿ ಧರ್ಮವನ್ನು ಮೀರಿದ ಮನುಷ್ಯತ್ವಕ್ಕೆ ತಲೆಬಾಗಿ ಸಮೀರನ ಬಾನುವನ್ನು ಹುಡುಕುವ ಕೆಲಸದಲ್ಲಿ ಹೇಗೆ ಜೊತೆಯಾಗುತ್ತಾರೆ ಎಂಬುದು ಚಿತ್ರದ ತಿರುಳು.
ಸಮೀರನ ಹುಡುಕಾಟದ ಯಾನದಲ್ಲಿ ಭೇಟಿಯಾಗುವ ವ್ಯಕ್ತಿ ಹುಲಿ, ಅವನಾದರೋ ಆ ಪೇಟೆಯಲ್ಲಿ ನಡೆಯುತ್ತಿರುವ ಚುನಾವಣೆಯ ಒಂದು ಪಕ್ಷದ ಚಿನ್ಹೆಯ ವೇಷಧಾರಿ, ಮುಂದಿನ ನಾಟಕೀಯ ಸನ್ನಿವೇಶದಲ್ಲಿ ಸಮೀರನು ಸಹ ಹಸುವಿನ ವೇಷದಾರಿಯಾಗುತ್ತಾನೆ, ಹುಲಿ ಹಾಗೂ ಹಸುವಿನ ವೇಷದಾರಿಗಳು ಮುಖಾಮುಖಿಯಾಗುತ್ತಾರೆ.
ಇಲ್ಲಿ ಹುಲಿ ದಂಪತಿಗಳಿಗೆ ಮಕ್ಕಳಿಲ್ಲ, ಹುಲಿಯನ ಹೆಂಡತಿ ಸಮೀರನಲ್ಲಿ ತನ್ನ ಮಗನನ್ನು ಕಾಣುತ್ತಾಳೆ, ತಾಯಿ ಪ್ರೀತಿಯನ್ನು ತೋರುತ್ತಾಳೆ.
ಮತ್ತೊಂದು ಕಡೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ “ಡೇವಿಡ್”ಎಂಬ ಪಾತ್ರ ಬರುತ್ತದೆ. ವಯಸ್ಸಾದ ಈ ವ್ಯಕ್ತಿ ತನ್ನ ಮಗನನ್ನು ಅವನು ಏಳು -ಎಂಟು ವರ್ಷದ ಬಾಲಕನಾಗಿದ್ದಾಗ ಕಳೆದುಕೊಂಡಿರುತ್ತಾನೆ, ಕಂಡ ಕಂಡ ಬಾಲಕರನ್ನೆಲ್ಲ ತನ್ನ ಮಗನೆಂದು ಅವನು ಭ್ರಮಿಸುತ್ತಾನೆ.ಯ, ಅವನು ಸಹ ಸಮೀರನನ್ನು ಮಗನೆಂದು ತಿಳಿಯುತ್ತಾನೆ.
ತನ್ನ ಹಸು ಬಾನುವಿನ ಹುಡುಕಾಟದಲ್ಲಿ ಸಮೀರ ದೇವಸ್ಥಾನವನ್ನು ಪ್ರವೇಶಿಸುತ್ತಾನೆ, ಅವನನ್ನು ಪ್ರೀತಿಯಿಂದ ಕಾಣುವ ಅಲ್ಲಿನ ಪುರೋಹಿತರು ಅವನಿಗೆ ಅವನ ಹಸು ಸಿಗುವುದೆಂಬ ಭರವಸೆಯನ್ನು ನೀಡಿ ಸಮಾಧಾನ ಮಾಡುತ್ತಾರೆ.
ಹೀಗೆ ಹಲವು ಸಣ್ಣ ಸಣ್ಣ ಪಾತ್ರಗಳು ಚಿತ್ರದ ಮುಖ್ಯ ಪಾತ್ರ ಸಮೀರನನ್ನುಮುಖಾಮುಖಿಯಾಗುತ್ತವೆ. ಇಲ್ಲಿ ಕೆಲವು ಪಾತ್ರಗಳು ತಮ್ಮ ಮುಗ್ಧತೆ ಒಳ್ಳೆಯತನಗಳಿಂದ ಅವನಿಗೆ ಜೊತೆಯಾದರೆ ಕೆಲವು ಪಾತ್ರಗಳು ಹಾಗಲ್ಲ. ಸಾಲ ಮಸೂಲಿ ಮಾಡುವ ಯಜಮಾನ, ಸಾಲಕ್ಕೆ ಸಿಕ್ಕ ಆಟೋ ಚಾಲಕ, ಇವರೆಲ್ಲ ಸಮೀರನಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಸಮೀರನ ಮುಗ್ದತೆಗೆ ಅವರು ಕರಗುತ್ತಾರೆ.
