ಕಾವ್ಯಸಂಗಾತಿ
ಎ . ಹೇಮಗಂಗಾರಬರ ಗಜಲ್
ಭಾವಬಳ್ಳಿಗೆ ನೇಹದ ಜೀವಜಲ ಹನಿಸಿದ ನೆನಪಿಂದ ನೀ ಮರೆಯಾದೆ
ಬಾಳ ಇರುಳಿಗೆ ನಲ್ಮೆ ಬೆಳಕನು ಹರಿಸಿದ ನೆನಪಿಂದ ನೀ ಮರೆಯಾದೆ
ಭೂತದಾ ಭೂತ ಬೇತಾಳದಂತೆ ಹಗಲಿರುಳೂ ಕಾಡುತ್ತಲೇ ಇತ್ತು
ಕಣ್ಸನ್ನೆಯಲೇ ಕೆಂಪೇರಿಸಿ ನಕ್ಕು ನಗಿಸಿದ ನೆನಪಿಂದ ನೀ ಮರೆಯಾದೆ
ನೀನಿಲ್ಲದ ನನ್ನಿರುವಿಕೆಗೆ ಅರ್ಥವೇ ಇಲ್ಲವೆಂಬ ಭ್ರಮೆ ಕಾಡಿತ್ತೇಕೆ ?
ಕೊರಗಿ ನಲುಗಿದವಳ ಅಪ್ಪಿ ಸಂತೈಸಿದ ನೆನಪಿಂದ ನೀ ಮರೆಯಾದೆ
ಸವೆಸಿದ ಮುಳ್ಳು ಹಾದಿಯ ಇನ್ನೆಂದೂ ಹಿಂತಿರುಗಿ ನೋಡಲಾರೆ
ಸಿಹಿ ಮುತ್ತನಿತ್ತು ಕಹಿಯೆಲ್ಲ ಮರೆಸಿದ ನೆನಪಿಂದ ನೀ ಮರೆಯಾದೆ
ಸಾವಿಗೆ ಬೆನ್ನು ತಿರುವಿ ಹೊಸ ಬದುಕ ಬದುಕಲು ಕಾತರಿಸಿದ್ದೇನೆ
ಜೊತೆ ಇರುವೆನೆಂಬ ವಚನವ ಉಳಿಸಿದ ನೆನಪಿಂದ ನೀ ಮರೆಯಾದೆ
ಅವನ ಅಖಂಡ ಪ್ರೀತಿ ಲೇಪನದಿ ಹೃದಯದ ಗಾಯಗಳು ಮಾಗಿವೆ
ನಡೆ, ನುಡಿಯಲಿ ನಿಷ್ಠೆ ತೋರಿ ಮೆಚ್ಚಿಸಿದ ನೆನಪಿಂದ ನೀ ಮರೆಯಾದೆ
ಕಾರಣವಿಲ್ಲದೇ ನಿರ್ದಯಿ ನೀ ತೊರೆದುದೇ ಹೇಮ ಳಿಗೆ ಒಳಿತಾಗಿದೆ
ಸವಿ ದಾಂಪತ್ಯ ಬಂಧನದಿ ನನ್ನ ಬಂಧಿಸಿದ ನೆನಪಿಂದ ನೀ ಮರೆಯಾದೆ
One thought on “ಗಜಲ್-ಎ . ಹೇಮಗಂಗಾ”