ಅಂಕಣ ಸಂಗಾತಿ

ಚಾಂದಿನಿ

ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು

ಆಟಿ ತಿಂಗಳೆಂದರೆ, ಮಳೆಗಾಲದ ಉತ್ತುಂಗದ ಕಾಲ. ಆಟಿಗೆ ಆಟಿಯದ್ದೇ ವೈಶಿಷ್ಠ್ಯಗಳಿವೆ. ಆಟಿ ಕಷಾಯ, ಪತ್ರೊಡೆ, ಗುಡುಗಿಗೆ ಮೂಡುವ ಅಣಬೆ, ಕಣಿಲೆ ಸಾರು, ಕೈಗಿರಿಸುವ ಮದುರಂಗಿ ಇವುಗಳಲ್ಲಿ ಪ್ರಮುಖವಾಗಿದ್ದವು ನಂಗಂದು.

ಆಟಿ ತಿಂಗಳಲ್ಲಿ ಮರದಲ್ಲಿ ಮೊಳೆಯುವ ಮರಕೆಸುವಿನಲ್ಲಿ ಔಷಧೀಯ ಗುಣಗಳಿರುತ್ತವೆಯಂತೆ. ಅದನ್ನ ಪತ್ರೊಡೆ ಮಾಡಿ ತಿಂದರೆ ಆರೋಗ್ಯಕ್ಕೊಳ್ಳೆಯದು ಎಂಬುದು ನಂಬುಗೆ. ಆದರೆ ನಾನೇನೂ ಅಂತಹ ಹೆಲ್ತ್‌ಕಾನ್ಷಿಯಸ್‌ನಿಂದಾಗಿ ಪತ್ರೊಡೆ ಬಯಸುತ್ತಿದ್ದುದಲ್ಲ. ಖಂಡಿತಕ್ಕೂ ಅಮ್ಮ ಮಾಡುತ್ತಿದ್ದ ಪತ್ರೊಡೆಯ ರುಚಿಯೇ ನನ್ನನ್ನು ಆತುರಗಾರಳಾಗಿ ಮಾಡುತ್ತಿತ್ತು. ಬೆಟ್ಟದಿಂದ ಪತ್ರೊಡೆಯ ಸೊಪ್ಪು ತರುವಲ್ಲಿಂದ ಹಿಡಿದು ಅದನ್ನು ತಿನ್ನುವ ತನಕದ ಚಡಪಡಿಕೆ ಯಾರಿಗೆ ಬೇಕು. ಮಿಕ್ಸಿಪಿಕ್ಸಿ – ಗ್ರೈಂಡರ್‌ಗಳೆಲ್ಲ ಆಗ ಇರಲಿಲ್ಲ. ಏನಿದ್ದರೂ ಅದರ ತಯ್ಯಾರಿಗಿರುವ ನೂರೆಂಟು ರಾಮಾಯಣಗಳನ್ನು ದಾಟಿಯೇ ಅದು ತಯ್ಯಾರಾಗಬೇಕು. ನಾಳೆ ಬೆಳಗ್ಗಿನ ತಿಂಡಿ ಪತ್ರೊಡೆ ಎಂಬುದೇ ನಮ್ಮ ನಿದ್ರೆಗೆಡಿಸುತ್ತಿತ್ತು. ಬೆಳಗಾದ ಮೇಲಂತೂ, ಆಯ್ತಾಹೋಯ್ತಾ ಅನ್ನುತ್ತಾ ಅಮ್ಮನನ್ನು ಅದೆಷ್ಟು ಪೀಡಿಸುತ್ತಿದ್ದೆನೋ, ಅದೆಷ್ಟು ಬಾರಿ ಒಳಗೆ ಹೊರಗೆ ಹೋಗುತ್ತಿದ್ದೇನೋ… ಪತ್ರೊಡೆ ತಯಾರಿ ಕೊನೆಯ ಹಂತಕ್ಕೆ ತಲುಪುತ್ತಿರುವಂತೆ ಅದು ಸೂಸುತ್ತಿದ್ದ ಘಮಕ್ಕೆ ಬಾಯೊಳಕ್ಕೆ ಉತ್ಪತ್ತಿಯಾಗುತ್ತಿದ್ದ ಜೊಲ್ಲನ್ನು ನುಂಗಿದಷ್ಟೂ ಮತ್ತೂಮತ್ತೂ ಒಸರುತ್ತಿತ್ತು!

