ಕಾವ್ಯ ಸಂಗಾತಿ
ಗಜಲ್
ಈರಪ್ಪ ಬಿಜಲಿ.
ಮಲ್ಲಿಗೆಯ ಮೊಗ್ಗರಳಿ ಕಂಪು ಅಡರಿದಂತೆ ನಿನ್ನೊಲವು
ಕಗ್ಗತ್ತಲ ಹಾದಿಯಲಿ ಹಚ್ಚಿಟ್ಟ
ಸೊಡರಿನಂತೆ ನಿನ್ನೊಲವು ||
ಚಿಗುರುಣಿಸೆ ಕದ್ದು ತಿಂದಂತೆ
ಆ ನಿನ್ನ ಮಧುರ ಸ್ಪರ್ಶವು
ಚಿಗುರೊಡೆದ ಎಲೆ ಬಿಡೊ ವಸಂತ ಋತುವಿನಂತೆ ನಿನ್ನೊಲವು ||
ಆಗುಂಬೆಯ ಸೂರ್ಯಾಸ್ತವೂ
ನಿನ್ನಂದದೈಸಿರಿಗೆ ಮಂಕಾಯಿತೇ
ದಾಳಿಂಬೆಯ ಸೊಗಸಾದ ಫಲದ
ಸೊಗಡಿನಂತೆ ನಿನ್ನೊಲವು ||
ಕುಣಿಯುವ ನವಿಲು ನಾಚಿತಲ್ಲ ನಿನ್ನ ನಡಿಗೆಯ ಕಂಡು
ತೀಡಿದಷ್ಟೂ ಘಮಿಸುವ ಶ್ರೀಗಂಧದ
ಕೊರಡಿನಂತೆ ನಿನ್ನೊಲವು ||
ಕಾರ್ಮೋಡದ ಮರೆಯಲ್ಲಿ ಮಿನುಗೊ
ಬಿಜಲಿಗೆ ಜಗ ಬೆರಗು
ಮೇಘಗಳು ಸುರಿಸೊ ಸ್ವಾತಿಮುತ್ತಿನ
ಮಳೆಯ ಹನಿಗಳಂತೆ ನಿನ್ನೊಲವು ||