ಗಜಲ್ ಅರುಣಾ ನರೇಂದ್ರ

ಕಾವ್ಯ ಸಂಗಾತಿ

ಗಜಲ್

ಅರುಣಾ ನರೇಂದ್ರ

ನಡುದಾರಿಯಲಿ ಬಿಟ್ಟು ಹೊರಳಿ ನೋಡದೇ ಹೋದೆ
ಅದೆಷ್ಟು ಸಲ ಕರೆದರೂ ತಿರುಗಿ ಬಾರದೇ ಹೋದೆ

ಬದುಕಿನ ಮಧ್ಯಾಹ್ನದಲಿ ಸುಡು ಸುಡುವ ಬಿಸಿಲು
ಬೆಂದ ಎದೆಗೆ ತುಸು ತಂಗಾಳಿ ಆಗದೇ ಹೋದೆ

ಬಾಯಾರಿ ದಣಿದೆ ಬಯಲ ದಾರಿಯ ನಡೆದು
ಖಾಲಿ ಬಟ್ಟಲು ತುಂಬಿ ದಾಹ ನೀಗದೇ ಹೋದೆ

ಹೃದಯದ ಮಿಡಿತಕ್ಕೆ ನೀ ಕಿವಿಯಾಗಬೇಕಿತ್ತು
ಎದೆಯ ಪಿಸು ಮಾತು ಏಕೋ ಕೇಳದೇ ಹೋದೆ

ಇಂದಲ್ಲ ನಾಳೆ ಅರುಣಾ ಬೇಕಾಗಬಹುದು ಗೆಳೆಯ
ಅವಳು ಮನೆ ಖಾಲಿ ಮಾಡಿದಳು ನಂಬದೇ ಹೋದೆ


One thought on “ಗಜಲ್ ಅರುಣಾ ನರೇಂದ್ರ”

Leave a Reply