ಗಜಲ್

ಕಾವ್ಯ ಸಂಗಾತಿ

ಗಜಲ್

ಆಸಿಫಾ

ಕೂತುಬಿಡು ಕಣ್ಣೆದುರು ಹೀಗೇ ನೋಡಬೇಕಿದೆ ನಿನ್ನ
ನಕ್ಕುಬಿಡು ಮನದುಂಬಿ ಹಾಗೇ ನೋಡಬೇಕಿದೆ ನಿನ್ನ

ಸಂಚುಹೂಡುತಿವೆ ಕಂಗಳು ಕೆಣಕಲು ತಡೆಯಲಾರೆ ನಾ
ಮನಸಾರೆ ಮಾತಾಡು ಬಂದು ಬಳಿಗೇ ನೋಡಬೇಕಿದೆ ನಿನ್ನ

ಮಾತುಗಳೆಲ್ಲಾ ಜೊತೆಗೂಡುತಿವೆ ಅಂದದ ಪದಪುಂಜಕೆ
ಆಲಿಸಲು ಸಜ್ಜಾಗು ಎನ್ನ ಕವಿತೆಗೇ ನೋಡಬೇಕಿದೆ ನಿನ್ನ

ನಾಲಗೆಯ ತೇವದಲಿ ತೆವಳಿಸೆನ್ನ ಹೆಸರು ಧನ್ಯಳಾಗುವೆ
ಇಂಚಿಂಚು ಇಚ್ಚಿಸುತಿದೆ ಬಾ ಕನಸಿಗೇ ನೋಡಬೇಕಿದೆ ನಿನ್ನ

ನಿನ್ನ ನಾಮದ ದಾಸಿಯಾದೆ ನಿನ್ನೊಲವು ಹೊತ್ತು ಹೃದಯದಿ
ಮೌನದ ಪರದೆ ಸರಿಸಿ ಬಾ ಬಯಲಿಗೇ ನೋಡಬೇಕಿದೆ ನಿನ್ನ

rose, glower, bouquet



ನಿನ್ನೆದೆಯ ಆಳದಲಿ ಮೈಮರೆತು ಮಲಗಬೇಕಿದೆ ನಿರಾಳದಿ
ರೆಕ್ಕೆ ಕಟ್ಟಿ ಹಾರಿ ಬರಲೇ ನಿನ್ನಲ್ಲಿಗೇ ನೋಡಬೇಕಿದೆ ನಿನ್ನ

ಮೊಳಕೆ ಮೀಟಿದ ಮಣ್ಣಿಗೇ ಹಮ್ಮು ಬಿಮ್ಮುಗಳಿಲ್ಲ
ಆಸೀ ಭಾವದ ತಂತಿ ಮೀಟಿ ಹೋಗದಿರು ಸಿಟ್ಟಿಗೇ ನೋಡಬೇಕಿದೆ ನಿನ್ನ


Leave a Reply

Back To Top