Patrode - Wikipedia

ತಟ್ಟೆಯಲ್ಲಿಯೋ ಅಥವಾ ಬಾಳೆ ಎಲೆಯಲ್ಲಿಯೂ ಹಾಕಿದ ಪತ್ರೊಡೆಯೊಮ್ಮೆ ಕೈಗೆ ಸಿಗುವತನಕದ ಹಪಾಪಪಿ, ಅಯ್ಯೋ ರಾಮಾ…. ಬಿಸಿ ಆರುವಷ್ಟೂ ಕಾಯುವ ವ್ಯವಧಾನ ಇರುತ್ತಿರಲಿಲ್ಲ. ಗಬಗಬ ತಿಂದು ಮುಗಿಸಿ ಇನ್ನೊಂದು ಸುತ್ತಿನ ಪತ್ರೊಡೆಗಾಗುವ ವೇಳೆ ಆತುರ ಕೊಂಚ ಕಡಿಮೆಯಾಗುತ್ತಿತ್ತು. ಇದು ನನಗೀಗ ಅರ್ಥಶಾಸ್ತ್ರದ ತುಷ್ಟೀಗುಣವನ್ನು ನೆನಪಿಸುತ್ತದೆ. ಅದನ್ನು ವಿವರಿಸುತ್ತಿದ್ದ ಪ್ರಭಾಕರ ಶಿಶಿಲ ಸರ್ ನೆನಪಾಗುತ್ತಾರೆ. ಪತ್ರೊಡೆಯ ಆಸೆಯೆಂಬುದು ಬೇಡಿಕೆ. ಅದರ ಗಬಗಬ ತಿನ್ನಾಟ ಪೂರೈಕೆ. ಹೀಗೆ ಪೂರೈಕೆಯಾದಾಗ ಗಬಗಬವೆಂಬ ಆತುರದ ತುಷ್ಟೀಗುಣ ಕಡಿಮೆಯಾಗುತ್ತಿತ್ತು.

ಹೀಗೆಯೇ ಆತುರ ಹುಟ್ಟಿಸುತ್ತಿದ್ದದು, ಆಟಿತಿಂಗಳಲ್ಲಿ ಕೈಗೆ ಮದುರಂಗಿ ಇಡಬೇಕು ಎಂಬ ಇನ್ನೊಂದು ರೂಲ್ಸು. ಮದುರಂಗಿ ಗಿಡದಲ್ಲಿಯೂ ಆಟಿತಿಂಗಳಲ್ಲಿ ಔಷಧೀಯ ಗುಣಗಳು ಸಂಗ್ರಹವಾಗುತ್ತದಂತೆ. ಹಾಗಾಗಿ ಆಟಿ ತಿಂಗಳಲ್ಲಿ ಮದುರಂಗಿ ಇರಿಸಿಕೊಂಡರೆ ದೇಹಕ್ಕೆ ತಂಪು. ಆಟಿಯಲ್ಲಿ ಒಟ್ಟು ಮೂರು ಬಾರಿ ಮದರಂಗಿ ಇಡಬೇಕು. ಕೃಷ್ಣಾಷ್ಟಮಿಯ ದಿನವಂತೂ ಇದು ಕಂಪಲ್ಸರಿ. ನಮ್ಮ ಮನೆಯಲ್ಲಿ ಮದುರಂಗಿ ಇಲ್ಲದ ಕಾಲದಲ್ಲಿ ನಮ್ಮ ನೆರೆಮನೆಯವರಾದ (ನಮ್ಮೂರಲ್ಲಿ ನೆರೆಮನೆಯೆಂದರೆ ಪಕ್ಕದ ಕಾಂಪೋಂಡು ಅಲ್ಲ; ಕನಿಷ್ಠ ಒಂದು ಫರ್ಲಾಂಗು ನಡೆಯಬೇಕು) ತ್ಯಾಪಂಣ್ಣತ್ತೆಯ ಮನೆಗೆ ಹೋಗಿ ಅಲ್ಲಿಂದ ಮದುರಂಗಿ ಸೊಪ್ಪು ಸಂಗ್ರಹಿಸಬೇಕು. ನಮ್ಮಪ್ಪನಿಗೆ ಇದೆಲ್ಲ ತುಂಬ ರೇಜಿಗೆ ಹುಟ್ಟಿಸುವ ಸಂಗತಿಗಳು. ಹಾಗಾಗಿ ನಮ್ಮದೇನಿದ್ದರೂ ಕದ್ದುಕದ್ದು ಈ ವಹಿವಾಟು.

