ಕಾವ್ಯ ಸಂಗಾತಿ
ನೀ ನನ್ನ ನೀರಧಾರೆ
ಶಾಲಿನಿ ಕೆಮ್ಮಣ್ಣು


ನೀರ ಮೇಲಿನ ಗುಳ್ಳೆಗಳು…..ಸುಂದರವಾಗಿ ಆಕರ್ಷಿಸುವ ಕ್ಷಣಿಕ ಸುಖದ ಸ್ಪರ್ಶ ವ ನೀಡಿ ಒಡೆದು ಮಾಯವಾಗುವ ನಿಜವಲ್ಲದ ಮರೀಚಿಕೆಯಂತೆ
ಕೊಳಚೆ ನೀರು……ಕೆರೆಯೆ ಆಗಿದ್ದರೂ ಕೊಚ್ಚೆಯಲ್ಲಿ ಯಾರಿಗೂ ಹಿತ ಕೊಡದೆ ದುರ್ಗಂಧ ನಾರುತ್ತ ಮೈಮನಸು ಕೊಳೆ ಮಾಡುತ್ತ ಬೇಡವಾಗುವುದು
ಚಲಿಸುವ ನೀರ ಧಾರೆ……ಮುದದಿಂದ ಎಲ್ಲವ ತನ್ನ ಮಡಿಲಲ್ಲಿ ಸೇರಿಸಿ ಕೊಳೆಯ ಹೊರಚೆಲ್ಲಿ ಮತ್ತೆ ಸ್ಪಟಿಕದಂತೆ ಶುಭ್ರವಾಗಿ ಹರಿಯಬಲ್ಲದು.
ಬದುಕಿನಲ್ಲಿ ಜೊತೆಯಾಗುವ
ಸಂಬಂಧಗಳು, ಗೆಳೆತನವೂ ಹೀಗೆ
ಒಡನೆ ಪರಿಚಯವಾಗಿ ಆತ್ಮೀಯವಾಗಿ ಸೆಳೆದು ಬೆರೆಯುವುದರೊಳಗೆ ಇದ್ದಕ್ಕಿದ್ದಂತೆ ಅದೃಶ್ಯವಾಗಿ ಬಿಡುವ ಸಂಬಂಧ ನೀರ ಗುಳ್ಳೆಯಂತೆ
ತೀರಾ ಹತ್ತಿರವಿದ್ದರೂ ಮನಸಿಗೆ ಬೇಸರ ತರುವ ಭಾವನೆಗೆ ಮಿಡಿಯದೆ ಕೆಡುಕ ಹರಸಿ ನೋವ ಬಯಸುವ ಕೊಳಚೆಯಂತೆ ಕೆಲವು ಸಂಬಂಧಗಳು
ಸದಾ ಜೊತೆಗಿದ್ದು ಜೊತೆಗಾರರ ಒಳ್ಳೆಯದನ್ನೆ ಬಯಸುತ್ತಾ ಕಷ್ಟ ಸುಖದಲ್ಲಿ ಕೈ ಬಿಡದೆ ಕಾಯುವ ಜೊತೆಯಾಗುವ ಸಂಬಂಧಗಳು ಹರಿವ ನೀರಿನಂತೆ
ನೀ ನನ್ನ ಆವರಿಸಿ ಒಂದಿಷ್ಟು ಪ್ರೇಮ ಹರಿಸಿ ನಗುವಿನ ಪುಷ್ಕರಣಿ ಚೆಲ್ಲಿ ಮರೆಯಲಾಗದ ಬಾಂಧವ್ಯ ಬೆಸೆದು ವಿಳಾಸ ಮರೆತಂತೆ ಹೋಗಬೇಡ, ಹಿಂತಿರುಗಿ ಮತ್ತೆ ಬಾ
ನಿನ್ನ ಬಾಡದ ನಗೆ ಹೂ ನನಗೊದಗಿಸು
ಸ್ಪರ್ಶ ದ ಕೋಮಲ ಕಂಪಲಿ ನನ್ನೆದೆಯ ವೀಣೆ ನುಡಿಸು
ತೋಳಲಿ ಬಳಸಿ ಮಧುರ ಮಾತುಗಳಲಿ ನನ್ನ ಮರೆಸು
ನೀರಿನ ಗುಳ್ಳೆ ನೀನಾಗದಿರು, ನನ್ನ ವಿಳಾಸ ಮರೆಯದಿರು
ಕೊಚ್ಚೆಯ ಮುಟ್ಟದಿರು, ನನ್ನ ಅಪ್ಪಟ ಸ್ವರ್ಣವಾಗಿರು
ಸದಾ ಸುಗಂಧರಾಜನಾಗಿ ನನ್ನೆದೆಯಲಿ ಹಾಯಾಗಿರು
ಶಾಲಿನಿ ಕೆಮ್ಮಣ್ಣು