ಕಾವ್ಯಯಾನ

ಗಝಲ್

smiling girl under green leaves

ಡಾ.ಗೋವಿಂದ ಹೆಗಡೆ

ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು
ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು

ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ
ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು

ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ
ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು

ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ
ನೆನಪಮಡುವಲಿ ಮಿಂದಂತೆ ಅದೊಂದು ಹಾಡು

ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’
ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು

************

Leave a Reply

Back To Top