ಅಲ್ಲಿ ತ್ಯಾಂಪಣ್ಣತ್ತೆ (ಅವರ ಹೆಸರೇನೆಂದು ನಂಗೆ ಗೊತ್ತಿಲ್ಲ. ಅವರು ತ್ಯಾಂಪಣ್ಣ ಮಾವನ ಪತ್ನಿಯಾದ ಕಾರಣ ತ್ಯಾಂಪಣ್ಣತ್ತೆ) ಮನೆಗೆ ಹೋದರೆ ನಂಗೆ ಇನ್ನೊಂದು ಟೆನ್ಷನ್. ನಾಲ್ಕೈದರ ಹರೆಯದ ಗುಬ್ಬಚ್ಚಿ ಮರಿಯಂತಿದ್ದ ನನ್ನನ್ನು ಅವರು, ತನ್ನ ಇಪ್ಪತ್ತು – ಇಪ್ಪತ್ತೈದರ ಹರೆಯದ ಮಗನಿಗೆ ಹೆಣ್ತಿ ಎಂದೆನ್ನುತ್ತಾ ತಮಾಷೆ ಮಾಡುತ್ತಿದ್ದರು. “ಹಾಂ, ಮದುಮಗಳು ಮದುರಂಗಿಗೆ ಬಂದಿದ್ದಾಳೆ. ಇಂದು ನನ್ನ ಮಗನ ದಿಬ್ಬಣ.. ನಾಳೆ ಮದುವೆ…” ಹೀಗೆ ಸಾಗುತ್ತಿತ್ತು ಅವರ ಮಾತುಗಳು. ಅವರ ಪುತ್ರನೂ ಅಲ್ಲೇ ಪಕ್ಕದಲ್ಲಿ ನಿಂತು ಅಮ್ಮನಿಗೆ ಸಾಥ್ ನೀಡುತ್ತಿದ್ದರು. ಅವರೆಲ್ಲ ಸೇರಿ ನನ್ನನ್ನು ಮದುವೆ ಮಾಡಿಯೇ ಬಿಟ್ಟರೆನೋ ಎಂಬ ಭಯ ನನ್ನನ್ನು ಕಾಡುತ್ತಿತ್ತು. ಹೀಗಾಗಿ ಆ ಮನೆಗೆ ತೆರಳಲು ಒಂದು ನಮೂನೆಯ ಅಂಜಿಕೆ ಕಾಡುತ್ತಿತ್ತಾದರೂ, ಅಂಗೈಯಲ್ಲಿ ಮೂಡಲಿರುವ ಚಿತ್ತಾರದ ಭ್ರಮೆಯ ಹೊಳಪು ನನ್ನೊಳಗೆ ಭಂಡ ಧೈರ್ಯ ತುಂಬುತ್ತಿತ್ತು. ಪುಟ್ಟ ಹುಡುಗಿಯಾಗಿದ್ದ ನನಗೆ ತಿಂಡಿಕೊಟ್ಟು, ನನ್ನ ಎತ್ತರಕ್ಕೆ ನಿಲುಕದ ಗಿಡದಿಂದ ಮದುರಂಗಿ ಎಲೆ ಸಂಗ್ರಹಿಸಲೂ ಆ ಅತ್ತೆ ತಮಾಷೆಯ ಮಾತಿನೊಂದಿಗೆ ಸಹಾಯ ಮಾಡುತ್ತಿದ್ದರು.