ಇಷ್ಟು ಒಳ್ಳೆಯತನ, ಒಳ್ಳೆಯದು ಸಾಧ್ಯವೇ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ, ಹೌದು ಅದು ಇಂದಿನ ಸಮಾಜದ ಅಗತ್ಯವು ಆಗಿದೆ, ಅದು ನಿರ್ದೇಶಕರ ಆಶಯವು ಆಗಿರುವುದರಿಂದ ಚಿತ್ರವು ಜಾತಿ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಮೇಲೆಂಬುದನ್ನು ಎತ್ತಿ ಹಿಡಿಯುತ್ತದೆ. ಈ ಪ್ರಯತ್ನದಲ್ಲಿ ಕೆಲವೊಂದು ದೃಶ್ಯಗಳು ನಾಟಕೀಯವೆನಿಸುತ್ತದೆ.
ಚಿತ್ರವು ಹಾಸ್ಯಭರಿತ ಸನ್ನಿವೇಶಗಳಿಂದ ಕೂಡಿದ್ದು ಬಹಳ ಲವಲವಿಕೆಯಿಂದ ಮೂಡಿದೆ. ಒಂದೆಡೆ ಹಾಸ್ಯ, ವಿಡಂಬನೆ, ಭಾವುಕತೆ ಎಲ್ಲವುಗಳ ಸಮ್ಮಿಲನ ಇಲ್ಲಿದೆ, ಗಂಭೀರ ಸಂದೇಶವನ್ನು ಹೊಂದಿದ್ದರೂ ಚಿತ್ರ ಶುದ್ಧ ಮನರಂಜನೆಯದ್ದಾಗಿದೆ.
ಚಿತ್ರದ ಮುಖ್ಯ ಪಾತ್ರ ಸಮೀರನಾಗಿ ಬಾಲ ನಟ ರೋಹಿತ್ ಅತ್ಯುತ್ತಮ ನಟನೆ ನೀಡಿದ್ದಾರೆ, ಚಿತ್ರದಲ್ಲಿ ಹಲವಾರು ಪಾತ್ರಧಾರಿಗಳಿದ್ದಾರೆ, ಎಲವೂ ಹೊಸ ಮುಖಗಳು, ಎಲ್ಲರ ನಟನೆ ಬಹಳ ಸಹಜ. ಕಥೆ, ಚಿತ್ರಕಥೆ ಅಚ್ಚುಕಟ್ಟಾಗಿದೆ, ಚಿತ್ರದಲ್ಲಿ ಸಂಗೀತ ಅತ್ಯುತ್ತಮವಾಗಿದೆ, ನೋಬಿನ್ ಪೌಲ್ ಹಾಗೂ ವಾಸುಕಿ ವೈಭವ್ ಜೊತೆಯಾಗಿ ನೀಡಿರುವ ಸಂಗೀತ ಚೆನ್ನಾಗಿದೆ. ಉಮಾಪತಿಯವರ ನಿರ್ಮಾಣದಲ್ಲಿ ಸತ್ಯಪ್ರಕಾಶ್ ಅವರ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು ಶ್ರೇಷ್ಠ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಇದೊಂದು ಅತ್ಯುತ್ತಮ ಮಕ್ಕಳ ಚಿತ್ರವು ಆಗಿದೆ. ಈ ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ರೋಹಿತ್ ಗೆ ಶ್ರೇಷ್ಠ ಬಾಲ ನಟ ಪುರಸ್ಕಾರ ದೊರೆತಿದೆ.
ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಈಗ ಎದ್ದಿರುವ ಸಂಘರ್ಷಗಳನ್ನು ನೋಡುವಾಗ ಇಂತಹ ಸಿನಿಮಾಗಳು ಗಾಯಕ್ಕೆ ಮುಲಾಮು ಹಚ್ಚುವಂತೆ ಕಾಣುತ್ತವೆ. ಭರವಸೆಯನ್ನು ಮೂಡಿಸುತ್ತವೆ…
ಕುಸುಮಾ ಮಂಜುನಾಥ್
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.
Very nive