ಗುಟ್ಟು

ಕಾವ್ಯ ಸಂಗಾತಿ

ಗುಟ್ಟು

ಡಾ.ಡೋ ನಾ ವೆಂಕಟೇಶ

.

ಹುಟ್ಟು ಸಾವಿನ ಗುಟ್ಟು
ತಿರುಗಣೆ ತಿರುಗುತ್ತಾ
ಬಂದ
ಜೀವ ಜೀವನದ
ಬಂಧನದ ಸೂತ್ರಧಾರ
ನೀ ದೇವ
ನಿಜಕ್ಕೂ ನೀನೆಲ್ಲಿರುವೆ!

ಆಷಾಢದ ನಿಟ್ಟುಸಿರು
ಗರ್ಭಧರಿಸಿ ಘರ್ಜಿಸಿದಾಗ
ಧೋ
ಎಂದು ಸುರಿವ ಮಳೆ
ಹನಿ ಹನಿಯಲ್ಲೂ
ನೀನು

ಮಳೆ ನಿಂತ ನಂತರದ
ಸುಳಿಗಾಳಿಯ
ಯಲ್ಲೂ ನೀನು

ಭಕ್ತ ತನ್ಮಯತೆಯಿಂದ ಆರಾಧಿಸುವ
ಎಸಳು ಎಸಳಿನ
ಸುಗಂಧದಲ್ಲಿ ನೀನು!

ಗೃಹಿಣಿ ತಾ ಸುಟ್ಟ ರೊಟ್ಟಿ
ಮಡಚಿದಾಗ ಆ
ಮಡಿಕೆಯಲ್ಲಿ ನೀನು!

ಏಕಾದಶಿಯ ದಿನ ಮೊಮ್ಮಗನ
ಹಸಿವಿಗೆ ಅಜ್ಜಿ ಮರೆಯಲ್ಲಿ
ಕೊಟ್ಟ ಕೈ ತುತ್ತು ನೀನು!

ಪರಿಪಕ್ವ ದಂಪತಿಗಳ
ಸಂಧ್ಯಾಕಾಲದ ದೀರ್ಘ
ಪ್ರಯಾಣದ ಅಂತಿಮ ಚರಣ
,ಸಹವರ್ತಿಗೆ ಉಣಿಸಿದ ಅಮೃತ ಧಾರೆ ನೀನು

ಓ! ಜಗನ್ನಿಯಾಮಕ
ಎಷ್ಟು ಭಕ್ತರು
ಎಷ್ಟು ಭಕ್ತರು ಕುಣಿದಾಡಿದರೇನು
ಲಕ್ಷ ಲಕ್ಷ ಕಂಗಳು
ಲಕ್ಷ ಲಕ್ಷ ಕಾಲ್ಗಳು
ಲಕ್ಷ ಲಕ್ಷ ಕೈಗಳು
ನಲಿದಾಡಿದರೇನು
ಪರಮಾತ್ಮ
ಎಲ್ಲರ ಮನದಲ್ಲಿ ನೀನು
ಎಲ್ಲರ ನೋವಿನಲ್ಲಿ ನೀನು
ಮತ್ತೆಲ್ಲರ ನಗುವಿನಲ್ಲೂ
ನೀನೇ!

ಜೀವ
ಜೀವ ನದಿ ನೀನು
ಹಳ್ಳ ಕೊಳ್ಳಗಳ ಸಂತೈಸಿ
ಜುಳು ಜುಳು ಧುಮ್ಮಿಕ್ಕಿ
ಜಲಪಾತಗಳ ಹಿಂದಿಕ್ಕಿ
ವಿಶಾಲ ಸಾಗರದ ಆಳ
ನೀನು!

ಆವರ್ತನ ಪುನರಾವರ್ತನ
ನೀನೇ
ಕಾರ್ಯಾಗಾರದ ವಾರಸುದಾರ
ನೀನೇ
ನೀನಿದರ ಕಾವಲುಗಾರ

ಸಮಸ್ತ ಜಗತ್ತಿನ ಕಣ್ಗಾವಲು
ಕಣ್ಮಣಿ


8 thoughts on “ಗುಟ್ಟು

Leave a Reply

Back To Top