ಎಲೆ ತಂದನಂತರದ್ದು ಅಕ್ಕನವರ ಜವಾಬ್ದಾರಿ. ಅದು ಕೆಂಪಾಗಲು ಎಲೆಗೆ ಏನೇನೋ ಮಿಶ್ರಮಾಡುತ್ತಿದ್ದರು. ನನಗೆ ನೆನಪಿರುವಂತೆ, ವೀಳ್ಯದೆಲೆ, ಎಳೆಯ ಅಡಿಕೆ, ಸ್ವಲ್ಪ ಸುಣ್ಣ, ಕೆಂಪಿರುವೆ ಎಲ್ಲವನ್ನೂ ಸೇರಿಸಿ ರುಬ್ಬಿ ತಯಾರಿಸಿದ ಪೇಸ್ಟನ್ನು ಇದಕ್ಕೆಂದೇ ವಿಶೇಷವಾಗಿ ತಯಾರಿಸಿದ (ಅದು ಅಣ್ಣನ ಕೆಲಸವಾಗಿತ್ತು) ತೆಂಗಿನ ಗರಿಯ ಕಡ್ಡಿಯ ಸಹಾಯದಿಂದ ಬೇಕಷ್ಟೆ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾ ಚಿತ್ರ ಬಿಡಿಸಲಾಗುತ್ತಿತ್ತು.

ರಾತ್ರಿ ಊಟದ ಬಳಿಕ ಅಂಗೈಗೆ ಮದುರಂಗಿ ಹಚ್ಚುವ ಪ್ರೋಗ್ರಾಂ. ಅಕ್ಕನವರೆಲ್ಲ ಚಿತ್ತಾರ ಬಿಡಿಸಿಕೊಳ್ಳುವ ವಿಚಾರದಲ್ಲಿ ಸ್ವಾಲಂಬಿಗಳು. ಆದರೆ ನನಗಾತ್ತಿರಲಿಲ್ಲವೇ. ಹಾಗಾಗಿ ನಾನೇನಿದ್ದರೂ ಅವರ ಮರ್ಜಿಗೆ ಒಳಗಾಗಬೇಕಿತ್ತು. “ಹುಂ. ಕೈ ಹಾಗಿಡು, ಹೀಗಿಡು, ಮುದ್ದೆ ಮಾಡಬೇಡ” ಎಂಬೆಲ್ಲ ದರ್ಪದ ಆದೇಶಗಳನ್ನು ಕುರಿಯಂತೆ ಪಾಲಿಸುತ್ತಿದ್ದೆ. ಈ ಯಾವ ಕಿರಿಕ್ ಇಲ್ಲದೆ ಅಮ್ಮ ನನ್ನ ಪುಟ್ಟ ಅಂಗೈಗೆ ಮದುರಂಗಿ ಇಡಲು ಸಿದ್ಧವಾಗಿಯೇ ಇರುತ್ತಿದ್ದರು. ಆದರೆ ಅವರದ್ದು ಹಳೆಯ ಕಾಲದ ಫೇಶನ್. ಬರಿ ಚುಕ್ಕೆಚುಕ್ಕೆ ಮಾತ್ರ. ಹಾಗಾಗಿ ನಂಗದು ಒಗ್ಗುತ್ತಿರಲಿಲ್ಲ. ಉಳಿದ ಟೈಮಲ್ಲಿ ಕೊನೆಯವಳೆಂಬ ಕಾರಣದಿಂದ ನಂಗೆ ಇದ್ದ ವಿಶೇಷ ಸವಲತ್ತನ್ನು ಬಳಸಿಕೊಂಡು ಅಕ್ಕಗಳಿಗೆ ರೋಪ್ ಹಾಕುತ್ತಿದ್ದರೂ, ಇಂಥಹ ಸಂದರ್ಭದಲ್ಲಿ ಮಾತ್ರ ಬಹಳ ವಿಧೇಯ ತಂಗಿಯಾಗಿರುತ್ತಿದ್ದೆ.

