ಕಾವ್ಯ ಸಂಗಾತಿ
ಅವಳು ನರ್ತಿಸುವಾಗ!
ವಿಜಯಶ್ರೀ ಹಾಲಾಡಿ
ಆಕಾಶದೆತ್ತರ ಮರಗಳು
ಸುಯ್ಯಲಿಡುವ
ಕಾರ್ಗತ್ತಲ ನಡುವೆ
ಅವಳು ನರ್ತಿಸುವಾಗ
ಸಾಗರದಲೆಗಳು ಭೋರ್ಗರೆಯುತ್ತವೆ
ನದಿಗಳು ಕೂಡಿ ತೊನೆಯುತ್ತವೆ
ಉನ್ಮತ್ತ ಸೊಕ್ಕಿ ಕುಣಿವ
ಮಳೆ ಹನಿಗಳು
ದಳ ದಳನೆ ಉದುರುವಾಗ
ನಗೆ ಉಕ್ಕುಕ್ಕಿ ದೇಹ
ಹಗುರಾಗಿ ಗಾಳಿಯೊಳಗೆ
ತೇಲಿ ತೇಲಿ
ತಾಳ ಲಯ ಸೇರಿ
ಹಾಡಿ ಕುಣಿದು
ಉನ್ಮಾದಗೊಳ್ಳುತ್ತಾಳೆ
ಕತ್ತಲನ್ನೇ ಮೊಗೆ ಮೊಗೆದು
ಕುಡಿದು ತಣಿದು
ನರ್ತಿಸುತ್ತ ಪಾದಗಳು
ಮಣ್ಣ ಸೀಳುತ್ತ
ಕಣ್ಣ ಹೊಳಪು
ಮರ ಮರಳಿ
ಝಲ್ಲೆಂದು ತಿರುತಿರುಗಿ
ಗೆಜ್ಜೆ ಕಾಲ್ಗಳು ಸಪ್ಪಳಿಸಿ
ದಣಿದು ಮಣಿದು
ಹೊರೆ ಕೂದಲು ಚಿಮ್ಮಿ
ಸಂತಸದ ಬುಗ್ಗೆ
ಉಕ್ಕಿ ಹರಿ ಹರಿದು
ತಣಿದು ಭೂಮಿಯ
ಅಪ್ಪಿ, ನಿಡಿದು
ನಿರಾಳ ಸುತ್ತಿ ಸುತ್ತಿ
ನಿಧಾನ ನಿಧಾನ
ಚಲನೆ ನಿಲ್ಲುತ್ತ
ಅಲ್ಲೇ ಒರಗುತ್ತಾಳೆ
ಮಣ್ಣ ಗಂಧ ಹೀರುತ್ತ
ನರ್ತನದ ಆಯಾಸ
ಸುಖಿಸುತ್ತ ಅರಳುತ್ತಾಳೆ
ಹೊರಳಿ ಮರಳುತ್ತಾಳೆ…..
****
ಅವಳು ನರ್ತಕಿಯಲ್ಲ!