ಕಾವ್ಯ ಸಂಗಾತಿ
ಡಾ. ನಿರ್ಮಲ ಬಟ್ಟಲ
ಮೊದಲ ಮಳೆ
ಅದೆಷ್ಟೋ ಮುಂಗಾರಿನ
ಮೊದಲ ಮಳೆ ಹನಿಗಳಲಿ
ಮಿಂದಿದ್ದೆನೆ
ಈ ಮುಂಗಾರು ಮಾತ್ರ
ಹೊಸದಾಗಿದೆ.
ನೀ ಬಂದ ಕಾರಣವೆ ಇರಬೇಕು….
ಮಳೆಹನಿಯ ಚಿಟಪಟ
ಸದ್ದಿನೊಳಗು ಸುಯ್ ಗುಡುವ
ಗಾಳಿಯೊಳಗು ಸಂಗೀತ ಕೇಳುತಿದೆ
ಚದುರುವ ಮೊಡದೊಳಗೂ
ಚಿತ್ತಾರ ಮೂಡುತಿದೆ
ನೀ ಬಂದ ಕಾರಣವೇ ಇರಬೇಕು…..
ಬಾನು ಎದೆಯ ಮೇಲಿನ
ತೋಯ್ದ ಕರಿಮೋಡ
ಸೆರಗ ಹಿಂಡಿ ಝಾಡಿಸುತಿದೆ
ಗಾಳಿಯ ಅಲೆ ಸೆರಗ ಜಾರಿಸುತಿದೆ
ನೀ ಬಂದ ಕಾರಣವೇ ಇರಬೇಕು….
ಮಳೆಯ ಹುಚ್ಚಾಟದ ನಡುವೆ
ನಿನ್ನ ನೆನಪುಗಳ ಅಪ್ಪಗೆಯ
ಬೆಚ್ಚನೆಯ ಅನುಭವಕೆ
ಚಳಿಯಲ್ಲಿಯೂ ಬೆವರುತಿರುವೆ.
ನೀ ಬಂದ ಕಾರಣವೇ ಇರಬೇಕು….
ಬರಗಾಲಕ್ಕೆ ಬಸವಳಿದು
ಬತ್ತಿದೆದೆಯಪ್ರೀತಿಯನು
ಹೊಳೆ ಹಳ್ಳ ಬಾವಿ ಕೆರೆ ತುಂಬಿಸಿಕೊಳ್ಳಲುಕಾತುರದಿ ಕಾಯುತಿರುವೆ
ನೀ ಬಂದ ಕಾರಣವೇ ಇರಬೇಕು.
ಮೈ ಚಳಿ ಬಿಟ್ಟು ಚೆನ್ನಾಗಿ ಬರೆದಾದ್ದೀರಿ