ಅಣ್ಣನದ್ದು ಏನಿದ್ದರೂ ಅತ್ತೋಸು ಎಲೆ(ಅಶ್ವತ್ತದೆಲೆ) ಆಕಾರದ ಪರ್ಮನೆಂಟ್ ಡಿಸೈನ್. ಅದಕ್ಕೆ ಹಾರ್ಟ್‌ಶೇಪ್ ಅನ್ನಬೇಕು ಎಂಬುದು ಆಗ ತಿಳಿದಿರಲಿಲ್ಲ. ಮಿಕ್ಕಂತೆ ಅಕ್ಕನವರ ಕೈಗಳಲ್ಲಿ ತರಾವರಿ ಹೂವಿನ ಚಿತ್ರಗಳು ಮೂಡಿಬರುತ್ತಿದ್ದವು.

ಮದುರಂಗಿ ಹೆಚ್ಚುಹೊತ್ತು ಕೈಲಿರಿಸಿಕೊಂಡು ಅಂಗೈಯನ್ನು ಸಾಧ್ಯವಾದಷ್ಟು ಕೆಂಪಾಗಿಸಿಕೊಳ್ಳಬೇಕು ಎಂಬುದು ನನ್ನ ಪ್ರಯತ್ನ. ಆದರೆ ಎಳಸು ಕೈಯಲ್ಲಿ ಗುಳ್ಳೆಗಿಳ್ಳೆ ಎದ್ದೀತು ಎಂಬದು ಅಮ್ಮನ ಕಾಳಜಿ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಬೇಗ ಕೈ ತೊಳೆದು ಸ್ವಲ್ಪ ಕೆಂಪಿಗೆ ತೃಪ್ತಿಪಟ್ಟುಕೊಳ್ಳಬೇಕಿತ್ತು ನಾನು. ಆದರೆ ಇದಕ್ಕೆ ಅಕ್ಕನವರ ವ್ಯಾಖ್ಯಾನ ಬೇರೇಯೇ. ಅಸೂಯೆ ಸ್ವಭಾವದ ಕೈಗೆ ಕೆಂಪು ಹತ್ತುವುದಿಲ್ಲ ಎಂದು ನನ್ನನ್ನು ಹಂಗಿಸುತ್ತಾ ಹೊಸ ಆವಿಷ್ಕಾರ ಮಾಡಿದವರಂತೆ ಮೆರೆಯುತ್ತಿದ್ದರು.

ಅದೇನಿದ್ದರೂ ದೇಹದ ಉಷ್ಣತೆಯನ್ನು ಅವಲಂಬಿಸಿದೆ ಎಂದು ಗೊತ್ತಿದ್ದಿರದ ನಾನು ಸ್ವಾಮಿ ದೇವರೇ(ಯಾವ ದೇವರೆಂದು ನೆನಪಾಗುತ್ತಿಲ್ಲ ಈಗ) ನನ್ನನ್ನು ಅಸೂಯೆಯ ಹುಡುಗಿಯಾಗಿ ಮಾಡಬೇಡ ಎಂದು ಆಟಿಯ ಮದುರಂಗಿ ಪ್ರೋಗ್ರಾಮ್ ದಿವಸ ಅದೆಷ್ಟು ಬಾರಿ ದೇವರನ್ನು ಬೇಡಿಕೊಳ್ಳುತ್ತಿದ್ದೆನೋ…. ಆ ದೇವರಿಗೇ ಗೊತ್ತು!


ಚಂದ್ರಾವತಿ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

Leave a Reply

Back To Top